ಇಳೆ - ವರುಣ - ರವಿ.....

ಇಳೆ - ವರುಣ - ರವಿ.....

 

ಬೆಳಿಗ್ಗೆಯಿಂದ ಏನೋ ಒಂಥರಾ ಆಲಸ್ಯವಾಗಿತ್ತು.  ರವಿ  ಅತ್ಯಂತ ತುಂಟತನದಲ್ಲಿ ಕಣ್ಣು ಮುಚ್ಚಾಲೆಯಾಡುತ್ತಾ ಆಡುತ್ತಾ.... ನನ್ನ ಬೆಳಗಿನ ಉತ್ಸಾಹಕ್ಕೆ ಸ್ವಲ್ಪ ನಿಧಾನಗತಿಯನ್ನು ಜೋಡಿಸಿದ್ದ.  ಆದರೂ ನನಗೇಕೋ ಈ ರೀತಿಯ ಮೋಡ ಮುಸುಕಿದ ಆಗಸ, ವಾತಾವರಣ ತುಂಬಾ ಇಷ್ಟವಾಗುತ್ತದೆ.  ಹಗಲಿನಲ್ಲೂ ನಸುಕತ್ತಲ ಛಾಯೆಯನ್ನು ಅನುಭವಿಸುವುದೆಂದರೆ ನನಗದೇನೋ ಒಂದು ರೀತಿಯ ಸಂತೋಷ.  ಹಗಲಿನಲ್ಲಿ ವಿದ್ಯುತ್ ದೀಪ ಬೆಳಗಿಸಿ, ಓದುತ್ತಾ ಕೂರುವುದೊಂದು ಇಷ್ಟವಾದ ಹವ್ಯಾಸ ನನಗೆ.  ಮಧ್ಯೆ ಮಧ್ಯೆ ತನ್ನಿಷ್ಟ ಬಂದಾಗ ಚೂರೇ ಇಣುಕಿ, ತಾನಲ್ಲೇ ಬಾನಿನಲ್ಲಿ ಮುಚ್ಚಿಟ್ಟುಕೊಂಡಿದ್ದೇನೆಂದು ನನಗೆ ತೋರಿಸುತ್ತಾ ಮುದ ಕೊಡುವ ಸೂರ್ಯನನ್ನು ಕಾಯುತ್ತಾ, ಕಂಡಾಗೊಮ್ಮೆ, ಛಕ್ಕನೆ ಬೆಳಕ ಹಾಯಿಸುವ ಜೀವ ಜ್ಯೋತಿಯನ್ನು ಹುಡುಕುತ್ತಾ, ನನ್ನದೇ ಲಹರಿಯ ಬೆನ್ನತ್ತಿ ಹೋಗುತ್ತಾ, ಮನದಲ್ಲಿಯ ಮಾತುಗಳಿಗೆ ಅಕ್ಷರ ರೂಪ ಕೊಡುವ ಪ್ರಯತ್ನ ಮಾಡುತ್ತಾ, ನನ್ನ ಅಂತರಂಗದಲ್ಲಿಯ ಪುಸ್ತಕದ ಒಂದು ಹಾಳೆ ಮಗುಚುವ ಅಭ್ಯಾಸ ನನಗೆ ನೆನಪಿರುವಂತೆ ೮ – ೯ನೇ ತರಗತಿಯಿಂದಲೇ ಬಂದಿದೆ.  ಆಗ ಅಕ್ಕಂದಿರೂ, ಅಮ್ಮ ಎಲ್ಲರೂ ಇವಳೊಬ್ಬಳು ಯಾವಾಗಲೂ ಮೋಡ ಕವಿದರೆ ಚೆನ್ನಾಗಿರತ್ತೆ ಅಂತಿರ್ತಾಳೆ...  ನನ್ನ ಹಪ್ಪಳ-ಸಂಡಿಗೆ ಒಣಗೋಲ್ಲ, ಆಹಾರ ಪದಾರ್ಥಗಳೆಲ್ಲ ಕೆಟ್ಟು ಹೋಗತ್ತೆ ಎಂದು ಅಮ್ಮ, ಥೂ.. ಬೇಜಾರು ಮೂಡೇ ಇರಲ್ಲ ಎಂದು ಅಕ್ಕ, ಸುಮ್ಮನೆ ಬಿಸಿ ಕಾಫಿ ಕುಡಿದು ಬೆಚ್ಚಗೆ ಕೂತಿರೋಣ ಅನ್ಸತ್ತೆ, ಹೊರಗೆ ಹೋಗುವ ಇಷ್ಟವಾಗೋಲ್ಲ ಎಂದು ಅಪ್ಪ.... ಗೊಣಗುಟ್ಟುತ್ತಿದ್ದರೆ ನಾನು ಮಾತ್ರ, ಆಹಾ ಎಂದು ಸಂತಸಪಡುತ್ತಾ, ಅಮ್ಮನ ಕೈಯಲ್ಲಿ ಬೈಸಿಕೊಂಡು, ಬಿಸಿ ಕಾಫಿ ಕುಡಿಯುತ್ತಾ, ಚಕ್ಕುಲಿ-ಕೋಡುಬಳೆಗಳ ಸಂಗ್ರಹಕ್ಕೆ ಲಗ್ಗೆ ಹಾಕುತ್ತಾ, ಕೈಯಲ್ಲೊಂದು ಕಥೆ ಪುಸ್ತಕ ಹಿಡಿದೋ ಅಥವಾ ಕಿಟಕಿಯ ಬಳಿ ಕುಳಿತು ಹೊರಗೆ ನೋಡುತ್ತಲೋ,  ಕಲ್ಪನಾ ಸಾಮ್ರಾಜ್ಯದಲ್ಲಿ ವಿಹರಿಸುತ್ತಲೋ ಕಳೆಯುತ್ತಿದ್ದೆ...

 

ಅಂಥದೊಂದು ಬಾಲ್ಯ, ಯೌವನದ ದಿನಗಳ ನೆನಪಾಗಿತ್ತು ಇಂದು ಕೂಡ.  ಈಗ ಸುಮಾರು ಕೆಲವು ದಿನಗಳಿಂದಲೇ ಹೀಗೆ ನಡುನಡುವೆ ಮೋಡ ಕವಿದು ನನ್ನ ಮನದಾಳದ ಮಾತುಗಳನ್ನು ಕೆದಕುತ್ತಿದ್ದರೂ, ಅದೇಕೋ ಇಂದು ಇನ್ನು ತಡೆಯಲಾರೆ, ನಾ ಹೊರಗೆ ಬಂದೇ ಬರುವೆನೆನ್ನುತ್ತಾ ಆ ಸಂತಸದ, ಮುದದ ಭಾವ ಇಣುಕ ತೊಡಗಿತ್ತು...

 

ಈ ದಿನದ ವಿಜಯ ಕರ್ನಾಟಕದಲ್ಲಿ ಮೊದಲನೆ ಪುಟದಲ್ಲೇ ಭದ್ರಾ ಜಲಾಶಯ ತುಂಬಿ, ನೀರು ನದಿಗೆ ಹರಿಯ ಬಿಟ್ಟಿರುವ ಚಿತ್ರ ಕೂಡ ನನ್ನ ಮನದ ಬಾಗಿಲನ್ನು ತಟ್ಟಿತ್ತು. ನದಿಯಲ್ಲಿ ನೀರು ತುಂಬಿರುವ ದೃಶ್ಯ ಕಣ್ಣ ಮುಂದೆ ಸುಳಿದಾಡುತ್ತಿರುವಾಗ, ಇಲ್ಲಿ ಬೆಂಗಳೂರಿನಲ್ಲಿ ನಮ್ಮೆಲ್ಲರ ಪ್ರಿಯ ಮಿತ್ರ ರವಿ, ನಿಧಾನವಾಗೆದ್ದು, ತುಂಟತನದ ಭಾವದಲ್ಲಿದ್ದ.   ಸ್ವಲ್ಪ ಸ್ವಲ್ಪವೇ ಇಣುಕಿ ನೋಡುತ್ತಾ, ಸಂಭ್ರಮ ಪಡುತ್ತಿದ್ದದ್ದು ಕಂಡಾಗ ನನಗೇಕೋ ಒಂದು ಹೊಸ ಅಲೆಯ ಭಾವ ಬಂದಿತ್ತು.  ಈ ತುಂಟ ರವಿ ಯಾವುದೋ ಅತ್ಯಂತ ಆಪ್ತವಾದ, ಆಳವಾದ ಒಂದು ದೃಶ್ಯ ಕಾವ್ಯಕ್ಕೆ ವೇದಿಕೆ ಸಿದ್ಧ ಪಡಿಸುತ್ತಿದ್ದಾನೆಂಬ ಚಿಕ್ಕ ಸಂಶಯ ಕೂಡ ಬಂದಿತ್ತು.  ಅದಾವ ಭಾವೋಲ್ಲಾಸದ ಕ್ಷಣಗಳನ್ನು ಸೃಷ್ಟಿಸುವನೋ, ಅನುರಾಗದ ಅಲೆಯನ್ನು ಹರಿಸುವನೋ, ಅದಾವ ಅದ್ಭುತ ಅನುಭವವಾಗುವುದೋ, ಮತ್ತಾವ ಮಹಾ ಕಾವ್ಯದ ಉದ್ಭವಕ್ಕೆ ನಾ ಸಾಕ್ಷಿಯಾಗುವೆನೋ ಎಂದೆಲ್ಲಾ ಕಲ್ಪನೆಗಳ ಕುದುರೆ ಹತ್ತಿ ನಾಗಾಲೋಟದಲ್ಲೋಡುತ್ತಿತ್ತು ನನ್ನ ಮನಸ್ಸು.  ಹೀಗೇ ಹೊರಗೆ ನೋಡುತ್ತಾ ನನ್ನ ಲಹರಿಯನ್ನು ಸ್ವಚ್ಛಂದವಾಗಿ ಹರಿಯ ಬಿಟ್ಟು ಕಾತುರದಿಂದ ಕಾಯುತ್ತಾ  ಕುಳಿತಿದ್ದಾಗ ಇದ್ದಕ್ಕಿದ್ದಂತೆ ಧೋ.... ಎಂದು ಸುರಿಯಲಾರಂಭಿಸಿದ ಮಳೆ ನನ್ನೆಲ್ಲ  ಭಾವಗಳನ್ನೂ ಅಚ್ಚ ಬಿಳಿಯ ವೇದಿಕೆಯಲ್ಲಿ, ಬಣ್ಣ ಬಣ್ಣದ, ವಿವಿಧ ಆಕಾರಗಳ, ಮೋಡಿ ಮಾಡುವ ಅಕ್ಷರಗಳ ಸಾಲುಗಳನ್ನು ರೂಪಿಸಲು ಪ್ರೇರೇಪಿಸಿತು. 

 

ಒಮ್ಮೆಲೇ... ಪಕ್ಕ ವಾದ್ಯಗಳೊಂದಿಗಿನ ಸಂಗೀತಕ್ಕೆ ನಾಟ್ಯವಾಡುತ್ತಾ ಧರೆಗಿಳಿದ ವರುಣರಾಯ....  ಸುಮಾರು ೧೫ ನಿಮಿಷಗಳ ಕಾಲ ತನ್ಮಯತೆಯಿಂದ ತರು ಲತೆಗಳೊಂದಿಗೆ ಉಲ್ಲಾಸದ ನರ್ತನ ಮಾಡಿ, ಮೋಡಿ ಮಾಡುತ್ತಾ.. ವಸುಂಧರೆಯ ತನು, ಮನವನ್ನು ತನ್ನ ಧಾರೆಯಲ್ಲಿ ರಭಸದಿಂದ ತೋಯಿಸಿದ ಪ್ರಣಯರಾಜ,... ಮುದದಿಂದ ಮೈ ಮರೆತು, ಅರಳಿ, ಬಂದಷ್ಟೇ ವೇಗವಾಗಿ ತನ್ನ ಕೆಲಸ ಮುಗಿಯಿತೆಂದು, ವಸುಂಧರೆಗೆ ವಿದಾಯ ಕೂಡ ಹೇಳದೆ, ಇದ್ದಕ್ಕಿದ್ದಂತೆ ಹೊರಟೇ ಹೋಗಿದ್ದ.... ಮಂದ ಮಂದವಾಗಿ, ಹಿತವಾಗಿ ಹತ್ತಿರದಲ್ಲೇ ಸುಳಿದಾಡಿದ ಮಂದಾನಿಲನ ಸ್ಪರ್ಶದಿಂದ, ಕನಸಿನ ಲೋಕದಲ್ಲಿದ್ದ ಇಳೆ, ಸುಖದಿಂದ ಇನಿಯನ ಅನುರಾಗದಲ್ಲಿ ಲೀನವಾಗಿದ್ದವಳು, ಆಯಾಸದಿಂದಲೂ, ಕಷ್ಟದಿಂದಲೂ , ಮೆಲ್ಲನೆ ಕಣ್ಣು ತೆರೆದಳು....

 

ಇನಿಯನನ್ನು ಕಾಣದೆ, ಅವಳ ಕಣ್ಗಳು ಪಟಪಟನೆ ರೆಪ್ಪೆ ಬಡಿಯುತ್ತಾ, ಒಮ್ಮೆಲೇ ಸ್ಥಬ್ದವಾಗಿ, ತಬ್ಬಿಬ್ಬಾಗಿ ಸುತ್ತಲೂ ನೋಡತೊಡಗಿದ್ದಳು.   ಅದೇ ಸಮಯಕ್ಕೆ ಸರಿಯಾಗಿ ವರುಣನ ಆರ್ಭಟಕ್ಕೆ ಹೆದರಿದ್ದನೋ ಅಥವಾ ಭಕ್ತಿಯ ಅರ್ಪಣೆಯಲ್ಲಿ ತಾನಿರಬಾರದು ಎಂಬಂತೆಯೋ, ಮೋಡಗಳ ತೆಕ್ಕೆಯಲ್ಲಿ ಅಡಗಿದ್ದ ರವಿ... ಮೆಲ್ಲಗೆ ಇಣುಕುತ್ತಾ... ಕತ್ತಲ ಛಾಯೆಯಾವರಿಸಿದ್ದ ವಸುಂಧರೆಗೆ ಬಂಗಾರದ ಕಿರಣಗಳ ಸೋಕಿಸುತ್ತಾ ಹೊರ ಬರತೊಡಗಿದ.  ಸೂರ್ಯರಶ್ಮಿಯ ಬಂಗಾರದ ಬಣ್ಣ ತನ್ನನ್ನಾವರಿಸಿದ್ದು ಕಂಡು ಇಳೆ, ಎಚ್ಚೆತ್ತು... ನಾಚಿ ನೀರಾದಾಗ, ಅವಳ ಸುಂದರ ಸುಕೋಮಲ ಕದಪುಗಳು ರಂಗೇರಿದವು.  ತನ್ನ ಹಾಗೂ ತನ್ನಿನಿಯ ವರುಣನ ಚೆಲ್ಲಾಟವನ್ನೂ, ಪ್ರೀತಿಯ ಧಾರೆಯನ್ನು ರವಿ ಕಂಡು ಬಿಟ್ಟನೇನೋ ಎಂದು ಇಳೆ ಗಲಿಬಿಲಿಗೊಂಡಾಗ, ಅವಳ ರಂಗೇರಿದ ಕದಪುಗಳೂ, ಅರಳಿದ ತನುವೂ ಸೂರ್ಯರಶ್ಮಿಯ ಬಂಗಾರದ ಬಣ್ಣದೊಡನೆ ನೇರ ಸ್ಪರ್ಧೆಗಿಳಿದಂತಿತ್ತು...  ರವಿಯು ತನ್ನ  ಹೊಂಗಿರಣಗಳ, ಹೂ ಬಿಸಿಲಿನಲ್ಲಿ ಇಳೆಯನ್ನು ಆವರಿಸಿದಾಗ, ತನ್ನಿನಿಯ ವರುಣನ ಪ್ರೇಮದಾಟವನ್ನು ಕಣ್ಮುಚ್ಚಿ ನೆನೆಯುತ್ತಾ, ಅನುರಾಗದ ಅನುಭೂತಿಯನ್ನು ಸವಿಯುತ್ತಾ, ಸುಖಿಸುತ್ತಾ, ತೇಲಾಡುತ್ತಾ ಮೋಡಗಳ ಹೊನ್ನಿನ ರಥವನ್ನೇರಿ, ಮತ್ತೇರಿದಂತೆ ಇಳೆ ವರುಣನನ್ನು ಹುಡುಕುತ್ತಾ ಹೊರಟಿದ್ದಳು........

 

ಮೋಡ ಮುಸುಕಿದ ವಾತಾವರಣವಿದ್ದ ದಿನ, ಬಂದ ಮಳೆ, ಮುದುಡಿದ್ದ ನನ್ನ ಮನಸ್ಸನ್ನು ಅರಳಿಸಿದಾಗ, ನನ್ನೊಳಗೆ ಹುಟ್ಟಿದ ಭಾವಗಳು.........



Rating
No votes yet

Comments