ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
ನಮ್ಮ ನಾಡಿನ ರಾಜಕೀಯ ಹದಗೆಟ್ಟಿದೆ. ರಾಜಕಾರಣಿಗಳಿಂದಾಗಿ ಎಲ್ಲ ಕೊಳೆತು ನಾರುತ್ತಿದೆ. ನಮ್ಮ ನಾಡಿನ ಜನರ ಕಷ್ಟ ಕಾರ್ಪಣ್ಯಕ್ಕೆ ಕೊನೆಯೇ ಇಲ್ಲದಂತಾಗಿದೆ. ಇವೆಲ್ಲಾ ನಿಜವೇ. ಆದರೆ, ಇದನ್ನೇ ಎಷ್ಟು ದಿನಾಂತ ಹೇಳ್ಕೊಂಡಿರೋಕೆ ಆಗತ್ತೆ ಹೇಳಿ. ಸಿಟ್ಟು ವಿಷಾದ ಇರಲಿ, ಕನಿಷ್ಟ ಬೋರಾದರೂ ಆಗಬೇಕಲ್ಲವ? ಬೋರು ಆಗತ್ತೆ ಅಂತೀರ? ಅದನ್ನ ನಾನೂ ಒಪ್ಪತೀನಿ. ಯಾಕಂದರೆ ಜನ ಮತ ಹಾಕೋದನ್ನ ಬಿಟ್ಟಿಬಿಟ್ಟಿದ್ದಾರೆ ನೋಡಿ, ಅದಕ್ಕೆ. ಇವೆಲ್ಲಾ ಮಾತು ಮತ್ತೆ ಮತ್ತೆ ಹೇಳೋಕೆ ನಾನು ಹೊರಟಿಲ್ಲ. ಅದನ್ನೆಲ್ಲಾ ಮೀರಿದ್ದು, ಅದರ ಹಿಂದಿಂದು, ಅದರ ಬುಡದಲ್ಲಿ ನನಗೆ ಕಾಣೋ ಒಂದೆರಡು ವಿಷಯ ಹೇಳ್ತೀನಿ.
ಮೊದಲನೇದಾಗಿ, ರಾಜಕಾರಣಿಗಳು ನಮನಿಮಗಿಂತ ಜಾಸ್ತಿ ಧೂರ್ತರಲ್ಲ. ಹುಬ್ಬೇರಿಸಬೇಡಿ. ಅವರು ದೇವತೆಗಳೂ ಅಲ್ಲ. ಅವರ ಧೂರ್ತತೆಗೂ ನಮ್ಮ ಧೂರ್ತತೆಗೂ ಒಂದು ಸಣ್ಣ ವ್ಯತ್ಯಾಸ ಇದೆ. ನಮ್ಮ ಧೂರ್ತತೆಯಿಂದ ನಾಕಾರು ಜನಕ್ಕೆ ತೊಂದರೆ ಆಗಬಹುದು. ಅವರ ಧೂರ್ತತೆಯಿಂದ ಲಕ್ಷಾಂತರ ಜನಕ್ಕೆ ತೊಂದರೆ ಆಗತ್ತೆ. ನಮ್ಮ ಧೂರ್ತತೆ ಹೆಚ್ಚೇನೂ ಪರಿಣಾಮ ಬೀರದೇ ಇರಬಹುದು. ಅವರ ಧೂರ್ತತೆ ತುಂಬಾ ಕ್ರೂರವಾಗತ್ತೆ. ಆಯ್ತ? ಅವರು ನಮನಿಮಗಿಂತ ಜಾಸ್ತಿ ಧೂರ್ತರಲ್ಲ. ಕೈಯಲ್ಲಿ ಅಧಿಕಾರ ಇದ್ದಾಗ ನಮ್ಮಷ್ಟೇ ಧೂರ್ತತನ ಅವರು ತೋರಿಸದಿರೂ ಅದರ ಪರಿಣಾಮ ಹೆಚ್ಚು ಘೋರ. ಅವರ ಏನು ಮಾಡಿದರೂ ನಡೆಯೋದರಿಂದ, ಧೂರ್ತತೆ ಹೆಚ್ಚು ಬಳಸ್ತಾರೆ ಅನ್ನೋದು ಕೂಡ ನಿಜವೆ. ಆದರೆ, ನಮನಿಮಗಿಂತ ಜಾಸ್ತಿ ಧೂರ್ತರಲ್ಲ.
ಎರಡನೇದಾಗಿ, ಅವರು ದೇವತೆಗಳೂ ಅಲ್ಲ. ದೇವತೆಗಳು ಆಗಬೇಕಾಗೂ ಇಲ್ಲ. ಅದೇ ಅಲ್ವ ಡೆಮಾಕ್ರಸಿ ಅರ್ಥ? ದೇವತೆಗಳು ನಮಗೆ ಬೇಕಾಗಿಲ್ಲ. 'ರಾಜಾ ಪ್ರತ್ಯಕ್ಷ ದೇವತಾ' ಅನ್ನೋದನ್ನ ನಾವು ಮರೆಯೋ ತನಕ ನಮ್ಮಲ್ಲಿ ಡೆಮಾಕ್ರಸಿ ಇಲ್ಲ ಅಂತಲೇ ಅರ್ಥ! ಸ್ವಲ್ಪ ನಿಮ್ಮ ಹುಬ್ಬಿಳಿಸಿ. ಯಾವ ದೈವತ್ವ ಅಥ್ವಾ ಒಳ್ಳೆತನದ ಮುಲಾಜೂ ಡೆಮಾಕ್ರಸಿಗೆ ಬೇಕಾಗಿಲ್ಲ. ಯಾರ ಕರುಣೆ, ಸಹಿಷ್ಣುತೆ ಡೆಮಾಕ್ರಸಿಗೆ ಬೇಕಾಗಿಲ್ಲ. ಸರ್ವಾಧಿಕಾರಿ ದಯಾಳು ಆಗಿರಬೇಕಾಗತ್ತೆ, ಕರುಣಾಮಯಿ ಆಗಿರಬೇಕಾಗತ್ತೆ, ಸಹಿಷ್ಣು ಆಗಿರಬೇಕಾಗತ್ತೆ. ಆದರೆ ಡೆಮಾಕ್ರಸಿಗೆ ಅವುಗಳ ಗೊಡವೆ ಇಲ್ಲ. ದಶಾವತಾರದ ಹಾಗೆ, ಕಾಲ ಕೆಟ್ಟಾಗ ಯಾವನೋ ಬಂದು ನಮ್ಮನ್ನ ಉದ್ಧಾರ ಮಾಡ್ತಾನೆ ಅಂತ ಕಾಯ್ಕೊಂಡು ಕೂತಿರೋದು ಇದ್ಯಲ್ಲ ಅದಕ್ಕಿಂತ ಹೀನವಾದ ಸ್ಥಿತಿ ಇನ್ನೊಂದು ಇಲ್ಲ. ಅದೂ ಡೆಮಾಕ್ರಸಿ ಅಂತ ಕೊಚ್ಕೊಳ್ಳೋ ದೇಶದಲ್ಲಿ.
ಗೊತ್ತಿರೋದನ್ನೇ ಹೇಳ್ತಾ ಇದ್ದೀನಿ ಅನ್ನಿಸಿದರೆ, ನೆನಪಿಡಿ - ಇದನ್ನ ಆಗಾಗ ನೆನಪಿಸಿಕೊಳ್ಳಬೇಕಾದ್ದು ಡೆಮಾಕ್ರಸಿಯ ಆರೋಗ್ಯಕ್ಕೆ ತುಂಬಾ ಒಳ್ಳೇದು. ಇದರಿಂದ ಎರಡು ಕೆಲಸ ಆಗತ್ತೆ. ರಾಜಕಾರಣಿನ ಬೈಯ್ಯೋದು ತಪ್ಪತ್ತೆ. ಹಾಗೆನೆ ಹೊಗಳೋದು ತಪ್ಪತ್ತೆ. ಹಾಗಂದ ಮಾತ್ರಕ್ಕೆ ಅವರು ಮಾಡಿದ ಕೆಲಸದ ತುಲನೆ ಆಗಬಾರದು ಅಂತಲ್ಲ. ತುಲನೆ ಅಗತ್ಯ ಮತ್ತು ಅದು ತುಲನೆ ಮಾತ್ರ ಆಗಿರಬೇಕು. ಹೆಚ್ಚೆಂದರೆ ಬೆನ್ನು ತಟ್ಟಬೇಕು, ಇಲ್ಲ ಒಂದು ಸಲ ಉಗಿದು ಇನ್ನೊಂದು ಸಲ ಉಗಿವಂತ ಪರಿಸ್ಥಿತಿ ಬರದೇ ಇರೋದು ಹ್ಯಾಗೆ ಅಂತ ನೋಡಬೇಕು.
ನನಗನಿಸೋ ಮಟ್ಟಿಗೆ, ನಮ್ಮ ನಾಡಿಗೆ ಡೆಮಾಕ್ರಸಿ, ಈಗಿರೋ ರೂಪದಲ್ಲಿ ಎಲ್ಲರಿಗೂ ಕೆಲಸ ಮಾಡ್ತಾ ಇಲ್ಲ. ನಮ್ಮ ನಾಡಿನ ಶ್ರೀಮಂತರು ಮತ್ತು ಮೇಲ್ವರ್ಗದವರು ಇದಾರಲ್ಲ ಅವರಿಗೆ ನಮ್ಮ ಡೆಮಾಕ್ರಸಿ ಒಂದು ವರದಾನದ ಹಾಗೆ ಇದೆ. ಅದಕ್ಕೇ ಅವರು ಯಾವಾಗಲೂ ಡೆಮಾಕ್ರಸಿಯ ಗುಣಗಾನ ಮಾಡತಾ ಇರತಾರೆ. ಇನ್ನು ಮಧ್ಯಮ ವರ್ಗ ಇದೆಯಲ್ಲಾ ಅವರಿಗೆ ಇದು ಹೆಚ್ಚು ಹಿಂಸೇನೂ ಕೊಡದೆ, ಅವರ ಜೀವನಕ್ಕೆ ಅತೀ ತೊಂದರೆ ಆಗದ ಹಾಗೆ ನೋಡ್ಕೋತಾ ಇದೆ. ಅದಕ್ಕೆ ಅವರು ಸದಾ ಗೊಣಗತಾ ಇರ್ತಾರೆಯೇ ಹೊರತು ಯಾವತ್ತೂ ಏನೂ ಮಾಡೋಕೆ ಹೋಗಲ್ಲ. ಸೋಮಾರಿತನ ಅನ್ನಿಸಬಹುದು ನಿಮಗೆ. ನನಗನಿಸೋದು ಆಳದಲ್ಲಿ ವ್ಯವಸ್ಥೆ ಜತೆ ಮಾಡಿಕೊಂಡಿರೋ ರಾಜಿ ಅಂತ. ಸಿಟ್ಟಲ್ಲಿ ಬೀದಿಗೆ ಇಳಿಯಲ್ಲ. ಯಾವುದೇ ಆಂದೋಳನಕ್ಕೂ ಸೇರಲ್ಲ. ಬೀದಿ ದೀಪ ಕೆಟ್ಟಾಗ, ತೊಟ್ಟೀಲಿ ಕಸ ತೆಗೀದೇ ಇದ್ದಾಗ, ಪೇಪರಿಗೆ ಪತ್ರ ಬರದು (ಈಗೀಗ ಫೋಟೋ ಹಾಕಿ) ಕಾಯ್ತಾರೆ. ಇನ್ನು ಹಿಂದುಳಿದವರಿಗೆ, ಅವರಿಗೆ ಏನು ಸವಲತ್ತು ಇದೆ, ಅದನ್ನು ಅವರು ಹೇಗೆ ಬಳಸಬೇಕು ಅಂತಾನೆ ನಾವು ಹೇಳದೇ ಮುಚ್ಚಿಟ್ಟು ಬಿಡ್ತೀವಿ. ಗೊತ್ತಾಗಿ ಯಾರಾದರೂ ತರಲೆ ಮಾಡಿದರೆ, ಸಮಾಜ ಕಂಟಕ ಅನ್ನೋತರ ಅವನನ್ನ ನೋಡಿ ಬಗ್ಗು ಬಡೀತೀವಿ.
ಹಾಗಂತ ಡೆಮಾಕ್ರಸೀನೇ ಬೇಡ, ಸರ್ವಾಧಿಕಾರಾನೋ, ಮಿಲಟರಿ ಆಡಳಿತಾನೋ ಇರಲಿ ಅಂತ ಅಲ್ಲ. ನಾವು ಆಯ್ಕೊಂಡಿರೋ ಡೆಮಾಕ್ರಸಿಯ ಪದ್ಧತಿಯಿದೆಲ್ಲ, ಪ್ರಾತಿನಿಧಿಕ ಡೆಮಾಕ್ರಸಿ, representative democracy ಇದು ನಮ್ಮಲ್ಲಿ ಕೆಲಸ ಮಾಡ್ತಿಲ್ಲ. ಐದು ವರ್ಷಕ್ಕೆ ಒಂದು ಸಲ ಮತ ಹಾಕಿಸಿಕೊಂಡು ಹ್ಯಾಗೋ ಗೆಲ್ಲೋ (ಇತ್ತೀಚೆಗೆ ಗೆಲ್ಲದೇನೆ, ಉಳಿದ ಸೋತೋರ ಜತೆ ಸೇರಿಕೊಂಡು ಸರ್ಕಾರ ಕಟ್ಟತಾ ಇರೋ) ನಮ್ಮ ಪ್ರತಿನಿಧಿಗಳು ಅನಾಚಾರ ಮಾಡೋಕೆ, ದುರಾಡಳಿತ ಮಾಡೋಕೆ ನಮ್ಮಲ್ಲಿ ತುಂಬಾ ಅವಕಾಶ ಇದೆ. ಕೆಲವರು ಇಲ್ಲ ಅನ್ನಬಹುದು. ಆದರೆ, ನಮ್ಮ ಆಡಳಿತ ವರ್ಗ (administrative service) ಗಟ್ಟಿಯಾಗೋ ತನಕ ಆ ಮಾತು ನಾನು ಒಪ್ಪಲ್ಲ.
ಹಾಗಾದರೆ, ಇನ್ನು ಯಾವ ರೀತಿ ಡೆಮಾಕ್ರಸಿ ಬೇಕು? ನನಗನ್ನಿಸತ್ತೆ, ಭಾಗವಹಿಸುವ ಡೆಮಾಕ್ರಸಿ (participatory democracy) ಬೇಕು ಅಂತ. ಇದು ಡೆಮಾಕ್ರಸಿಯ ಸ್ವಲ್ಪ ತೀವ್ರ ರೂಪ ಅಂತ ಕೆಲವರು ಹೇಳ್ತಾರೆ. ಇರಬಹುದು. ನಮ್ಮ ಜನಕ್ಕೆ ಓದು ವಿದ್ಯೆ ಇಲ್ಲ, ಹಂಗಾಗಿ ಅದು ನಡೆಯೋಲ್ಲ ಅಂತಾರೆ. ಇದು ದೊಡ್ಡ ಸುಳ್ಳು. ವಿದ್ಯೆ ಇದ್ದೋರು, ಓದ್ದೋರು ನಮ್ಮ ದೇಶಾನ ಹಾಳುಗೆಡವಿರೋದು ನೋಡಿದರೆ ಈ ಮಾತಿಗೆ ಹುರುಳಿಲ್ಲ. ನಮ್ಮ ಬದುಕನ್ನ ಚೆನ್ನು ಮಾಡಿಕೊಳ್ಳೋಕೆ ಓದು ವಿದ್ಯೆಗಿಂತ ವಿವೇಕ ಮುಖ್ಯ. ಅದು ನಮ್ಮ ಜನರ ಹತ್ತಿರ ಯಾವತ್ತಿನಿಂದಲೂ ಇದೆ, ಈವತ್ತೂ ಇದೆ.
ಭಾಗವಹಿಸುವ ಡೆಮಾಕ್ರಸಿ ಅಂದರೆ? ಈ ಡೆಮಾಕ್ರಸಿಯಲ್ಲಿ ಬರೇ ಮತ ಹಾಕಿಬಿಟ್ಟರೆ ಮುಗಿಯಲ್ಲ. ನಿರ್ಧಾರಗಳನ್ನು ಬರೇ ಸರ್ಕಾರ ತೆಗೊಳ್ಳದೆ, ಸಣ್ಣ ಘಟಕಗಳಾಗಿ ಕೆಲಸ ಮಾಡುವ ಸಾರ್ವಜನಿಕರ ಗಣಗಳು, ಈ ಕೆಲಸ ಮಾಡಬೇಕು. ಅಂದರೆ, ತಮ್ಮ ಆಸುಪಾಸಿನ ಪರಿಸರ, ಬೆಳವಣಿಗೆ, ಸೌಕರ್ಯ, ಸವಲತ್ತಿನ ವಿಷಯದಲ್ಲಿ ಆ ಘಟಕಗಳು ತೆಗೆದುಕೊಂಡ ನಿರ್ಧಾರಕ್ಕೆ ಬೆಲೆಯಿರಬೇಕು. ಕರ್ನಾಟಕದಲ್ಲಿ, ಗ್ರಾಮ ಪಂಚಾಯಿತಿ, ಜಿಲ್ಲಾ ಪರಿಷತ್ ಈ ರೀತಿಯ ಘಟಕಗಳು. ಆದರೆ, ಅವುಗಳಿಗೆ ನಿಜವಾಗಿಯು ಎಷ್ಟು ಬೆಲೆ ಇದೆ ಹೇಳಿ? ಮತ್ತು ಗ್ರಾಮ ಪಂಚಾಯಿತಿಗಿಂತ ದೊಡ್ಡ ಘಟಕ ಆದ ತಕ್ಷಣ ಈಗಿನ ಸರ್ಕಾರಕ್ಕೆ ಇರೋ ತೊಂದರೇನೇ ಅದಕ್ಕೂ ವಕ್ಕರಿಸಿಕೊಳ್ಳತ್ತೆ.
ಇನ್ನೊಂದು ಮುಖ್ಯ ಅಂಶ ಏನಂದರೆ, ಇಲ್ಲಿ ಯಾವುದೇ ರೀತಿಯ heirarchy ಇರಕೂಡದು. ಎಲ್ಲ ಘಟಕಗಳು ಒಂದು ರೀತಿಯ ನೆಟ್ವರ್ಕ್ ರೂಪದಲ್ಲಿ, ಅವುಗಳು ತೆಗೆದುಕೊಂಡ ನಿರ್ಧಾರಗಳಿಗೆ ಬೆಲೆ ಇರಬೇಕು. ಪಿರಮಿಡ್ ರೂಪದ ಅಧಿಕಾರ ವಿಭಜನೆ ಆದ ತಕ್ಷಣ ಈ ಘಟಕಗಳು ಅರ್ಥ ಕಳೆದುಕೊಂಡು ಬಿಡುತ್ತದೆ. ಬಹುಶಃ ಈಗಿನ ನಮ್ಮ ಗ್ರಾಮ ಪಂಚಾಯಿತಿ, ಜಿಲ್ಲಾ ಪರಿಷತ್ಗಳ ಅರ್ಥಹೀನತೆಗೆ ಇದೇ ಕಾರಣ ಅನ್ನಿಸತ್ತೆ.
ಈ ರೀತಿಯ ಭಾಗವಹಿಸೋ ಡೆಮಾಕ್ರಸಿಯಿಂದ ಅಧಿಕಾರದ ಹಂಚಿಕೆ ಆಗತ್ತಲ್ಲ ಅದು ಯಾರಿಗೆ ಹೆಚ್ಚು ಸಂಕಟ ತರತ್ತೆ? ಯಾರು ಇದಕ್ಕೆ ಅಡ್ಡಗಾಲು ಹಾಕಬಹುದು? ಈ ಪ್ರಶ್ನೆ ಭಲೇ ಮಜದ್ದು. ರಾಜಕಾರಣಿಗಳನ್ನ ಪಕ್ಕಕ್ಕಿಡಿ. ಯಾಕಂದರೆ, ಇದು ನಿಜವಾದ ಜನರ ಆಂದೋಳನ ಆದರೆ ಅವರೂ ಜನರ ಮಾತು ಕೇಳಬೇಕಾಗತ್ತೆ. ಜತೆಗೆ ಶ್ರೀಮಂತರು, ಮೇಲ್ವರ್ಗದವರು ಮೊದಲು ಕಂಟಕರಾಗಿರ್ತಾರೆ. ಆದರೆ ತಮ್ಮದು ನಡೆಯಲ್ಲ ಅಂತ ಗೊತ್ತಾದ್ದ ತಕ್ಷಣ ಲಾಗ ಹೊಡದು, ಗೆದ್ದೆತ್ತಿನ ಬಾಲ ಹಿಡಿತಾರೆ. ತಮ್ಮ ಶ್ರೀಮಂತಿಕೆ ಕಾಪಾಡಿಕೊಳ್ಳೋ ದಾರಿ ಹುಡುಕುತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ನನಗ್ಯಾಕೋ ಇದು ಜನರ ಆಂದೋಳನ ಆಗೋದಕ್ಕೆ ಮಧ್ಯಮ ವರ್ಗ ಬಿಡಲ್ಲ ಅನ್ನಿಸತ್ತೆ. ಅವರಿಗೆ ತಮಗೆ ಇರೋ ಅಧಿಕಾರಾನ ಹಂಚಿಕೊಳ್ಳೋಕೆ ಇಷ್ಟ ಇಲ್ಲ. ಇದು ಈಗಾಗಲೇ ಹಲವಾರು ಕಡೆ ಸಾಬೀತಾಗಿದೆ. ದಲಿತ ಚಳವಳಿ ಮತ್ತು ಮೀಸಲಾತಿಯ ಬಗ್ಗೆ ಮಧ್ಯಮ ವರ್ಗದ ಪ್ರತಿಕ್ರಿಯೆ ಇದಕ್ಕೆ ಸಾಕ್ಷಿ ಅನ್ಕೋತೀನಿ. ಓದು ಬರೆಯೋಕೆ ಬರದವರ ಜತೆ ತಮ್ಮ ಅಧಿಕಾರ ಹಂಚಿಕೊಂಡರೆ ತಮ್ಮ ಸವಲತ್ತಿಗೆ ಕುತ್ತು ಬರತ್ತೆ ಅಂತ ಅವರ ತಲ್ಲಣ.
Comments
ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
In reply to ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ by gc
ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ
In reply to ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ by ವೈಭವ
ಉ: ಡೆಮಾಕ್ರಸಿ, ನಮ್ಮ ನಾಡು, ನಮ್ಮ ಜನ