ಧರ್ಮ ಪುರಾಣ

ಧರ್ಮ ಪುರಾಣ

ನನ್ನ ಮಾತುಗಳಿಗೆ ಈಗೀಗ ಬೆಲೆಯೇ ಇಲ್ಲ
ಮಾತೆತ್ತಿದರೆ ಪುರಾಣ ಕೊಚ್ಚಬೇಡಿ ಅನ್ನುವಳಲ್ಲ

ಕೇಳೆ, ಪಾಂಡವರು ಸ್ವರ್ಗಾರೋಹಣಕ್ಕೆ ಹತ್ತಿದ್ದು
ಬೆಳ್ಳಂ ಬೆಳ್ಳನೆಯ ಮೌಂಟು ಎವರೆಸ್ಟ್
ಇದ್ದನಲ್ಲ ಹೈದರಾಬಾದಿನ ಅಮರಾವತಿಯಲಿ ದೇವೇಂದ್ರ 
ಕಾಶ್ಮೀರದ ಹಿಮಾಚಲದಲ್ಲಿ ಆಸೀನನಾಗಿದ್ದ ಪಶುಪತಿ
ಕಟ್ಟಲಿಲ್ಲವೇ ರಾಮ ಸೇತುವೆಯೊಂದನು
ಆ ಬದಿಯಿಂದ ಬರೀ ಬ್ರಹ್ಮಾಸ್ತ್ರ ಮಾತ್ರ,
'ಯಾಕೆ ಗಡಿ ಬಿಟ್ಟು ಹೋಗಲಿಲ್ಲ ಪುರಾಣ ನಾಮ
ಮೆಕ್ಕಾದಲ್ಲಿ ಯಾಕೆ ಹುಟ್ಟಲಿಲ್ಲ ರಾಮ?'

'ಭಗವಂತನಾಗುವನು ಬೆಳಕ ಚೆಲ್ಲಿದಾತ
ಕತೆ ಪುರಾಣ ಕಟ್ಟುವರು ಇನ್ನೊಬ್ಬರ ನಂಬಿಸಲು
ಹುಡುಕುತ್ತಾರೆ ಸಾಕ್ಷ್ಯ ನಿಮ್ಮಂಥವರೀಗ  ಅದನ್ನು ಸಾಧಿಸಲು'
ಎಂದೆಲ್ಲಾ ಹಾರಾಡಿದವಳಿಗೆ, ಕೃಷ್ಣನ ದ್ವಾರಕ
ಸಿಕ್ಕಿತಲ್ವೇನೆ ಸಮುದ್ರದಡಿಯಲ್ಲಿ ಎಂದಾಗ
'ಒಬ್ಬ ಸಮರ್ಥ ರಾಜಕಾರಣಿ ಆತ,
ದೇವರಾಗಿಸಿದ್ದಾರೆ ನಿಮ್ಮ ಜನರೀಗ' 
ಎಂದಾಕೆ ನಕ್ಕಾಗ ಸತ್ಯ ಹೇಳಿದಳೋ ಅಥವಾ ಸುಳ್ಳೋ!

ಹೆಣ್ಣು ಮಕ್ಕಳ ಬಾಯಿಗೆ ಕೈ ಹಾಕಿದರೆ ಕಚ್ಚುವರಂತೆ
ಹೇಳಿ ಕೇಳಿದ ಮಾತಲ್ಲ ಅನುಭವಿಸಿದ ಸತ್ಯವೀಗ
"ಮೆಕ್ಕಾದಲ್ಲಿ ಪ್ರವಾದಿ, ಜೆರುಸಲೇಮಿನಲ್ಲಿ ಏಸು
ನಮ್ಮ ದೇಶದಲ್ಲಿ ದೇವತೆಗಳು ಮುಕ್ಕೋಟಿ
ಯದಯದಾಹಿ ಧರ್ಮಸ್ಯ ಗ್ಲಾನಿರ್ಭವತಿ.. "ಮುಗಿಸಲಾದರೂ ಬಿಡುವಳೇ
"ನಿಮ್ಮ ಮೇಲೆ ವಾದ ಮಾಡಿ ನಾನ್ಯಾಕೆ ಮಾಡಿಕೊಳ್ಳಲಿ ಬಾಯಿ ಮಲಿನ,
ಸಲ್ಲದವರು ಅವರು ಆ ಕಾಲದಲ್ಲಿ
ಬದುಕಿರುವಾಗ ಜನ ಕೊಂದರು, ಸತ್ತ ಮೇಲೆ ದೇವರಾಗಿಸಿದರು"

ಬದುಕಲು ಕಲಿಯೋಣ, ಧರ್ಮ ಮರೆಯೋಣ
ಅವಳ ಮಾತುಗಳಿಗೆ ನನ್ನದು ಇನ್ನೂ ಇದೆ ಒಪ್ಪಿಗೆ
ಆದರೂ ಹುಡುಕುವುದ ಬಿಡಲೊಲ್ಲೆ ನನ್ನ ಧರ್ಮದ ಹೊತ್ತಿಗೆ
ಇವಳಿಗೆಲ್ಲಾ ಇದು ಹೇಳಿದರೆ ಅವಳಿಗದು ಇಂಟರೆಸ್ಟಿಂಗ್ ಅಲ್ಲ
ಎಲ್ಲವನ್ನೂ ಗಂಭೀರವಾಗಿಯೇ ತೆಗೆದುಕೊಳ್ಳುವ ನನಗೆ
ಅವಳಿನ್ನೂ ಅರ್ಥವಾಗಿಲ್ಲ; ಧರ್ಮದ ಮುಖವ ಮರೆತಿಹ
ಆಕೆಯ ನಗು ಯಕ್ಷ ಪ್ರಶ್ನೆಯಾದರೂ
ನನ್ನ ಹುಡುಕಾಟ ನಾ ಬಿಡಲ್ಲ. ಆದರೂ ನೋವೊಂದೇ..

ನನ್ನ ಮಾತುಗಳಿಗೆ ಈಗೀಗ ಬೆಲೆಯೇ ಇಲ್ಲ
ಮಾತೆತ್ತಿದರೆ 'ನಿಮಗೆ ತಲೆ ಸರಿ ಇಲ್ಲ' ಅನ್ನುವಳಲ್ಲ!!

Rating
No votes yet

Comments