ಶ್ರೀರಾಮ ದರ್ಶನ ಹಾಗೂ ಗೌಡರ ಭೇಟಿ

ಶ್ರೀರಾಮ ದರ್ಶನ ಹಾಗೂ ಗೌಡರ ಭೇಟಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ, ಜನತೆಗೆ ಮುಕ್ತ ಪ್ರವೇಶವಿತ್ತು. ಎಪ್ರಿಲ್ ರಜೆಯಲ್ಲಿ ನಾನೂ ಮನೆಮಂದಿ ಜತೆ ಅಯೋಧ್ಯೆಗೆ ಹೋದೆ. ಬಹಳ ಸುಂದರ ಮಂದಿರ. ಸಂಪದದಲ್ಲಿ ಹಾಕಲೆಂದು ೫-೬ ಫೋಟೋಗಳನ್ನೂ ಮೊಬೈಲಲ್ಲಿ ತೆಗೆದೆ. ಇನ್ನೇನು ರಾಮನ ದರ್ಶನಕ್ಕೆ ದೇವಸ್ಥಾನದ ಒಳಗೆ ಹೊರಟಾಗ "ಗಣೇಶರೆ, ಏಳ್ರೀ, ಏಏಳ್ರೀ.." ಅನ್ನುವುದು ಕೇಳಿಸಿತು. ಸ್ವರ ಎಲ್ಲೋ ಕೇಳಿಸಿದಂತಿದೆಯಲ್ಲಾ..ನಮ್ಮ ಗೋಪೀನಾಥರದ್ದು..ಓ...ನಾವೆಲ್ಲಾ ಕಾರಲ್ಲಿ ಕೋಮಲ್ ಹಳ್ಳಿಗೆ ಹೊರಟಿದ್ದಲ್ವಾ...( http://sampada.net/blog/%E0%B2%97%E0%B2%A3%E0%B3%87%E0%B2%B6/01/10/2010/28253 )


ಹಾಗಿದ್ದರೆ ರಾಮಮಂದಿರ ನೋಡಿದ್ದು ಕನಸಲ್ಲಿ! ಮೆಲ್ಲನೆ ಕಣ್ಣು ತೆರೆದು ನೋಡುತ್ತೇನೆ!! ಎದುರಲ್ಲಿ ಸಾಕ್ಷಾತ್ ಶ್ರೀ ರಾಮಚಂದ್ರ!!!


ಕಿರೀಟ ಬಿಲ್ಲು ಬಾಣಗಳ ಸಹಿತ ಕಾರಿನ ಕಿಟಕಿಯಿಂದ ನನ್ನನ್ನೇ ನೋಡುತ್ತಿರುವರು!


"ಪ್ರಭೂಜಿ" ಎಂದು ದಢಕ್ಕನೆ ಎದ್ದವನೇ (ಕಾರಿನ ಟಾಪ್ ತಾಗಿ) ಅಡ್ಡ ಬಿದ್ದೆ. ನಕ್ಷತ್ರ ಸಹಿತ ೩ ಲೋಕಗಳೂ ಗರಗರನೆ ತಿರುಗುತ್ತಿರುವುದು, ನಡುವಲ್ಲಿ ರಾಮ(ವಿಶ್ವರೂಪದರ್ಶನ!) ನ ಕಂಡೆ. ಗೋಪಿನಾಥರು ಮುಖಕ್ಕೆ ನೀರು ಸಿಂಪಡಿಸಿ, ಕುಡಿಯಲು ನೀರು ಕೊಟ್ಟಮೇಲೆ ನಾರ್ಮಲ್ ಆದೆ. ವಿಷಯ ಏನು ನಡೆಯಿತು ಎಂದು ಸಂಕ್ಷಿಪ್ತವಾಗಿ ಹೇಳಿದರು-


ನಾವು ಇನ್ನೂ ಬರಲಿಲ್ಲ ಎಂದು ಗೌಡರು, ನಮ್ಮನ್ನು ಎದುರುಗೊಳ್ಳಲು, ತಮ್ಮ ಪಟಲಾಂ ಜತೆ (ಇನ್ನೇನು ಕೆಲವೇ ಕ್ಷಣದಲ್ಲಿ ಬರುತ್ತಾರೆ ಎಂದು ಒಂದು ಗಂಟೆಯಿಂದ ಕೋಮಲ್ ಹೇಳಿದರೂ ಕೇಳದೆ) ಹಳ್ಳಿದಾರಿಗುಂಟ ನಡಕೊಂಡು ಬಂದಿದ್ದಾರೆ.( ಅದಾಗಲೇ ೧೦ ಕಿ.ಮೀ. ಬಂದಾಗಿದೆ). ನಮ್ಮ ಕಾರು ಸಿಕ್ಕಿ ತಡೆದಿದ್ದಾರೆ. ಸುರೇಶ್ ಯಾರೋ ದಸರಾ ಚಂದಾ ವಸೂಲಿಯವರಿರಬೇಕೆಂದು ೧೦೦ ರೂ. ಕೊಡಲು ಹೋದಾಗ "ನಾವು ಕೋಮಲ್ ಕಡೆಯವ್ರೀ" ಅಂದ್ರು..


"ಸುರೇಶ್, ನನ್ನ ಕಿಟಕಿ ಪಕ್ಕದಲ್ಲಿರುವುದು ರಾಮ, ಕಾರಿನ ಎದುರು ಇರುವುದು ಕೃಷ್ಣ! ಸಾಮಾಜಿಕ ನಾಟಕ ಮಾಡೋಣ ಅಂದಿದ್ದ ಕೋಮಲ್, ಇದ್ಯಾವ ನಾಟಕ? ಈಗಲೇ ಯಾಕೆ ವೇಷ ಹಾಕ್ಕೊಂಡಿದ್ದಾರೆ?" ವಿಚಾರಿಸಿದರು ಗೋಪಿನಾಥ್.


"ನನಗೂ ಅರ್ಥವಾಗುತ್ತಿಲ್ಲ. ಯಾವುದಕ್ಕೂ ಕೋಮಲ್ ಸಿಗಲಿ. ನಾವು ಹೋಗೋಣ"." ನೀವೂ ಬೇಗನೆ ನಡಕೊಂಡು ಬನ್ನಿ" ಎಂದು ಗೌಡ್ರ ಕಡೆ ತಿರುಗಿ ಹೇಳಿದರು ಸುರೇಶ್.


"ಹೇ..ಅದು ಹೇಗೆ ಆಗುತ್ತ್ರೀ.. ನಾವೂ ಕಾರ್ನಾಗೇ ಬರ್ತೀವ್ರೀ" ಅಂದು ಎಲ್ಲಾ ಕಾರಿಗೆ ಹತ್ತುವುದೆ!(ಇಷ್ಟು ಜನಕ್ಕೆ ಮಿನಿ ಬಸ್ಸೂ ಸಾಕಾಗದು!)


ಕತ್ತಿನ ಅಡಿಗೆ ರಾಮನ ಬಾಣ, ಕುತ್ತಿಗೆಗೆ ಭೀಮನ ಗದೆ, ತೊಡೆ ಮೇಲೆ ಕೃಷ್ಣ, ಮೂಗಿನೊಳಗೆ ಹನುಮನ ಬಾಲ...."ಸುರೇಶ್, ಕಾರು ನಿಲ್ಲಿಸ್ರೀ. ನಾನೇ ನಡಕೊಂಡು ಬರ್ತೇನೆ" ಅನ್ನಲು ಪ್ರಯತ್ನಿಸಿದರೆ ಬಾಯಿ ತೆರೆಯಲೇ ಆಗುತ್ತಿಲ್ಲ! ತಲೆ ಟಾಪಿನ ಕಡೆ ತಿರುಗಿರುವುದರಿಂದ ಕಾರಿನ ಒಳಗೆ ಏನಾಗುತ್ತಿದೆಯೆಂದು ಗೊತ್ತಾಗುತ್ತಿರಲಿಲ್ಲ.


"ಡೋರ್ ಹಾಕ್ಕೊಳ್ರೀ"


"ಪರವಾಗಿಲ್ರೀ, ನಮ್ಮ ಹಳ್ಳೀಲಿ ಇಸ್ಮಾಯಿಲ್ ಬಸ್ಸಾಗಲೀ, ಕಾರಾಗಲೀ ಡೋರ್ ಹಾಕ್ಕೊಳ್ಳದೇ ಹಾಗೇ ಜನಗಳನ್ನ ತುಂಬಿಸ್ಕೊಂಡು ಹೋಗೋದ್ರೀ"


"ಗೋಪೀನಾಥ್, ಸ್ಟೈರಿಂಗ್ ನನ್ನ ಕೈಲಿ ಇಲ್ಲ! ಯಾರ್ರೀ ಕಾರು ಬಿಡುತ್ತಿರುವುದು?"


ನನ್ನ ಪ್ರಾಣ ಕುತ್ತಿಗೆಯಿಂದ ಕೆಳಗೆ (ಮೇಲೆ ಹೋಗಲು ಸಾಧ್ಯವಿಲ್ಲ-ರಾಮನ ಬಾಣ ನೆಟ್ಟಿತ್ತು) ಹೊಟ್ಟೆಗೆ ಇಳಿಯಿತು!


ನಾಷ್ಟಾ ಮಾಡದೇ ಹೊಟ್ಟೆ ತಾಳ ಹೊಡೆಯುತ್ತಿತ್ತು. ಹೇಗೋ ಗಧೆಯನ್ನು ಸರಿಸಿ, ಕತ್ತನ್ನು ನೆಟ್ಟಗೆ ಮಾಡಿ ಸುರೇಶರಿಗೆ ಹೇಳಿದೆ " ಚಿತ್ರಾನ್ನನೋ,ಮೊಸರನ್ನನೋ ಹಳಸಿದೆ.. ವಾಸನೆ ಬರ್ತಾ ಇದೆ" ಅಂದೆ.


"ಗೌಡ್ರು ನಿನ್ನ ಪಕ್ಕನೇ ಕೂತಿದ್ದಾರೆ ನೋಡ್ಕೋ" ಅಂದ್ರು.


ಕತ್ತು ನಿದಾನಕ್ಕೆ ಪಕ್ಕಕ್ಕೆ ತಿರುಗಿಸಿದೆ-


"ಅಯ್ಯೋ...ಅಯ್ಯಯ್ಯೋ.." ಪ್ಯಾಕ್ ಎಲ್ಲಾ ಬಿಚ್ಚಿ ವಡೆ ಎಲ್ಲಾ ಮುಕ್ಕುತ್ತಿದ್ದರು ಗೌಡರ ಪಟಲಾಂ...


-"ವಡೆಯು ಮುಗಿದೇ ಹೋಯಿತು..


ಮುಗಿಯದಿರಲಿ ಮೊಸರನ್ನ..." ಹಸಿವಾದಾಗ, ದುಃಖವಾದಾಗ ಕವಿತೆ ತಾನಾಗಿ ಬರುತ್ತದೆಯಂತೆ..


-ಗಣೇಶ.


ಗೋಪೀನಾಥರಿಗೆ ಕೊಕ್.


 

Rating
No votes yet

Comments