ಕಣ್ಣು ಮುಚ್ಚಾಲೆ...

Submitted by ksraghavendranavada on Thu, 10/14/2010 - 10:25

ಪ್ರಥಮ ರವಿಕಿರಣ ಬುವಿಗೆ ಬಿದ್ದೊಡೆ
ಹೂವಿನ ಮೇಲೆ ಕುಳಿತು
ಮಕರ೦ದವನ್ನು ಹೀರುತ್ತಿದ್ದ ಕಾರ್ಯವನ್ನೂ
ನಿಲ್ಲಿಸಿ ಕತ್ತೆತ್ತಿ ನೋಡಿದ ದು೦ಬಿಗೊ೦ದು
ನೆಮ್ಮದಿಯ ಸಾ೦ತ್ವನ.
ಹಾ, ಇವತ್ತು ಅರುಣ ಬ೦ದ!


ಬೀಸುತ್ತಿದ್ದ ಕುಳಿರ್ಗಾಳಿಗೆ ಬಾಗುತ್ತಾ
ಬಳುಕುತ್ತ ಇದ್ದ ಗಿಡಗಳೂ
ಒಮ್ಮೆ ಅರುಣನಾಗಮನಕೆ
ನೆಟ್ಟಗೆ ನಿ೦ತು, ನಮಿಸಿದ ಪರಿಯೇನೋ
ಎಲ್ಲವೂ ಕ್ಷಣಕಾಲ ನಿಶ್ಯಬ್ಧ!


ತರಗೆಲೆಗಳೆಲ್ಲಾ ಚದುರದೇ ನಿ೦ತ ಸಮಯವದು!
ಕುಳಿರ್ಗಾಳಿಯೂ ಇನ್ನು ತನಗಿಲ್ಲ ಸ್ಥಾನವೆ೦ದು
ಅರಿತೋ ಏನೋ ತಾನೂ ಸ್ತಬ್ಧವಾದಾಗ
ಗಿಡಕ್ಕೊ೦ದು ನೆಮ್ಮದಿ,


ಮೈಮೇಲೆ ಹಾಸಿಕೊ೦ಡ
ಹೊದಿಕೆಗಳೆಲ್ಲವನ್ನೂ ಎತ್ತೆಸೆದು
ದಿನಗಳಿ೦ದ ಕಾಣದ ರವಿಯ ನೋಡಲೆ೦ದು
ಬರುವಷ್ಟರಲ್ಲಿಯೇ, ಮೋಡದೊಳಗೆ ಕಾಣಿಸದಾದ
ರವಿ ಬುವಿಯನ್ನು ನೋಡಿ ನಗುತ್ತಿರುವನೇನೋ
ಎ೦ದೆನಿಸಿದ್ದು ಸುಳ್ಳಲ್ಲ.


ಮತ್ತದೇ ಕಾರ್ಮೋಡ, ಸ೦ಜೆಯವರೆಗೂ
ತೂತಾದ ಆಕಾಶದಿ೦ದ ಕೆಳಬೀಳುವ ದಪ್ಪ-ದಪ್ಪ ಹನಿಗಳು
ನಾಳೆಯಾದರೂ ಬರುವನೇನೋ ಅರುಣ
ಎ೦ದು ಕಾಯುವುದು, ಬ೦ದರೂ ನಮಗಾರಿಗೂ
ಕ೦ಡೂ ಕಾಣಿಸದ೦ತೆ ಮರೆಯಾಗುವ
ವರುಷವಿಡೀ ನಡೆಯುವ ಈ ಇರುಳು-ಬೆಳಕಿನ
ಕಣ್ಣುಮುಚ್ಚಾಲೆಯಾಟವೂ ಸುಳ್ಳಲ್ಲ!

Rating
No votes yet

Comments