ಬೆಂಗಳೂರು ಮಳೆಯಲ್ಲಿ…

ಬೆಂಗಳೂರು ಮಳೆಯಲ್ಲಿ…

ಎಂದಿನಂತೆ ಊಟಕ್ಕೆ ಅಂತ ಮೆಸ್ ಕಡೆ ಹೋದ್ರೆ ಅವ್ರು ಬಾಗಿಲು ಹಾಕಿದ್ರು.ಸಮಯ 10 ಆಗಿತ್ತು.ಅಲ್ಲೇ ಹತ್ತಿರದಲ್ಲೇ ಇರೋ ಇನ್ನೊಂದು ಹೋಟೆಲ್ ಕಡೆ ಹೋಗೋಣ ಬಾರೋ ಅಂದೇ ಶ್ರೀಕಾಂತಂಗೆ.ಹೇಯ್ ಅಲ್ ಬೇಡ್ವೋ ರಾಮಯ್ಯ ಕಾಲೇಜ್ ಹತ್ರ ಇರೋ ಪಂಜಾಬಿ ಮೆಸ್ಗೆ ಹೋಗೋಣ ಅಂದ.ಸರಿ ಅಂತ ಹೊರಟ್ವು.ಬಹುಶ ಅರ್ಧ ದಾರಿ ಹೋಗಿದ್ವು.ಹೊಟ್ಟೆ ಚುರು ಚುರು ಅನ್ನೋಕೆ ಶುರು ಆಗಿತ್ತು.ಶುರುವಾಯ್ತು ಭರ್ಜರಿ ಗಾಳಿ,ಮಳೆ.ಅಲ್ಲೇ ಒಂದು ಕಡೆ ಹೋಗಿ ನಿಂತು ಮಳೆ ಯಾವಾಗ ನಿಲ್ಲುತ್ತೋ ಅಂತ ಕಾಯ್ತಾ ಇದ್ವಿ.೧ ಗಂಟೆ ಕಳೆದರು ಮಳೆ ನಿಲ್ಲೋ ಹಾಗೆ ಕಾಣಲಿಲ್ಲ. ‘ಲೇ,ಇಲ್ಲೇ ನಿಂತ್ರೆ ಊಟ ಸಿಗೋಲ್ಲ,ಬಾ ಮಳೆಲಿ ಹೋಗಿ ಊಟ ಇದ್ರೆ ಪಾರ್ಸೆಲ್ ತಗೊಂಡು ಹೋಗೋಣ’ ಅಂದೇ.ಸರಿ ಅಂತೇಳಿ ನಾವ್ ಅಲ್ಲಿ ಹೋಗೋ ಅಷ್ಟೊತ್ತಿಗೆ ಅವ್ರು ಬಾಗಿಲು ಹಾಕಿದ್ರು. ಆಗಲೇ ೧೧.೨೦ ಆಗಿತ್ತು ಎಲ್ಲರು ಬಾಗಿಲು ಹಾಕಿಯಾಗಿತ್ತು.ಊಟ ಸಿಗ್ಲಿಲ್ಲ,ಸರಿ ವಾಪಸ್ ರೂಮ್ಗೆ ಹೋಗೋಣ ಅಂತ ಹೊರಟ್ರೆ,


ರಸ್ತೆ ಅನ್ನೋದು ನದಿಯ ರೂಪ ಪಡೆದಿತ್ತು.’ಬೆಂಗಳೂರಿನ ರಸ್ತೆಗಳಲ್ಲಿ ಅದೆಲೆಲ್ಲಿ ಓಪನ್ ಮ್ಯಾನ್ ಹೋಲ್ಗಳಿವೆಯೋ ಮೊದ್ಲೇ ಗೊತ್ತಾಗೊಲ್ಲ.ಈಗ ಮಳೆ ನೀರಿಗೆ ರಸ್ತೇನೆ ಕಾಣ್ತಾ ಇಲ್ಲ,ಹುಶಾರೋ ಲೋ, ಎಲ್ಲಾದರು ಗುಂಡಿಗೆ ಬಿದ್ಬಿಟ್ಟಿಯಾ,ಕಡಿಮೆ ಅಂದ್ರು ೭೦ ಕೆ.ಜಿ ಇದ್ದೀಯ ನಾನ್ ಅಂತು ಹೋದ್ರೆ ಹೋದೆ ಅಂತ ಬಿಟ್ಬಿಡ್ತೀನಿ’ ಅಂದೇ ಶ್ರೀಕಾಂತಂಗೆ. ನೀನ್ ಬಿದ್ರೆ ನಾನು ಹಂಗೆ ಮಾಡ್ತೀನಿ ಮಗನೆ ಅಂದ.ಕಡೆಗೆ ಈ ಟೆನ್ಶನ್ ಬೇಡ ಮಧ್ಯ ರಸ್ತೆಲೆ ನಡೆಯೋಣ ಅಂತೇಳಿ ನಿರ್ಧರಿಸಿ ಹೋಗ್ತಾ ಇದ್ರೆ ಕಿಟಕಿಯಿಂದ ಇಣುಕಿ ನೋಡೋ ಜನ ಇಂತ ಕೆಟ್ಟ ಮಳೆಯಲ್ಲಿ ಅದು ಅಂತ ರಸ್ತೆಯಲ್ಲಿ ಹೋಗೋ ನಮ್ಮನ್ನ ಮೆಂಟಲ್ಗಳು ಅನ್ಕೊಂಡಿದ್ರೋ ಏನೋ :)


ನಡ್ಕೊಂಡು ಹೋಗ್ತಾ ಇದ್ರೆ,ರಸ್ತೆ ಬದಿಯಲ್ಲಿ ಒಂದಿಷ್ಟು ಜಲಪಾತಗಳು, ಹಾಗೆ ಬುಡ ಸಮೇತ ಕಿತ್ತು ಬಿದ್ದ ಮರಗಳು!,ಹಾಗೆ ಮುಂದೆ ಬಂದು ಒಂದು ಸರ್ಕಲ್ ಹತ್ರ ಬಂದ್ವು,ಅಲ್ಲಿತ್ತು ನೋಡಿ ಮಜಾ.ಆ ರಸ್ತೆಯಲ್ಲಿ ಓಪನ್ ಮ್ಯಾನ್ ಹೋಲ್ ಜೊತೆಗೆ ಗುಂಡಿಗಳಿವೆ ಅನ್ನೋದು ನಮಗೆ ಗೊತ್ತಿತ್ತು.ಆದ್ರೆ ರಸ್ತೆ ತುಂಬಾ ನೀರ್ ತುಂಬಿದೆ ,ಎಲ್ಲಿ ಅಂತ ಹೋಗೋದು,ಇಬ್ರಿಗೂ ಈಗ ಪಿಚರ್ ಬಿಡೋಕೆ ಶುರು ಆಗಿತ್ತು.ಮಳೆಗೆ ಪೂರ್ತಿ ನೆನೆದಿದ್ವು,ಚಳಿಗೆ ಗಡ ಗಡ ನಡುಕ ಬೇರೆ ಜೊತೆಗೆ ಈ ಮ್ಯಾನ್ ಹೋಲ್ಗಳ ಹೆದರಿಕೆ.ಕಡೆಗೆ ಇಬ್ರು ಕೈ-ಕೈ ಇಡ್ಕೊಂಡು ಹೆಂಗೋ ಮನೆ ಹತ್ರ ಬಂದ್ವಿ,ಮನೆಯ ಬಳಿಯ ತಿರುವು ರಸ್ತೆಗೆ ಬಂದಾಗಲೇ ಗೊತ್ತಾಗಿದ್ದು,ಅಲ್ಲಾಗಲೇ ಮೊಣಕಾಲವರೆಗೆ ನೀರು ಹರಿತಿದೆ ಅಂತ.ಅದು ‘ಪವಿತ್ರ ಮೋರಿ’ಯ ನೀರು :)


ಸಾಧಾರಣದವರನ್ನ  ಜೊತೆಗೆ ಕರ್ಕೊಂಡು ಹೋಗೋ ಅಷ್ಟು ರಭಸವು ಇತ್ತು.ಇಬ್ಬರು ಕೈ ಹಿಡಿದು ಹೆಜ್ಜೆ ಹೆಜ್ಜೆ ಇಡುತ್ತ ಮುಂದೆ ಬಂದು ನೋಡ್ತಿವಿ ಶ್ರೀಕಾಂತನ  ಫಿಯರೋ ಬೈಕು ನೀರಲ್ಲಿ ತೇಲ್ತ ಇತ್ತು, ಇನ್ನ ತಡ ಮಾಡಿದ್ರೆ ಕೊಚ್ಕೊಂಡು ಹೋಗುತ್ತೆ ಅಂತ ಕಷ್ಟ ಪಟ್ಟು ಗಾಡಿ ನಿಲ್ಲಿಸಿದಾಗ ಜಾಗಕ್ಕೆ ಹೋಗಿ ಇಬ್ಬರು ಸೇರಿ ಗಾಡಿಯನ್ನ ಎತ್ತಿ ನಿಲ್ಲಿಸ್ತ ಇದ್ವಿ,ನೀರಿನ ರಭಸ ಅದ್ಯಾವ ಪರಿ ಇತ್ತು ಅಂದ್ರೆ ಇಬ್ರು ಸೇರಿ ಅದನ್ನ ಎತ್ತಿ ನಿಲ್ಲಿಸೋಕೆ ಕಷ್ಟ ಪಡ್ತಾ ಇದ್ವಿ, ಅಷ್ಟೊತ್ತಿಗೆ ನನ್ನ ಡಿಸ್ಕವರ್ ಬೈಕು ಬಿತ್ತು,ಬಿದ್ದಿದ್ದೆ ತೇಲ್ಕೊಂಡು ಹೋಗೋಕೆ ಶುರುವಾಯ್ತು, ಇದ್ಯಾವ ಪಜೀತೆಲೆ, ನೀನ್ ನಿನ್ನ ಬೈಕ್ ಇಟ್ಕೋ ನಾನ್ ಅದನ್ನ ಹಿಡಿತೀನಿ ಅಂತ ಅದನ್ನ ಹೋಗಿ ಹಿಡಿದೇ.ಬಹಳಷ್ಟು ಕಷ್ಟ ಪಟ್ಟು,ಪಕ್ಕದ ಮನೆಯವರ ಬಳಿ ಹಗ್ಗ ತಗೊಂಡು ಎರಡು ಬೈಕನ್ನ ಗೇಟಿನ ಬಳಿ ತಂದು ಕಟ್ಟಿ ನಿಲ್ಲಿಸಿ ಉಸ್ಸಪ್ಪ ಅನ್ಬೇಕು ಅಷ್ಟರಲ್ಲಿ ‘ಒಂದು ಪಲ್ಸರ್ ಜೊತೆಗೆ ಆಸಾಮಿಯೊಬ್ಬ ತೇಲಿಕೊಂಡು ಬಂದ!’ ಅವನನ್ನ ಮತ್ತೆ ಪಲ್ಸರ್ನ ಹಿಡಿದು ನಿಲ್ಲಿಸಿ ಪಕ್ಕಕ್ಕೆ ಎಳೆದುಕೊಂಡ್ವು.


ಆಮೇಲೆ ನಮಗೆ ಅದೇ ಕೆಲಸ ಆಗೋಕೆ ಶುರುವಾಯ್ತು ಮತ್ತೆ ಇನ್ನೊಂದೆರಡು ಬೈಕು ಅದ್ರ ಸವಾರರು ಎಲ್ಲರನ್ನ ಹಿಡಿದಿಡು ಸೈಡ್ಗೆ ಹಾಕೋ ಕೆಲ್ಸ.ಅಷ್ಟರಲ್ಲಾಗಲೇ ಎದೆ ಮಟ್ಟದವರೆಗೆ ನೀರು ಏರಿತ್ತು.ಆ ಪಲ್ಸರಿನಲ್ಲಿ ಬಂದವ ಅಲ್ಲೇ ಗೇಟ್ ಮೇಲೆ ಹತ್ತಿ ಕುಳಿತು ‘ಸರ್,ಈ ತರ ಟೀ.ವಿಯಲ್ಲಿ ನೋಡಿದ್ದೇ,ಅನುಭವಿಸಿರಲಿಲ್ಲ.ಈ ಮಳೆಗೆ ಹಿಂಗೆ ನಾವು ಚಡಪಡಿಸ್ತ ಇದ್ದಿವೀ, ಇನ್ನ ಪಾಪ ಉತ್ತರ ಕರ್ನಾಟಕದ ಪ್ರವಾಹದಲ್ಲಿ ಸಿಕ್ಕಿಕೊಂಡ ಜನರ ಕತೆ ಹೇಗಾಗಿರಬೇಡ ಅಂದ’ ಅವನ ಮುಖದಲ್ಲಿ ಭಯ ಆವರಿಸಿತ್ತು.ಪಾಪ ಇನ್ನ ತಡವರಿಸಿಕೊಳ್ಳುತ್ತ ಇದ್ದ.ಸುತ್ತ ಮುತ್ತಲಿನ ಮನೆಗಳಿಗೆಲ್ಲ ನೀರು ನುಗ್ಗಿತ್ತು,ನಮ್ಮ ಒವ್ನರ್ ಸೊಸೆ ಆ ಮಳೆ ನೀರಲ್ಲಿ ಜಾರಿ ಬಿದ್ದು ಕೈ ಫ್ರಾಕ್ಚರ್ ಮಾಡಿಕೊಂಡರು ಆ ರಾತ್ರಿ.ಸರಿ ಸುಮಾರು ೧೨ ಗಂಟೆಯಿಂದ ಆ ಮೋರಿಯ ನೀರೊಳಗೆ ನಿಂತುಕೊಂಡೆ ಬೈಕಿನೊಂದಿಗೆ ತೇಲಿ ಬರುವ ಜನರನ್ನ ಪಕ್ಕಕ್ಕೆ ನಿಲ್ಲಿಸುತಿದ್ದ ನಾವು ಊಟ ಮಾಡಿಲ್ಲ ಅನ್ನೋದು ಮರೆತೋಗಿತ್ತು,ಮಳೆಯ ಆರ್ಭಟಕ್ಕೆ ಹಸಿವು ಸೈಲೆಂಟ್ ಆಗಿತ್ತು.ಆಗ್ಲೇ ನಂಗೆ ನೆನಪಾಗಿದ್ದು ನನ್ನ ಪ್ರೀತಿಯ ಮೊಬೈಲ್.ಅದು ನನ್ನ ಜೊತೆಗೆ ನೀರಿನಲ್ಲೇ ಇತ್ತಲ್ಲ, ಪಾಪ ಅರೆ ಜೀವವಾಗಿತ್ತು. ಅದ್ರ ಡಿಸ್ಪ್ಲೆಯ್ ಹೋಗ್ಬಿಡ್ತು.ಆ ಡಬ್ಬ ಮೊಬೈಲ್ ಬದಲಾಯಿಸೋ ಅಂತ ಗೆಳೆಯರು ಅದೆಷ್ಟು ಬಾರಿ ಹೇಳಿದ್ರೋ ನಾನ್ ಮಾತ್ರ ಮೊದಲ ಸಂಬಳದಲ್ಲಿ ತಗೊಂಡಿದ್ದು ಲೇ, ಇದು ಇರೋವರೆಗೂ ಬೇರೆ ತಗೋಳೋದಿಲ್ಲ ಅಂದಿದ್ದೆ.ಈಗ ತಗೋಬೇಕಲ್ಲ ಅನ್ನೋ ಬೇಜಾರ್ ಬೇರೆ ಆಗಿತ್ತು.ಸರಿ ಮಳೆ ಒಂದು ಹಂತಕ್ಕೆ ಕಡಿಮೆಯಾಗಿತ್ತು ಅಷ್ಟರಲ್ಲಿ,ಆದರೆ ನೀರಿನ ಆರ್ಭಟ ಮುಂದುವರೆದಿತ್ತು.ಸರಿ ಅಂತೇಳಿ ಮೊದಲೇ ಮಹಡಿಯ ನಮ್ಮ ರೂಮಿಗೆ ಹೊರಟ್ವು,ನಾನು ಮೇಲೆ ನಿಂತು ನೋಡ್ತಾ ಇದ್ದೆ ಇನ್ನ ಯಾರಾದ್ರೂ ಬಂದು ಬೀಳ್ತಾರ ಅಂತ ;)


ಇಬ್ರು ಬಂದ್ರು ಸ್ಕೂಟಿ ಪೆಪ್ ಅಲ್ಲಿ, ನೀರಿನ ರಭಸಕ್ಕೆ ಗಾಡಿ ಜೊತೆ ಪಲ್ಟಿಯಾಗಿ ತೇಲೋಕೆ ಶುರು ಆದ್ರು.ಇಬ್ರು ಫುಲ್ ಟೈಟ್ ಆಗಿದ್ದವ್ರಂತೆ ಕಾಣ್ತಾ ಇದ್ರೂ.ಗಾಡಿ ಓಡಿಸುತಿದ್ದ ತಾತ ಮೇಲಿನ ಜೇಬಿನಲ್ಲಿದ್ದ ಮೊಬೈಲು ನೀರು ಪಾಲಾಯ್ತು.ಸ್ಕೂಟಿ ತೇಲ್ತ ಇತ್ತು ಅವರಲ್ಲಿ ಒಬ್ಬನಿಗೆ ನಿಶೆಯಲ್ಲಿ ಏನಾಗ್ತ ಇದೆ ಗೊತ್ತಾಗದೆ ಸುಮ್ಮನೆ ನೋಡ್ತಾ ಇದ್ದ,ಇನ್ನೊಬ್ಬ ತೇಲುತಿದ್ದ ಸ್ಕೂಟಿಯ ಹಿಡಿದು ತಾನು ತೇಲೋಕೆ ಶುರು ಮಾಡಿದ, ಇದೊಳ್ಳೆ ಕರ್ಮ ಆಯ್ತಲ್ಲ ಗುರು ಅಂತ ಮತ್ತೆ ಶ್ರೀಕಾಂತನ ಕರ್ದೆ ಬಾರಲೇ ಇನ್ನೊಬ್ಬ ಬಿದ್ದ ಅಂತ,ಅವರನ್ನ ಪಕ್ಕಕ್ಕೆ ಎಳೆದೆ ತಂದು ಹಾಕಿದ್ವು.ಅಷ್ಟರಲ್ಲಾಗಲೇ ನೀರಿನ ರಭಸ ಇಳಿದಿತ್ತು.ಮಳೆಯಲ್ಲಿ ನೆನೆದು,ನೀರಿನಲ್ಲೇ ನಿಂತಿದ್ದರಿಂದ ಶೀತ,ನೆಗಡಿ ಶುರುವಾಗಿತ್ತು.ರೂಮಿನಲ್ಲೇ ಇದ್ದ ‘ಔಷಧ’ವನ್ನ ಎರಡೇ ಎರಡು ಮುಚ್ಚುಳ ತೆಗೆದುಕೊಂಡು ಮಲಗುವಾಗ ಸಮಯ ೩ ಆಗಿತ್ತು! ಕಳೆದ ಶುಕ್ರವಾರ ಬೆಂಗಳೂರಿನಲ್ಲೇ ಸುರಿದ ಬಾರಿ ಮಳೆಯಿಂದ ಇದೆಲ್ಲ ನೆನಪಾಯ್ತು :)


ಆ ಮಳೆ ಬಂದ ದಿನ ೨೦೦೯ರ ಸೆಪ್ಟೆಂಬರ್ ೨೪.ಮೊನ್ನೆ ಮಳೆ ಬಂದಿದ್ದು ಸೆಪ್ಟೆಂಬರ್ ೨೪ ರಂದೇ ಅಲ್ವಾ!,ಹಾಗೆ ೫ ವರ್ಷದ ಹಿಂದೆ ಹೀಗೆ ಮಳೆ ಬಂದು ಸಿಲ್ಕ್ ಬೋರ್ಡ್ ಹತ್ರ ಕಾರುಗಳೆಲ್ಲ ನೀರಿನಲ್ಲಿ ತೇಲ್ತ ಇದ್ವು,ಬಸ್ಸಿನೋಳಗೆಲ್ಲ ನೀರು ಬರ್ತಿತ್ತು,ಆಗ ನನ್ನ ರೂಂ ಸಿಲ್ಕ್ ಬೋರ್ಡ್ ಹತ್ರ ಇತ್ತು :) ,ಅದು ಕೂಡ ಸೆಪ್ಟೆಂಬರ್ ಸಮಯವೇ !,ಬೆಂಗಳೂರಿನ ಭಾರಿ ಮಳೆಗೂ ಸೆಪ್ಟೆಂಬರ್ ೨೪ಕ್ಕು ಏನಾದ್ರೂ ಲಿಂಕ್ ಇದ್ಯಾ? ಗೊತ್ತಿಲ್ಲ :)


 


ರಾಕೇಶ್ ಶೆಟ್ಟಿ :)

Rating
No votes yet

Comments