ಏಕೆ ಸಿಕ್ಕೀತು ನನಗಿಂದು?!

ಏಕೆ ಸಿಕ್ಕೀತು ನನಗಿಂದು?!

ಎಂದೋ
ಗೀಚಿ
ಮರೆತಿದ್ದ,
ಕವಿತೆಯೊಂದು
ಕನಸಿನಲಿ ಬಂದು,
ನನಗೂ ಪ್ರಕಾಶ
ನೀಡು ಎಂದು,
ಕಾಡಿತು
ಬೇಡಿತು ಇಂದು;

ನಿದ್ದೆಯಿಂದೆದ್ದು
ಹುಡುಕಾಡಿದೆ,
ತಡಕಾಡಿದೆ,
ಎಲ್ಲಾ ಪುಸ್ತಕಗಳ
ಕೊಡವಿದೆ,
ಎಲ್ಲೂ ಸಿಗಲಿಲ್ಲ;

ಹೇಗೆ
ಸಿಕ್ಕೀತು?
ಏಕೆ
ಸಿಕ್ಕೀತು?


ಯೌವನದ
ದಿನಗಳಲಿ,
ಚಿಗುರುಮೀಸೆಯ
ಹುಡುಗನ,
ಹೃದಯ
ಬಡಿತವ
ಹೆಚ್ಚಿಸಿ,
ರಾತ್ರಿಗಳಲಿ
ನಿದ್ದೆಯ
ಕೆಡಿಸಿ,
ಕನಸುಗಳ
ಮೂಡಿಸಿ,
ಅದೊಂದು
ದಿನ ಸದ್ದಿಲ್ಲದೇ,
ನೆನಪಿನಂಗಳದಿಂದ
ಮರೆಯಾದವಳು
ಅವಳು ಅಂದು,


ಅವಳ
ಬಟ್ಟಲು ಕಂಗಳ,
ಮುಂಗುರುಳುಗಳ,
ಮಧುರ ಮಾತುಗಳ,
ನೀಳ ಕೈಗಳ,
ಕೆಂಪು ತುಟಿಗಳ,
ಬಣ್ಣಿಸಿ ಬಣ್ಣಿಸಿ,
ಗೀಚಿದ್ದ
ಆ ಕವಿತೆ,
ಹೇಗೆ
ಸಿಕ್ಕೀತು?
ಏಕೆ
ಸಿಕ್ಕೀತು
ನನಗಿಂದು?
*****
ಆತ್ರಾಡಿ ಸುರೇಶ ಹೆಗ್ಡೆ

Rating
No votes yet

Comments