ದಿ ಕಲರ್ ಪರ್ಪಲ್ - ನಾ ನೋಡಿದ ಸಿನೆಮಾ

ದಿ ಕಲರ್ ಪರ್ಪಲ್ - ನಾ ನೋಡಿದ ಸಿನೆಮಾ



ಇತ್ತೀಚೆಗೆ ನೋಡಿದ ಚಿತ್ರ ‘ದಿ ಕಲರ್ ಪರ್ಪಲ್’.  ಅಲೈಸ್ ವಾಕರ್ ಎಂಬುವವರ ನಾವೆಲ್ ಆಧಾರಿತವಾದ ಈ ಚಿತ್ರ ತೆರೆಗಂಡಿದ್ದು ೧೯೮೫ ರಲ್ಲಿ.  ಇದರ ನಿರ್ದೇಶಕರು ಸ್ಟೀವನ್ ಸ್ಪೀಲ್ ಬರ್ಗ್. ಇದು ಸಿಲಿ ಎಂಬ ಆಫ್ರಿಕನ್ ಅಮೇರಿಕನ್ ಹುಡುಗಿಯ ಕಥೆ.  ಕಥೆ ಶುರುವಾಗೋದು ಹೀಗೆ.  ಸಿಲಿಯ ತಾಯಿ ಹೆರಿಗೆ ನೋವಿನಲ್ಲಿರುತ್ತಾಳೆ.  ಹೆಣ್ಣು ಮಗುವೊಂದು ಜನಿಸುತ್ತದೆ.  ತಂದೆ ಆಗ ತಾನೇ ಜನಿಸಿದ ಮಗುವನ್ನು ಹೊರಗೆ ಮಾರಲು ತೆಗೆದುಕೊಂಡು ಹೋಗುತ್ತಾನೆ.  ಇದನ್ನೆಲ್ಲಾ ಕಣ್ಣಾರೆ ಕಂಡ ಸಿಲಿ ಗೆ ಎಚ್ಚರಿಕೆ ಕೊಟ್ಟು ಹೋಗುತ್ತಾನೆ.  ಸುಮಾರು ೧೯೦೦ ರ ದಶಕದಲ್ಲಿ ಈ ಅಶಿಕ್ಷಿತ ಬಡ ಕಪ್ಪು(ಆಫ್ರಿಕನ್) ಹೆಣ್ಣು ಮಕ್ಕಳ ಶೋಷಣೆ ಹೇಗೆ ನಡೆಯುತ್ತಿತ್ತು? ಗಂಡಸರ ದಬ್ಬಾಳಿಕೆ, ಅಮೇರಿಕನ್ ವೈಟ್ ನವರ ದರ್ಪ, ಅಶಿಕ್ಷಿತ ಕಪ್ಪು ಜನರ ಅದ್ರಲ್ಲೂ ಹೆಣ್ಣುಮಕ್ಕಳ ಅಸಹಾಯಕತೆಯನ್ನು ಚಿತ್ರ ಕಣ್ಣಿಗೆ ಕಟ್ಟುವಂತೆ ತೋರಿಸುತ್ತಾ ಹೋಗುತ್ತದೆ. 

ಸಿಲಿಗೆ ೧೪ ವರ್ಷ, ಆಕೆಯ ತಾಯಿ ಹೆತ್ತು, ಹೆತ್ತು ಸುಸ್ತಾದಳೆಂದು, ಸಿಲಿಯ ತಂದೆ, ಸಿಲಿಯ ಮೇಲೆ ಬಲಾತ್ಕಾರ ಮಾಡುತ್ತಾನೆ.  ಇದರಿಂದಾಗಿ ಸಿಲಿಗೆ ೨ ಮಕ್ಕಳಾಗುತ್ತವೆ.  ಅವರಿಬ್ಬರನ್ನೂ ಮಕ್ಕಳಿಲ್ಲದ ಅಮೇರಿಕನ್ ವೈಟ್ ದಂಪತಿಗಳಿಗೆ ಮಾರಿಬಿಡುತ್ತಾನೆ. ತಾಯಿ ಸಾಯುತ್ತಾಳೆ.  ಸಿಲಿ ತನ್ನ ತಂದೆಯ ಹೆಂಡತಿಯಾಗುತ್ತಾಳೆ! ಸಿಲಿಗೊಬ್ಬಳು ಅತ್ಯಂತ ಪ್ರೀತಿ ಪಾತ್ರಳಾದ ತಂಗಿ ನೆಟ್ಟಿ. ಈಕೆಯ ಮೇಲೆ ತಮ್ಮ ತಂದೆಯ ಕಣ್ಣು ಬೀಳದಂತೆ ಕಾಪಾಡುವ ಸಿಲಿ ಆಕೆಯನ್ನು ಶಾಲೆಗೆ ಹೋಗುವಂತೆ ನೋಡಿಕೊಳ್ಳುತ್ತಾಳೆ.  ಚರ್ಚ್ ನಲ್ಲಿ ನೆಟ್ಟಿಯನ್ನು ನೋಡಿದ ವಿಧುರನೊಬ್ಬ ಸಿಲಿಯ ತಂದೆಯ ಬಳಿ ಬಂದು ಆಕೆಯನ್ನು ಮದುವೆ ಮಾಡಿಕೊಡಲು ಕೇಳುತ್ತಾನೆ. ಆದರೆ ಸಿಲಿಯ ತಂದೆ ಸಿಲಿಯನ್ನೇ ಮಾಡಿಕೋ ಎಂದು ಹೇಳುತ್ತಾನೆ.  ಆಕೆ ಚೆನ್ನಾಗಿಲ್ಲ, ಕಪ್ಪು, ಆಕೆಯ ನಗು ಚೆನ್ನಾಗಿಲ್ಲ, ಆಕೆ ಈಗಾಗಲೇ ಹಾಳಾಗಿದ್ದಾಳೆ, ಇದೆಲ್ಲವೂ ಈ  ವಿಧುರನ ಕಂಪ್ಲೇಂಟ್.  ಆದರೆ ಅದಕ್ಕೆಲ್ಲವೂ ಸಮಜಾಯಿಶಿ ಕೊಡುತ್ತಾನೆ ಸಿಲಿಯ ತಂದೆ.  ವಧು ಪರೀಕ್ಷೆಯಂತೂ ಥೇಟ್ ಪ್ರಾಣಿಗಳ ವ್ಯಾಪಾರದ ಹಾಗೇ ಭಾಸವಾಗುತ್ತದೆ.  ಆಕೆಯನ್ನು ತಿರುಗಿಸಿ, ನಡೆಸಿ ತೋರಿಸುವ ತಂದೆ, ಒಪ್ಪಿಕೊಳ್ಳುವ ಈತ. ಸಿಲಿಯ ಮದುವೆಯಾಗುತ್ತದೆ.

ಸಿಲಿಯ ಪರಿಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ಈಕೆಯ ಗಂಡ ಆಲ್ಬರ್ಟ್ ಈಕೆಯನ್ನು ಗುಲಾಮಳ ಹಾಗೇ ನಡೆಸಿಕೊಳ್ಳುತ್ತಾನೆ.  ಅವಳು ಆತನನ್ನು ಮಿಸ್ಟರ್. ಎಂದೇ ಕರೆಯುವುದು, ಆತನ ಶೇವ್ ಮಾಡುವುದು, ಆತನ ಮೊದಲಿನ ಹೆಂಡತಿಯ ಮಕ್ಕಳನ್ನು ನೋಡಿಕೊಳ್ಳುವುದು ಹೀಗೇ.  ರಾತ್ರಿಯಾದರೆ ಆತನ ಲೈಂಗಿಕ ದೌರ್ಜನ್ಯವನ್ನು ಅದೊಂದು ಬಿಸಿನೆಸ್! ಎಂಬಂತೆ ತಡೆದುಕೊಳ್ಳುತ್ತಾಳೆ.  ಹೀಗಿರುವಾಗ ಅಲ್ಲಿಗೆ ಓದಲೆಂದು ತಂಗಿ ನೆಟ್ಟಿ ಬರುತ್ತಾಳೆ. ಸಿಲಿ ಆನಂದದಿಂದ ನಲಿಯುತ್ತಾಳೆ. ನಾವೇನಾದರೂ ದೂರವಾದರೆ, ನಿನಗೆ ಕಾಗದ ಬರೆಯುತ್ತೇನೆ.  ಅದನ್ನೂ ಓದಲಿಕ್ಕಾಗಿ ನೀನು ಓದು ಕಲಿ ಎಂದು ನೆಟ್ಟಿ ಸಿಲಿಗೆ ಟೀಚರ್ ಕೂಡ ಆಗುತ್ತಾಳೆ.  ಆ ದೃಶ್ಯವಂತೂ ಬಹಳ ಮನೋಜ್ಞವಾಗಿ ಮೂಡಿಬಂದಿದೆ.  ಈ ನೆಟ್ಟಿಯ ಮೇಲೆ ರಾಬರ್ಟ್ ನ ಕಣ್ಣು ಬೀಳುತ್ತದೆ.  ಅವಳು ತಿರಸ್ಕರಿಸುತ್ತಾಳೆ.  ಅವಳನ್ನು ಒದೆದು ಮನೆಯಿಂದ ಆಚೆ ಹಾಕುತ್ತಾನೆ.  ಸಾವು ಕೂಡ ನಮ್ಮನ್ನು ದೂರ ಮಾಡೋಕ್ಕಾಗಲ್ಲ ಅಂತಾ ಚಾಲೆಂಜ್ ಹಾಕಿ ನೆಟ್ಟಿ ಹೋಗುತ್ತಾಳೆ.  ಸಿಲ್ಲಿಯ ಶಬ್ದ ನಿನಗೇ ಎಳ್ಳಷ್ಟೂ ಕೇಳುವುದಿಲ್ಲ ಅಂತಾ ಇವ ಕೂಡ ಚಾಲೆಂಜ್ ಹಾಕುತ್ತಾನೆ.  ಸಿಲಿ ಈ ಘಟನೆಯಾದ ಮೇಲೆ ಇನ್ನಷ್ಟು ಮೆತ್ತಗಾಗಿಬಿಡುತ್ತಾಳೆ.  ಎಲ್ಲ ರೀತಿಯ ದೌರ್ಜನ್ಯವನ್ನೂ ಕೂಡ ಒಪ್ಪಿಕೊಂಡುಬಿಡುತ್ತಾಳೆ.  ಯಾವ ಹಂತದಲ್ಲಿಯೂ ಗಂಡನನ್ನು ವಿರೋಧಿಸುವುದೇ ಇಲ್ಲ. ತಂಗಿ ಒಂದಾದ ಮೇಲೊಂದು ಕಾಗದ ಬರೆಯುತ್ತಾ ಹೋಗುತ್ತಾಳೆ.  ಸಿಲಿಗೆ ಯಾವುದೂ ಸಿಗುವುದೇ ಇಲ್ಲ. 

ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯವನ್ನು, ಶೋಷಣೆಯನ್ನು ಇಷ್ಟರವರೆಗೆ ಈ ಚಿತ್ರದಲ್ಲಿ ನೋಡುತ್ತಾ ಹೋಗುವವರಿಗೆ ರೆಬೆಲ್ ನಂತೆ ಕಾಣಿಸುತ್ತಾಳೆ ‘ಸೋಫಿಯಾ’.  ಸಿಲಿಯ ಮಲಮಗ ಈಕೆಯನ್ನು ಪ್ರೀತಿಸುತ್ತಾನೆ.  ತಂದೆಗೆ ಹೆದರಿ ಮದುವೆಯಾಗಲು ನಿರಾಕರಿಸುತ್ತಾನೆ.  ಆದರೆ ಇವಳು ಅವನನ್ನು ಹೆದರಿಸಿ, ಬೆದರಿಸಿ ಮದುವೆಯಾಗುತ್ತಾಳೆ.  ಅವಳು ಗಂಡನ ಮೇಲೆ ತೀರಾ ದಬ್ಬಾಳಿಕೆ ಮಾಡುತ್ತಾಳೆ.  ಒಂದು ಹಂತದಲ್ಲಿ ಮಲಮಗ ಈಗೇನು ಮಾಡಬೇಕು ಅಂತಾ ಸಿಲಿಯನ್ನು ಕೇಳುತ್ತಾನೆ.  ಸಿಲಿ ‘ಹೊಡೆದು ಬುದ್ಧಿ ಕಲಿಸು’ ಎನ್ನುತ್ತಾಳೆ!  ನಂತರ ಸೋಫಿಯಾ ಬಂದು ಸಿಲಿಗೆ ಹೇಳುತ್ತಾಳೆ ‘ಹೆಣ್ಣುಮಗಳೊಬ್ಬಳು ಗಂಡಸರಿರುವ ಫ್ಯಾಮಿಲಿಯಲ್ಲಿ ಸೇಫ್ ಆಗಿರಲು ಸಾಧ್ಯವಿಲ್ಲ.  ಹಾಗಾಗೀ ನಾನು ನನ್ನ ಜೀವನವಿಡೀ ನನ್ನ ತಂದೆಯೊಟ್ಟಿಗೆ, ಅಂಕಲ್ ಗಳೊಟ್ಟಿಗೆ, ಅಣ್ಣಂದಿರೊಟ್ಟಿಗೆ ಫೈಟ್ ಮಾಡುತ್ತಲೇ ಬಂದೆ. ಆದರೆ ನನ್ನ ಕನಸು ಮನಸಿನಲ್ಲಿಯೂ ನೆನೆಸಿರಲಿಲ್ಲ, ನನ್ನ ಮನೆಯಲ್ಲೂ ಕೂಡ ನಾನು ಫೈಟ್ ಮಾಡಬೇಕೆಂದು!.  ಇದು ಆಗಿನ / ಈಗಿನ? ಹೆಣ್ಣು ಮಕ್ಕಳ ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ನಿರೂಪಿಸುತ್ತದೆ. ಈ ರೆಬೆಲ್ ಸೋಫಿಯಾ, ನಿನ್ನ ಮಕ್ಕಳನ್ನು ಜೀತಕ್ಕೆ ಬಿಡುವೆಯಾ ಎಂದು ಕೇಳಿದ ಮೇಯರ್ (ಅಮೆರಿಕನ್) ನ ಹೆಂಡತಿಯೊಟ್ಟಿಗೆ ಜಗಳವಾಡಿ, ಬಿಡಿಸಲು ಬಂದ ಮೇಯರ್ ಗೆ ಮುಖಕ್ಕೆ ಗುದ್ದಿ ಜೈಲು ವಾಸಿಯಾಗುತ್ತಾಳೆ.  ಅಲ್ಲಿಂದ ಸುಮಾರು ವರ್ಷಗಳ ಮೇಲೆ ಹೊರ ಬಂದರೂ, ಅದೇ ಮೇಯರ್ ನ ಹೆಂಡತಿಯ ಹತ್ತಿರ ಗುಲಾಮಳಾಗಿ ಕೆಲಸ ಮಾಡಬೇಕಾಗಿ ಬರುತ್ತದೆ. ಬಿಳಿ ಜನರು ಹಾಗೂ ಕಪ್ಪು ಜನರ ನಡುವಿನ ಸಂಘರ್ಷವನ್ನು ಎತ್ತಿ ತೋರಿಸುತ್ತದೆ. ಮಕ್ಕಳನ್ನು ಬಹಳ ಪ್ರೀತಿಸುತ್ತಿದ್ದ ಸೋಫಿಯಾಳ ಜೀವನ ಈ ಒಂದು ಘಟನೆಯಿಂದ ಸಂಪೂರ್ಣ ಬದಲಾಗಿಬಿಡುತ್ತದೆ.

ಗಂಡ ರಾಬರ್ಟ್ ತನ್ನ ಮನೆಗೆ ಅವನ ಪ್ರೇಮಿ ಹಾಗೂ ಹಾಡುಗಾರ್ತಿ ಕಾಯಿಲೆಯಾಗಿ ಒದ್ದಾಡುತ್ತಿದ್ದ ಶುಗ್ ಅವೇರಿಯನ್ನು ಮನೆಗೆ ಕರೆತಂದುಬಿಡುತ್ತಾನೆ. ಅದುವರೆವಿಗೂ ಸಿಲಿಗೆ ತನ್ನ ಗಂಡನ ಹೆಸರು ರಾಬರ್ಟ್ ಎಂದು ಕೂಡ ಗೊತ್ತಿರುವುದಿಲ್ಲ.  ರಾಬರ್ಟ್ ಶುಗ್ ಅವೇರಿ ಗೆ ತೋರಿಸುವ ಅದಮ್ಯ ಪ್ರೀತಿ, ಅದನ್ನು ಕೂಡ ವಿರೋಧಿಸದ ಸಿಲಿ, ಆಕೆಯ ಕಾಯಿಲೆ ಗುಣಗೊಳ್ಳಲು ಸಹಾಯ ಮಾಡಿ, ಶುಗ್ ಅವೇರಿಯ ಪರಮಾಪ್ತ ಗೆಳತಿಯಾಗಿಬಿಡುತ್ತಾಳೆ.  ಒಂದು ಸಂದರ್ಭದಲ್ಲಿ ಇವರಿಬ್ಬರ ನಡುವಿನ ಪ್ರೀತಿ ಮತ್ತೊಂದು ಮಜಲನ್ನು ಕೂಡ ದಾಟಿಬಿಡುತ್ತದೆ. ಗುಣವಾದ ಶುಗ್ ಅವೇರಿ ಬೇರೆ ದೇಶಕ್ಕೆ ಹೋದವಳು ಮರಳಿ ಬರುವುದು ಜೊತೆಯಾಗಿ ಗಂಡನೊಟ್ಟಿಗೆ.  ಇದು ರಾಬರ್ಟ್ ಗೆ ಸ್ವಲ್ಪ ಮಟ್ಟಿಗೆ ಅಸಮಾಧಾನ ತರುತ್ತದೆ.  ಈ ಸಮಯದಲ್ಲಿ ಶುಗ ಅವೇರಿಗೆ ನೆಟ್ಟಿ ಬರೆದಿದ್ದ ಕಾಗದ ಅಕಸ್ಮಾತ್ತಾಗಿ ಸಿಗುತ್ತದೆ.  ತಂಗಿ ಸತ್ತೇ ಹೋಗಿದ್ದಾಳೆ ಎಂದುಕೊಂಡಿದ್ದ ಸಿಲಿಗೆ ಮರಳಿ ಬಾಲ್ಯ ಬಂದುಬಿಡುತ್ತದೆ.  ಎಲ್ಲ ಕಾಗದಗಳನ್ನು ಹಗಲು ರಾತ್ರಿ, ಊಟ ನಿದ್ರೆ ಬಿಟ್ಟು ಓದುತ್ತಾಳೆ.  ಮೊದಲ ಬಾರಿಗೆ ಸಿಲಿಯಲ್ಲಿ ಜೀವಂತಿಕೆ ಮೂಡುತ್ತದೆ.  ಹಬ್ಬಕ್ಕೆ ಎಲ್ಲರೂ ಊಟಕ್ಕಾಗಿ ಸೇರಿದ್ದಾಗ ಗಂಡನನ್ನು ಪ್ರೊಟೆಸ್ಟ್ ಮಾಡುತ್ತಾಳೆ.  ಮೊತ್ತಮೊದಲ ಬಾರಿಗೆ ತಾನು ಶುಗ್ ಅವೇರಿಯೊಟ್ಟಿಗೆ ಹೋಗಿಬಿಡುತ್ತೇನೆಂಬ ನಿರ್ಧಾರವನ್ನು ಪ್ರಕಟಿಸುತ್ತಾಳೆ.  ಆತ ವಿರೋಧಿಸುತ್ತಾನೆ, ಕಿರುಚುತ್ತಾನೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ.  ನನ್ನ ಸಾವನ್ನು ನೋಡಿ ಹೋಗು ಎನ್ನುತ್ತಾನೆ. ಅದಕ್ಕೂ ನಾನು ರೆಡಿ ಅಂದು ಬಿಡುತ್ತಾಳೆ ಸಿಲಿ! 
ಸಿಲಿ ಬಿಟ್ಟು ಹೋದ ನಂತರ ರಾಬರ್ಟ್ ಏಕಾಂಗಿಯಾಗಿಬಿಡುತ್ತಾನೆ.  ದೂರವಾಗಿದ್ದ ಸೋಫಿಯಾ ಹಾಗೂ ಅವಳ ಗಂಡ ಮತ್ತೆ ಒಂದಾಗುತ್ತಾರೆ.  ಇದುವರೆವಿಗೂ ತನ್ನ ಮಕ್ಕಳು ತನಗೆ ತಮ್ಮ, ತಂಗಿ ಕೂಡ ಎಂದು ಕೊರಗುತ್ತಿದ್ದ ಸಿಲಿ ಗೆ ಆತ ತನ್ನ ಮಲತಂದೆಯೆಂಬ ಸತ್ಯ ಗೊತ್ತಾಗುತ್ತದೆ.  ತನ್ನ ನಿಜ ತಂದೆ ತನಗಾಗಿ ಬಿಟ್ಟು ಹೋಗಿದ್ದ ಮನೆ ಹಾಗೂ ಅಂಗಡಿ ಮತ್ತೆ ದೊರಕುತ್ತದೆ.  ತಂಗಿಯ ಕಾಗದಗಳಿಂದ ತನ್ನ ಮಕ್ಕಳು ತಂಗಿಯ (ಟೀಚರ್) ರಕ್ಷಣೆಯಲ್ಲಿ ಆಫ್ರಿಕಾದಲ್ಲಿ ಬೆಳೆಯುತ್ತಿದ್ದಾರೆ ಎಂಬುದು ತಿಳಿಯುತ್ತದೆ.  ಪಶ್ಚಾತ್ತಾಪ ಅನುಭವಿಸುವ ರಾಬರ್ಟ್, ತಾನು ಯಾರಿಗೂ ಗೊತ್ತಾಗದಂತೆ ಉಳಿಸಿದ್ದ ಹಣದಲ್ಲಿ ನೆಟ್ಟಿ, ಹಾಗೂ ಸಿಲಿಯ ಮಕ್ಕಳನ್ನು ಇಲ್ಲಿಗೆ ಕರೆದುಕೊಳ್ಳುವ ವ್ಯವಸ್ಥೆ ಮಾಡುತ್ತಾನೆ.  ಇವರೆಲ್ಲರೂ ಒಂದಾದ ಸಂಭ್ರಮದಲ್ಲಿದ್ದರೆ, ದೂರದಲ್ಲಿ ನಿಂತು ನೋಡುತ್ತಿರುವ ರಾಬರ್ಟ್ ನ ಕಡೆ ಕೃತಜ್ಞತೆಯ ನೋಟ ಬೀರುತ್ತಾಳೆ ಆತನ ಪ್ರೇಮಿ ಶುಗ್ ಅವೇರಿ!

ವಿಸೂ : ನಿನ್ನೆಯ ಸಂವಾದದಲ್ಲಿ ಪ್ರಕಟಿತ :-)

 

Rating
No votes yet

Comments