ಉತ್ತರಕರ್ನಾಟಕದಿಂದ ಮಂತ್ರಾಲಯಕ್ಕೆ ಪ್ರಯಾಣಿಸಬಹುದಾದ ಪರ್ಯಾಯ ಮಾರ್ಗಗಳು

Submitted by ರಘುನಂದನ on Mon, 08/23/2010 - 14:17

Comments

ಬರಹ

ಇಂದಿನಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆಯ ಸಪ್ತರಾತ್ರೋತ್ಸವವು ಆರಂಭವಾಗಲಿದೆ. ಎಲ್ಲೆಡೆ ಆರಾಧನೆಯು ೩ ದಿನಗಳ ಕಾರ್ಯಕ್ರಮವಾದರೆ ಮಂತ್ರಾಲಯದಲ್ಲಿ ಏಳುದಿನಗಳ ಹಬ್ಬ. ಆದರೂ ಸಾಮಾನ್ಯವಾಗಿ ಹೆಚ್ಚಿನ ಭಕ್ತಜನತೆ ಸ್ವಯಂಸೇವೆಗಾಗಿ ಮಂತ್ರಾಲಯಕ್ಕೆ ಭೇಟಿ ನೀಡುವುದು ಆರಾಧನೆಯ ಪ್ರಮುಖ ದಿನಗಳಾದ ಪೂರ್ವ, ಮಧ್ಯ ಹಾಗು ಉತ್ತರ ಆರಾಧನೆಯಂದು.ಸಂಪದಿಗರಲ್ಲಿ ಮಂತ್ರಾಲಯಕ್ಕೆ ಬರುವವರು ಯಾರಾದರೂ ಇದ್ದರೆ ಅವರು ಈ ಲೇಖನವನ್ನು ನೋಡುವುದು ಉತ್ತಮ.

 

ಅಕ್ಟೋಬರ್ ೨೦೦೯ರ ಪ್ರವಾಹದಿಂದಾಗಿ ಮಂತ್ರಾಲಯದ ಬಳಿಯ ಸೇತುವೆ ಕುಸಿದುಹೋಗಿದ್ದು ಬಹುತೇಕರಿಗೆಗೊತ್ತಿದೆ. ತಾತ್ಕಾಲಿಕವಾಗಿ ನಿರ್ಮಿಸಿದ  ಸೇತುವೆಯು ಸಹ ಕೊಚ್ಚಿ ಹೋಗ್ಬರುವುದು ಯೋಚಿಸಬೇಕಾದ ಸಂಗತಿ. ಹೆಚ್ಚಿನ ಸ್ವಯಂಸೇವಕರು ಇಲ್ಲಿಗೆ ಬರುವುದು ವಿಜಾಪುರ, ಹುಬ್ಬಳ್ಳಿ ಪ್ರಾಂತ್ಯದಿಂದ ಬರುವುದು ರಾಯಚೂರಿನ ಮಾರ್ಗವಾಗಿ. ಆದರೆ ಎಲ್ಲ ಭಕ್ತವರ್ಗದವರು ನಿರೀಕ್ಷಿಸಿದಂತೆ ತುಂಗಭದ್ರೆಯಲ್ಲಿ ನೀರಿನ ಹರಿವು ಹೆಚ್ಚಾಗಿ, ರಾಯಚೂರು ಹಾಗು ಮಂತ್ರಾಲಯದ ಮಧ್ಯ ತುಂಗಭದ್ರೆಗೆ ನಿರ್ಮಿಸಲಾದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಕರ್ನಾಟಕದ ದಕ್ಷಿಣ ಪ್ರಾಂತ್ಯದಲ್ಲಿ ಮತ್ತೆ ವ್ಯಾಪಕ ಮಳೆಯಾಗುತ್ತಿದ್ದು ನದಿಯಲ್ಲಿ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುವ ಸಂಭವವಿದೆ. ಹಾಗಾಗಿ ಆರಾಧನೆಯ ಸಮಯದ ಒಳಗಾಗಿ ಈ ಸೇತುವೆಯನ್ನು ನಿರ್ಮಿಸುವುದಾಗಲಿ ಅಥವಾ ತಾತ್ಕಾಲಿಕವಾಗಿ ಪರ್ಯಾಯವ್ಯವಸ್ಥೆಯನ್ನಾಗಲಿ ಕಲ್ಪಿಸುವುದು ಅಸಾಧ್ಯ.

ಆದರೆ ಆರಾಧನೆಗೆ ಹಾಜರಿರಲು ಆಗದು ಎನ್ನುವ ದುಃಖಕ್ಕೆ ಅವಕಾಶವಿಲ್ಲ. ಇಲ್ಲಿ ಮಾರ್ಗೋಪಾಯಗಳಿವೆ. ನಿಮ್ಮ ಅನುಕೂಲಕ್ಕೆ ಸರಿಯಾಗಿ ಬಳಸಿಕೊಳ್ಳಬಹುದು.ಬೆಳಗಾವಿ ಹಾಗು ಹುಬ್ಬಳ್ಳಿ ಭಾಗದ ಜನತೆ ಲಿಂಗಸೂಗೂರು ಹಾಗು ರಾಯಚೂರು ಮಾರ್ಗದ ಮುಖಾಂತರ ಪ್ರಯಾಣಿಸದೆ ಕೊಪ್ಪಳ, ಹೊಸಪೇಟೆ, ಬಳ್ಳಾರಿ ಹಾಗು ಆದವಾನಿಯ ಮುಖಾಂತರ ಪ್ರಯಾಣಿಸಬೇಕು.

 

ಬಿಜಾಪುರ ಭಾಗದ ಭಕ್ತರು ಲಿಂಗಸೂಗೂರು, ಸಿಂಧನೂರು, ಧಡೇಸೂಗೂರು, ಶಿರುಗುಪ್ಪ, ಹಚ್ಚೊಳ್ಳಿ, ಕೌತಾಳಂ ಹಾಗು ಮಾಧವರದ ಮುಖಾಂತರ ಮಂತ್ರಾಲಯಕ್ಕೆ ಬಂದು ಸೇರಬಹುದು. ಮಾರ್ಗಕ್ರಮಣದ ಸಮಯ ಕೂಡ ಹೆಚ್ಚು ಕಮ್ಮಿ ರಾಯಚೂರಿನ ಮುಖಾಂತರ ಬಂದಷ್ಟೇ ಆಗುವುದು. ಆದರೆ ಈ ಮಾರ್ಗವಾಗಿ ಸರ್ಕಾರಿ ಬಸ್ಸುಗಳು ಸಂಚಾರ ಮಾಡುವುದಿಲ್ಲ ಆದ ಕಾರಣ ಸಮಾನಮನಸ್ಕರೊಂದಿಗೆ ಸ್ವಂತ ವಾಹನದಲ್ಲಿ ಬರುವುದು ಉತ್ತಮ. ಕೇಯೆಸ್ಸಾರ್ಟಿಸಿಯವರು ಈ ಮಾರ್ಗವನ್ನು ಬಳಸಿ ಬಸ್ಸುಗಳನ್ನು ಓಡಿಸಿದರೆ ಅತ್ಯುತ್ತಮ ಪಕ್ಷ.


ಗುಲ್ಬರ್ಗ, ಸೊಲ್ಲಾಪುರ ಹಾಗು ಹೈದರಾಬಾದ್ ಭಾಗದ ಜನತೆ ಅಲ್ಲಿಂದ ಹೊರಡುವ ರೈಲುಗಳನ್ನು ಅವಲಂಬಿಸಬಹುದು. ಇದು ಸರ್ವಶ್ರೇಷ್ಠ ಉಪಾಯ. ರೈಲು ಸಿಗದಿದ್ದ ಪಕ್ಷದಲ್ಲಿ ಬಸ್ಸಿನಲ್ಲಿ ರಾಯಚೂರಿನವರೆಗೆ ಪ್ರಯಾಣಿಸಿ, ರಾಯಚೂರಿನಿಂದ ಯರಗೇರಿ, ಐಜಿ, ಶಾಂತಿನಗರ ಹಾಗು ರಾಜೋಳ್ಳಿಗೆ ಬಂದು ಅಲ್ಲಿ ತುಂಗಭದ್ರೆಯ ಆಣೇಕಟ್ಟಿನ ಸೇತುವೆಯ ಮೇಲೆ ಹಾಯ್ದು ಪುನಃ ಸಮಾನಾಂತರ ರಸ್ತೆಯಲ್ಲಿ ವಾಪಸ್ಸು ಮಂತ್ರಾಲಯದ ಕಡೆ ಪ್ರಯಾಣ ಬೆಳೆಸ ಬಹುದು. ಇದು ೧೨೦ ಕಿ.ಮೀ ಕ್ರಮಣದ ಪ್ರಯಾಣ. ಆದರೆ ದಾರಿಯುದ್ದಕ್ಕೂ ಹರಿದಾಸರುಗಳ ಕ್ಷೇತ್ರಗಳನ್ನು ದರ್ಶಿಸಬಹುದಾದ ಅವಕಾಶ ದೊರೆಯುವುದು. ಹೈದರಾಬಾದಿನಿಂದ ನೇರವಾಗಿ ಕರ್ನೂಲು ಮುಖಾಂತರವೂ ಬಂದು ಮಂತ್ರಾಲಯಕ್ಕೆ ಸೇರಬಹುದು.


ಗಮನಿಸಿ.:- ರಾಯಚೂರಿನ ನಂತರ ಬರುವ ಪಂಚಮುಖಿ, ಮಾಧವರ ಅಥವಾ ಇನ್ನಿತರ ಸ್ಥಳಗಳಲ್ಲಿ  ತುಂಗಭದ್ರಾನದಿಯನ್ನು ತೆಪ್ಪದ ಮುಖಾಂತರ ದಾಟಿ, ಮಂತ್ರಾಲಯವನ್ನು ಸುಲಭವಾಗಿ ಸೇರಬಹುದಾದರೂ ಆಪಾಯದ ಸಂಭವ ಇದ್ದೇ ಇದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet