ಸಾವಿನ ಮನೆಯ ಭಾವನೆಗಳು!

ಸಾವಿನ ಮನೆಯ ಭಾವನೆಗಳು!

ಸಾವಿನ ಮನೆಯ ತು೦ಬೆಲ್ಲಾ ಭಾವನೆಗಳ ಹರಿದಾಟ
ಕೆಲವರು ನಿಜವಾಗಿಯೂ ಅಳುತ್ತಿದ್ದರೆ,
ಇನ್ನು ಕೆಲವರದು ನಗುಮಿಶ್ರಿತ ಹುಸಿ ಅಳುವಿನಾಟ
 
"ಅಯ್ಯೋ, ಇಷ್ಟು ಬೇಗ ಹೋಗ್ಬಾರ್ದಿತ್ತು" ಎಂದು ಕೆಲವರು
"ಅ೦ತೂ ಹೋದ್ನಲ್ಲಾ...!" ಎಂದು ಮತ್ತೆ ಕೆಲವರು
 
"ಅವನ ಸಾವು ಊರಿಗೇ ನಷ್ಟ" ಎಂದು ಕೆಲವರೆ೦ದರೆ
ಊರಿನ ಶಾಪ ವಿಮೋಚನೆಯಾಯ್ತೆಂಬವರು ಕೆಲವರೇ
 
ಛಾವಣಿ ನೋಡುತ್ತಾ ಮಲಗಿದ್ದ ಶವದ
ಮೇಲಿನ ಹೊದಿಕೆ ಕುತ್ತಿಗೆಯವರೆಗೆ ಮಾತ್ರ!
 
ಉಳಿದದ್ದು ನಿಸ್ತೇಜ ಮುಖ ಅ೦ತಿಮ ದರ್ಶನಕ್ಕೆ,
ತಲೆಗೊ೦ದು ಮಾತಾಡಲಿಕ್ಕೆ, ಅಳಲಿಕ್ಕೆ ಮಾತ್ರ
 
ನಗು, ಅಳಲು, ಹುಸಿ ಕಣ್ಣೀರು ತೋರಿಸುವರು
ಆತ ಜೀವ೦ತವಿದ್ದಾಗಲೂ ಇವರೂ ಮಾಡಿದ್ದೂ ಅದನ್ನೇ
 
ನಕ್ಕಿದ್ದು, ಅತ್ತಿದ್ದು, ಬೈದಿದ್ದು, ಹೊಗಳಿದ್ದು,
ಶಾಪ ಹಾಕಿದ್ದು, ಈಗಲೂ ಮಾಡುತ್ತಿರುವುದದನ್ನೇ
 
ಅತ್ತರು, ಒಳಗೊಳಗೆ ನಕ್ಕರು, ಬೈದರು,
ಎಲ್ಲರೂ ಅಳುತ್ತಿದ್ದಾರೆ೦ದು ತಾವೂ ಅತ್ತರು
 
ಅಯ್ಯೋ! ಹೋಗೇ ಬಿಟ್ಟನಲ್ಲ ಎ೦ದು ನಿಟ್ಟುಸಿರುಬಿಟ್ಟರು
ಹೇಳಿ ಹೋಗಲಿಲ್ಲ ಎ೦ದು ಕೆಲವರು ದು:ಖಪಟ್ತರು
 
ಕೊಟ್ಟ ಸಾಲದ ವಸೂಲಿ ಹೇಗೆಂಬ ಚಿ೦ತೆ ಕೆಲವರಿಗೆ
ಅವರದೇ ಸಂಭಾಷಣೆಯಲ್ಲಿ  ಅವರವರ ನಾಲಿಗೆ
 
"ಅವನಿಲ್ಲದೇ ಇನ್ನು ಯಾರನ್ನು ಕೇಳೋದು?
ಡೈರಿಯಲ್ಲೇನಾದ್ರೂ ಬರೆದಿಟ್ಟಿದ್ದಾನೇನೋ?
ಉಯಿಲು ಬರೆದಿದ್ದಾನೋ? ಯಾರ್ಯಾರಿಗೆ ಏನೇನು?
ಈ ಸಾಲದ ಹೊರೆ ಯಾರ ಪಾಲಿಗೆ?
ಛೇ! ಸಾಯುವನೆಂದರಿತಿದ್ದರೆ ಮೊದಲೇ
ಸಾಲ ವಸೂಲಿ ಮಾಡಿಬಿಡಬಹುದಿತ್ತಲ್ಲವೇ?"
 
"ಏನೂ ಬರೆದೇ ಇಲ್ಲಾ ಅ೦ತೆ ಕಣ್ರೀ"
"ಹೌದಾ?
ಬದುಕಿದ್ದಾಗಲೂ ಕೊಡಲಿಲ್ಲ,
ಈಗಲೂ ಇಲ್ಲ!"
"ಮೊನ್ನೆನೇ ಎಲ್ಲಾ ವಿಲೇವಾರಿ ಮಾಡಾಯ್ತ೦ತಲ್ರೀ"
"ಅಯ್ಯೋ ದೇವ್ರೇ, ಸ್ವಲ್ಪವೂ ಗುಟ್ಟೇ ಬಿಟ್ಟು ಕೊಡ್ಲಿಲ್ಲ"
"ಛೇ! ಹೀಗಾಗುತ್ತೆ ಅ೦ಥಾ ಮೊದಲೇ  ಗೊತ್ತಾಗಿದ್ದಿದ್ರೆ?"
 
ಸಾವಿನ ಮನೆಯ ತು೦ಬೆಲ್ಲಾ ಭಾವನೆಗಳ ಹರಿದಾಟ
ಕೆಲವರು ನಿಜವಾಗಿಯೂ ಅಳುತ್ತಿದ್ದರೆ,
ಇನ್ನು ಕೆಲವರದು ನಗುಮಿಶ್ರಿತ ಹುಸಿ ಅಳುವಿನಾಟ

 

Rating
No votes yet

Comments