ಬೀದಿಯಲ್ಲಿ ಆಡುವವರು ಸದನದೊಳಗೆ ಯಾಕೆ ಆಡರಯ್ಯಾ?

ಬೀದಿಯಲ್ಲಿ ಆಡುವವರು ಸದನದೊಳಗೆ ಯಾಕೆ ಆಡರಯ್ಯಾ?

ಸಂಸದ ಕುಮಾರ ಯಾವುದೋ ಧೂಳು ಹಿಡಿದ ಕಡತ ಹಿಡಿದು
ಅಲ್ಲಲ್ಲಿ ಸರಕಾರದ ಮಾನ ಹಾಕುತ್ತಾನೆ ಬಹಿರಂಗ ಹರಾಜು

"ಎಸ್" "ವೈ" ಎಂದು ದತ್ತ ತನ್ನೆಲ್ಲಾ ಹಲ್ಲುಗಳ ಕಚ್ಚಿಕೊಂಡು
ವಾಹಿನಿಯಲಿ ಚರ್ಚೆ ಮಾಡಿ ಹೆಚ್ಚಿಸುತ್ತಾನೆ ಅದರ ಮೋಜು

ಕಾಂಗ್ರೇಸಿಗರು ಕೂಡಲೇ ಕಡತಗಳ ನಕಲುಗಳನ್ನು ತೆಗೆದು
ನಡೆಯುತ್ತಾರೆ ರಾಜಭವನದಾ ಏಜಂಟನಿಗೆ ದೂರು ಕೊಡಲು

ದೂರದ ಮಂಗಳೂರಲ್ಲಿ ನಿದ್ದೆಯಿಂದೆದ್ದ ಜನಾರ್ದನ ಪೂಜಾರಿ
ಮತ್ತು ಇತ್ತ ಈ ಬಂಗಾರಪ್ಪ ಶುರುಮಾಡುತ್ತಾರೆ ತೊದಲಲು

ತಾನೇ ರಾಜೀನಾಮೆ ಕೊಟ್ಟಿದ್ದ ಸಿದ್ದರಾಮಯ್ಯ ಸೋನಿಯಾಳ
ಮುಂದೆ ಯಡ್ಡಿಯ ಹುಳುಕನ್ನು ಬಿಚ್ಚಿಡಲು ದೌಡಾಯಿಸುತ್ತಾನೆ

ಸೋನಿಯಾಳ ಭೇಟಿಯ ನಂತರ ಹೇಗೆ ತನಗಲ್ಲಿ ಮಂಗಳಾರತಿ
ಆಯಿತೆಂಬ ಸುದ್ದಿಯನೇ ಮಾಧ್ಯಮದವರಿಂದ ಮರೆಮಾಚುತ್ತಾನೆ

ಈಶ್ವರಪ್ಪ ಆ ವಕೀಲ ಚಂದ್ರೇಗೌಡನನ್ನು ಛೂ... ಬಿಡುತ್ತಾನೆ
ಮಾಧ್ಯಮಗಳವರನ್ನು ಕಾನೂನು ರೀತ್ಯ ಮರಳು ಮಾಡಲು

ಯಡ್ಡಿ ಒಂಟಿ ಸಲಗದಂತೆ ತನ್ನ ಶೋಭೆಗೆ ಧಕ್ಕೆ ಬರುವುದನ್ನು
ಅರಿತು ಸದನಕ್ಕೆ ಬನ್ನಿ ಅಂತಾನೆ ಎಲ್ಲರನು ಮಾತನಾಡಲು

ಸದನದ ಹೆಸರು ತೆಗೆದರೆ ಸಾಕು ಎಲ್ಲಾ ಅಲರ್ಜಿ ಆದವರಂತೆ
ತಮ್ಮ ಮಾತು ಬದಲಿಸಿ ರಾಜೀನಾಮೆಗೆ ಹಿಡಿಯುತ್ತಾರೆ ಪಟ್ಟು

ಯಾಕೆ ಹೀಗೆ ಅಂತೀರಾ ಬೀದಿಯಲ್ಲಿ ಆಡಿದ್ದನ್ನೆಲ್ಲಾ ಸದನದಲ್ಲೂ
ಆಡಿದರೆ ದಾಖಲೆ ಆಗಿ ಮುಂದೆ ಎಲ್ಲಾ ತಿನ್ನಬೇಕಾದೀತು ಪೆಟ್ಟು
*********
ಆತ್ರಾಡಿ ಸುರೇಶ ಹೆಗ್ಡೆ

 


Rating
No votes yet

Comments