ಹೇಳು ಹೇಗೆ ಬರೆಯಲಿ ಕವಿತೆ?

ಹೇಳು ಹೇಗೆ ಬರೆಯಲಿ ಕವಿತೆ?

ನನ್ನ ಕವಿತೆಗಳ ಅಭಿಮಾನಿ ನೀನು
ಪ್ರತಿ ಸಾಲುಗಳಿಗೆ ಮೆಚ್ಚುಗೆ ನಿನ್ನದು
ಕವಿತೆ ಬರೆಯಲೂ ಕಷ್ಟ ಪಡುವ ಕವಿ ನಾನು
ಪದಗಳ ಮಧ್ಯೆ ಕಳೆದು ಹೋಗದಾಸೆ ನನ್ನದು

ಕವಿತೆ ಬರಿ, ಬರಿ ಎನ್ನುವ ನಿನ್ನ ಬೇಡಿಕೆಗಳಿಂದ
ಕವನ ಬರೆಯುವ ಪುನಃ ಒಂದು ಕನಸು
ಬಲವಂತದಿಂದ ಮಾಡಿಸುವ ಕೆಲಸಗಳಿಂದ
ಸೃಷ್ಟಿಯಾಗಲು ಗೀಚಿದರಷ್ಟೇ ಆಗುವುದೇ ನನಸು

ಈಗೀಗ ನನ್ನ ಕವನಗಳಲ್ಲಿ ಕಾಣದ ಕವಿತೆಗೆ
ಕೆಂಪಾಗಿ ಊದುವುದು ನಿನ್ನ ವದನ
’ಕವಿಯಾಗಿ ಉಳಿದಿಲ್ಲ ನೀವು’ ಎನ್ನುವ ಮಾತಿಗೆ  
ನನ್ನ ಮನದ ಉತ್ತರವೀಗ ಮೌನ

ಬಾಯಾರಿ ಬೆಂಗಾಡೆಂದು ಧರೆಯ ಜರಿದಾಗ
ಬದುಕಿಗೆ ನಿನ್ನ ಪ್ರೀತಿ ಒರತೆ
ನಿನ್ನ ಬಾಹುಗಳಲ್ಲಿ ಈಗ ನನ್ನ ನಾ ಮರೆತಿರುವಾಗ
ಗೆಳತಿ, ಹೇಳು ಹೇಗೆ ನಾ ಬರೆಯಲಿ ಕವಿತೆ

ನಿನ್ನ ಮೆಚ್ಚುಗೆಗೆ ಬರೆಯುವುದಿದ್ದರೆ ಬರೆಯುವೆ
ಇದು ನಿನಗೆ ನಾ ಕೊಡುವ ಆಶ್ವಾಸನೆ
ಪದಗಳಿಗೇನು ನಾನಿಲ್ಲದಿದ್ದರೂ ಉಳಿದು ಬಿಡುತ್ತವೆ
ನೀನು ಸಿಟ್ಟಾಗಬೇಡ ಮನದನ್ನೆ

:)

Rating
No votes yet

Comments