ಸನ್ಯಾಸಿ ಮಠ

ಸನ್ಯಾಸಿ ಮಠ

 


ನೈಜ ಘಟನೆ ಆಧಾರಿತ

 

ಅದೊಂದು ಮಠ, ಸನ್ಯಾಸಿ ಮಠ, ಸುತ್ತ ಹದಿನೈದು ಹಳ್ಳಿಗಳ ಮಠಕ್ಕೆ ಈ ಮಠವೇ ಹೆಡ್ ಆಫೀಸು.

ಮಠಕ್ಕೊಂದು ದೊಡ್ಡ ಬಾಗಿಲು, ಒಳಗೆ ಹೋದರೆ ದೊಡ್ದದಾದೊಂದು ಪಡಸಾಲೆ, ಪಡಸಾಲೆಯ ಗೋಡೆಗಳಿಗೆಲ್ಲ ಮಠದ ಅಧಿಪತಿಗಳ ಭಾವಚಿತ್ರಗಳು.

ಮೂಲೆಯಲ್ಲೊಂದು ಕಟ್ಟೆ. ಕಟ್ಟೆ ದಾಟಿ ಹೋದಾಗ ಚಿಕ್ಕದೊಂದು ಬಾಗಿಲು, ಬಾಗಿಲಿನಿಂದ ಒಳಹೊದರೆ ಬಲಗಡೆ ಮಠದಿಷರ ಕೋಣೆ. ಎಡಕ್ಕೆ ಅವರ ಕುಟುಂಬ ಇರೋದಕ್ಕೆ ಮನೆ.ಕುಟುಂಬ ಅಂದ್ರೆ ಅವರ ತಂದೆ- ತಾಯಿ, ಅಕ್ಕ, ತಂಗಿ, ತಮ್ಮ, ಮುಂತಾದವರು ಇರಬಹುದು ಹೆಂಡತಿ ಮಕ್ಕಳನ್ನು ಬಿಟ್ಟು, ಏಕೆಂದರೆ ಇದು ಸನ್ಯಾಸಿ ಮಠ ಅಲ್ವೇ ಅದಕ್ಕೆ ಇಲ್ಲಿನ ಸ್ವಾಮಿಗಳು ಮದುವೆಯಾಗುವ ಹಾಗಿರಲಿಲ್ಲ. ಈ ಮಠಕ್ಕೆ ಸುಮಾರು ೧೦೦ ಎಕರೆ ಜಮೀನಿದೆ. ಈ ಮಠದ ಸ್ವಾಮಿಯ ಕುಟುಂಬದವರು ಈ ಜಮೀನನ್ನು, ಈ ಮಠವನ್ನು ಉಪಯೋಗಿಸಿಕೊಳ್ಳಬಹುದು.

  

ಮಠದ ಸಧ್ಯದ ಸ್ವಾಮಿಗಳು ವಿಜಯಕುಮಾರ್ ಸ್ವಾಮಿಗಳು. ಹೋಗಲಿ ಬಿಡಿ ಇವರ ಬಗ್ಗೆ ನನ್ನ ಬರಹ ಅಲ್ಲ.

 

ನನ್ನ ಬರಹ ಈ ಸ್ವಾಮಿಯ ಅಣ್ಣನವರದು. ಅವರೇ ಶಿವಾನಂದ. ದೇಶದ ಪ್ರತಿಷ್ಟಿತ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿದ್ದರು. ತುಂಬಾ ಮೃದು ಸ್ವಭಾವ. ಯಾರೊಂದಿಗೂ ಜಗಳವಾಡಿದ್ದವರಲ್ಲ, ಒರಟಾಗಿ ನಡೆದುಕೊಂಡಿದ್ದಿಲ್ಲ. ಕೆಲಸದಲ್ಲೂ ಅಷ್ಟೇ. ತುಂಬಾ ಬುದ್ದಿವಂತರು. ಅದಂತಾರಲ್ಲ ತುಂಬಿದ  ಕೊಡ  ತುಳುಕಂಗಿಲ್ಲ  ಅನ್ನೋ  ಹಾಗೆ , ಶಾಂತ  ಮನಸ್ತಿತಿಯವರು.

ನನ್ನಣ್ಣ  ಯಾವಾಗಲು  ಇವರನ್ನು  ನಿಮ್ಮಲ್ಲಿ  ಸ್ವಾಮಿಯಾಗುವ  ಎಲ್ಲಾ  ಗುಣಗಳು  ಇವೆ ಅಂತ ಕಾಡಿಸ್ತಾ ಇದ್ದಾ. ಸುಮ್ನೆ ನಕ್ಕು ಸುಮ್ಮನಾಗಿ ಬಿಡುತಿದ್ದರು.   

 

ನನ್ನಣ್ಣನ ಜೊತೆ ಗಾಢವಾದ ಗೆಳೆತನ. ಇಬ್ಬರು ಸೇರಿದರೆಂದರೆ ಆಯಿತು, ಚರ್ಚಿಸದ ವಿಷಯವೇ ಇಲ್ಲಾ , ವಿಶ್ವದಿಂದ ಹಿಡಿದು ಊರಿನ ತನಕ ಎಲ್ಲವನ್ನು ಜಾಲಾಡಿಬಿಡುತಿದ್ದರು.

 

ಅದೊಂದಿನ ನಮ್ಮನೆಯಲ್ಲಿ ಅವರಿಬ್ಬರ ಚರ್ಚೆ ನಡೆದಿತ್ತು. ನಾನು ಮತ್ತು ಶಿವಾನಂದರ ಪತ್ನಿ ಆ ಚರ್ಚೆಗೆ ಸಾಕ್ಷಿಗಳಾದೆವು.  ವಿಷಯ ಮಠ ಮತ್ತದರ ಸುತ್ತ ಇರುವ ಚಟುವಟಿಕೆಗಳು.

ಆಗ ಶಿವಾನಂದ ಸ್ವಾಮಿಗಳು ಒಂದು ಘಟನೆ ಹೇಳಿದರು.

 

ಅವರ ಕಾಕ ಈ ಹಿಂದೆ ಮಠದ ಸ್ವಾಮಿಗಳಾಗಿದ್ದರು. ಆದರೆ ಯಾರಿಗೂ ಹೇಳದೆ ಮದುವೆ ಮಾಡಿಕೊಂಡಿದ್ದರಂತೆ. ಹೇಳಿಕೇಳಿ ಸನ್ಯಾಸಿ ಮಠ ಮದುವೆಯಾಗಿ ಒಂದು ವರ್ಷದೊಳಗೆ, ಅದೇನೋ ನಿಘುಡ ರೀತಿಯಲ್ಲಿ ಅವರು ಸತ್ತು ಹೋದರಂತೆ. ಅವರು ಹೇಗೆ ಸತ್ತರು ಅಂತ ಯಾರಿಗೂ ಗೊತ್ತಿಲ್ಲ ಆದರೆ ಮದುವೆ ಮಾಡಿಕೊಂಡಿದಕ್ಕೆ ಹೀಗಾಯಿತು, ನೋಡಿದ್ರ ಮಠದ ತಾಕತ್ತು ಅಂತ ಊರಲ್ಲಿ ಎಲ್ಲಾ ಮಾತಾಡ್ತಾರೆ ಅಂತ ಮಾತು ಮುಗಿಸಿದರು.

ನಮ್ಮಣ್ಣ ಇದೆಲ್ಲಾ ಸುಳ್ಳು, ಇದು ಜಸ್ಟ್ ಕಾಕತಾಳಿಯ ಅಂತ ವಾದಿಸ್ತಿದ್ದ.     

 

ಈ ಚರ್ಚೆ ಮುಗಿದು ಸುಮಾರು ೧೫ ದಿನಕ್ಕೆ, ಶಿವಾನಂದ ಕಂಪನಿಯಿಂದ ಮನೆಗೆ ಹೋಗ್ತಾ ಇದ್ದಾಗ, ಎದುರಿನಿಂದ ಬರ್ತಾ ಇದ್ದಾ ಬಸ್ ಡ್ರೈವರ್ ಹೃದಯಾಘಾತದಿಂದ ಸತ್ತು, ಬಸ್ ಕಂಟ್ರೋಲ್ ತಪ್ಪಿ, ರೋಡಿನ ಆ ಕಡೆಯಿಂದ ಇವರು ಹೋಗ್ತಾ ಇದ್ದಾ ಕಡೆ ಬಂದು ಇವರನ್ನು ತುಳಿದು ಹಾಕಿ ಬಿಟ್ಟಿತ್ತು. 

 

ಅಣ್ಣನೆ ಮುಂದಾಳತ್ವ ವಹಿಸಿಕೊಂಡು ಪಂಚನಾಮೆಗಳನ್ನ ಮುಗಿಸಿ, ಅವರ ಮನೆಯಲ್ಲರಿಗೂ ಸುದ್ದಿ ಮುಟ್ಟಿಸಿ, ಹೆಣವನ್ನು ಅವರ ಊರಿಗೆ ತೆಗೆದುಕೊಂಡು ಹೋದಾಗ, ಸರಿ ಸುಮಾರು ಊರಿಗೆ ಊರೇ ಅಲ್ಲಿ ಜಮೆಯಾಗಿತ್ತು. ಎಲ್ಲರ ಕಣ್ಣಲ್ಲೂ ನೀರು, ಬಾಯಿಯಲ್ಲೂ ಒಂದೇ ಮಾತು, ಅಯ್ಯೋ ಸ್ವಾಮಿಗಳೇ, ನಮ್ಮನ್ನಗಲಿ ಹೊರಟುಹೊದರಲ್ಲಾ.... ಅಂತ ಒಂದೇ ಸಮನೆ ಅಳು.


ಆಗಲೇ ಗೊತ್ತಾಗಿದ್ದು ಶಿವಾನಂದ ಆ ಮಠದ ಸ್ವಾಮಿ. ಆ ಮಠದ ಹೊಲಕ್ಕೊಸ್ಕರ ಅವರ ತಂದೆಯವರು ಇವರ ಕಾಕ ತೀರಿಕೊಂಡ ಮೇಲೆ ಇವರನ್ನು ಪಟ್ಟ ಕಟ್ಟಿದ್ದರು. ಆಗ ಇವರ ವಯಸ್ಸು ಬರಿ ೧೨. 
ತಿಳುವಳಿಕೆ ಬಂದಂತೆ ಶಿವಾನಂದ್ ಸ್ವಾಮಿಗಳಿಗೆ ಇದು ಇಷ್ಟವಾಗಲಿಲ್ಲ. ಅದಕ್ಕೆ ಅವರು ಜಾಸ್ತಿ ಊರ ಕಡೆ ತಲೇನೆ ಹಾಕ್ತಾ ಇರಲಿಲ್ಲ. ಓದು ಮುಗಿದ ಮೇಲೆ ಕೆಲಸಕ್ಕೆ ಸೇರಿದ್ದು ಮದುವೆ ಮಾಡಿಕೊಂಡದ್ದು ಅವರ ಊರಲ್ಲಿ ಯಾರಿಗೂ ತಿಳಿದಿರಲೇ ಇಲ್ಲಾ. 

ಜನರ ಮಾತನ್ನು ಕೇಳಿದೊಡನೆ ನನ್ನ ತಲೆಯೊಳಗೆ ಬಂದಿದ್ದೆ ಅವರ ಮದುವೆ ತಾರೀಖು. ಮದುವೆಯಾಗಿ ೧೦ ತಿಂಗಳು ಮಾತ್ರ. 

ಇದು ಕಾಕತಾಳಿಯವೇ ಅರ್ಥವಾಗಲಿಲ್ಲ!!

 

-ಅಶ್ವಿನಿ  
Rating
No votes yet

Comments