ಚೆಂದದ ಮೈಸೂರು, ಅಂದದ ದಸರಾ

ಚೆಂದದ ಮೈಸೂರು, ಅಂದದ ದಸರಾ

ನಿಜಕ್ಕೂ ಮೈಸೂರು ಒಬ್ಬ ಸ್ವಾಲನ್ಕೃತ ಹೆಣ್ಣು ಮಗಳಂತೆ ಶೋಭಿಸುತ್ತಿದೆ.ಇದುವರೆಗೂ ಕೇವಲ ಪುಸ್ತಕದಲ್ಲಿ ಓದಿ, ದೂರದರ್ಶನದಲ್ಲಿ ಕಂಡಿದ್ದ ನನಗೆ, ಇತ್ತೀಚೆಗಿನ ಮೈಸೂರು ಪ್ರವಾಸ ನಿಜಕ್ಕೂ ಒಂದು ಉಲ್ಲಾಸಕರ ಅನುಭವ ನೀಡಿತು.

ಕೆಲಸದ ನಿಮಿತ್ತ ಮೈಸೂರಿಗೆ ತೆರಳಿದ ನಾನು, ನನ್ನ ಕೆಲಸ ಮುಗಿದ ಮೇಲೆ, ನನ್ನ ಚಿಕ್ಕಪ್ಪನ ಮಕ್ಕಳ ಒತ್ತಾಯದ ಮೇರೆಗೆ ಇನ್ನೊಂದು ದಿನ ಮೈಸೂರಿನಲ್ಲೇ ಉಳಿದುಕೊಂಡೆ. ಅದರ ನಿಮಿತ್ತ ಅಂದು ರಾತ್ರಿ, "ಆಹಾರ ಮೇಳ"ದಲ್ಲಿ ನಮ್ಮ ಬಿಡಾರ. ಅರಮನೆ ಆವರಣದ ಅನತಿ ದೂರದಲ್ಲಿನ ಒಂದು ಮೈದಾನದಲ್ಲಿ, ಕರ್ನಾಟಕದ ಹಲವು ವೈವಿಧ್ಯಮಯ ಆಹಾರಗಳ ಒಂದು ರಸಕಟ್ಟೆ ಈ ಮೇಳ. ಇಲ್ಲಿ, ನಾವುಗಳು ದಾವಣಗೆರೆಯ ವಿಶೇಷವಾದ ಮಂಡಕ್ಕಿ ಮೆಣಸಿನಕಾಯಿ, ನಂತರ ಪುತೂರಿನ ವಿಶೇಷವಾದ, ಪತ್ರೊಡೆ, ದಕ್ಷಿಣ ಕನ್ನಡದ ವೈಶಿಷ್ಟ್ಯ "ಮಂಗಳೂರು ಬನ್ಸ್"  ಮತ್ತು ಗುಜರಾತಿನ ವಿಶೇಷವಾದ, "ಕಚೋರಿ, ಸಮೋಸ" ಇತಾದಿಗಳನ್ನೆಲ್ಲ ಮೆದ್ದು, ನಂತರ ಅರಮನೆ ಆವರಣ ಸೇರಿದೆವು. ರಾತ್ರಿ ಸಮಯದಲ್ಲಿ, ಅದರಲ್ಲೂ ದಸರಾ ಸಮಯದಲ್ಲಿ ಅರಮನೆಯನ್ನು ಕಾಣುವುದೇ ಒಂದು ಭಾಗ್ಯ! ನಿಜಕ್ಕೂ ಒಂದು ದೊಡ್ಡ ಚಿತ್ತಾಕರ್ಷಕ ಬೆಳಕಿನ ಉಂಡೆಯಂತೆ ಕಾಣುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮತ್ತೊಂದು ಸಿಹಿ ಸುದ್ದಿ ಕನ್ನಡಿಗರಿಗಾಗಿ ಕಾದಿದೆ. ಅದು "ಮೈಸೂರು ಭಾರತದಲ್ಲಿಯೇ ಎರಡನೆಯ ಸ್ವಚ್ಚ ನಗರ" ಎಂಬುದು. ನನ್ನ ಕಸಿನ್ ಪಲ್ಲವಿಯ ಹೆಮ್ಮೆಯ ಮಾತುಗಳಿಗೆ ನಾನೂ ದನಿಯಾದೆ.                              

                                           

       ಮೈಸೂರು ಒಂದು ವಧುವಿನಂತೆ ಶೋಬಿಸುವುದನ್ನು ಕಂಡು ಮಂತ್ರಮುಗ್ಧನಾಗಿದ್ದೇನೆ. ಪ್ರತಿಯೊಂದು ರಸ್ತೆಯ ಎರಡೂ ಪ್ರವೇಶಗಳಲ್ಲಿ, ಬೆಳಕಿನ ತೋರಣ ಎಲ್ಲರನ್ನೂ ಸ್ವಾಗತಿಸುತ್ತದೆ. ಅಷ್ಟೇ ಅಲ್ಲದೇ, ಎಲ್ಲ ಸರ್ಕಾರಿ ಕಛೇರಿಗಳೂ, ಬೆಳಕಿನಿಂದ ಅಲಂಕೃತವಾಗಿರುತ್ತದೆ. ವಿಶೇಷವಾಗಿ ನಾನೂ ಕಂಡಂತೆ ಜಿಲ್ಲಾಧಿಕಾರಿಯವರ ಕಛೇರಿ, ಮೈಸೂರಿನ "ಮಾನಸ ಗಂಗೋತ್ರಿ" ಯ ಕಛೇರಿ, ಮಹಾರಾಜ ಮತ್ತು ಮಹಾರಾಣಿ ಕಾಲೇಜಿನ ಕಛೇರಿಗಳು, ಹೀಗೆ ಎಲ್ಲಿ ನೋಡಿದರಲ್ಲಿ, ಬೆಳಕು. ಕತ್ತಲನ್ನು ನುಂಗುವಂತೆ, ಮನದ ಕತ್ತಲನ್ನು ಹಬ್ಬದ ಆಶಯದಂತೆ ಹೊರದೂಡುವಂತೆ,ಮನಸಿನಲ್ಲಿ ಜ್ಞಾನದ ಜ್ಯೋತಿ ಬೆಳಗುವಂತೆ ಬೆಳಕು. ಇಷ್ಟೇ ಅಲ್ಲದೇ, ಅರಮನೆ ಆವರಣದಲ್ಲಿ ನಿಂತು, ಅಂದು "ಶ್ರೀಮತಿ ನಾಗಮಣಿ ಶ್ರೀನಾಥ್"ರ ಕರ್ನಾಟಕ ಸಂಗೀತದ ನಿನಾದವೂ ಸುಮಧುರವಾಗಿತ್ತು, ನಂತರ ನಮ್ಮೆಲ್ಲರ ಪ್ರೀತಿಯ ಎಸ್ಪಿಬಿರ ಹಾಡುಗಾರಿಕೆ,ಇಷ್ಟೆಲ್ಲಾ ಕಂಡ ಮೇಲೆ ನಿಮಗೂ ಈ ಚಿತ್ರಗಳನ್ನು ತೋರಿಸಿ, ಈ ನೆನಪುಗಳನ್ನು ಹಂಚಿಕೊಳ್ಳುವ ಆಸೆಯಾಯಿತು. ಅದಕ್ಕಾಗಿ ಈ ಚಿತ್ರಗಳನ್ನೂ ಹಂಚಿಕೊಂಡಿದ್ದೇನೆ. ಈ ದಸರಾದಲ್ಲಿ, ನಮ್ಮ ನಿಮ್ಮೆಲ್ಲರ ಮನೆ ಮನಗಳಲ್ಲಿನ ದುಷ್ಟ ಶಕ್ತಿಯ ಮರ್ದನ ನಡೆದು ಒಳಿತು ಎಲ್ಲರ ಹೃದಯದಲ್ಲಿ ನೆಲೆಸುವಂತಾಗಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆ ತಾಯಿ ಚಾಮುಂಡಿಯನ್ನು ಪ್ರಾರ್ಥಿಸುತ್ತೇನೆ. ಎಲ್ಲ ಸಂಪದಿಗರಿಗೂ ದಸರಾ ಹಬ್ಬದ ಮುಂಗಡ ಶುಭಾಶಯಗಳು.


ಸಂಪದಿಗರೇ,

ಈ ಕೆಳಗಿನ ಕೊಂಡಿಯಲ್ಲಿ ಚಿತ್ರಗಳನ್ನು ಕಾಣಬಹುದು

           
Rating
No votes yet

Comments