ನಾನೂ ನನ್ನ ಬಾಸೂ ೬ ನೇರ ಗುರಿಯ ಬಾಣ

ನಾನೂ ನನ್ನ ಬಾಸೂ ೬ ನೇರ ಗುರಿಯ ಬಾಣ

                                                         ನಾನೂ ನನ್ನ ಬಾಸೂ   ೬   ನೇರ ಗುರಿಯ ಬಾಣ   

" ಏನಯಾ ಜೋಗಾ ಯಾಕೆ ಹೀಗ್ಮಾಡ್ದೆ...?  ನಮ್ ಸಾಹೇಬ್ರಿಗೇ ಬೈಸಿದ್ಯಂತಲ್ಲಾ, ಅಲ್ಲಯ್ಯಾ ಏನಾದ್ರೂ ತೊಂದರೆಯಿದ್ದರೆ ನಂಗೆ ಹೇಳ್ಬೇಕಾಗಿತ್ತೂ, ಅದನ್ನ ಬಿಟ್ಟೂ ದೊಡ್ಡ ಸಾಹೇಬ್ರಿಗೇ ಸೀದಾ ಹೇಳೋದಾ?" ನನ್ನ ಮಾತು ಅವನನ್ನು ದಿಗಿಲು ಮಾಡಿದ ಹಾಗೆ ಕಂಡಿತು, ಅದನ್ನು ನೋಡಿ ನಾನೇ ಮುಂದುವರಿದೆ " ಸಾಹೇಬ್ರೂ ತುಂಬಾನೇ ಸಿಟ್ಟಲ್ಲಿ ಇದ್ದಾರೆ, ಏನ್ಮಾಡ್ತೀಯಾ  ಈಗ, ನಿಂದೆಲ್ಲಾ ವಿಷ್ಯ ಅವ್ರಿಗೆ ಗೊತ್ತಾಯ್ತು, ರುದ್ರ ಸಾಹೇಬ್ರು ಎಲ್ಲಾ ಅವ್ರಿಗೆ ಹೇಳಿದ್ರು "  ಸುಮ್ಮನೇ ಹೇಳ್ದೆ, ಬಾಣ ನೇರ ಗುರಿಗೇ ತಾಗ್ತು.

 " ನೋಡ್ದ್ರಾ ಸಾರ್ ಆ ರುದ್ರಪ್ಪಾನೇ ಹೇಳ್ದ್ರು, ನಾನ್ ಹೇಳ್ದ್ ಹಾಗೇ ಹೇಳು ನೀರಿಗೆಂತ ದುಡ್ಡ್ ತಗೊಳ್ಳೋದು ಸಾಹೇಬ್ರಿಗೆ ಹೇಳಲ್ಲ ಅಂದ್ರೂ ಸಾರ್, ರಾತ್ರೆ ನೀನು ಇಲ್ಲಿರಬೇಕು ಅಂತಾನೂ ಇಲ್ಲ, ಬೇಕಾದರೆ ಮನೇಗ್ ಹೋಗೂ ಬೆಳಿಗ್ಗೆ ಬಂದರೆ ಸಾಕೂ ಅಂದ್ರು, ಅದಕ್ಕೇ ಅವ್ರ ಹೇಳ್ದ ಹಾಗೇ ಮಾಡ್ದೆ,  ನಂಗೇ ನೂ ಗೊತ್ತಿಲ್ಲ  ಸಾರ್, ನಾನು ಸಂಸಾರಸ್ಥ" .
ಅಂದ.  ಇದರರ್ಥ ಈ ಎರಡು ದಿನಗಳಿಂದ ರಾತ್ರೆ ಈತ ಡ್ಯೂಟಿಯಲ್ಲಿರಲೇ ಇಲ್ಲ, ಹಾಗಾದರೆ ನೀರು ಖಾಲಿಯಾದ್ರಲ್ಲಿ ರುದ್ರನ ಕೈವಾಡವೇ ಇದೆ ಅನ್ನುವುದರಲ್ಲಿ ನನಗೆ ಸಂಶಯ ಉಳಿಯಲಿಲ್ಲ. ಇವ್ನಿಗೂ ಕುಡಿಯೋ ಅಭ್ಯಾಸ ಇರೋದ್ರಿಂದ, ಹ್ಯಾಗ್ ಹ್ಯಾಗೋ ಪುಡಿಕಾಸು ಮಾಡ್ಕೋತಾ  ಇರ್ತಾನೆ
." ಸರಿ,  ಇನ್ಮೇಲೆ ಹಾಗೆಲ್ಲಾ ಮಾಡ್ಬೇಡ ಆಯ್ತಾ, ಈಗ ನೀನು ಒಂದ್ ಕೆಲ್ಸ ಮಾಡು, ನಾನು ಸಾಹೇಬ್ರನ್ನ ಕರ್ಕೊಂಡು ಬರ್ತೀನಿ, ನೀನು ನಂಗೇನೂ ಗೊತ್ತಿರಲಿಲ್ಲ, ನಾನು ರಜೆಲಿದ್ದೆ, ಈ ಊರವ್ರು ಯಾರೋ ಬಂದು ಜೋರು ಮಾಡ್ದ್ರು, ನೀರ್ ಬಿಟ್ಟಿಲ್ಲಾ ಯಾಕೇ ಅಂತ, ಅದ್ನೇ ನಿಮ್ಗೆ ಹೇಳ್ದೆ, ನಂಗೊತ್ತಿರಲಿಲ್ಲ, ತಪ್ಪಾಯ್ತು ಅಂತ ಹೇಳು, ಮುಂದೆ ಹೀಗೆಲ್ಲಾ ತರ್ಲೆ ಮಾಡ್ಬೇಡ ಆಯ್ತಾ"  ಎಂದೆ.   
"ಸರಿ ಸಾರ್, ನೀವ್ ಹೇಳ್ದ ಹಾಗೇ ಕೇಳ್ತೀನಿ, ಇನ್ನು ಆ ರುದ್ರಪ್ಪಾ ಹೇಳ್ದ ಹಾಗೆ ನಮ್ಮಪ್ಪನಾಣೇ ಕೇಳೋಲ್ಲ,......  ಸರ್..... ಅದೇ ನೀರಿನ್ ವಿಷ್ಯ...!!!!"     ನಂಗೆ ಬೇಕಾದದ್ದೂ ಅದೇ
" ಸರಿ ಬಿಡು ಅದೆಲ್ಲಾ ನಾನು ನೋಡ್ಕೋತೇನೆ."

ಪಂಪ್ ಹೌಸಿನಿಂದ ಹೊರ ಬಿದ್ದೆ. ದೊಡ್  ಸಾಹೇಬ್ರನ್ನ ಕರೆತರುವ ಅವಶ್ಯಕಥೆ ಬೀಳಲೇ ಇಲ್ಲ.

ಮನೆಗೆ ಬಂದಾಗ ನನ್ನ ಗೃಹ ಮಂತ್ರಿ ಭಾರೀ ಖುಷಿಯಲ್ಲಿದ್ದ ಹಾಗಿತ್ತು. " ರೀ ನೀವು ನಿನ್ನೆ ತಂದ ಸೀರೆ ನನ್ನಕ್ಕ ನೋಡಿ ತುಂಬಾ ಸಂಭ್ರಮ ಪಟ್ಟಳು, ಅವಳಿಗೆ ಆ ಬಣ್ಣವೆಂದರೆ ತುಂಬಾನೇ ಇಷ್ಟ, ಅವಳಿಗೇ ಕೊಟ್ಬಿಡೋಣವಾ?" "ಆಯ್ತಪ್ಪ, ನಿಂಗೆ ಬೇಡವಾದರೆ ಕೊಡು "  ನಾನೆಂದೆ.
 "ಅದ್ಯಾಕ್ರೀ ಹಾಗೆ ಹೇಳ್ತೀರಾ?, ನನ್ನ ಪತಿದೇವರು ಪ್ರೀತಿಯಿಂದ ನನಗೆಂತ ತಂದದ್ದು ನಾನು ಯಾರಿಗೂ ಕೊಡಲ್ಲ,"
ಓ ಇದಪ್ಪಾ ವರಸೆ!!!    "ಸರಿ ಸರಿ ಅಂತಹದ್ದೇ ಮತ್ತೊಂದು ತಂದು ಅವರಿಗೆ ಕೊಟ್ತರಾಯ್ತು"  ಸ್ವರ ತಗ್ಗಿಸಿದೆ
  ಆದರೂ ಕೇಳಿ  ಇವರ ಮುಖ ಊರಗಲವಾಯ್ತು.
"ಅಂದ ಹಾಗೇ ಕನ್ಯಾಲ್ನ  ಹೆಂಡತಿ ಪುನಹ ಮನೆಗೆ ಹೊರಟಳಂತೆ"  ನಾನು
"ಅವರ ಹೆಂದತಿಗೆ  ಕಪ್ಪುಸೀರೆ, ಮುತ್ತಿನ ಹಾರ ಕೊಡಿಸಲು ಹೇಳಿ ಎಲ್ಲ ಸರಿಯಾಗುತ್ತೆ"  ಎಂದಳು ಸಾಮ್ರಾಜ್ಞಿ.
"ನಿನಗೆ ಹೇಗೇ ಗೊತ್ತು?" ಕೇಳಿದೆ ಅಚ್ಚರಿಯಿಂದ.
" ಕೆಲವು ರಹಸ್ಯಗಳನ್ನು ಗಂಡಂದಿರಿಗೆ ಹೇಳ ಕೂಡದಪ್ಪಾ" ಕುಟುಕಿದಳು ಸಿ ಐ ಡಿ.
ಸಿಕ್ಕಿತಲ್ಲಾ ಸ್ನೇಹಿತನ ಖುಷಿಯ ಬೀಗದ  ಕೈ!!!!

ಅಷ್ಟರಲ್ಲಿ ಬಾಗಿಲ ಸದ್ದಾಯ್ತು.
"ಏನೂ ಗೌಡರೆ ಇಷ್ಟು ದೂರ?"
"ಮನೆಯವ್ರು ಇನ್ನೊಂದ್ ಮಹಡಿ ಕಟ್ಕೋಬೇಕೂ ಅಂತ ಇದ್ದಾರೆ, ಅದೇ ಅಡಿಪಾಯ ಭದ್ರ ಇದೆಯೋ ಇಲ್ಲವೋ ಗೊತ್ತಿಲ್ಲ, ಏನ್ಮಾಡೋದೂ ಅಂತ ನಿಮ್ಮನ್ನ  ಕೇಳೋಕೆ ಬಂದಿದ್ದೇನೆ" ಅಂದ ಗೌಡ.
    "ಗೌಡರೇ ಹಣ  ಇದ್ದರೆ ಈಗ ಏನು ಬೇಕಾದರೂ ಮಾಡಬಹುದು, ಇತ್ತೀಚೆಗೆ ಹಾರೋ ಬೂದಿ(Fly ash  ) ಯಿಂದ ಮಾಡಿದ ಇಟ್ಟಿಗೆಗಳು ಸಿಗುತ್ತವೆ ಅವುಗಳು ತುಂಬಾನೇ ಹಗುರ , ಕಟ್ಟಲೂ ಸುಲಭ, ಸಿಮೆಂಟಿನ ಖರ್ಚೂ ಉಳಿಯುತ್ತೆ, ಮಾರ್ಕೇಟಿನಲ್ಲಿ ಬೇಕಾದಷ್ಟು ಬ್ರಾಂಡ ಸಿಗುತ್ತೆ ಬಿಡಿ" ಎಂದೆ.  ಅಷ್ಟರಲ್ಲಿ ಕಾಫಿ ಬಂತು.
"ಮತ್ತೆ ನಮ್ಮ ಕುರಿಗಳಿಗೆ ಕಡಿಮೆ ಖರ್ಚಿನಲ್ಲಿ ದೊಡ್ಡಿ ಮಾಡ್ಸ್ಕೋಬೇಕಲ್ಲಾ, "  ಕಾಫಿ  ಕುಡಿಯುತ್ತಾ ಕೇಳಿದ ಗೌಡ.
"ಇದಕ್ಕೂ ಒಂದು ಸುಲಭ  ಉಪಾಯ ಹೇಳಿಕೊಡ್ತೇನೆ, ಮುಂದಿನ ರವಿವಾರ ಮನೆಗೆ ಬನ್ನಿ ವಿವರವಾಗಿ ಹೇಳ್ಕೊಡ್ತೇನೆ. ನೀವೇ ಮನೆಯಲ್ಲೇ ಜಾಸ್ತಿ ಖರ್ಚಿಲ್ಲದೇ ಕಾಂಕ್ರೀಟಿನ ಚಾವಣಿ ಮಾಡ್ಕೋಬಹುದು. ಖಾಂಡಿತಾ ಬನ್ನಿ "

************        *********************                                      **********************************


" ಸಾರ್ ಸಾಹೆಬ್ರ ಯಾವುದೋ ಕಾರ್ಡ ಕಳೆದು ಹೋಗಿದೆಯಂತೆ ನೋಡಿದ್ರಾ ನೀವು? ನೋಡಿ  ಕರೀತಾ ಇದ್ದಾರೆ"
ಶೇಟಿ ಮಾರನೆಯ ದಿನ ಬೆಳಿಗ್ಗೆ ಆಫೀಸಿಗೆ ಬಂದ ಕೂಡಲೇ ಕರೆದು ಹೇಳಿದ. ನಾನು ಒಳ ಹೋದೆ. ರುದ್ರ ಮತ್ತು ಸಾಹೆಬ್ರು ರೂಮೆಲ್ಲಾ ತಾಕಲಾಡುತ್ತಿದ್ದರು.
 " ಏನಾಯ್ತು ಸಾರ್, ಸಾರ್ ಏನು ಕಳೆದುಕೊಂಡಿರಿ?"   ಕೇಳಿದೆ ನಾನು.
                                                  
"ಸಾಹೆಬ್ರ ಕ್ರೆಡಿಟ್ ಕಾರ್ಡ ಕಳೆದು ಹೋಗಿದೆಯಂತೆ , ನೀವೆಲ್ಲಾದರೂ ನೋಡಿದ್ರಾ?"  ರುದ್ರ ಕೇಳಿದ. ನಿನ್ನೆಯ  ಬೆಳಗಿನ ಘಟನೆಯ  ಬಳಿಕ ಆತ  ಸಾಹೇಬರ ಪಾರುಪತ್ಯ ವಹಿಸಿಕೊಂಡಿದ್ದ. ನಾನೆಂದೆ  " ಇಲ್ಲಪ್ಪ..".
"ನಿನ್ನೆ ಮಾರ್ಕೇಟಿಗೆ ಹೋಗಬೇಕು ಅಂದಿದ್ದರಲ್ಲಾ ಸಾರ್ ಅಲ್ಲೆಲ್ಲಾದರೂ ಮಿಸ್ ಆಯ್ತಾ ಹೇಗೆ?"  ಕೇಳಿದ್ದು ಸಾಹೇಬರನ್ನಾದರೆ ಉತ್ತರ  ನಿರೀಕ್ಷಿಸಿದಂತೆಯೇ ರುದ್ರನಿಂದ  ಬಂತು.  " ನಿನ್ನೆ ಎಲ್ಲಿಗೂ ಹೋಗಲಿಲ್ಲ ಅಲ್ಲ ಸಾರ್ ನೀವೂ?  ನಾನ್ ಹೇಳಿದ  ಹಾಗೇ ನಿಮ್ಮ  ಕಾರ್ಡ್ ಬ್ಲಾಕ್ ಮಾಡಿಸಾರ್"   
ಯಾರ ಉತ್ತರಕ್ಕೂ ಕಾಯದೇ ಡಯಲ್ ಮಾಡಿ ರಿಸೀವರ್ ಸಾಹೇಬರ ಕಡೆ ನೀಡಿ, ಅವರು ತೆಗೆದುಕೊಳ್ಳುವುದಲ್ಲಿದ್ದಾಗ , ತಾನೇ ಅವರ ಡೈರಿಯಿಂದ ವಿವರ ಹೇಳಿ ಕಾರ್ಡ ಕ್ಯಾನ್ಸಲ್ ಮಾಡಿಸಿಯೇ ಬಿಟ್ಟ.
ಈ ಮಧ್ಯೆ ನಾನು "ಸ್ವಲ್ಪ ಯೋಚನೆ ಮಾಡಿ ಸಾರ್, ಎಲ್ಲೆಲ್ಲಿ ಇಟ್ಟಿರಬಹುದು ಅಂತ ಯೋಚನೆ ಮಾಡಿ"  ಅಂತ ಹೇಳಿದ್ದೂ ಅವರು ಗಣನೆಗೆ ತೆಗೆದುಕೊಂಡ  ಹಾಗೇ ಕಾಣಲಿಲ್ಲ.  
ಅಲ್ಲದೇ ತಾನೇಎಲ್ಲಾ ಗೊತ್ತಿದ್ದವನ  ಹಾಗೇ ರುದ್ರ  " ನಿಮ್ಗೆ ಇದೆಲ್ಲಾ  ಗೊತ್ತಾಗೋಲ್ಲ ರಾವ್ ಅವರೇ , ನನ್ನ ಭಾವ ಹೀಗಾಗಿ ಕಾರ್ಡ ಕ್ಯಾನ್ಸಲ್ ಮಾಡದೇ ತಮ್ಮ  ೭೫ ಸಾವಿರ ರೂಪಾಯಿ ಕಳಕೊಂಡರು ಗೊತ್ತಾ..? ನಿಮ್ಮ ಹತ್ತಿರ ಕಾರ್ಡ್ ಇದ್ದರಲ್ವಾ ಗೊತ್ತಾಗೋದು" ಎಂದಿದ್ದ.

"ಅದೆಲ್ಲಾ ಇರಲಿ, ಸಾರ್ ನೀವು ಈಗಲೇ ಪೋಲೀಸ್ ಕಂಪ್ಲೇಂಟ್ ಕೊಡಿ,  ಸಾರ್ ಕಳ್ಳ  ಮಾಲು ಸಮೇತ ಸಿಕ್ಕಿ ಬಿಡ್ತಾನೆ, ನೀವು ಮಾಡ್ತೀರಾ ನಾನೇ ಮಾಡಲಾ? ನನ್ನ ಸ್ನೇಹಿತನೊಬ್ಬ ಒಳ್ಳೆ ಪೋಲೀಸ್ ಇದ್ದಾನೆ" ರುದ್ರ ಕೇಳಿದಾಗ   ಸಾಹೇಬರು ಯಾಕೋ ಯೋಚಿಸುತ್ತಿದ್ದ ಹಾಗೇ ಕಂಡಿತು.
ನಾನು ಈಗ ಬಾಯ್ಬಿಟ್ಟೆ   " ಕಾರ್ಡ್ ಕ್ಯಾನ್ಸಲ್ ಮಾಡಿ ಆಯ್ತಲ್ಲ , ಇನ್ನೇನು ಬಿಡಿ ಸಾರ್"
" ಒಳ್ಳೆ ಕಥೆ ಆಯ್ತಲ್ಲ, ನಿಮ್ದು ರಾವ್ ಅವರೇ, ಯಾಕೆ ದುಡ್ಡು ಹೋದರೆ ಸಾಹೇಬ್ರದ್ದಲ್ವಾ ನಿಮ್ಗೇನು ಅಂತಾನಾ?"
ರುದ್ರ ನನ್ನ ಕೀಳು ಮಾಡಲೆಂದೇ ಹೇಳಿದ ಹಾಗಿತ್ತು .
ನನಗೆ ತುಂಬಾ ಬೇಸರ ವಾಯ್ತು. ಮತ್ತೆ ಅಲ್ಲಿ ನಿಲ್ಲ ಲಾಗಲಿಲ್ಲ ,
ಹೊರ ಹೊರಟೆ.

 

(ಮುಂದುವರಿಯುವುದು) 

 

Rating
No votes yet

Comments