ಚೈನೀಸ್ 'ಪ್ರೇಮಿಗಳ ದಿನ' !

ಚೈನೀಸ್ 'ಪ್ರೇಮಿಗಳ ದಿನ' !

ಒಂದಾನೊಂದು ಕಾಲದಲ್ಲಿ ನಿಯ್ಲೊಂಗ್(niu long) ಎಂಬ ದನ ಕಾಯುವ ಸುಂದರ ತರುಣ ಇದ್ದ .ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡಿದ್ದರಿಂದ ತನ್ನ ದೊಡ್ಡಣ್ಣ ಮತ್ತು ಅತ್ತೆಯ ಜೊತೆಗೆ ವಾಸಿಸುತ್ತಿದ್ದ.ಅವನ ಅಣ್ಣ,ಅಪ್ಪನ ಜಮೀನನ್ನೆಲ್ಲ ತನ್ನ ಸುಪರ್ದಿಗೆ ತೆಗೆದುಕೊಂಡಿದ್ದರಿಂದ ನಿಯ್ಲೊಂಗ್ ನ ಪಾಲಿಗೆ ಒಂದು ಆಕಳು ಮಾತ್ರ ಬಂದಿತ್ತು.ಅಣ್ಣನ ಮನೆಯಲ್ಲಿ ಇದ್ದರೂ ಜೀತದಾಳಿನಂತಿದ್ದ.

ಆ ಸಮಯದಲ್ಲಿನ ದೇವಲೋಕದ ರಾಜನಿಗೆ ೭ ಜನ ಹೆಣ್ಣು ಮಕ್ಕಳು.ಅವರಲ್ಲಿ ಏಳನೆಯ ಮಗಳ ಹೆಸರು ಝಿನು (zhi nu)ಎಂದು.ತುಂಬಾ ಸುಂದರಿ ಅಷ್ಟೇ ಅಲ್ಲ ಅವಳಲ್ಲಿ ಒಂದು ಅದ್ಭುತ ಕಲೆ ಇತ್ತು.ಅವಳು ಮೋಡಗಳನ್ನು ಹಾಗೂ ಕಾಮನ ಬಿಲ್ಲುಗಳನ್ನು ಸುಂದರವಾಗಿ ಸೃಷ್ಠಿಸಬಲ್ಲವಳಾಗಿದ್ದಳು.ಅದಕ್ಕೇ ರಾಜನಿಗೆ ಅವಳ ಮೇಲೆ ಅತಿಯಾದ ಪ್ರೀತಿ.

ನಿಯ್ಲೊಂಗ್ ಬಳಿ ಇದ್ದ ಆ ಆಕಳು ದೇವಲೋಕದ ಒಬ್ಬ ದೇವತೆ.ಅಲ್ಲಿ ಒಂದು ಶಾಪಕ್ಕೆ ಗುರಿಯಾಗಿ ಭೂಮಿಗೆ ಆಕಳಾಗಿ ಬಂದಿದ್ದ.ಒಮ್ಮೆ ಆ ಆಕಳು ನಿಯ್ಲೊಂಗ್ನಿಗೆ,ನೀನು ಒಬ್ಬ ಉತ್ತಮ ಪುರುಷ.ನಿನಗೆ ಮದುವೆ ಮಾಡಿಕೊಂಡು ಸುಖವಾಗಿ ಇರಬೇಕೆಂದಿದ್ದರೆ ಇಂದು ಕೆಲಸವನ್ನು ಬಿಟ್ಟು ನದಿಯ ಬಳಿಗೆ ನಡೆ ಎಂದಿತು.ಅವನು ಅದಕ್ಕೆ ಒಪ್ಪಿ ನದಿಯ ಬಳಿಗೆ ಬರಲಾಗಿ ಅಲ್ಲಿ ದೇವಲೋಕದ ರಾಜನ  ೭ ಹೆಣ್ಣು ಮಕ್ಕಳು ನದಿಯಲ್ಲಿ ಸ್ನಾನ ಮಾಡುತ್ತಿದ್ದರು.ಅವರೆಲ್ಲರಲ್ಲಿ ತುಂಬಾ ಚೂಟಿ ಹಾಗೂ ಸುಂದರಳಾದ ಝಿನುಳ ರೂಪಕ್ಕೆ ಆಕರ್ಷಿತನಾಗಿ ನಿಯ್ಲೊಂಗ್ ಅವಳ ಬಟ್ಟೆಗಳನ್ನು ಕದ್ದನು.ಸ್ನಾನದ ನಂತರ ಎಲ್ಲರೂ ತಮ್ಮ ತಮ್ಮ ಲೋಕಕ್ಕೆ ಹೋದರು.ಆದರೆ ಝಿನು ಬಟ್ಟೆಗಳಿಲ್ಲದೇ ಅಳುತ್ತ ಕುಳಿತಳು.ಆಗ ಆಕಳ ಮಾತಿನಂತೆ ಅಲ್ಲಿ ಬಂದ ನಿಯ್ಲೊಂಗ್ ನೀನು ನನ್ನ ವರಿಸು ಅಂದರೆ ನಿನಗೆ ನಿನ್ನ ಬಟ್ಟೆಗಳನ್ನು ಕೊಡುವೆ ಎಂದನು.ಬೆತ್ತಲಾಗಿ ನಿಂತಿದ್ದ ಝಿನು ನಾಚಿಕೆ ಇಂದ ಹಾಗೂ ನಿಯ್ಲೊಂಗ್ ನ ಸೌಂದರ್ಯಕ್ಕೆ ಮಾರು ಹೋಗಿ ಒಪ್ಪಿಗೆ ಕೊಟ್ಟಳು.ಮದುವೆಯಾಗಿ ಕೆಲ ವರ್ಷಗಳಲ್ಲಿ ಅವರಿಗೆ ೨ ಮಕ್ಕಳಾಗುತ್ತವೆ,ಸುಖವಾಗಿ ಬಾಳುತ್ತಿರುತ್ತಾರೆ.

ಒಂದು ದಿನ ನನ್ನ ದೇಹದ ಚರ್ಮವನ್ನು ಸುರಕ್ಷಿತ ವಾಗಿಡು ಎಂದು ತಿಳಿಸಿ,ಆ ಆಕಳು ಶಾಪ ವಿಮುಕ್ತವಾಗಿ ದೇಹ ತ್ಯಜಿಸುತ್ತದೆ.

ಇತ್ತ ತನ್ನ ಕೊನೆಯ ಮಗಳಿಲ್ಲದೇ,ಅವಳ ಸುಂದರ ಸೃಷ್ಠಿಗಳಿಲ್ಲದೇ ದೇವಲೋಕದ ರಾಜ ದುಃಖಿತನಾಗುತ್ತಾನೆ. ಹಾಗೂ ತನ್ನ ತಾಯಿಗೆ ಅವಳನ್ನು ಹುಡುಕಿ ಕರೆ ತರಲು ತಿಳಿಸುತ್ತಾನೆ.ಭುವಿಯಲ್ಲಿ ಝಿನುಳನ್ನು ಕಂಡ ಅಜ್ಜಿ ಅವಳನ್ನು ಬಲವಂತ ಪೂರ್ವಕವಾಗಿ ಕರೆದೊಯ್ಯತೊಡಗುತ್ತಾಳೆ.ಆಗ ನಿಯ್ಲೊಂಗ್ ತನ್ನ ಮಕ್ಕಳನ್ನು ಬುಟ್ಟಿಯಲ್ಲಿ ಹಾಕಿಕೊಂಡು ಆಕಳ ಚರ್ಮದ ಮೇಲೆ ಕುಳಿತು ಅವಳನ್ನು ಹಿಂಬಾಲಿಸುತ್ತಾನೆ.ಅವನು ತನ್ನನ್ನು ಸಮೀಪಿಸುತ್ತಿರುವುದನ್ನು ಅರಿತ ಅಜ್ಜಿ ತನ್ನ ದಂಡದಿಂದ ಇಬ್ಬರ ನಡುವೆ ಒಂದು ಹಾಲಿನ ದಾರಿ*ಯನ್ನೇ ಸೃಷ್ಠಿಸಿ ನಿಯ್ಲೊಂಗ್ ಮತ್ತು ಝಿನುರನ್ನು ಸದಾಕಾಲ ಬೇರ್ಪಡಿಸುತ್ತಾಳೆ.


ಲೈರ(lyra) ನಕ್ಷತ್ರಪುಂಜದ(constellation) ವೇಗ(vega) ನಕ್ಷತ್ರವೇ ಝಿನು ಹಾಗು ಅಕ್ವಿಲ(aquila) ನಕ್ಷತ್ರಪುಂಜದ  ಆಲ್ಟೆರ್(altair) ನಕ್ಷತ್ರವೇ ನಿಯ್ಲೊಂಗ್.ಬೀಟ ಮತ್ತು ಗ್ಯಾಮ ಅಕ್ವಿಲ ಗಳು ಅವರ ಮಕ್ಕಳು ಎಂಬ ಪ್ರತೀತಿ ಚೀನಾದಲ್ಲಿದೆ.

ಚೀನಾದಲ್ಲಿ ಸಂತೋಷದ ಪ್ರತೀಕಗಳಾದ ಮ್ಯಗ್ಪಿ  ಎಂಬ ಹಕ್ಕಿಗಳು ಇವರಿಬ್ಬರ ಅಪ್ರತಿಮ ಪ್ರೀತಿಯನ್ನು ಕಂಡು ವರ್ಷಕ್ಕೊಂದು ಬಾರಿಯಾದರೂ ಇವರನ್ನು ಕೂಡಿಸಲು ಚೈನೀಸ್ ಕ್ಯಾಲೆಂಡರ್ ನ ಏಳನೇ ತಿಂಗಳ ಏಳನೇ ದಿನದ ಸಂಜೆ ಆಗಸಕ್ಕೆ ಹಾರಿ ಎರಡು ನಕ್ಷತ್ರಗಳ ನಡುವೆ ಒಂದು ಸುಂದರ ಸೇತುವೆಯನ್ನು ನಿರ್ಮಿಸುತ್ತವಂತೆ.ಅಂದು ಇವುಗಳು ಭೂಮಿಯ ಮೇಲೆ ಹೆಚ್ಚಾಗಿ ಕಾಣುವುದಿಲ್ಲವಂತೆ,ಹಾಗೂ ನಂತರದ ಕೆಲ ದಿನಗಳಲ್ಲಿ ಇವುಗಳ ಬಹಳಷ್ಟು ಪುಕ್ಕಗಳು ಇರುವುದಿಲ್ಲವಂತೆ.ಇನ್ನೊಂದು ಕುತೂಹಲ ವಿಷಯ ಏನೆಂದರೆ ಆ ದಿನ ಸಂಜೆ ಮಳೆ ಬರುತ್ತದೆ ಮತ್ತು ಅದು ಝಿನು ಮತ್ತು ನಿಯ್ಲೊಂಗ್ ರ ಪ್ರೀತಿಯ ಕಣ್ಣೀರುಗಳಂತೆ.ಈ ದಿನವನ್ನು ಚೀನಿಯರು 'ಪ್ರೇಮಿಗಳ ದಿನ' ಎಂದು ಆಚರಿಸುತ್ತಾರೆ.ಇದಕ್ಕೆ ಇಲ್ಲಿ ಚಿ ಕ್ಷಿ (qi xi)ಎಂದೆನ್ನುತಾರೆ.

ಮೊನ್ನೆ ಸೋಮವಾರ ಅ.೧೬ ರಂದು ಆ ದಿನ ಆಚರಿಸಲಾಯಿತು.ಅಂದು ಬಹಳಷ್ಟು ಬಾರಿ ಕೇಳಿದ ಅಡುಗೋಲಜ್ಜಿ  ಕಥೆ ಇದು.ಇನ್ನೊಂದು ಅಚ್ಚರಿಯ ವಿಷಯ ಏನೆಂದರೆ ಈಗ ಇಲ್ಲಿ ಬೇಸಿಗೆ ಕಾಲ.ಅಂದು ಸುಮಾರು ೩೮-೪೦ ಡಿಗ್ರಿ ಸೆ. ಇದ್ದ ಬಿಸಿಲು ಕರಗಿ,ಸಂಜೆಯ ವೇಳೆಗೆ ಕೆಲ ಮಳೆ ಹನಿಗಳು ಧರೆಗೆ ಅಪ್ಪಳಿಸಿದುವು.!!

*ಹಾಲಿನ ದಾರಿ-ಮಿಲ್ಕಿ ವೇ ನಕ್ಷತ್ರ ಪುಂಜ

ಚಿತ್ರ :ಅಂತರ್ ಜಾಲ
Rating
No votes yet

Comments