ಗೂಗಲ್ ಮತ್ತು ಅಲ್ಲದ್ದು

ಗೂಗಲ್ ಮತ್ತು ಅಲ್ಲದ್ದು

ಹುಡುಕಾಟಕ್ಕೆ ಇನ್ನೊಂದು ಪದವೆನ್ನುವಂತಿರುವ ಗೂಗಲ್ ಏಕತಾನಕ್ಕೆ ತಿರುಗುತ್ತಿದೆ ಎಂಬ ತಲ್ಲಣ. ಆಗೊಮ್ಮೆ ಈಗೊಮ್ಮೆ ವಿಚಿತ್ರಗಳನ್ನೂ ಏಕತಾನದಲ್ಲಿ ಹೊರಗೆಡವುತ್ತಿದೆ. ಎಷ್ಟೋ ಸಲ ನಾನು ಬೇಕೆಂದು ಹುಡುಕಿದ್ದೇ ಸಿಗುತ್ತದೆ. ಅಷ್ಟೇ ಅಲ್ಲ ನನಗೆ ಇಷ್ಟವಾಗುವುದೇ ಸಿಗುವುದು ಕೂಡ ಸೋಜಿಗ ಅನಿಸುತ್ತಿಲ್ಲ.

ಗೂಗಲ್ ಹುಡುಕಾಟದ ಮೊದಲ ಪುಟದಲ್ಲಿ ಸಿಕ್ಕದೇ ಹೋಗುವ ಸಂಗತಿಗಳು, ಸಿಗಬೇಕಾದ ಎಷ್ಟೋ ಸಂಗತಿಗಳು ಈಗೀಗ ಕಾಡುತ್ತಿದೆ. ಸರ್ಚ್ ಇಂಜನ್ನಿನ ಶಕ್ತಿ ಬೆಳೆದಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ಹೆಚ್ಚು ಹೆಚ್ಚು ದಾಖಲೆಗಳನ್ನು ಅದು ಹುಡುಕುವ ಸಾಮರ್ಥ್ಯ ಬೆಳೆದಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ಸರ್ಚ್ ಇಂಜನ್ನು ಸೂಕ್ಷ್ಮವಾದಷ್ಟೂ, ನಾನು ಬರೆದ ಪದ ಸರಿಯಾಗಿದ್ದರೂ "ಹೀಗೆ" ತಿದ್ದಲೇ ಎಂದು ಸೂಚಿಸುವ ಜಾಣ್ಮೆ ಅದರಲ್ಲಿ ಕಂಡಷ್ಟೂ ಯಾಕೆ ಈ ಆತಂಕ ಹೆಚ್ಚುತ್ತಿದೆ? ನನಗೆ ಬೇಕಾದ್ದನ್ನು ಸೂಚಿಸುವ ಪದ ಟೈಪ್ ಮಾಡದೇ ಬೇರೇನೋ ಟೈಪ್ ಮಾಡಿದರೂ ನನ್ನ ಮನಸ್ಸನ್ನು ಅರಿತುಕೊಂಡು ಬೇಕಾದ್ದನ್ನೇ ನೀಡುವಷ್ಟು ನಿಖರವಾಗಿದ್ದರೂ ಯಾಕೆ ಈ ಆತಂಕ ಹೆಚ್ಚುತ್ತಿದ್ದೆ?

ಒಮ್ಮೊಮ್ಮೆ ಗೂಗಲ್ ಕಕ್ಕದೇ ಇದ್ದದ್ದು ಇಲ್ಲವೇ ಇಲ್ಲ ಎಂಬ ವಾದ ಕೇಳಿ ಮೈನಡುಗುತ್ತದೆ. ಅದು ಕಕ್ಕಿದ್ದೇ ವೇದ ವಾಕ್ಯ ಎಂಬ ವಾದವೂ ಸಹ. ಯಾವ ವಾದಕ್ಕೆ ಬೇಕಾದರೂ ಪುರಾವೆ ಸಿಕ್ಕುವ ಈ ಹುಡುಕಾಟದ ಯುಗದಲ್ಲಿ ಸಮುದ್ರ ಮಥನ ನೆನಪಾಗುತ್ತದೆ.

ಚಿಲಿಯ 9/11 ಬಗ್ಗೆ ಹುಡುಕುವುದು ಯಾಕೆ ಕಷ್ಟ? 'other 9/11' ಎಂದಾಗ ಅದು ಸಿಕ್ಕಿ ನೆನಪಿಸಿತು - ಈ other, ಈ ಬೇರೆ, ಈ ಅಲ್ಲದ್ದು ಎಷ್ಟು ಮುಖ್ಯ! other ಇಲ್ಲದೆ, ಬೇರೆ ಇಲ್ಲದೆ, ಅಲ್ಲದ್ದು ಇಲ್ಲದೆ this, ಇದು, ಹೌದೆನಿಸುವುದಕ್ಕೆ ಅರ್ಥವಿಲ್ಲ!

ಕಡೆಗೂ "ಸಿಕ್ಕಿಬಿಡುವುದನ್ನು" ಮೀರಬೇಕು. ಬೇಕಾದ್ದನ್ನು ಹುಡುಕುವ ತವಕ ಬಿಟ್ಟುಕೊಡಕೂಡದು. ಒಂದು ರೀತಿಯ ಮಂಜುಗಡ್ಡೆಯಂಥ ಛಲ ಹತ್ತಿಕೊಳ್ಳುತ್ತದೆ. ಮೈಯೆಲ್ಲಾ ಥರಥರ ನಡುಗಿಸುವಂಥದ್ದು ಅದು.

Rating
No votes yet

Comments