ಕೋಗಿಲೆ ಹಾಡಿದೆ ಕೇಳಿದೆಯಾ?

ಕೋಗಿಲೆ ಹಾಡಿದೆ ಕೇಳಿದೆಯಾ?

ಇತ್ತೀಚೆಗೆ ಎಸ್.ಜಾನಕಿಯವರು ಚಿತ್ರ ರಂಗದಲ್ಲಿ ಹಿನ್ನಲೆಗಾಯಕಿಯಾಗಿ ಐವತ್ತು ವರ್ಷಗಳನ್ನು ಪೂರೈಸಿರುವ ಬಗ್ಗೆ ಹಲವೆಡೆಗಳಲ್ಲಿ ಲೇಖನಗಳು ಪ್ರಕಟವಾಗಿವೆ. ಯಾವುದೇ ಕಾರ್ಯಕ್ಷೇತ್ರದಲ್ಲಿ ಆದರೂ ಇದು ಮಹತ್ಸಾಧನೆಯೇ. ಸುಮಾರು ಇಪ್ಪತ್ತೈದು ವರ್ಷ ಇವರು ಕನ್ನಡ ಚಿತ್ರರಂಗದಲ್ಲಿ ಮೊದಲ ಸ್ಥಾನದಲ್ಲಿ ಮಿಂಚಿದ್ದನ್ನು ಯಾವ ಚಿತ್ರ ಪ್ರೇಮಿಗಳೂ ಮರೆಯಲಾರರು.

ಯಾವುದೇ ಹಾಡುಗಾರನಿಗೆ, ಇನ್ನೊಬ್ಬ ಹಾಡುಗಾರ/ಹಾಡುಗಾರ್ತಿಯ ಮೆಚ್ಚುಗೆಯಿಂದ ಸಿಗುವಷ್ಟು ಸಂತೋಷ ಇನ್ನು ಯಾವುದರಿಂದಲೂ ಸಿಗಲಾರದು ಎನ್ನುವುದು ನನ್ನ ಅನಿಸಿಕೆ. ಕೆಲವು ದಿನಗಳ ಹಿಂದೆ, ಪಿ.ಬಿ.ಶ್ರೀನಿವಾಸ್ ಅವರು ನಮ್ಮಲ್ಲಿ ಕಾರ್ಯಕ್ರಮವೊಂದನ್ನು ಕೊಟ್ಟಾಗ, ಅವರು ನುಡಿದ ಮಾತುಗಳನ್ನು ನೆನಸಿಕೊಂಡರೆ, ಎಸ್.ಜಾನಕಿ ಅವರು ಬಹಳ ಸಂತೋಷ ಪಡಲೇ ಬೇಕು. ತಮ್ಮ ಜೊತೆಯಲ್ಲಿ ಹಾಡಿದ ಎಲ್ಲ ಗಾಯಕಿಯರೂ ಉತ್ಕೃಷ್ಟ ಮಟ್ಟದವರು, ಅವರಲ್ಲಿ ಒಬ್ಬರಿಗೊಬ್ಬರನ್ನು ಹೋಲಿಸಲು ಸಾಧ್ಯವಾಗದು ಎಂದು ಅವರು ಹೇಳಿದರೂ, ಜಾನಕಿಯವರ ಜೊತೆ ಅವರು ಹಾಡಿದ ಹಾಡುಗಳನ್ನು, ಅವರ ಜೊತೆ ನಡೆಸಿದ ರಿಹರ್ಸಲ್ ಗಳನ್ನೂ, ಹೇಗೆ ಅವರು ಒಂದು ಹಾಡು ಪೂರ್ತಿ ಮನಸ್ಸಿಗೆ ಬೇಕಾಗುವಂತೆ ಬರುವವರೆಗೂ ಬಿಡದೆ ಹಾಡಿ, ನಂತರವೇ ರೆಕಾರ್ಡ್ ಮಾಡಲು ಮುಂದಾಗುತ್ತಿದ್ದುದ್ದನ್ನೂ ಪಿಬಿ ಅವರು ಹೆಚ್ಚಾಗಿ ನೆನೆದರು.

ಜಾನಕಿ ಅವರು ಆಂಧ್ರದಿಂದ ಬಂದರೂ, ನೆಲೆಸಿದ್ದು ಮದರಾಸಿನಲ್ಳಾದರೂ, ಅವರು ತಮಿಳು-ತೆಲುಗುಗಳಿಗಿಂತ ಕನ್ನಡದಲ್ಲೇ ಹೆಚ್ಚಿನ ಹಾಡುಗಳನ್ನು ಹಾಡಿದ್ದು. ಈ ಸಂದರ್ಭದಲ್ಲಿ ಅವರ ಕೆಲವುಹಾಡುಗಳನ್ನು ಮೆಲುಕು ಹಾಕಿದರೆ ತಪ್ಪಾಗಲಾರದು. ನನಗೆ ಸ್ವಲ್ಪ ಶಾಸ್ತ್ರೀಯ ಗೀತೆಗಳ ಮೇಲೆ ಪಕ್ಷಪಾತ ಇರುವುದರಿಂದ, ಅಂತಹ ಹಾಡುಗಳೇ ಈ ಪಟ್ಟಿಯಲ್ಲಿರುವುದರಲ್ಲಿ, ಆಶ್ಚರ್ಯವೇನಿಲ್ಲ!

ಅರವತ್ತರ ದಶಕದ ಮರೆಯದ ಹಾಡುಗಳು:
ನನ್ನ ಮಟ್ಟಿಗೆ ಹೇಳುವುದಾದರೆ, ಜಾನಕಿಯವರು ಅರವತ್ತರ ದಶಕದಲ್ಲಿ ತಮ್ಮ ಅತ್ಯುತ್ತಮ ಹಾಡುಗಳನ್ನು ಹಾಡಿದರು. ಆಗ ಪಿ.ಸುಶೀಲ, ಎಲ್.ಆರ್.ಈಶ್ವರಿ, ಪಿ.ಲೀಲಾ ಮೊದಲಾದ ಗಾಯಕಿಯರು ಹಾಡುತ್ತಿದ್ದ ಕಾಲ. ಅವರ ನಡುವೆಯೇ ಜಾನಕಿಯವರು ತಮ್ಮ ಛಾಪನ್ನು ಮೂಡಿಸಿದ್ದು ಅವರ ಪ್ರತಿಭೆಗೆ ಸಾಕ್ಷಿ. ಈ ಸಮಯದಲ್ಲಿ ಅವರು ಹಾಡಿದ ಹಾಡುಗಳಲ್ಲಿ ಹಲವು ನೆನೆಯಬೇಕಾದ ಹಾಡುಗಳಿವೆ.
ಮೊದಲಿಗೆ ನಾಂದಿ ಚಿತ್ರದ ಉಡುಗೊರೆಯೊಂದ ತಂದ ಎಂಬ ನಾಂದಿ ಚಿತ್ರದ ಹಾಡನ್ನು ಕೇಳೋಣ( ರಾಗ: ಮೋಹನ/ಪಹಾಡಿ). ಈ ಗೀತೆಯ ಹಿನ್ನಲೆ ಸಂಗೀತ ಸಂಯೋಜನೆ ಬಹಳ ಸರಳವಾಗಿದೆ. ಹಾಡೊಂದು ಮನಸೆಳೆಯಲು ಬಗೆಬಗೆಯ ವಾದ್ಯಗಳಿರಬೇಕೆಂಬ ಬಾವನೆಯನ್ನು ಸುಳ್ಳು ಮಾಡುತ್ತೆ ಈ ಹಾಡು. ಅದೂ ಅಲ್ಲದೆ, ಹಾಡಿನಲ್ಲಿ ನೈಜವಾಗಿ ನಗುವನ್ನು ತರುವುದೂ ಜಾನಕಿಯವರ ವಿಶೇಷಗಳಲ್ಲೊಂದು. ಅದಕ್ಕೆ ಉದಾಹರಣೆಯೂ ಇಲ್ಲಿ ಸಿಗುತ್ತೆ. ಇದೇ ಚಿತ್ರದ ಚಂದ್ರಮುಖಿ ಪ್ರಾಣಸಖಿ ಎಂಬ ಹಾಡು ಒಂದು ಬಹಳ ಉತ್ತಮ ಯುಗಳ ಗೀತೆ. ಸಾಮಾನ್ಯವಾಗಿ ಯುಗಳ ಗೀತೆಯೆಂದರೆ, ಒಂದು ಗಂಡು ಒಂದು ಹೆಣ್ಣು ಧ್ವನಿಯಿರುವ ಹಾಡುಗಳೇ ನಮ್ಮ ನೆನಪಿಗೆ ಬರುತ್ತವೆ. ಆದರೆ, ಎರಡೂ ಹೆಣ್ಣುಧ್ವನಿಗಳಿರುವ ಕೆಲವೇ ಗೀತೆಗಳಲ್ಲಿ ಈ ಹಾಡು ಒಂದು ಮರೆಯಲಾರದ ಹಾಡು. ಬೆಂಗಳೂರು ಲತಾ ಜಾನಕಿಯವರ ಜೊತೆ ಸರಿಸಮನಾಗಿ ಹಾಡಿದ್ದಾರೆ. ಆದರೆ, ಅವರಿಗೆ ನಂತರ ಅಂತಹ ಉತ್ತಮ ಅವಕಾಶಗಳು ದೊರಕದಿದ್ದದ್ದು ಮಾತ್ರ ಬೇಸರದ ವಿಷಯವೇ. ಈ ಹಾಡು ಹಿಂದೋಳ ರಾಗದಲ್ಲಿದೆ. ಹಿಂದೂಸ್ತಾನಿಯಲ್ಲಿ ಇದಕ್ಕೇ ಮಾಲ್‍ಕೌಂಸ್ ಎಂಬ ಹೆಸರಿನಿಂದ ಕರೆಯುತ್ತಾರೆ. ಹೆಣ್ಣಿನ ಹಿರಿತನ, ತಾಯ್ತನದ ಮಹತ್ವವನ್ನು ಸಾರುವ ಈ ಹಾಡಿನ ಸಾಹಿತ್ಯವೂ ಮೆಲುಕು ಹಾಕುವಂತಿದೆ.ಬರೀ ವೀಣೆ, ಸಿತಾರ, ತಬಲಗಳ ಹಿಮ್ಮೇಳ ಗೀತೆಯನ್ನು ಬಹಳ ಮೇಲ್ಮಟ್ಟಕ್ಕೆ ಏರಿಸುತ್ತವೆ.
ನಾಂದಿ ಚಿತ್ರವನ್ನು ನಿರ್ದೇಶಿಸಿದ ಎನ್.ಲಕ್ಷ್ಮೀನಾರಾಯಣ ಅವರು ಕೆಲವೇ ಸಿನೆಮಾಗಳ ಮೇಲೆ ಕೆಲಸ ಮಾಡಿದರೂ, ಅವೆಲ್ಲ ಉತ್ತಮ ಮಟ್ಟದವೇ. ಅವರ ಇನ್ನೊಂದು ಚಿತ್ರ ನವಜೀವನ ದಿಂದ ಆಯ್ದ ನಲಿವ ಮನ ಒಂದೇ ದಿನ ಎಂಬ ಹಾಡನ್ನು ಈಗ ಕೇಳೋಣ. ಕಲ್ಯಾಣಿ ರಾಗದಲ್ಲಿರುವ ಈ ಹಾಡು ಮನಸೆಳೆಯುವಂತಹದ್ದು. ಇಂದು ಕಲ್ಯಾಣಿ (ಅಥವಾ ಅದರ ಹಿಂದೂಸ್ತಾನಿ ಭಾಗವಾದ ಯಮನ್) ಬಹಳ ಪ್ರಖ್ಯಾತ ರಾಗ. ಹಾಗೇ ಚಿತ್ರಸಂಗೀತ ನಿರ್ದೇಶಕರಿಗೂ ಬಹಳ ಮೆಚ್ಚುಗೆಯಾಗಿರುವ ರಾಗ. ಆದರೆ, ಇದು ನಮ್ಮಲ್ಲಿಗೆ ಹೊರದೇಶದಿಂದ ಬಂದದ್ದು ಎಂದರೆ ನಂಬುತ್ತೀರಾ?
ಕಲ್ಯಾಣಿಯ ಬಗ್ಗೆ ಹೇಳುವಾಗ, ಹೆಸರಿಂದ ಮಾತ್ರ ಅದನ್ನು ಹೋಲುವ ಮತ್ತೊಂದು ರಾಗದ ಗೀತೆ ಈಗ ಕೇಳೋಣ. ಇದರ ರಾಗ ಪೂರ್ವಿ (ಪೂರ್ವ) ಕಲ್ಯಾಣಿ. ಈ ಹಾಡು ಇರುವ ಗೀತೆಯ ಜೀವಾಳವೇ ಈ ರಾಗ. ಯಾವುದು ಎಂದಿರಾ? ಅದೇ ರಾಜ್‍ಕುಮಾರ್ ಅವರು ನಟಿಸಿದ ಅ.ನ.ಕ್ಕೃಷ್ಣರಾಯರ ಸಂಧ್ಯಾರಾಗ. ಈ ಕಥೆಯಲ್ಲಿ ಈ ರಾಗ ಹಾಸುಹೊಕ್ಕಾಗಿದೆ. ಅದಕ್ಕೆಂದೇ ಈ ಗೀತೆಯೂ ಆ ಚಿತ್ರದಲ್ಲಿ ಮೂರುಬಾರಿ, ಮೂರು ಗಾಯಕರ ಕಂಠದಲ್ಲಿ ಕೇಳಿಬರುತ್ತೆ. ಮಹಾ ವಿದ್ವಾಂಸರಾದ ಎಮ್.ಬಾಲಮುರಳಿಕೃಷ್ಣ ಮತ್ತು ಭೀಮಸೇನ ಜೋಷಿಯವರು ಹಾಡಿದ್ದಾಗಲೂ, ಅದಕ್ಕೆ ಯಾವುದೇ ರೀತಿಯಲ್ಲಿ ಕಮ್ಮಿ ಎನಿಸದ ರೀತಿಯಲ್ಲಿ ಜಾನಕಿ ಅವರು . ಈಗ ಕೇಳಿ: ನಂಬಿದೆ ನಿನ್ನ ನಾದ ದೇವತೆಯೆ ಗೀತೆಯನ್ನು.
ಎನ್.ಲಕ್ಷ್ಮೀನಾರಾಯಣರ ನಾಂದಿ, ನಂದಾದೀಪಗಳನ್ನು ನೋಡಿ, ಅವರ ಇದೇ ದಶಕದ ಇನ್ನೊಂದು ಚಿತ್ರವನ್ನು ಬಿಡಲಾಗುತ್ತದೆಯೇ? ೧೯೬೪ರಲ್ಲಿ ಬಿಡುಗಡೆಯಾದ ನವಜೀವನ ಚಿತ್ರದಿಂದ ಮುಂದಿನ ಹಾಡು. ಕರೆಯೇ ಕೋಗಿಲೆ ಮಾಧವನ - ಕಾನಡ ರಾಗದ ಮೇಲೆ ಆಧಾರಿತವಾಗಿದೆ ಈ ಹಾಡು.
ಹೀಗೇ ನೆನೆಯುತ್ತ ಹೋದರೆ ಹೀಗೇ ಮತ್ತೆಮತ್ತೆ ಕೇಳಬೇಕೆನಿಸುವ ಹಲವಾರು ಗೀತೆಗಳನ್ನು ಎಸ್.ಜಾನಕಿಯವರು ಹಾಡಿದ್ದಾರೆ. ಈ ದಶಕದ ಮತ್ತೆ ಕೆಲವು ನೆನಪಿಸಿಕೊಳ್ಳಬೇಕಾದ ಗೀತೆಗಳು ಎಂದರೆ - ದೇವರು ಕೊಟ್ಟ ತಂಗಿ ಚಿತ್ರದಿಂದ ಲಾಲಿಸಿವಳು ಮಗನ ಎಂಬ ಪುರಂದರ ದಾಸರ ಒಂದು ರಚನೆ (ರಾಗ: ಜೈಜೈವಂತಿ?), ಸ್ವರ್ಣಗೌರಿ ಚಿತ್ರದಿಂದ ಜಯಗೌರಿ ಜಗದೀಶ್ವರಿ ಎಂಬ ಗೀತೆ (ರಾಗ: ದ್ವಿಜಾವಂತಿ), ಪುಟ್ಟಣ್ಣನವರ ಮರೆಯಲಾಗದ ಬೆಳ್ಳಿಮೋಡ ಚಿತ್ರದಿಂದ ಮೂಡಲ ಮನೆಯ ಮುತ್ತಿನ ನೀರಿನ (ರಾಗ: ಮಾಂಜ್ ಖಮಾಜ್ - ಪ್ರವೀಣ್ ಗೋಡ್ಖಿಂಡಿ ಅವರ ರೆಕಾರ್ಡಿಂಗ್ ಒಂದರ ಮೇಲೆ ಇದ್ದ ಪಟ್ಟಿಯ ಪ್ರಕಾರ) ಮೊದಲಾದವುಗಳು.
ಈ ಬರಹವನ್ನು ಮತ್ತೆ ಮೋಹನ ರಾಗದ ಒಂದು ಗೀತೆಯಿಂದಲೇ ಮುಗಿಸುತ್ತೇನೆ. ಈ ಮೊದಲು ಮೋಹನ ರಾಗದ ವಿಷಯ ಬರೆಯುವಾಗ ಈ ಗೀತೆಯ ಬಗ್ಗೆಯೂ ಬರೆದಿದ್ದೆ ಎನಿಸುತ್ತೆ. ಗೌರಿ ಚಿತ್ರದಲ್ಲಿ ಕುವೆಂಪು ಅವರ ರಚನೆ ಕೇಳಿ: ಯಾವ ಜನ್ಮದ ಮೈತ್ರಿ ಈ ಜನ್ಮದಲಿಬಂದು. ಆರಂಭದಲ್ಲಿ ಸಣ್ಣ ಆಲಾಪವವೂ ಇದೆ. ಜಿಕೆವೆಂಕಟೇಶ್ ಅವರ ಸರಳ, ಆದರೆ ಸುಶ್ರಾವ್ಯ ಸಂಗೀತ ಸಂಯೋಜನೆ ಈ ಹಾಡಿಗೆ ಮೆರುಗು ಕೊಡುವುದರಲ್ಲಿ ಯಶಸ್ವಿಯಾಗುತ್ತದೆ.
ಮುಂದೆ ಬರುವ ಎಪ್ಪತ್ತರ ದಶಕದ ಮರೆಯದ ಹಾಡುಗಳನ್ನು ಇನ್ನೊಂದು ದಿನ ಕೇಳೋಣ.
-ಹಂಸಾಸಂದಿ
Rating
No votes yet

Comments