ಅಧಿಕಾರ ಹಸ್ತಾಂತರ:ಮೂರೂ ಬಿಟ್ಟ ಮೂರೂ ಪಕ್ಷಗಳು

ಅಧಿಕಾರ ಹಸ್ತಾಂತರ:ಮೂರೂ ಬಿಟ್ಟ ಮೂರೂ ಪಕ್ಷಗಳು

ಅಧಿಕಾರ ಹಸ್ತಾಂತರ:ಮೂರೂ ಬಿಟ್ಟ ಮೂರೂ ಪಕ್ಷಗಳು
ರಾಜ್ಯದ ಅಧಿಕಾರ ಹಸ್ತಾಂತರ ರಾಜಕಾರಣ ತಾರಕಕ್ಕೇರಿದೆ. ಅಧಿಕಾರಕ್ಕೇರುವಾಗ, ಇಪ್ಪತ್ತು ತಿಂಗಳು ನಾನು; ಇನ್ನಿಪ್ಪತ್ತು ತಿಂಗಳು ನೀವು ಮುಖ್ಯಮಂತ್ರಿ ಎಂದು ಸರಳ ಲೆಕ್ಕಾಚಾರದ ರೂಪದಲ್ಲಿದ್ದ ಒಪ್ಪಂದ, ಅದು ಅಧಿಕಾರಕ್ಕೆ ಸಂಬಂಧಿಸಿದ ಒಪ್ಪಂದ ಎಂಬ ಕಾರಣದಿಂದಾಗಿಯೇ, ಅಧಿಕಾರ ಹಸ್ತಾಂತರದ ದಿನ ಹತ್ತಿರವಾಗುತ್ತಿದ್ದಂತೆಯೇ ಒಪ್ಪಂದದ ಎಲ್ಲ ಪಾವಿತ್ರ್ಯವನ್ನೂ ಕಳೆದುಕೊಳ್ಳುತ್ತಿದೆ! ಈ ಒಪ್ಪಂದದ ಬೆಲೆ ಕಳೆಯಲು ನಾಲ್ಕಾರು ತಿಂಗಳುಗಳ ಹಿಂದೆಯೇ ಪ್ರಯತ್ನಗಳು ಆರಂಭವಾದವು. ಉಳ್ಳಾಲದಲ್ಲಿ ಮುಖ್ಯಮಂತ್ರಿಯ ಸಮ್ಮುಖದಲ್ಲಿಯೇ ಅನ್ಸಾರಿ ಎಂಬ ಮಂತ್ರಿ, ಮುಂದೆ ಕೂಡ ಕುಮಾರಸ್ವಾಮಿಯವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ - ಅದಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ ಎಂದು ಹೇಳುವ ಮೂಲಕ ಈ ಒಪ್ಪಂದದತ್ತ ಮೊದಲ ಕಲ್ಲು ಎಸೆದರು. ಮುಖ್ಯಮಂತ್ರಿ ನಸುಗುನ್ನಿ ತರಹ ಅದನ್ನು ನಗುತ್ತಲೇ ಕೇಳುತ್ತಾ ಕೂತಿದ್ದರು. ಅನ್ಸಾರಿ ಮತ್ತೆ ಅದನ್ನು ಪುನರುಚ್ಛರಿಸಿದಾಗ, ಪತ್ರಕರ್ತರ ಪ್ರಶ್ನೆಗೆ ಮುಖ್ಯಮಂತ್ರಿ, ಇದು ಅನ್ಸಾರಿಯವರ ಚುನಾವಣಾ ತಂತ್ರವಿರಬಹುದು ಎಂದು ಜಾರಿಕೊಂಡರು - ಪಕ್ಷಕ್ಕೊಂದು ತಂತ್ರವಿರದೆ, ಪಕ್ಷದ ಪ್ರತಿ ಸದಸ್ಯನಿಗೂ ಒಂದೊಂದು ತಂತ್ರವಿರುವ ಹಾಗೆ! ನಂತರ ಎಂ.ಪಿ.ವೆಂಕಟೇಶ್ ಎಂಬ ಹುಂಬ ಶಾಸಕ ಕುಮಾರಸ್ವಾಮಿಯವರೇ ಮುಂದಿನ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು, ಬಿ.ಜೆ.ಪಿ. ಸದಸ್ಯರೂ ಸೇರಿದಂತೆ ಬಹುತೇಕ ಶಾಸಕರ ಇಚ್ಛೆಯಾಗಿದೆ ಎಂಬ ಹೇಳಿಕೆ ಕೊಟ್ಟಾಗಲೂ, ಅದು ಅವರ ವೈಯುಕ್ತಿಕ ಅಭಿಪ್ರಾಯ ಎಂದು ನಸುನಕ್ಕು ಮುಂದೆ ಹೋದರು! ವಿಧಾನಸಭೆಯಲ್ಲೇ ಡಿ.ಟಿ.ಜಯಕುಮಾರ್ ಎಂಬ ಹರಳೆಣ್ಣೆ ಮಂತ್ರಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಅಸಮರ್ಥರು ಎಂದು ಹೇಳಿ ಈ ಒಪ್ಪಂದದ ಘನತೆಯನ್ನು ಅಧಿಕೃತವಾಗೇ ನಾಶ ಮಾಡಲು ಯತ್ನಿಸಿದಾಗಲೂ, ಮುಖ್ಯಮಂತ್ರಿ ತಮ್ಮ ಆ ಮಂತ್ರಿಗೆ ಛೀಮಾರಿ ಹಾಕುವುದಿರಲಿ, ಅದನ್ನು ಖಂಡಿಸಲೂ ಮುಂದಾಗಲಿಲ್ಲ. ಇದರರ್ಥ ಇಷ್ಟೆ: ಇದೊಂದು ಸುಯೋಜಿತ ಕಾರ್ಯಾಚರಣೆಯಾಗಿದ್ದು, ಅಧಿಕಾರ ಹಸ್ತಾಂತರದ ಹೊತ್ತಿಗೆ, ಜನರ ಕಣ್ಣಲ್ಲಿ ಈ ಒಪ್ಪಂದದ ಮಹತ್ವವನ್ನು ಹಾಳುಮಾಡುವುದಷ್ಟೆ ಇದರ ಉದ್ದೇಶವಾಗಿದೆ.

ಈಗ ಈ ಕಾರ್ಯಾಚರಣೆಯ ನೇತೃತ್ವವನ್ನು ಮುಖ್ಯಮಂತ್ರಿಗಳೇ ವಹಿಸಿಕೊಂಡಿದ್ದಾರೆ! ರೈತರ ಆತ್ಮಹತ್ಯೆ ತಮ್ಮನ್ನು ಕಂಗೆಡಿಸಿದ್ದು, ತಾವು ಅವಧಿಗೆ ಮುನ್ನವೇ ಅಧಿಕಾರ ತ್ಯಾಗ ಮಾಡುವುದಾಗಿ ಹೇಳಿದ್ದ ಈ ಮುಖ್ಯಮಂತ್ರಿಗಳು, ತಮ್ಮ ತಂದೆಯ 'ರೈತರು ನಮ್ಮ ಮಾತು ಕೇಳದೆ ಆತ್ಮಹತ್ಯೆ ಮಾಡಿಕೊಂಡರೆ ಮಾಡಿಕೊಳ್ಳಲಿ, ನೀನು ಅಧಿಕಾರ ಬಿಡದೆ ನಿನ್ನ ಒಳ್ಳೆಯ ಕೆಲಸವನ್ನು ಮುಂದುವರೆಸು' ಎಂಬ ಬಹಿರಂಗ ಆದೇಶ ರೂಪದ ಆಶೀರ್ವಾದವನ್ನು ಪಾಲಿಸಲೆಂಬಂತೆ ಈವರೆಗೂ ಅಧಿಕಾರದಲ್ಲಿ ಮುಂದುವರೆದಿದ್ದಲ್ಲದೆ; ಮೊದಮೊದಲು, ಅಧಿಕಾರ ಹಸ್ತಾಂತರ ಖಚಿತ - ಅನುಮಾನ ಬೇಡ ಎನ್ನುತ್ತಿದ್ದವರು ನಂತರ ರಾಗ ಬದಲಾಯಿಸಿ, ಅಕ್ಟೋಬರ್ ಮೂರರವರೆಗೆ ಕಾದು ನೋಡಿ ಎಂಬ ಅನಿಶ್ಚಿತತೆಯ ಧ್ವನಿ ಬೆರಸತೊಡಗಿದರು. ತದನಂತರ, ಅಧಿಕಾರ ಹಸ್ತಾಂತರವಾದರೂ, ಆ ಸರ್ಕಾರ ಎಷ್ಟು ದಿನ ಉಳಿಯುವುದೋ ಖಚಿತವಿಲ್ಲ ಎನ್ನತೊಡಗಿದರು! ಇತ್ತೀಚಿನ ಅವರ ನುಡಿಮುತ್ತು: ಎರಡೂ ಪಕ್ಷಗಳ ಜಂಟಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ನಾಯಕತ್ವದ ನಿರ್ಧಾರವಾಗುತ್ತದೆ ಎಂಬುದು. ಮುಖ್ಯಮಂತ್ರಿಯವರ ಈ ಎರಡೂ ಹೇಳಿಕೆಗಳ ಹಿಂದೆ ಎಂತಹ ಬೇಜವಾಬ್ದಾರಿತನ ಹಾಗೂ ಅನೈತಿಕತೆ ಅಡಗಿದೆ ಎಂಬುದನ್ನು ಗಮನಿಸಬೇಕು. ಅಧಿಕಾರ ಹಸ್ತಾಂತರದ ಮುನ್ನವೇ ಮುಂದಿನ ಸರ್ಕಾರದ ಅಭದ್ರತೆಯ ಬಗ್ಗೆ ಅನುಮಾನ ವ್ಯಕ್ತಪಡಿಸುವ ಮೂಲಕ ಅವರು ಸೂಚಿಸುತ್ತಿರುವುದಾದರೂ ಏನು? ನಿಮ್ಮ ನಾಯಕತ್ವದ ಬೆಂಬಲಕ್ಕೆ ನಮ್ಮ ಪಕ್ಷವೇನೂ ಬದ್ಧವಲ್ಲ ಎಂಬ ಸೂಚನೆ ತಾನೇ? ಅಥವಾ ನಿಮ್ಮ ನಾಯಕತ್ವದ ವಿರುದ್ಧ ನನ್ನ ಮತ್ತು ನಿಮ್ಮ ಪಕ್ಷದ ಶಾಸಕರು ಬಂಡೇಳಲಿರುವರೆಂಬ ಬೆದರಿಕೆಯೋ?

ಅಧಿಕಾರ ಹಸ್ತಾಂತರಕ್ಕೆ ಇಂತಹ ಪ್ರತಿಕೂಲ ಪರಿಸ್ಥಿತಿಯ ಸಂಭಾವ್ಯತೆ ಸೃಷ್ಟಿಯಾಗಿರುವುದೂ ತಮ್ಮ ಅಧಿಕಾರಾವಧಿಯ ಕರಾಮತ್ತಿನಿಂದಾಗಿಯೇ ಎಂಬುದು ಮುಖ್ಯಮಂತ್ರಿಗೆ ತಿಳಿಯದ ವಿಷಯವೇನೂ ಅಲ್ಲ. ಏಕೆಂದರೆ, ಇತ್ತೀಚೆಗೆ ತಾನೇ 'ಅನಿವಾರ್ಯ ಕಾರಣ'ಗಳಿಂದಾಗಿ ಅಧಿಕೃತವಾಗಿ ಮುಂದೂಡಲ್ಪಟ್ಟ, ಆದರೆ ಅನಧಿಕೃತವಾಗಿ ಇನ್ನೂ ಚಾಲನೆಯಲ್ಲಿರುವ; ಗಣಿ ಉದ್ಯಮಿ ಹಾಗೂ ಶಾಸಕ ಅನಿಲ್ ಲಾಡ್ ಪಕ್ಷಭೇಧವಿಲ್ಲದೆ ತಮ್ಮ ಆತಿಥ್ಯಕ್ಕಾಗಿ ಆಯ್ದಿದ್ದ ಶಾಸಕರ ಹೊಸಪೇಟೆ ರೆಸಾರ್ಟ್ ಪ್ರವಾಸವು ಈ ಕರಾಮತ್ತಿಗೆ ಅಂತಿಮ ರೂಪು ಕೊಡುವುದೇ ಆಗಿತ್ತಲ್ಲವೇ? ತಮ್ಮ ನಾಯಕತ್ವದ ಅಧಿಕಾರಾವಧಿಯುದ್ದಕ್ಕೂ, ಉಪ ಮುಖ್ಯಮಂತ್ರಿ ತಮ್ಮ ಪಕ್ಷದ ಬೆಂಬಲವನ್ನು ಖಚಿತಪಡಿಸಿಕೊಂಡು ಬಂದ ಹಾಗೇ, ಅವರ ಅಧಿಕಾರಾವಧಿಯುದ್ದಕ್ಕೂ ತಮ್ಮ ಪಕ್ಷದ ಬೆಂಬಲವನ್ನೂ ಖಚಿತಪಡಿಸಬೇಕಾದದ್ದು ಒಪ್ಪಂದ ಪ್ರಕಾರ ಈಗಿನ ಮುಖ್ಯಮಂತ್ರಿಯವರ ಒಂದು ನೈತಿಕ ಜವಾಬ್ದಾರಿಯಲ್ಲವೇ? ಹಾಗೇ, ಮುಂದಿನ ನಾಯಕನನ್ನು ಎರಡೂ ಪಕ್ಷಗಳ ಜಂಟಿ ಶಾಸಕಾಂಗ ಸಭೆ ನಿರ್ಧರಿಸುವುದು ಎಂಬ ಮುಖ್ಯಮಂತ್ರಿಯವರ ಹೇಳಿಕೆ, ಸ್ವತಃ ಅವರ ನಾಯಕತ್ವವೇನೂ ಜಂಟಿ ಶಾಸಕಾಂಗ ಸಭೆಯಲ್ಲಿ ನಿರ್ಧರಿತವಾದುದಲ್ಲ ಎಂಬ ಹಿನ್ನೆಲೆಯಲ್ಲಿ ಅನೈತಿಕವೆನಿಸಿಕೊಳ್ಳುತ್ತದೆ . ಒಂದು ಪಕ್ಷ ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ಭಿನ್ನಾಭಿಪ್ರಾಯವಿದ್ದರೆ, ಅದು ವ್ಯಕ್ತವಾಗಬೇಕಾದದ್ದು ಅವರ ಪಕ್ಷದಿಂದಲೇ ಹೊರತು, ಮಿತ್ರನೆಂದು ಆಲಂಗಿಸಿ ಅಧಿಕಾರ ಹಂಚಿಕೊಂಡ ಪಕ್ಷದಿಂದಲ್ಲ. ಜನರ ಈ ಎಲ್ಲ ನೆನಪನ್ನು - ತಿಳುವಳಿಕೆಯನ್ನು ಭಂಗಗೊಳಿಸುವ ಪ್ರಯತ್ನವೇ ಈ ರಾಜಕೀಯ ಕಾರ್ಯಾಚರಣೆ.

ಹಾಗೆ ನೋಡಿದರೆ, ಈ ಸರ್ಕಾರ ಅಧಿಕಾರಕ್ಕೆ ಬಂದಾಗ ಸಾರ್ವಜನಿಕವಾಗಿ ಘೋಷಿತವಾದದ್ದು ಸದರಿ ವ್ಯವಸ್ಥೆಯ ಕೊನೆಯ ಇಪ್ಪತ್ತು ತಿಂಗಳ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ನಿರ್ದಿಷ್ಟವಾಗಿಯೇ ಹೊರತು, ಮೊದಲ ಇಪ್ಪತ್ತು ತಿಂಗಳ ನಂತರ ಆ ಪಕ್ಷದಲ್ಲಿ ಹೊಸ ನಾಯಕನ ಆಯ್ಕೆ ನಡೆಯುವುದು ಎಂದಲ್ಲ. ಇಷ್ಟಾದರೂ, ಯಡಿಯೂರಪ್ಪ ತಡೆಯಲಾರದೆ ಒಮ್ಮೆ ಬಾಯ್ಬಿಟ್ಟು, ಉಪಮುಖ್ಯಮಂತಿಯಾಗಿ ಇದೇ ನನ್ನ ಕೊನೇ ಅಧಿವೇಶನ ಎಂದೊಡನೆ; ಅಧಿಕಾರ ಹಸ್ತಾಂತರದ ಬಗ್ಗೆ ಮೇಲೆ ತಿಳಿಸಿದಂತೆ ಬಹಿರಂಗವಾಗಿಯೇ ಗೊಂದಲಕಾರಿ ಹೇಳಿಕೆಗಳನ್ನು ನೀಡಿ ಒಪ್ಪಂದದ ಪಾವಿತ್ರ್ಯವನ್ನೇ ಹಾಳುಮಾಡಲು ಯತ್ನಿಸಿದ್ದ ನಮ್ಮ ಮುಖ್ಯಮಂತ್ರಿಗಳಿಗೆ, ಈಗ ಅದು ಆ ಸ್ಥಾನಕ್ಕೆ ತಕ್ಕುದಾದ ಮಾತಲ್ಲವೆನ್ನಿಸಿ; ಅವಧಿಗೆ ಮೊದಲೇ ಖುರ್ಚಿ ಬಿಡಲು ಸಿದ್ಧನಾದ ಬೈರಾಗಿಯಂತೆ ಮಾತನಾಡತೊಡಗಿದ್ದಾರೆ!. ಈ ಹುಸಿ ನೈತಿಕತೆಯ ನಾಟಕ ಈಗಲೂ ಎಷ್ಟು ಹಾಸ್ಯಾಸ್ಪದ ಮಟ್ಟದವರೆಗೆ ಮುಂದುವರೆದಿದೆಯೆಂದರೆ, ತಾವು ಅಧಿಕಾರ ತ್ಯಾಗ ಮಾಡಿದ ಮೇಲೂ ಜನತಾದರ್ಶನ ಹಾಗೂ ಗ್ರಾಮವಾಸ್ತವ್ಯದ ಮೂಲಕ ಬಡವರ ಕಣ್ಣೀರು ಒರೆಸುವ ಕಾರ್ಯಕ್ರಮ ಮುಂದುವರೆಸುವುದಾಗಿ ಕುಮಾರಸ್ವಾಮಿ ಘೋಷಿಸಿಬಿಟ್ಟಿದ್ದಾರೆ! ಹೀಗೆ ಬಡವರ ಕಣ್ಣೀರೊರಸುತ್ತಲೇ ಇವರ ಕುಟುಂಬ, ಇವರ ತಂದೆಯೇ ಹಿಂದೊಮ್ಮೆ ತಮ್ಮ ಆಸ್ತಿ ಬಗ್ಗೆ ಹೇಳಿಕೊಂಡಿದ್ದಂತೆ ನಾಲ್ಕು ಕುರಿಗಳಿಂದ ಹೊರಟು ಇಂದು ಕರ್ನಾಟಕದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲೊಂದು ಎನಿಸಿಕೊಂಡಿರುವುದು! ಮೊನ್ನೆ ಮತ್ತೆ ಬಾಯಿ ತೆರೆದಿರುವ ಮಂತ್ರಿ ಅನ್ಸಾರಿಯವರೇ ಹೇಳಿಲ್ಲವೇ, ಕುಮಾರಸ್ವಾಮಿಯವರು ಮುಟ್ಟಿದ್ದೆಲ್ಲವೂ ಚಿನ್ನವಾಗತೊಡಗಿದೆ ಎಂದು? ಇವೊತ್ತಿನ ರಾಜಕಾರಣದ ಪರಿಭಾಷೆ ಇದೇ ಅಲ್ಲವೇ?

ಅದೇನೇ ಇರಲಿ, ಈ ಕಾರ್ಯಾಚರಣೆ ಮೊನ್ನೆ ತಾನೇ ಇನ್ನೊಂದು ಹಂತವನ್ನು ತಲುಪಿತು. ಗುಲ್ಬರ್ಗಾ ಜಿಲ್ಲೆಯಲ್ಲಿ ಗ್ರಾಮವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿಗಳು ಆ ಅಲ್ಪಸಂಖ್ಯಾತರ ಪ್ರದೇಶದ ವಾತಾವರಣದಲ್ಲಿ ಉಳ್ಳಾಲದ ಹೊಡೆತ ನೆನಪಾಗಿ, ಆ ಜನರ ವಿಶೇಷ ಒಲುಮೆ ಗಳಿಸಲೆಂದೋ ಏನೋ, ಬಿ.ಜೆ.ಪಿ.ಯೊಡನೆ ಮೈತ್ರಿ ಮಾಡಿಕೊಂಡ ಪರಿಣಾಮವಾಗಿ ತಮ್ಮ ಪಕ್ಷದ ಜಾತ್ಯತೀತ ನೀತಿಗೆ ಧಕ್ಕೆಯಾಗಿದೆ ಎಂದಿದ್ದಾರೆ. ಅಲ್ಲಿಂದ ಹಾಸನ - ಅರಸೀಕೆರೆಯೆಡೆಗೆ ಧಾವಿಸಿದ ಅವರು ತಮ್ಮನ್ನು ಈ ವಿಷಯದಲ್ಲಿ ಪೇಚಿಗೆ ಸಿಕ್ಕಿಸಿಲು ಬಂದ ಪತ್ರಕರ್ತರನ್ನು, ತಾವು ಹೇಳಿದ್ದು ಸರಿಯೋ ತಪ್ಪೋ ನೀವೇ ಹೇಳಿ ಎಂದು ಪತ್ರಕರ್ತರನ್ನೇ ಪೇಚಿಗೆ ಸಿಕ್ಕಿಸಿ ತಾವು ಅಲ್ಲಿಂದ ಪಾರಾಗಿದ್ದಾರೆ! ಆದರೆ, ಇದೇ ಮುಖ್ಯಮಂತ್ರಿಗಳು ತಾವು ಅಧಿಕಾರಕ್ಕೇರುವ ಮುನ್ನ ಇದೇ ಪತ್ರಕರ್ತರೆದುರು, ತಾವು ನಿಘಂಟನ್ನೆಲ್ಲಾ ತಡಕಾಡಿದರೂ ಜಾತ್ಯತೀತತೆ ಎಂಬ ಶಬ್ದ ಎಲ್ಲಿಯೂ ಕಣ್ಣಿಗೆ ಬೀಳಲಿಲ್ಲವೆಂದೂ, ತಮ್ಮ ಪ್ರಕಾರ ದೇಶ ಕಂಡ ಅತ್ಯುತ್ತಮ ಪ್ರಧಾನಿ ವಾಜಪೇಯಿಯವರೆಂದೂ ಹೇಳುತ್ತಾ ತತ್ವ - ಸಿದ್ಧಾಂತಗಳ ಮಾತನ್ನೆಲ್ಲ ಗೇಲಿ ಮಾಡಿದ್ದನ್ನು ನೆನಪಿಸಿಕೊಂಡಾಗ, ತತ್ವ - ಸಿದ್ಧಾಂತವೆನ್ನುವುದು ಅನುಕೂಲ ರಾಜಕಾರಣಕ್ಕೂ ಹೇಗೆ ದುರುಪಯೋಗವಾಗಬಲ್ಲದು ಎಂದು ಆಶ್ಚರ್ಯವಾಗುತ್ತದೆ. ಅಂದು ಬೊಟ್ಟು ಮಾಡಿ ತೋರಿಸಿದರೂ ಕಣ್ಣಿಗೆ ಬೀಳದ್ದು ಇಂದು ಹೇಗೆ ಕಣ್ಣಿಗೆ ರಾಚತೊಡಗಿದೆ! ಅಲ್ಲದೆ, ಅಂದು ಈ ಸರ್ಕಾರದ ಜವಾಬ್ದಾರಿ ಏನಿದ್ದರೂ ತಮ್ಮದು; ತಮ್ಮ ತಂದೆಗೂ ಇದಕ್ಕೆ ಸಂಬಂಧವಿಲ್ಲವೆಂದು ಹೇಳುತ್ತಿದ್ದ ಮುಖ್ಯಮಂತ್ರಿ ಹಾಗೂ ಅವರ ಸಹಚರರು, ಈಗ ಅಧಿಕಾರ ಹಸ್ತಾಂತರದ ತೀರ್ಮಾನ ಏನಿದ್ದರೂ ದೇವೇಗೌಡರದು ಎನ್ನುತ್ತಿದ್ದಾರೆ!

ನಮ್ಮ ಮುಖ್ಯಮಂತ್ರಿಯವರ ತಂದೆ ಹಾಗೂ ಬಾಯಿ ಬಿಟ್ಟರೆ ಸಾಕು ನೈತಿಕತೆ - ತತ್ವ - ಸಿದ್ಧಾಂತಗಳ ಬಗ್ಗೆ ಕಣ್ಣು ಮೂಗು ಒರೆಸಿ ಕೊಂಡೇ ಘನ ಘೋರ ಭಾಷಣ ಮಾಡುವ ದೇಶದ ಮಾಜಿ ಪ್ರಧಾನಿ ಈ ದೇವೇಗೌಡರನ್ನು ನೋಡಿ. ತಮ್ಮ ಮಗ 'ತಮಗೆ ತಿಳಿಯದಂತೆಯೇ' ಬಿ.ಜೆ.ಪಿ.ಯೊಂದಿಗೆ ಸಖ್ಯ ಬೆಳೆಸಿ ಸರ್ಕಾರ ರಚನೆಗೆ ಮುಂದಾದಾಗ, 'ಓ ಭೂಮಿಯೇ ನೀನಾದರೂ ಬಾಯಿ ಬಿಟ್ಟು ನನ್ನ ಅವಮಾನವನ್ನು ಅಂತ್ಯಗೊಳಿಸಲಾರೆಯಾ!' ಎಂಬಂತಹ ನಾಟಕೀಯ ಶೈಲಿಯಲ್ಲಿ ದುಃಖಪಟ್ಟು ತಮ್ಮ ಮಗನನ್ನೂ ಆತನ ಸಹಚರರನ್ನೂ ಪಕ್ಷದಿಂದ ಹೊರಹಾಕಲು ದೆಹಲಿ ಪ್ರಯಾಣ ಕೈಗೊಳ್ಳುವುದಾಗಿ ಪ್ರಕಟಿಸಿ, ಶೋಕಗೃಹ ಪ್ರವೇಶಿಸಿದ್ದ ಅವರು ಅಲ್ಲಿಂದ ಈಚೆಗೆ ಬಂದದ್ದು, ತಮ್ಮ ಮಗ ಮಾಡಿದ್ದೆಲ್ಲವೂ ಪಕ್ಷದ ಹಿತದೃಷ್ಟಿಯಿಂದಲೇ ಎಂಬ ಜ್ಞಾನೋದಯದೊಂದಿಗೆ! ಆದರೆ, ಅವರ ಪಕ್ಷ ಆಗ ಅಧಿಕಾರವೊಂದೇ ಅದನ್ನು ಉಳಿಸುವ ಮಟ್ಟ ತಲುಪಿತ್ತೆಂದು ಹೇಳುವ ಗೋಜಿಗೆ ಮಾತ್ರ ಅವರು ಹೋಗಲಿಲ್ಲ... ಈಗ ಮತ್ತೆ ಅಧಿಕಾರ ಹಸ್ತಾಂತರದ ಗೊಂದಲ ಸೃಷ್ಟಿಸುತ್ತಿರುವುದೂ, ಅವರ ಪಕ್ಷ ಈಗಲೂ ಆ ಮಟ್ಟವನ್ನು ಮೀರಿ ಮೇಲೇರಿಲ್ಲ ಮತ್ತು ತನ್ನ ಮಿತ್ರ ಪಕ್ಷದ ಒಂದು ಭಾಗವನ್ನೂ ತನ್ನ ಮಟ್ಟಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದೆ ಎಂಬುದರ ಸೂಚನೆಯೇ ಆಗಿದೆ ಎಂಬುದು ಅವರಿಗೆ ಗೊತ್ತಿಲ್ಲದೇನಲ್ಲ!

ತಮ್ಮ ಮಗ ಪಕ್ಷದ ಹಿತಕ್ಕಾಗಿ ಆಡಿದ 'ಆಟ'ವನ್ನು ಸಮರ್ಥಿಸಿಕೊಂಡ ಮೇಲೂ, ಸಮಯ ಸಿಕ್ಕಾಗಲೆಲ್ಲ ತತ್ವ - ಸಿದ್ಧಾಂತಗಳ ಮಾತನಾಡುತ್ತಾ ಕಾಲ ಕಳೆಯುತ್ತಿದ್ದ ದೇವೇಗೌಡರು ಈಗ ತಮ್ಮ ಕಿರಿಮಗನಿಗೆ ಹೇಳಿದ ಕಿವಿ ಮಾತಿನ ವೈಖರಿ ಇದು: 'ಬಿ.ಜೆ.ಪಿ.ಯೊಂದಿಗೆ ಸಖ್ಯ ಮಾಡಿರುವುದಕ್ಕೆ ಜಿಗುಪ್ಸೆ ಏಕೆ ಮಗನೇ? ನಾನೇ ಎರಡು ಬಾರಿ ಅವರ ಸಖ್ಯ ಮಾಡಿ ಸರ್ಕಾರ ಮಾಡಿದ್ದೇನೆ!' ಹಾಗಾದರೆ, ಮೊದಲಾಗಿ ಕುಮಾರಸ್ವಾಮಿ ಸರ್ಕಾರ ರಚನೆ ಮಾಡಿದಾಗ ಈ ಮಹಾನುಭಾವ ಸುರಿಸಿದ ಕಣ್ಣೀರನ್ನು ಏನೆಂದು ಕರೆಯಬೇಕು? ಹೌದು, ಅಂತಹ ಮಗನಿಗೆ ಇಂತಹ ಅಪ್ಪನೇ ಉದಾಹರಣೆಯಾಗದೆ ಇನ್ನಾರಾದರು? ಆದರೆ ಇಂಥದೆಲ್ಲ 'ನೈತಿಕ' ಧೈರ್ಯದ ಮಾತುಗಳು ಹೊಮ್ಮಿದ್ದಾದರೂ ಯಾವಾಗ? ತಾಳಿ ತಾಳಿ ತಾಳ್ಮೆಗೆಟ್ಟ ಬಿ.ಜೆ.ಪಿ., ಸಚಿವ ಸಂಪುಟದ ಸಭೆಯನ್ನು ಬಹಿಷ್ಕರಿಸುವ ಸೂಚನೆ ನೀಡಿ, ಮೊದಲ ಬಾರಿಗೆ ಸರ್ಕಾರದ ಅಸ್ತಿತ್ವವನ್ನೇ ಅಲುಗಾಡಿಸುವ ಧೈರ್ಯ ತೋರಿದಾಗ!

ಅಧಿಕಾರ ಹಸ್ತಾಂತರದ ನಾಟಕ ಈ ಅಸಹ್ಯ ಮಟ್ಟ ಮುಟ್ಟಲು ಮುಖ್ಯಮಂತ್ರಿ ಮತ್ತು ಅವರ ಪಕ್ಷವೊಂದೇ ಕಾರಣವಲ್ಲ. ಅವರು ಆರಂಭಿಸಿದ ಈ ನಾಟಕದ ಸಂಭಾಷಣೆಗಳ ಅವಮಾನವನ್ನು, ಅಧಿಕಾರ ಕೈತಪ್ಪಿ ಹೋದೀತೆಂಬ ಆತಂಕದ ಭಾಗವಾಗಿ ಬಿ.ಜೆ.ಪಿ. ತನ್ನ ಮೌನ ನಾಟಕದ ಮೂಲಕ ಸಹಿಸಿಕೊಂಡು ಬಂದದ್ದೂ ಕಾರಣವಾಗಿದೆ. ತಾನು ಉಪಮುಖ್ಯಮಂತ್ರಿಯಾಗಿರುವ ಸರ್ಕಾರದ ಮಂತ್ರಿಯೊಬ್ಬ ವಿಧಾನಸಭೆಯಲ್ಲಿ ತನ್ನ ಹೆಸರಿಡಿದು ಹೇಳಿ ಮುಖ್ಯಮಂತ್ರಿಯಾಗಲು ಅಸಮರ್ಥ ಎಂದಾಗಲೂ, ಭಾವಿ ಮುಖ್ಯಮಂತ್ರಿ ಬಾಯಿ ಮುಚ್ಚಿ ಕೂರುತ್ತಾರೆಂದರೆ? ವೈಯುಕ್ತಿಕ ಘನತೆ ಹೋಗಲಿ, ತನ್ನ ಪಕ್ಷದ ಘನತೆ ಉಳಿಸಲಾಗಲಿ, ಅವರಿಂದ ಒಂದು ಪ್ರತಿಕ್ರಿಯೆ ಬೇಡವೇ? ಇವೊತ್ತಿನವರೆಗೂ 'ನನಗೆ ಮುಖ್ಯಮಂತ್ರಿಯ ಮೇಲೆ ವಿಶ್ವಾಸವಿದೆ. ಹಾಗಾಗಿ ಅಧಿಕಾರ ಹಸ್ತಾಂತರ ಖಚಿತ' ಎಂದಷ್ಟೇ ರಾಗ ಹಾಡುತ್ತಿರುವ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿಯ ರಾಗ ಬೇರಾದೊಡನೆಯಾದರೂ, ತಮ್ಮ ರಾಜಕೀಯ ಹಿರಿತನದ ದೃಷ್ಟಿಯಿಂದಲಾದರೂ, ಆ ಅನೈತಿಕ ಧ್ವನಿಯ ಬಗ್ಗೆ ತಮ್ಮ್ನ ಅಸಮಾಧಾನವನ್ನೂ ವ್ಯಕ್ತಪಡಿಸಲಾಗದಷ್ಟು, ಅವರ ಅಧಿಕಾರದ ಹಸಿವು ಅವರೊಳಗಿನ ರಾಜಕೀಯ ಬೆಂಕಿಯನ್ನು ಆರಿಸಿದೆಯೇ? ತಮ್ಮದೊಂದೇ ಗಂಡು ಪಕ್ಷವೆಂದು ಹೇಳಿಕೊಳ್ಳುತ್ತಾ, ಒಟ್ಟಾರೆ ಸಮಾಜದ ಹಿತಕ್ಕೆ ವಿರುದ್ಧವಾದ ಅನೇಕ ಗಂಡು ಕೃತ್ಯಗಳೆನ್ನೆಸಗಿ ವೀರಾವೇಶ ಪ್ರದರ್ಶಿಸಿಕೊಂಡು ಬಂದು ಅದರ ಆಧಾರದ ಮೇಲೇ ಅಧಿಕಾರದ ಹೊಸ್ತಿಲ ಬಳಿ ಬಂದಿರುವ ಬಿ.ಜೆ.ಪಿ.ಯೇಕೆ ಈಗ ಹೀಗೆ ಅತ್ತ ಗಂಡೂ ಅಲ್ಲದ, ಇತ್ತ ಹೆಣ್ಣೂ ಅಲ್ಲದ ರೀತಿಯಲ್ಲಿ; ಸಾರ್ವಜನಿಕವಾಗಿ ಕರುಣಾಜನಕವಾಗಿ ಕಾಣಿಸಿಕೊಳ್ಳುವ ದುಃಸ್ಥಿತಿಗೆ ಈಡಾಗಿದೆ?

ಶಿಕ್ಷಣ ಖಾತೆಯ ಸಮಾರಂಭ ಶಿಕ್ಷಣ ಮಂತ್ರಿಯ ಅರಿವಿಲ್ಲದೆಯೇ ಆಯೋಜಿತವಾಗಿ, ಅಲ್ಲಿ ಶಿಕ್ಷಣ ಮಂತ್ರಿಗೆ ಬದಲಾಗಿ ರೇವಣ್ಣನವರು ರಾರಾಜಿಸುವಂತಾದಾಗಲೂ, ಯಾವಾಗಲೂ ಆತ್ಮಗೌರವದ ಬಗ್ಗೆ ಏರುಧ್ವನಿಯಲ್ಲೇ ಮಾತನಾಡುವ ಶಂಕರಮೂರ್ತಿಯವರು ಉಸಿರೇ ಕಳೆದುಕೊಂಡಂತೆ ಸುಮ್ಮನಾಗುವುದರ ಅರ್ಥವಾದರೂ ಏನು? ಇದೊಂದೇ ಪ್ರಸಂಗವಲ್ಲ. ಇತ್ತೀಚಿನ ಬಹುತೇಕ ಎಲ್ಲ ಸಮಾರಂಭಗಳಲ್ಲಿ ರೇವಣ್ಣ ತಮಗೆ ಸಂಬಂಧವಿರಲಿ, ಇಲ್ಲದಿರಲಿ ಅಲ್ಲಿ ಹಾಜರಾಗಿ; ಸಂಬಂಧಪಟ್ಟ ಖಾತೆಯ ಮಂತ್ರಿಯನ್ನೇ ಮೂಲೆಗುಂಪು ಮಾಡಿ, ಮುಖ್ಯ ಸ್ಥಾನದಲ್ಲೋ, ಮುಖ್ಯಮಂತ್ರಿ ಇದ್ದರೆ ಅವರ ಪಕ್ಕದಲ್ಲೋ ಆಸೀನರಾಗುವ ವ್ಯವಸ್ಥೆಯಾಗಿದೆ! ಇದನ್ನು ಅವರ ಪಕ್ಷದ ಮಂತ್ರಿಗಳು ಹೋಗಲಿ (ಏಕೆಂದರೆ ಅವರೆಲ್ಲ ತಮ್ಮದು ಕುಟುಂಬ ಸೇವಾಸಕ್ತ ಪಕ್ಷವೆಂದು ಹಲವಾರು ಸಂದರ್ಭಗಳಲ್ಲಿ ಸಾಬೀತುಪಡಿಸಿಕೊಂಡಾಗಿದೆ!), ತಮ್ಮ ಪಕ್ಷದ ಮಂತ್ರಿಗಳೂ ಸಹಿಸುವಂತಹ ಪರಿಸ್ಥಿತಿ ಬಿ.ಜೆ.ಪಿ.ಗೇಕೆ ಬಂದಿದೆ? ಕರ್ನಾಟಕದ ರಾಜಕಾರಣ ಮತ್ತು ಆಡಳಿತಗಳೆರಡನ್ನೂ ಒಂದು ಕುಟುಂಬ ಕೇಂದ್ರಕ್ಕೆ ಒಯ್ಯುವ; ಆ ಮೂಲಕ ಪ್ರಜಾಪ್ರಭುತ್ವವನ್ನೇ ಅಣಕವಾಡುವ ಈ ಪ್ರಯತ್ನವನ್ನು ಬಿ.ಜೆ.ಪಿ ಹೇಗೆ ಸಹಿಸುತ್ತದೆ? ಮುಂದೆ ಮುಖ್ಯಮಂತ್ರಿತ್ವ ಸಿಕ್ಕರೂ ಇಂತಹ ವಾತಾವರಣದಲ್ಲಿ ಅದನ್ನು ನಿರ್ವಹಿಸಲು, ಆಡಳಿತದ ಬಿಗಿ ಸಾಧಿಸಲು ಕಷ್ಟವಾಗುತ್ತದೆಂದು ಅದಕ್ಕೆ ಅನ್ನಿಸಿಲ್ಲವೇ?

ತನ್ನ ಪಾಲಿನಿಂದ ನೇಮಿಸಿದ್ದ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನು ಏಕಾಏಕಿ ಅಧಿಕಾರದಿಂದ ಕಿತ್ತು ಹಾಕಿದ ಮತ್ತು ತನ್ನ ಪಾಲಿನ ರಾಜ್ಯಸೇವಾ ಆಯೋಗದ ಸದಸ್ಯ ಸ್ಥಾನಕ್ಕೆ ಏಕ ಪಕ್ಷೀಯವಾಗಿ ತನ್ನ ಅಭ್ಯಥಿಯನ್ನು ತುಂಬಿದ ಮಿತ್ರ ದ್ರೋಹವನ್ನು ಖಂಡಿಸಲಾಗದ ಬಿ.ಜೆ.ಪಿ.ಯ ರಾಜಕೀಯ ಹೇಡಿತನವನ್ನು ಹೇಗೆ ಅರ್ಥ ಮಾಡಿಕೊಳ್ಳುವುದು? ಅರ್ಧ ಮನಸ್ಸಿನ ಸಚಿವ ಸಂಪುಟಸಭೆಯ ಬಹಿಷ್ಕಾರದ ನಂತರ ಉಭಯ ಪಕ್ಷಗಳ ಸಮನ್ವಯ ಸಮಿತಿ ಸಭೆ ಕುರಿತಂತೆ ಮುಖ್ಯಮಂತ್ರಿ ಪ್ರದರ್ಶಿಸಿದ ಉಡಾಫೆಯ ನಡವಳಿಕೆಯಿಂದಲಾದರೂ, ಅದಕ್ಕೆ ಆತ್ಮಗೌರವದ ಪ್ರಜ್ಞೆ ಮೂಡಬೇಡವೇ? ಅಧಿಕಾರಕ್ಕಾಗಿ ಅಂಗಲಾಚುವ ಅಗತ್ಯ ತನಗಿಲ್ಲ; ಅದು ನನ್ನ ಹಕ್ಕು ಎಂದು ಹೇಳುವ ನೈತಿಕ ಧೈರ್ಯವೇಕೆ ಅದಕ್ಕಿಲ್ಲ? ಆಶ್ಚರ್ಯವೆಂದರೆ, ಸಮನ್ವಯ ಸಮಿತಿಯ ಸಭೆಯನ್ನು ಎರಡು ಬಾರಿ ಮುಂದೂಡಿದ ಬಗ್ಗೆ ಮುಖದಲ್ಲಾದರೂ ಬೇಸರ ಮೂಡಿಸಿಕೊಂಡಿದ್ದ ಯಡಿಯೂರಪ್ಪ ಈಗ ನಿಗೂಢವಾಗಿ, ಇಂತಹ ಸಭೆಯ ಅಗತ್ಯ ಸದ್ಯಕ್ಕಿಲ್ಲ ಎನ್ನತೊಡಗಿದ್ದಾರೆ! ಬಿ.ಜೆ.ಪಿ.ಯ ಸದ್ಯದ ನಿಲವು ಅದಕ್ಕೆ ಒಂದು ಮಟ್ಟದವರೆಗೆ ಮಾತ್ರ ಸಾರ್ವಜನಿಕ ಸಹಾನುಭೂತಿ ದೊರೆಕಿಸಿಕೊಡಲು ಸಹಾಯಕವಾಗಬಹುದು. ಆದರೆ ಒಂದು ಮಟ್ಟ ಮೀರಿದ ಮೇಲೆ (ಈಗಾಗಲೇ ಅದು ಮೀರಿದಂತಿದೆ), ಅದು ಸಾರ್ವಜನಿಕ ತಿರಸ್ಕಾರಕ್ಕೆ, ನಂತರ ಗೇಲಿಗೆ ತಿರುಗುವ ಅಪಾಯವಿದೆ.

ಇನ್ನು ಈ ನಾಟಕದಲ್ಲಿ ಕಾಂಗ್ರೆಸ್ಸಿನ ಪಾತ್ರವಂತೂ ನಮ್ಮ ಹಳೆಯ ಜಾನಪದ - ಪೌರಾಣಿಕ ನಾಟಕಗಳಲ್ಲಿನ ಕುಂಟಿಣಿಯಂತಿದೆ - ಅಧಿಕಾರದ ಅರಮನೆಯ ಯಾವ ಒಳಕೋಣೆಯ ಬಾಗಿಲು ತೆರೆದರೂ ಅಲ್ಲಿ ಹಾಜರ್! ಕಳೆದ ಚುನಾವಣೆಗಳಲ್ಲಿ ಜನತೆಯಿಂದ ಭಾರಿ ಕಪಾಳ ಮೋಕ್ಷಕ್ಕೆ ಒಳಗಾದ ಈ ಪಕ್ಷ ಆತ್ಮಾವಲೋಕನ ಮಾಡಿಕೊಂಡು, ಜನತೆಯ ತೀರ್ಪನ್ನು ಗೌರವಿಸುವ ಪ್ರತೀಕವಾಗಿಯಾದರೂ ಮರ್ಯಾದೆಯಿಂದ ವಿರೋಧ ಪಕ್ಷವಾಗಿ ಕೂರುವ ಮೂಲಕ; ದೇವೇಗೌಡರ ನಾಟಕ ಕಂಪನಿ ರಾಜಕಾರಣದ (ಆಗಿನ್ನೂ ಕುಟುಂಬ ರಾಜಕಾರಣದ ಸೀನರಿ ತಯಾರಾಗಿರಲಿಲ್ಲ!) ನೀತಿ - ನೈತಿಕತೆಗಳೆನ್ನೆಲ್ಲ, ಅವರು ರೂಪಿಸಬಹುದಾಗಿದ್ದ ಹೊಸ ರಾಜಕೀಯ ವರಸೆಗಳನ್ನು ಬಯಲು ಮಾಡುವ ರಾಜಕೀಯ ಜವಾಬ್ದಾರಿಯನ್ನು ನಿರ್ವಹಿಸಬಹುದಿತ್ತು. ಬದಲಿಗೆ, ಕೋಮುವಾದಿಗಳಿಗೆ ಅಧಿಕಾರ ಸಿಗುವುದನ್ನು ತಪ್ಪಿಸುವ ನೆಪದಲ್ಲಿ ಇಪ್ಪತ್ತು ತಿಂಗಳು ಇನ್ನೊಬ್ಬರ ಅಧಿಕಾರದ ಬಾಗಿಲು ಕಾಯುತ್ತ ಕೂತು, ಕೊನೆಗೆ ಅಲ್ಲಿಯೂ ಇನ್ನೊಂದು ಕಪಾಳ ಮೋಕ್ಷಕ್ಕೆ ಈಡಾಗಿ ದೇವೇಗೌಡರ ಕೌಟುಂಬಿಕ ರಾಜಕಾರಣಕ್ಕೆ ಒಂದು ಸಮರ್ಥನೆ ಒದಗಿಸುವ ಮೂರ್ಖತನ ತೋರಿತು. ಈಗ ಮತ್ತೆ ಆ ಪಕ್ಷದ ಹಿರಿಯ ನಾಯಕರು, ತಮ್ಮ ಪಕ್ಷದ ಒಂದು ಭಾಗದ ತೀವ್ರ ವಿರೋಧವಿದ್ದರೂ, ಅಧಿಕಾರದ ಬಾಗಿಲು ಮತ್ತೆ ಅರ್ಧ ತೆರೆಯುತ್ತಿದ್ದಂತೆಯೇ, ಆ ಬಾಗಿಲ ಬಳಿಯೂ ಕಂಡೂ ಕಾಣದಂತೆ ಸುಳಿದಾಡತೊಡಗಿದ್ದಾರೆ.

ಅಧಿಕಾರದ ಪಾಲು ಕಳೆದುಕೊಂಡಾಗಿನಿಂದಲೂ, ದೇವೇಗೌಡರನ್ನು ಮತ್ತು ಅವರ ಮಕ್ಕಳ ರಾಜಕಾರಣವನ್ನು ಸಿಕ್ಕಲ್ಲಿ ಟೀಕಿಸುತ್ತಾ ಕಾಲ ಕಳೆದ ಈ ನಾಯಕರು, ಕಳೆದ ಚುನಾವಣೆಯಲ್ಲಿ ಕಳೆದುಕೊಂಡ ಜನಬೆಂಬಲವನ್ನು ಮತ್ತೆ ಗಳಿಸಿಕೊಳ್ಳುವಂತಹ ಒಂದೂ ದೀರ್ಘಕಾಲಿಕ ಆಂದೋಲನದ ರೂಪದ ಕಾರ್ಯಕ್ರಮವನ್ನು ಹಾಕಿಕೊಳ್ಳದೆ, ಅಧಿಕಾರದ ಅವಕಾಶಕ್ಕಾಗಿ ಬಕ ಪಕ್ಷಿಗಳಂತೆ ಕಾಯುತ್ತಾ ಕೂತಿದ್ದು ಈಗ ದೂರದಲ್ಲಿ ಅಧಿಕಾರದ ಬಾಗಿಲು ತೆರೆಯುತ್ತಿದ್ದಂತೆ ತಮ್ಮ ಶಬ್ದಕೋಶವನ್ನೇ ಬದಲಾಯಿಸಕೊಳ್ಳತೊಡಗಿದ್ದಾರೆ! 'ಯಾವುದಕ್ಕೂ ಸಿದ್ಧ. ಹೈಕಮಾಂಡ್ ಆದೇಶಕ್ಕೆ ಬದ್ಧ.' ಎಂಬ ಯಾವ ಅರ್ಥಕ್ಕೆ ಬೇಕಾದರೂ ಒಗ್ಗಬಲ್ಲ ಮಂತ್ರವನ್ನು ಹೇಳಿಕೊಳ್ಳುತ್ತಾ ಒಕ್ಕಣ್ಣ ಧ್ಯಾನದಲ್ಲಿ ಕೂತಿದ್ದಾರೆ! ಕೆಲವೊಬ್ಬರಂತೂ, ರಾಜ್ಯದ ರಾಜಕಾರಣದ ಜವಾಬ್ದಾರಿಯನ್ನು ಅನಾದಿ ಕಾಲದಿಂದಲೂ ತಮಿಳ್ನಾಡಿನ ದೆವ್ವ - ದೇವತೆಗಳಿಗೆ ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಸಮ ಸಮವಾಗಿ ಒಪ್ಪಿಸಿ, ಇಲ್ಲಿನ ಪ್ರಜಾತಂತ್ರವನ್ನು ಅಲ್ಲಿನ ಪುರೋಹಿತರ ದಿವ್ಯಶಕ್ತಿಯ ಮೂಲಕ ಪೋಷಿಸುತ್ತಿರುವ ನಮ್ಮ ಹಿರಿಯ ರಾಜಕೀಯ ಮುತ್ಸದ್ದಿ ದೇವೇಗೌಡರ ಹೋಮ - ಹವನ - ಯಜ್ಞ - ಯಾಗ - ತಂತ್ರ - ಮಂತ್ರಗಳಲೆಲ್ಲದರ ಪ್ರಸಾದದ ಪಾಲನ್ನು ಪಡೆಯಲು, ಅವರು ಕರೆದಲ್ಲೆಲ್ಲಾ ಕದ್ದು ಮುಚ್ಚಿ ಹೋಗಿ ಪಡೆಯುವ ದೈನೇಸಿ ಸ್ಥಿತಿ ತಲುಪಿದ್ದಾರೆ! ಅಂತೂ ಇವರೆಲ್ಲ ಸೇರಿ ಕಾಂಗ್ರೆಸ್ಸನ್ನು ಕರ್ನಾಟಕದಲ್ಲಿ ಸಂಪೂರ್ಣವಾಗಿ ನಾಮಾವಶೇಷ ಮಾಡುವ ಪಣ ತೊಟ್ಟಂತೆ ಕಾಣುತ್ತದೆ...

ಒಂದೊಂದಾಗಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ನಮ್ಮ ಪ್ರಮುಖ ರಾಜಕಾರಣಿಗಳ 'ಅಧಿಕೃತ' ಅಸ್ತಿ ವಿವರಗಳನ್ನು ನೋಡುತ್ತಿದ್ದಂತೆಯೇ ಗೊತ್ತಾಗುತ್ತದೆ, ರಾಜಕಾರಣ ಸಾರ್ವಜನಿಕ ಸೇವೆಯಾಗಿ ಎಂದೋ ಕೊನೆಯುಸಿರೆಳೆದಿದೆ ಎಂದು. ರಾಜಕಾರಣವೆಂದರೆ ಈಗ ರಾಜ್ಯ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲು ಅವಕಾಶ ಕಲ್ಪಿಸಿಕೊಳ್ಳಲು ಕೋಟ್ಯಾಧೀಶ್ವರರ ನಡುವೆ ನಡೆಯುತ್ತಿರುವ ಕಾಳಗವಾಗಿದೆ. ಈ ಆರ್ಥದಲ್ಲಿ ಈಗ ಇಂತಹ ಕಾಳಗ ನಡೆದಿರುವುದು, ಹಾಸನದ ಹಾಗೂ ಬಳ್ಳಾರಿಯ ಎರಡು ಕುಟುಂಬಗಳ ನಡುವೆ. ಮಿಕ್ಕವರು ಕೊಳ್ಳೆ ಹಂಚಿಕೊಳ್ಳಲು ಸದ್ಯಕ್ಕೆ ತಮಗೆ ಸರಿ ಬಂದ ಕಡೆ ಸೇರಿಕೊಂಡಿದ್ದಾರಷ್ಟೆ. ಮೊನ್ನೆ ಬಳ್ಳಾರಿಯಲ್ಲಿ 'ವರಮಹಾಲಕ್ಷ್ಮಿ' ಹಬ್ಬದ ದಿನವೇ ಅದರ ರಣಕಹಳೆ ಮೊಳಗಿದ್ದು, ಬಲು ಸಾಂಕೇತಿಕವಾಗಿಯೂ, 'ಅರ್ಥ'ಪೂರ್ಣವಾಗಿಯೇ ಇದೆ! ಅಂದು ಸುಷ್ಮಾ ಸ್ವರಾಜ್ ಎಂಬ ಎಲ್ಲ ತತ್ವ-ಸಿದ್ಧಾಂತಗಳ ಸ್ವಯಂಘೋಷಿತ ಅಧಿಷ್ಠಾತ್ರಿ ಹಾಗೂ ಬಿ.ಜೆ.ಪಿ.ಯ ಅಧಿಕೃತ ಮುಖವಾಣಿ, ಪಕ್ಷದಿಂದ ಅಮಾನತ್ತುಗೊಂಡಿರುವ ಶಾಸಕರೆಂದು ಹೇಳಲಾದ ಜನಾರ್ದನ ರೆಡ್ಡಿ ಆಯೋಜಿಸಿದ್ದ 'ಹಬ್ಬ'ಕ್ಕೆ ಬಂದು, ಅವರ ಪಕ್ಕದಲ್ಲೇ ನಸುನಗುತ್ತಾ ನಿಂತು, ಅಮಾನತ್ತುಗೊಂಡಿರುವ ಶಾಸಕರ ಮಾತು ಪಕ್ಷದ ಮಾತಾಗುವುದಿಲ್ಲ ಎಂದು, ಎದುರು ಪಕ್ಷಕ್ಕೆ ಸ್ಪಷ್ಟೀಕರಣ ನೀಡುವ ಎದೆಗಾರಿಕೆ ತೋರುವರಾದರೆ, ಇಂದು 'ವರಮಹಾಲಕ್ಷ್ಮಿ' ಎಂದರೆ ಯಾರ ದೇವತೆಯಾಗಿ ಹೋಗಿದ್ದಾಳೆ ಎಂಬುದು ಸ್ಪಷ್ಟವಾಗುತ್ತದೆ!

ಸದ್ಯದ ಇಷ್ಟೆಲ್ಲ ಆಟಕ್ಕೆ ಕಾರಣ, ಈ ಮೂರೂ ಪಕ್ಷಗಳಿಗೆ ಅಮರಿಕೊಂಡಿರುವ ಚುನಾವಣಾ ಭಯ. ಕದ್ದ ಗಂಟೆನ್ನೆಲ್ಲ ಹೋದ ಚುನಾವಣೆಯಲ್ಲಿ ವ್ಯಯಿಸಿ ಈಗ ಅದನ್ನು ಚಕ್ರಬಡ್ಡಿಯೊಂದಿಗೆ ಮರುಸಂಪಾದಿಸಿಟ್ಟುಕೊಂಡಿರುವ ವೇಳೆಗೆ, ಮತ್ತೆ ಅದನ್ನು ವ್ಯಯಿಸುವ ದುಸ್ಸಾಹಸವನ್ನೇಕೆ ಆಹ್ವಾನಿಸಿಕೊಳ್ಳಬೇಕು ಎಂಬುದು ಮೂರೂ ಪಕ್ಷಗಳ ಚಿಂತೆ. ಕಾಂಗ್ರೆಸ್ - ಜೆ.ಡಿ.ಎಸ್. ಪಕ್ಷಗಳ ನಾಯಕರ ಅಧಿಕೃತ - ಅನಧಿಕೃತ ಆಸ್ತಿ - ಪಾಸ್ತಿಗಳ ವಿವರ ಈಗಾಗಲೇ ಅನೇಕ ವರದಿಗಳ ಮೂಲಕ ಜನಜನಿತವಾಗಿದೆ. ಇನ್ನೇನು ಬಿ.ಜೆ.ಪಿ. ನಾಯಕ ವರೇಣ್ಯರ ಆಸ್ತಿ - ಪಾಸ್ತಿಗಳ ವಿವರಗಳು ಅಧಿಕೃತವಾಗಿ ಪ್ರಕಟವಾಗಲಿದೆ. ಆದರೆ ಕಳೆದ ಒಂದೂವರೆ ವರ್ಷದಲ್ಲಿ ಶಿವಮೊಗ್ಗದಲ್ಲಿ ಸ್ಥಿರಾಸ್ಥಿ ಬೆಲೆ ಏರಿರುವ ಗತಿಯಿಂದಲೇ ಇವರು ಮಾಡಿಕೊಂಡಿರುವ ಗಂಟಿನ ಪ್ರಮಾಣವನ್ನು ಊಹಿಸಬಹುದಾಗಿದೆ! ಹೀಗಾಗಿ ಮೂರೂ ಪಕ್ಷಗಳು ಆದಷ್ಟು ಕಡಿಮೆ ಖರ್ಚಿನಲ್ಲಿ ಅಧಿಕಾರ ಉಳಿಸಿಕೊಳ್ಳಲು ಹಾಗೂ ಗಳಿಸಿಕೊಳ್ಳಲು ಮೂರೂ ಬಿಟ್ಟು ನಿಂತಿವೆ.

ಈ ಮೂರೂ ಪಕ್ಷಗಳಿಂದ ಕರ್ನಾಟಕಕ್ಕೆ ಮುಕ್ತಿ ಇಲ್ಲವೇ?

ಅಂದಹಾಗೆ: ಈ ವರ್ಷದ ದೇವರಾಜ ಅರಸ್ ಪ್ರಶಸ್ತಿಯನ್ನು ಕವಿ ಚಂದ್ರಶೇಖರ ಕಂಬಾರರಿಗೆ ನೀಡಲಾಗಿದೆ. ಅದನ್ನವರು ಕೃತಜ್ಞತೆಯಿಂದ ಸ್ವೀಕರಿಸಿಯೂ ಆಗಿದೆ. ಆದರೂ, ಹಿಂದುಳಿದ ವರ್ಗಗಳ ಏಳಿಗೆಗೆ ಅವರ ಕೊಡುಗೆಯೇನು ಎಂಬುದು ಇನ್ನೂ ಯಾರಿಗೂ ತಿಳಿಯದಾಗಿದೆ! ಮೊನ್ನೆ ಮೊನ್ನೆ ತಾನೆ ವಿಧಾನ ಪರಿಷತ್ತಿನಲ್ಲಿ ತಮ್ಮ ಕುಲಬಾಂಧವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕೆಂದು ಆಗ್ರಹಿಸಿದ್ದೇ ಈ ಪ್ರಶಸ್ತಿಗೆ ಕಾರಣವಾಗಿದೆಯೇ ಅಥವಾ ಈ ಪ್ರಶಸ್ತಿಗೊಂದು ಅರ್ಹತೆ ಇರಲೆಂದೇ ಆ ಆಗ್ರಹವನ್ನು ದಾಖಲಿಸಿಲಾಗಿತ್ತೇ? ಅದೂ ಯಾರಿಗೂ ತಿಳಿಯದಾಗಿದೆ!

ಆದರೂ ಹೋದ ಬಾರಿಗಿಂತ ಈ ಬಾರಿಯ ಆಯ್ಕೆ ಉತ್ತಮ ಎಂದು ದೇವರಾಜ ಅರಸ್ ಅಭಿಮಾನಿಗಳು ತೃಪ್ತಿಪಟ್ಟುಕೊಳ್ಳಬಹುದಾಗಿದೆಯಂತೆ... ಏಕೆಂದರೆ ಹೋದ ಬಾರಿ ಪ್ರಶಸ್ತಿ ಪಡೆದವರು ನಮ್ಮ 'ಬ್ರಾಹ್ಮಣ ಮುಸ್ಲಿಂ ಕವಿ' ನಿಸಾರ್ ಅಹಮದ್! ಅವರು ತಮ್ಮ ಜನ್ಮದಲ್ಲೇ ಹಿಂದುಳಿದ ವರ್ಗಗಳ ಬಗ್ಗೆ ಒಂದು ಮಾತನ್ನಾದರೂ ಆಡಿದ ದಾಖಲೆ ಇದ್ದಂತಿಲ್ಲ!

ಈ ಪ್ರಶಸ್ತಿಗೆ ಅರ್ಹತೆಯನ್ನೇನಾದರೂ, ಹಿಂದುಳಿದ ಜಾತಿ - ಕೋಮಿನಲ್ಲಿ ಹುಟ್ಟಿದರೆ ಸಾಕು ಎಂದು ಪರಿಷ್ಕರಿಸಿದ್ದಾರೋ, ಅದೂ ಯಾರಿಗೂ ತಿಳಿಯದಾಗಿದೆ! ಹಾಗಾದಲ್ಲಿ ಕರ್ನಾಟಕದಲ್ಲಿ ಈಗಲೇ ಈ ಪ್ರಶಸ್ತಿಗೆ ಅರ್ಹರಾದವರು ಸುಮಾರು ಮೂರು ಕೋಟಿ ಜನರಿದ್ದಾರೆ! ಅವರಿಗೆಲ್ಲಾ ಅವರು ಬದುಕಿರುವಾಗಲೇ ಪ್ರಶಸ್ತಿ ಕೊಟ್ಟು ಪೂರೈಸುವುದು ಯಾವಾಗ? ಸರ್ಕಾರ ಕಷ್ಟಕ್ಕೆ ಸಿಕ್ಕಿದೆ!

Rating
No votes yet

Comments