ಹೀಗೆ ಸುಮ್ಮನೆ...

ಹೀಗೆ ಸುಮ್ಮನೆ...

ನಗು ಮನಸ್ಸಿನೊಂದಿಗೆ ಬೆಸೆದುಕೊಂಡಿರುವ ಒಂದು ಕ್ರಿಯೆ.
ಬೇಸರವಾದಾಗ ಮೈ-ಮನ ಸಡಿಲಿಸಿಕೊಂಡು ನಗಲು ಸಾಧ್ಯವಿಲ್ಲ;
ಮೈ ಸಡಿಲಿಸಿಕೊಳ್ಳಬಹುದೇನೊ ಅಷ್ಟೆ!
ಎಷ್ಟೆಲ್ಲಾ ಪ್ರಯತ್ನಗಳ ನಂತರವೂ ಯಾಕೆ ನಕ್ಕು ವಿಜ್ರಂಭಿಸಲಾಗುತ್ತಿಲ್ಲ?
ಕಾರಣಗಳೆಂದೂ ನಿಗೂಢ,
ಅಂದರೆ ರಹಸ್ಯಾ ಹಂದರವೇ?
ಗೊತ್ತಿಲ್ಲ!


ರಹಸ್ಯವನ್ನೇನಾದರು ಬೇದಿಸಲೆತ್ನಿಸಿರುವೆಯಾ?
ಪ್ರಯತ್ನಿಸಿದೆ.
ಒಂದು ಸಮಸ್ಯೆಯ ಎಳೆಯ ಬಿಡಿಸಲೆತ್ನಿಸಿದೊಡನೆಯೆ ಸಂಪೂರ್ಣ ಅಸ್ತಿತ್ವವೇ ಅತಂತ್ರ.
ಜೇಡನ ಬಲೆಯ ಒಂದು ಎಳೆಯನ್ನ ಮುಟ್ಟಿದೊಡನೆ ಇಡೀ ಬಲೆಯೇ ಮುದ್ದೆಯಾದಂತೆ.
ಪ್ರಯೋಜನವಿಲ್ಲ.
ಹೀಗೆ ಕಸಿದು ಕೆಳ ಬಿದ್ದರೂ ಮತ್ತೊಂದು ಬಲೆ ನೇಯುವ ಪ್ರಯತ್ನ, ಹೊಟ್ಟೆಪಾಡಿಗಾಗಿ.


ಕಾರಣಗಳ ಹುಡುಕಲು ಹೋದೆ, ನನ್ನೊಳಗೆ ನಾ.
ಸಿಗಲಿಲ್ಲ.
ಜಾಗೃತನಾಗಿದ್ದಾಗ ಮಾತ್ರ ಕಾಡುತ್ತಿದ್ದ ನೋವಿನ ಸರಣಿಗಳು ಕನಸಿನಲ್ಲೂ ಮಿಡಿಯುತ್ತವೆ.
ದಿಡೀರನೆ ಎದ್ದರೆ ಮೈ ನಡುಕ, ಭಯ,
ಕಣ್ಬಿಟ್ಟು ನೋಡಿದರೆ ಕತ್ತಲು ಕೋಣೆ ಇನ್ನೂ ಭಯ ಹುಟ್ಟಿಸುತ್ತದೆ.
ಮಗ್ಗುಲ ಬದಲಿಸುವುದು ಸಾಧ್ಯವಿಲ್ಲ,
ಮನದ ಮಗ್ಗುಲ ಮೂಲೆಗಳನ್ನು ಚಚ್ಚುತ್ತವೆ ಮತ್ತದೇ ನೋವುಗಳು.


ಮಣ್ಣಿನ ಮಡಿಲಲ್ಲಿ ಹಾಯಾಗಿ ಮಲಗಿಬಿಡುವಾಸೆ.
ಬಯಸಲು ತುಂಬಾ ಸುಲಭ.
ಮಲಗಿಸಿಕೊಳ್ಳುವ ಮಡಿಲಿಗಾದರೂ ನನಗೆ ಲಾಲಿ ಹಾಡಲು ಇಷ್ಟವಿರಬೇಕಲ್ಲ!
ನೆನೆಸಿಕೊಂಡು ಚಳಿಯಲ್ಲೂ ಬೆವತ್ತಿದ್ದುಂಟು,
ಬೇಸಿಗೆಯ ಉರಿಬಿಸಿಲಲ್ಲೂ ಕಂಬಳಿ ತಬ್ಬಿದ್ದುಂಟು,
ಬಿಸಿಲು ಭರಿತ ದಿನವೂ ಮಸುಕಾಗಿದ್ದುಂಟು ಹಾಗು
ಮಾಗಿಯ ಚಳಿಗೆ ಹೂ ಮುದುಡಿಕೊಂಡು ವಾಸನೆ ಬೀರಿದ್ದುಂಟು.
ಶಿವರಾತ್ರಿಯ ಬಿರುಗಾಳಿಗೆ ಮೈಗೆ ಹಿತವೆನಿಸುತ್ತಿತ್ತು.
ಹೂವ ಹಾಸಿಗೆಯಲ್ಲೂ ಮುಳ್ಳು ಚುಚ್ಚಿದಂತೆ,
ಆದರೂ ನನ್ನವಳ ನಗು ಕನಸೊಳಗೆ ಸುಳಿದಾಡುತ್ತಿತ್ತು.

Rating
No votes yet

Comments