ರಾಗೋಶಾ ಅಡುಗೆ ಮನೆ

ರಾಗೋಶಾ ಅಡುಗೆ ಮನೆ

ನಾನು ರಾಗೋಶಾ ,
ಸಂಪದಕ್ಕೆ ಹೊಸಬಳೇನಲ್ಲ,

ಸಂಪದವನ್ನು ಅತಿಥಿಯಾಗಿ ನೋಡುತ್ತಾ ಬಂದವಳು ನಾನು. ಇದರಲ್ಲಿ ಗೃಹಿಣಿಯರು, ಬೆರಳೆಣಿಕೆಯಷ್ಟೇ ಮಂದಿ ಇರುವರು.

ಇದು ನನ್ನ ಮೊದಲ ಬರಹ.


ಹೇಗೆ ಸ್ವೀಕರಿಸುತ್ತೀರೋ ಎಂಬ ದುಗುಡದಿಂದ ಇಲ್ಲಿಗೆ ಕಾಲಿಡುತ್ತಿದ್ದೇನೆ.

ತುಂಬಾ  ಬೇಗನೇ ಬೇಕಾದಾಗ ಮಾಡುವಂತಹಾ ಎರಡು ತಿನಿಸುಗಳನ್ನು ಇಲ್ಲಿ ನೀಡುತ್ತಿದ್ದೇನೆ.



೧.  ಸುರುಳಿ  ತರಕಾರೀ  ಚಪಾತಿ  

 

 

 

ಪಲ್ಯ:
ಈರುಳ್ಳಿ, ಬೀನ್ಸ್, ದೊಣ್ಣೆ ಮೆಣಸು, ಗಜ್ಜರಿ, ಎಲ್ಲವನ್ನೂ ಸಣ್ಣಕ್ಕೆ ಕತ್ತರಿಸಿಟ್ಟು ಕೊಳ್ಳಿ.
ಈರುಳ್ಳಿಯನ್ನು ಕೆಂಬಣ್ಣ  ಬರುವ ವರೆಗೆ ಹುರಿದು ಇದಕ್ಕೆ ಹಸಿ ಮೆಣಸು, ಸ್ವಲ್ಪ ಶುಂಠಿ ಬೆಳ್ಳುಳ್ಳಿಯನ್ನು ನುಣ್ಣಗೆ ರುಬ್ಬಿ ಹಾಕಿ  ಸೇರಿಸಿ. ಇದಕ್ಕೆ ಕತ್ತರಿಸಿ ಇಟ್ಟ ತರಕಾರಿಗಳನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿ ಒಲೆಯಿಂದ ಇಳಿಸುವ ಮೊದಲು ಎರಡು ಚಮಚ ಟೊಮೇಟೋ ಸಾಸ್ ಸೇರಿಸಿಕೊಳ್ಳಿ. ಬೇಕಿದ್ದಲ್ಲಿ ಕೊತ್ತಂಬರಿ ಸೊಪ್ಪನ್ನೂ ಹಾಕಿಕೊಳ್ಳಬಹುದು.



ಮೈದಾದ ಚಪಾತಿ ಹದಕ್ಕೆ ಕಲಸಿ ತೆಳುವಾಗಿ ಲಟ್ಟಿಸಿ ಕಾವಲಿಯಲ್ಲಿ ಬೇಯಿಸಿ, ಬೇಯುತ್ತಿರುವಾಗಲೇ ಟೊಮ್ಯಾಟೋ ಸಾಸ್ ಹಚ್ಚಿರಿ, ಅದರ ಮೇಲೆ ಮೊದಲೇ ಮಾಡಿಟ್ಟುಕೊಂಡ
ಪಲ್ಯವನ್ನು ಅದರ ಮಧ್ಯದಲ್ಲಿಟ್ಟು  ಸಮವಾಗಿ ಹರಡಿ. ಸುರುಳಿಯನ್ನಾಗಿ ಮಡಿಸಿ ತೆಗೆಯಿರಿ.

ಸುರುಳಿ ತರಕಾರೀ ಚಪಾತಿ ಬಿಸಿ ಇರುವಾಗಲೇ ತಿನ್ನಲು ಬಲು ರುಚಿ.


೨.  ಬೇಸನ್ ಬ್ರೆಡ್


ಸಣ್ಣಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಸಿಮೆಣಸು ಇಂಗು ಉಪ್ಪು ಬೇಸನ್ ( ಕಡಲೇ ಹಿಟ್ಟು) ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಕಲಸಿ ಇಟ್ಟುಕೊಳ್ಳಿ.
ಬ್ರೆಡ್ ಹಲ್ಲೆಗಳನ್ನು ಮೇಲಿನ ಹಿಟ್ಟಿನಲ್ಲಿ ಮುಳುಗಿಸಿ ಕಾವಲಿಯ ಮೇಲೆ ಬೇಯಿಸಿ, ಸ್ವಲ್ಪ ಎಣ್ಣೆ ಬಿಟ್ಟು ಎರಡೂ ಬದಿ ಚೆನ್ನಾಗಿ ಬೇಯಿಸಿ.
ಬಿಸಿಯಾಗಿಯೇ ತಿನ್ನಲು ರುಚಿಯಾಗಿರುತ್ತೆ.

Rating
No votes yet

Comments