ಹಾಲುಕ್ಕಿತೋ ರಂಗಾ... ಹಾದಿಯಾ ಬಿಡೋ!

ಹಾಲುಕ್ಕಿತೋ ರಂಗಾ... ಹಾದಿಯಾ ಬಿಡೋ!

ನಿನ್ನೆ ಮುನ್ನಾಭಾಯಿ ಎಂಬಿಬಿಎಸ್ ಚಲನಚಿತ್ರವನ್ನು ಎಂದಿನ ಫ್ರೆಶ್ ಮೂಡಿನೊಂದಿಗೆ ಸೆಟ್ ಮ್ಯಾಕ್ಸ್ ನಲ್ಲಿ ನೋಡುತ್ತಿದ್ದೆ. ಹಾಗೆಯೇ ಸಿಕ್ಕಾಪಟ್ಟೆ ಜಾಹೀರಾತುಗಳ ಕಾಟ ತಡೆಯಲಾಗದೆ ಬೇರೆ ಚಾನಲ್ಲುಗಳ ಮೇಲೆಯೂ ನೋಟ ಬೀರತೊಡಗಿದವನಿಗೆ ಶಿವಸೇನೆಯ ಕಾರ್ಯಕರ್ತರು ಪುಣೆ ಸತಾರಾ ಹೈವೇಯಲ್ಲಿ ಹಾಲಿನ ಟ್ಯಾಂಕರಿನಲ್ಲಿದ್ದ ಹಾಲನ್ನೆಲ್ಲಾ ರಸ್ತೆಗೆ ಹರಿಯಬಿಟ್ಟಿದ್ದು ಕಂಡು ಬಂತು. ಮನಸ್ಸು ಹಾಗೆಯೇ ಚಿಂತಿಸತೊಡಗಿತು. ಅದೇನೋ ಅಂತಾರಲ್ಲ 'Idle mind is devil's workshop' ಅಂತ. ಆದರೂ ಎರಡೂ ದೃಷ್ಟಿಯಿಂದ ನೋಡತೊಡಗಿದವನಿಗೆ ಎಂದಿನ ಸಂದಿಗ್ಧ ಪರಿಸ್ಥಿತಿ.

ಮೂಲತಃ ಕೃಷಿ ರಾಷ್ಟ್ರವೆಂದೇ ಕರೆಯಲ್ಪಡುತ್ತಿದ್ದ/ಕರೆಯಲ್ಪಡುವ ನಮ್ಮ ದೇಶ ಪ್ರಮುಖ ಹಾಲು ಉತ್ಪಾದಕರಲ್ಲೂ ಒಂದು. ಹೆಚ್ಚಿನ ರಾಜ್ಯಗಳಲ್ಲಿ ಆದಾಯದ ಪ್ರಮುಖ ಮೂಲ ಕೂಡ. ಇನ್ನೂ ಬಹುಪಾಲು ಜನ ಕೃಷಿಗೆ ಅವಲಂಬಿಸಿರುವಾಗ ಹಾಲು ಉತ್ಪಾದನೆಯಾಗಲೀ ಅಥವಾ ಬೇರೆ ಯಾವುದೇ ನಮ್ಮಲ್ಲಿ ಉತ್ಪಾದನೆಯಾಗುವ ಕೃಷಿ ಬೆಳೆ ಇರಲಿ ನಮಗೆ ಬೇಕಿದ್ದಷ್ಟು ಧಾರಾಳವಾಗಿ ಇದೆ ಅಲ್ಲವೇ? ೨೦೦೧ರಿಂದ ಹಾಲು ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಭಾರತದಲ್ಲಿ ಹಾಲು ಉತ್ಪಾದನೆಗೆ ಇರುವ ಅವಕಾಶಗಳೂ ಧಾರಾಳ. ವಿಶ್ವದಲ್ಲೇ ಹೆಚ್ಚಿನ ದನ/ಎಮ್ಮೆಗಳು ಇರುವುದೂ ಭಾರತದಲ್ಲೇ. ಇಷ್ಟೆಲ್ಲಾ ಗೊತ್ತಿದ್ದರೂ ಹೊರದೇಶಗಳಾದ ನ್ಯೂಜಿಲ್ಯಾಂಡ್, ಚೈನಾ ಇವೇ ಮೊದಲಾದ ಹಾಲು ಉತ್ಪಾದಕ ದೇಶಗಳಿಂದ ಹಾಲು ಪುಡಿಯನ್ನು ಆಮದು ಮಾಡಿಕೊಳ್ಳುವ ಮರುಪ್ರೊಪೋಸಲ್ ಹಿಂದಿನ ಉದ್ದೇಶವಾದರೂ ಏನು? ಮೊದಲೇ ಅಮೇರಿಕಾದಂತೆ ಮುಕ್ತ ಮಾರುಕಟ್ಟೆಯಾಗುತ್ತಿರುವ ಭಾರತಕ್ಕೆ ತನ್ನಲ್ಲೇ ಹೇರಳವಾಗಿ ಇರುವ ವಸ್ತುಗಳಿಗೆ  ಕೂಡ  ಹೊರ ದೇಶದಿಂದ ಟ್ರೇಡಿಂಗ್ ಅಗತ್ಯವೇ? ನಮ್ಮಲ್ಲೇ ಬೇಕಿದ್ದಷ್ಟು ಸ್ಟಾಕ್ ಇರುವಾಗ ಇಲ್ಲಿಯೂ ಬೇರೆ ಮಾರುಕಟ್ಟೆಯ ಅಗತ್ಯವಿದೆಯೇ? ನಮ್ಮ ದೇಶದ ಹಾಲು ಉದ್ದಿಮೆಯನ್ನು ಪೋಷಿಸಿದರೆ ಆಗದೆ?

ಕಳೆದ ವಾರ ಊಟಿಗೆ ಹೋಗಿ ಬಂದ ಗೆಳತಿಯೊಬ್ಬಳು ಹೇಳಿದ್ದು ಹೀಗೆ, 'ಚಹಾ ಪುಡಿ ಉತ್ಪಾದನೆಯಾಗಿ ಹೊರ ದೇಶಕ್ಕೆ ರಫ್ತು ಆಗುತ್ತದೆ. ಮತ್ತೆ ಪುನಃ ಭಾರತಕ್ಕೆ ಹೊರ ದೇಶದ ಚಹಾ ಪುಡಿ ಬರುತ್ತದೆ' ಎಂದು. ಇಬ್ಬರೂ ನಕ್ಕರೂ ಜಾಗತೀಕರಣವನ್ನು ಇದ್ದ ಎಲ್ಲಾ ವಿಷಯಗಳಿಗೆ ಏಕೆ ಅನ್ವಯಿಸಬೇಕು ಎಂದು ಅರ್ಥವಾಗಲಿಲ್ಲ. ಅದನ್ನೇ ಆಂತರಿಕ ಚಕ್ರವನ್ನಾಗಿಸಿದರೆ ದೇಶದ ಆರ್ಥಿಕ ಪ್ರಗತಿಗೆ ಹೊರದೇಶದ ಮಾರುಕಟ್ಟೆಯ ಅಗತ್ಯ ಇಲ್ಲ ಅಲ್ಲವೇ.

ನಿನ್ನೆ ಹೆಚ್ಚಿನ ಚಾನಲುಗಳಲ್ಲೂ ಶಿವ ಸೇನೆ ಹಾಲನ್ನು ವೇಸ್ಟ್ ಮಾಡಿತು ಎಂಬ ಗೋಳಾಟ, ಆದರೆ ಪ್ರತಿಭಟಿಸದೆ ಇದ್ದರೆ ಅದರಿಂದಾಗುವ ಸಣ್ಣ ಪರಿಣಾಮ ಕೂಡ ಕೃಷಿ ಮತ್ತು ಪ್ರಾಣಿಗಾರಿಕೆಗೆ ಬೀಳುವ ಹೊಡೆತದ ಅಂದಾಜಿದೆಯೇ?  ಶಿವ ಸೇನೆ ಮಾಡಿದ್ದು ಸರಿಯೋ ತಪ್ಪೋ ಎಂದು ಮನದಲ್ಲಿ ಈಗಲೂ ಅನುಮಾನವಿದೆ ಆದರೂ ಪ್ರತಿಭಟಿಸಲು ಇರುವ ಕಾರಣ valid ಅಲ್ಲವೇ? ಇಲ್ಲಿಯವರೆಗೆ ಪ್ರತಿಭಟನೆಯ ಹೆಸರಿನಲ್ಲಿ ಸುಮಾರು ೫೦೦೦೦ ಲೀಟರುಗಟ್ಟಲೆ ಹಾಲನ್ನು ಪೋಲು ಮಾಡಿದ ರೀತಿ ನನಗೂ ಸರಿ ಬರಲಿಲ್ಲ. ಆದರೂ ಹಾಲು ಉತ್ಪನ್ನಗಳ ಆಮದು ನೀತಿ ಜಾರಿಗೆ ಬಂದರೆ ಇನ್ನು ಎಷ್ಟು ಹಾಲು ಪೋಲಾಗುತ್ತದೋ? ಎಷ್ಟು ಹಾಲು ಹಾಗೆಯೇ ಹಸುವಿನ ಕೆಚ್ಚಲಿನಲ್ಲಿ ಉಳಿದು ಬಿಡುತ್ತದೋ ಎಂದೆನಿಸುವಾಗಲೆಲ್ಲಾ ಭಯವಾಗುತ್ತದೆ. ಮನಸ್ಸು ಮಾತ್ರ ಇನ್ನೂ ಹೇಳುತ್ತಿತ್ತು. ನಮ್ಮ ದೇಶದ ಸಂಪತ್ತಿಯನ್ನು ಸರಿಯಾಗಿ ಉಳಿಸೋಣ, ಬೆಳೆಸೋಣ, ಅಗತ್ಯ ಬಿದ್ದರೆ ಮಾತ್ರ ಹೊರ ದೇಶದ ವಸ್ತುಗಳಿಗೆ ಮೊರೆ ಹೋಗೋಣ.. ಇಲ್ಲವಾದಲ್ಲಿ ಇಲ್ಲಿ ಹಾಲು ಉಕ್ಕುತ್ತಿದ್ದರೂ ಬಳಕೆಗೆ ಹಾದಿ ಮಾಯವಾಗಬಹುದು!!!

Rating
No votes yet

Comments