ನಮಗೆ "ಹುಬ್ಬು" ಗಳೇಕಪ್ಪಾ ???

ನಮಗೆ "ಹುಬ್ಬು" ಗಳೇಕಪ್ಪಾ ???

ಎಲ್ಲಾ ಮಕ್ಕಳೂ ಚಂದಿರನೇಕೆ ಓಡುವನಮ್ಮಾ ಎಂದು ಕೌತುಕದಿಂದ ಕೇಳಿದರೆ ನನ್ನ ಮಗನಿಗೆ ಬೇರೆಯದೇ ಆದ ಒಂದು ಚಿಂತೆ.


ನಮಗೆ "ಹುಬ್ಬು" ಗಳೇಕಪ್ಪಾ ? ಹುಬ್ಬು ಹಾರಿಸುತ್ತಾ ಕೇಳಿದ ನನ್ನ ಮಗ ನಿನ್ನೆ ರಾತ್ರಿ ಅವನ ಬೆಡ್ ಟೈಮ್ ಸ್ಟೋರಿ ಸೆಶನ್ ಸಮಯ. ನಾನು ಹೇಳುತ್ತಿದ್ದ ಕಥೆಯ ಬಗ್ಗೆ ಅವನು ಪ್ರಶ್ನೆ ಕೇಳಿದ್ದರೆ ಕಥೆಯಲ್ಲಿ ಪ್ರಶ್ನೆಯಿಲ್ಲ ಎಂದು ಅವನ ಪುಟ್ಟ ಬಾಯಿ ಮುಚ್ಚಿಸಬಹುದಿತ್ತು. ಆದರೆ ಕೇಳುತ್ತಿರುವುದು ಲಾಜಿಕ್ ಆದ ಪ್ರಶ್ನೆಯಾದ್ದರಿಂದ ಒಂದು ಕ್ಷಣ ಮೇಲೆ ಏರಿದ ನನ್ನ ಹುಬ್ಬುಅಲ್ಲೇ ನಿಂತಿತು ನನ್ನ ಸಮಜಾಯಷಿಗಾಗಿ ಕಾಯುತ್ತಾ. ಹೌದೇ, ಸುಂದರ ಮೊಗದ ಮೇಲೆ, ಬೊಗಸೆ ಕಣ್ಣುಗಳ ಮೇಲೆ ಹುಬ್ಬುಗಳೆಂಬ "ಛಾವಣಿ" ಯ ಅವಶ್ಯಕತೆ ಏನಿತ್ತೋ? ಕಣ್ಣುಗಳನ್ನು ರಕ್ಷಿಸಲು ರೆಪ್ಪೆಗಳಿದ್ದೆ ಇವೆಯಲ್ಲಾ? ಓಹ್, ಬಹುಶಃ ಡಬ್ಬಲ್ ಪ್ರೊಟೆಕ್ಷನ್ ಆಗಿ ಇರಬೇಕು ಹುಬ್ಬುಗಳು ಬಡಿಯುವ ರೆಪ್ಪೆಗಳಿಗೆ ಸಂಗಾತಿಯಾಗಿ.  


ಹುಬ್ಬು ಮತ್ತು ಮೂಗಿನ ರೂಪ, ಅಂಕು ಡೊಂಕಿನ ಬಗ್ಗೆಯೂ ಸಾಕಷ್ಟು ಕುತೂಹಲ ಇದ್ದಿದ್ದೇ.


ಮಹಿಳೆಯರಿಗೆ ಕರಡಿಗಿರುವಂಥ ಹುಬ್ಬಿದ್ದರೆ ಅದನ್ನು ರೆಪೇರಿ ಮಾಡಿಸಿಕೊಳ್ಳುತ್ತಾರೆ. ಅದಕ್ಕೆ ಆಂಗ್ಲ ಭಾಷೆಯಲ್ಲಿ blepharoptosis ಎಂದು ಕರೆಯುತ್ತಾರೆ.  ಕಾಲುಗುರು ಸ್ವಲ್ಪ ಡೊಂಕಾದಾಗ toe nail repair ಇರುವಂತೆ ಮುಖಕ್ಕೆ ಕಿರೀಟ ಪ್ರಾಯವಾಗಿ ಕಂಗೊಳಿಸುವ ಹುಬ್ಬಿಗೆ ಇಲ್ಲದೆ ಇರುತ್ತದೆಯೇ ಒಂದು ರೆಪೇರಿ? ಹಾಂ, ಈ ಹುಬ್ಬಿನ ರೆಪೆರಿಯೊಂದಿಗೆ ಅದಕ್ಕೊಂದು ಚೆಂದದ ರಿಂಗ್ ಇದ್ದರೆ ಇನ್ನೂ ಚೆಂದ ಅಲ್ಲವೇ? ಮೂಗಿಗೆ, ಕಾಲುಂಗುರಕ್ಕೆ, ಹೊಕ್ಕುಳಿಗೆ ಒಂದೊಂದು ರಿಂಗ್ ಇರುವಾಗ ಹುಬ್ಬಿಗೆ ಬೇಕೇ ಬೇಕು ಮಾರಾಯ್ರೆ ಒಂದು ರಿಂಗು.         


 


ಮತ್ತೊಂದು ಮಾತು, ಹೆಂಡತಿ ಪಕ್ಕದಲ್ಲಿಲ್ಲ. ಅರಬ್ ಮಹಿಳೆಯರ ಹುಬ್ಬಿಗೆ ಅದೇನು ಸೌಂದರ್ಯವೋ ಏನೋ? ಕಾಮನ ಬಿಲ್ಲುಗಳು ಮೋಡಗಳೊಳಗೆ ಅವಿತು ಕೊಳ್ಳುತ್ತವೆ ಇವರ ಹುಬ್ಬುಗಳ ಸೌಂದರ್ಯವನ್ನು ನೋಡಿ. ಬುರ್ಖಾ ಧರಿಸಿ, ಆದರ ಮೇಲೆ ಮೂಗನ್ನು ಮುಚ್ಚುವ "ನಿಕಾಬ್" ಎನ್ನುವ  ತೆಳು ಪರದೆಯನ್ನು ಧರಿಸಿದಾಗ ಹುಬ್ಬುಗಳು ಪ್ರಾಮುಖ್ಯತೆ ಪಡೆಯುತ್ತವೆ ಇವರ ಸೌಂದರ್ಯ ಪ್ರದರ್ಶನದಲ್ಲಿ. ಕೆಲವೊಮ್ಮೆ ಅನ್ನಿಸುವುದಿದೆ ಇಷ್ಟೆಲ್ಲಾ ಮೈ ಮುಚ್ಚಿ ಕೊಂಡು, ಈ ಪರಿಯಾಗಿ ಹುಬ್ಬುಗಳನ್ನು ರೆಪೇರಿ ಮಾಡಿಸಿಕೊಂಡು ಪುರುಷರ ಅಲೆಯುವ ಕಣ್ಣುಗಳಿಗೆ ಏಕೆ ಇವರು torment ಮಾಡುತ್ತಾರೋ ಎಂದು. ಇಸ್ಲಾಂ ಹುಬ್ಬನ್ನು ರೆಪೇರಿ ಮಾಡಿಸಿ ಕೊಳ್ಳುವ ಗೀಳಿಗೆ ಹುಬ್ಬುಗಂಟಿಕ್ಕಿ ಅಸಮ್ಮತಿ ಸೂಚಿಸಿದರೂ ಅರಬ್ ಲಲನಾ ಮಣಿಗಳಿಗೆ ಅದರ ಪರಿವೆ ಇಲ್ಲ. ಈ ವಿಷಯದಲ್ಲಿ ಇನ್ನೂ ಯಾವುದೇ ಫತ್ವ ಬಂದ ನೆನಪಿಲ್ಲ.     


ಈಗ ನನ್ನ ಮಗನ ಪ್ರಶ್ನೆಗೆ ಎಲ್ಲಿದೆ ಉತ್ತರ? ಇಗೋ ಇಲ್ಲಿ. ತಲೆಯ ಮೇಲಿನಿಂದ ಮಳೆ ಹನಿ, ಹೇನು, ಹೊಟ್ಟು ಇತ್ಯಾದಿಗಳು ಕಣ್ಣಿನೊಳಗೆ ಬೀಳದೆ ಇರಲು ಇರುವ ಸಿಸ್ಟಂ ಹುಬ್ಬು. ಅಷ್ಟೇ ಅಲ್ಲ ಸೂರ್ಯನ ಪ್ರಖರ ಶಾಖ ನೇರವಾಗಿ ಕಣ್ಣಿಗೆ ಬೀಳದಂತೆ ತಡೆಯುತ್ತದೆ ಕೂಡಾ ನಮ್ಮ ಹುಬ್ಬುಗಳು.  

Rating
No votes yet

Comments