ಎರಡು ಸಾಲುಗಳು ೬ (ಮಳೆಗಾಲ)

ಎರಡು ಸಾಲುಗಳು ೬ (ಮಳೆಗಾಲ)

ನಿನ್ನ ಜೊತೆ ಇರುವಾಗಲೆಲ್ಲಾ ಒಂದೇ ಕೊಡೆಯ ಕನಸು
ಹಾಳು ಮುಂಗಾರು, ನೀನಿರುವಾಗ ಮಳೆಯೇ ಬರಲಿಲ್ಲ.

ನಿನ್ನೆಯೂ ಮಳೆ ಜೋರಾಗಿ ಸುರಿದಿತ್ತು
ನಿನಗೆ ನನ್ನ ನೋಡದಿರಲು ಹೊಸ ನೆಪ ಸಿಕ್ಕಿತ್ತು

ನಿನ್ನೆ ಹಳೆಯ ಕನಸೊಂದನು ನನಸು ಮಾಡಿದೆ
ಪರಿಣಾಮ ನಾನೀಗ ಪುನಃ ಒದ್ದೆಯಾಗುತ್ತಿದ್ದೇನೆ

ನಿನ್ನಾಸೆಯಂತೆ ನಿನಗಾಗಿ ಮಳೆಯಲ್ಲಿ ನೆನೆದು
ಇಂದು ಜ್ವರ ಹಿಡಿದು ಒಂಟಿಯಾಗಿ ಮಲಗಿದ್ದೇನೆ

ಎದೆಯ ನೋವನೂ ಮೀರಿ ಸುರಿದಿತ್ತು ಮಳೆ
ಒದ್ದೆಯಾದರೇನಂತೆ, ಮರೆತು ಬಿಡುವೆ ಎಲ್ಲಾ ಚಿಂತೆ

ಎಲ್ಲವನ್ನೂ ಮಳೆ ಶುದ್ಧಗೊಳಿಸುತ್ತೆ ಎಂದು ನಂಬಿದ್ದೆ
ಕೆಸರು, ರಾಡಿ ಅದು ಬಿಟ್ಟು ಹೋದ ಶಾಸನಗಳಾಗಿದ್ದವು

ಚಳಿಗೆ ಚಳಿ ಧಗೆಗೆ ಸೆಖೆ ಎನ್ನುತ್ತಿದ್ದೆ ನಿನ್ನೆ ಮಳೆ ಬಂತು,
ನಾ ಒದ್ದೆಯಾದರೂ ನನ್ನ ಗೊಣಗು ನಿಲ್ಲಲಿಲ್ಲ.

ನಾ ಮಾಡಿಟ್ಟ ಕಾಗದದ ದೋಣಿಗಳು ಇನ್ನೂ ಇವೆ
ನಾ ಮನೆಯಲಿಲ್ಲ, ಅವನ್ನು ಬಿಡಲು ಯಾರೂ ಇಲ್ಲ

ಮಳೆ ನಿಂತಿತ್ತು, ಆದರೂ ಮರ ಹನಿಗುಡುತ್ತಿತ್ತು.
ಬಯಲಿಗೆ ಬರುವುದು ಚೆನ್ನ ಎಂದೆನಿಸಿತು

Rating
No votes yet

Comments