ಸಂಪದದ ಮಿತ್ರರಿಗೆ ಸನ್ಮಾನ

ಸಂಪದದ ಮಿತ್ರರಿಗೆ ಸನ್ಮಾನ

ನೋಡ್ರಲಾ ನಮ್ಮ ಹಳ್ಳಿ ಬರೀ ಚಂಗೂಲಿ ಬುದ್ದಿಗೆ ಪೇಮಸ್ ಆಗೈತೆ. ನಾವು ಒಂದಿಷ್ಟು ಒಳ್ಳೆ ಕೆಲಸ ಮಾಡಿ, ರಾಜ್ಯದಾಗೆ ವರ್ಲ್ಡ್ ಪೇಮಸ್ ಆಗಬೇಕು. ಯಾರಾದರೂ ಉತ್ತಮ ವ್ಯಕ್ತಿಗಳನ್ನ ಸನ್ಮಾನ ಮಾಡಬೇಕು. ಆದ ನಮ್ಮನ್ನ ಜನಾ ಗುರುತಿಸುತ್ತಾರೆ ಅಂದ. ಸರಿ ಪಟ್ಟಿ ನೀವೆ ರೆಡಿ ಮಾಡಿ ಅಂದ ಸುಬ್ಬ, ನೋಡಿದ್ರೆ ಎಲ್ಲಾ ಅವರ ಮನೆಯೋರದೆ ಹೆಸರು ಐತೆ. ಇದೇನ್ರೀ ಗೌಡ್ರೆ. ಇವರೆಲ್ಲಾ ಸ್ವಾತಂತ್ರ್ಯಕ್ಕೆ ಸಾನೇ ದುಡಿದಾವ್ರೆ ಕಲಾ ಅಂದ. ನಿಮ್ಮ ಹೆಂಡರು, ನಿಮ್ಮ ಮಗ ಯಾವುದಕ್ಕೆ ದುಡಿದಿದಾರೆ ಅಂದ ಸುಬ್ಬ. ಲೇ ನಮ್ಮ ಪಕ್ಕದ ಮನೆ ಬಾಡಿಗೆಯೋರನ್ನ ಬಿಡಿಸೋಕ್ಕೆ ಸಾನೇ ಕಷ್ಟಪಟ್ಟಿದಾರಲ್ಲಾ ಅಂದ. ಏ ಥೂ. ಸಮಾಜಕ್ಕೆ ದುಡಿದೋರ ಹೆಸರು ಹೇಳ್ರಿ. ಅಂದ್ರೆ ಮುನ್ಸಿಪಾಲಿಟಿ ರಾಮ ಕಲಾ ಅಂತಾನೆ ದರ್ಬೇಸಿ. ಕಡೆಗೆ ಸಾನು ಸುಬ್ಬ ಪಟ್ಟಿ ರೆಡಿ ಮಾಡಿದ್ವಿ. ಅದ್ರಾಗೆ ಬೆಳ್ಳಾಲ ಗೋಪಿನಾಥರಾವ್, ಕವಿ ನಾಗರಾಜರು, ಸುರೇಶ್ ಹೆಗ್ಡೆ,ಆಂನಂದ್ ಶಾಸ್ತ್ರಿ, ಶರ್ಮಾರವರನ್ನು ಆಯ್ಕೆ ಮಾಡಿದ್ವಿ.

ಸರಿ ಸನ್ಮಾನಕ್ಕೆ ಏನಲಾ ತರೋದು ಅಂದ ಗೌಡಪ್ಪ. ಸಾಲು ಅಂಗೇ ಒಂದು ತಟ್ಟೆ ಹಣ್ಣು, ಗಂಧದ ಹಾರ ಅಂದ ಸುಬ್ಬ. ಸರಿ ಕಾರ್ಯಕ್ರಮ ದಿನ ಎಲ್ಲಾರೂ ಬಂದ್ರು. ಮುಂಚೆಯಾದ್ರೆ ಇವರೆಲ್ಲಾ ಬರ್ತಿದ್ದಾಗೆನೇ ಜನ ಎಲ್ಲಾ ಬಂದು ಸ್ವಾಗತ ಮಾಡೋರು. ಇದೀಗ ಸಾನೇ ಸರಿ ನಮ್ಮ ಹಳ್ಳಿಗೆ ಬಂದಿದ್ದಕ್ಕೆ ಯಾರು ಮನೆಯಿಂದ ಹೊರಗೆ ಬರಲೇ ಇಲ್ಲ. ಇವರೇ ಅಡ್ರೆಸ್ ಕೇಳಕಂಡು ಮನೆಗೆ ಬಂದ್ರು. ಗೌಡಪ್ಪನ ಹೆಂಡರು ಸಂಪದದೋರು ಬಂದ್ಯಾರೆ ಏಳ್ರೀ ಅಂದ್ಲು. ಇದೇನ್ರೀ ಹಾಲು ಕೊಡೋ ನಿಂಗನ ತರಾ ಹೇಳ್ತಾರಲ್ರೀ ಅಂದ್ರು ಹೆಗ್ಡೆ. ಸರೀ ಎಲ್ಲರಿಗೂ ಚಾ ಕೊಟ್ವಿ. ಶರ್ಮಾರವರಿಗೆ ಜೇನು ತುಪ್ಪ ಬೆಲ್ಲ ಮಿಕ್ಸ್. ಅಂಗೇ ಗೋಪಿನಾಥರಾಯರಿಗೆ ಹಾಲು ಕೊಟ್ವಿ. ಸರಿ ಸಂಜೆ ಕಾರ್ಯಕ್ರಮ ಇರೋದು ಒಂದು ರೌಂಡ್ ಹಳ್ಳಿ ಸುತ್ತಾಕೊಂಡು ಬರ್ತೀವಿ ಅಂತಾ ಹೋದ್ರು. ಇವರ ಹೆಂಡರು ಬೆಂಗಳೂರು ಟ್ರಾಫಿಕ್ ಬಗ್ಗೆ ಹೇಳ್ತಾ ಗೌಡಪ್ಪನ ಮನೆಯಲ್ಲಿ ತರಕಾರಿ ಹೆಚ್ಕಂತಾ ಕುಂತಿದ್ರು.

ನಿಂಗನ ಚಾ ಅಂಗಡಿಗೆ ಇವರು ಹೋದ್ರೆ. ಹೆವಿ ಡಿಮಾಂಡ್. ಶಾಸ್ತ್ರಿಗಳು ರಾಜಕೀಯದ ಬಗ್ಗೆ ಹೇಳ್ತಾ ಇದ್ರೆ ಎಲ್ಲಾವೂ ಬಾಯಿ ಬುಟ್ಕಂಡು ಕೇಳ್ತಾ ಇದ್ವು. ಲೇ ಈ ವಯ್ಯನ ರಾಜಕಾರಣಿ ಮಾಡಿದ್ರೆ ಭ್ರಷ್ಟಾಚಾರ ಕಮ್ಮಿಯಾಗ್ಬೋದು. ಅದೇನೋಪಾ ಅಂದ ಕಿಸ್ನ. ಗೋಪಿನಾಥರಾಯರು ತಮ್ಮ ಯುದ್ದದ ಪ್ರಸಂಗಗಳನ್ನು ಹೇಳಲು ಹೋಗಿ ನಿಂಗನ ಅಂಗಡಿ ಪಾತ್ರೆಯಲ್ಲಾ ಕೆಡವಿದ್ರು. ಆವೇಸ ಬಂದು ಪಕ್ಕದಲ್ಲಿದ ಸುಬ್ಬಂಗೆ ನಾಕು ಬಿಟ್ಟಿದ್ರು. ಇನ್ನು ಸುರೇಶ್ ಹೆಗ್ಡೆ ಪ್ಲೈಟ್ ಹೆಂಗೆ ಟೇಕ್ ಆಫ್ ಆಗುತ್ತೆ ಲ್ಯಾಂಡಿಂಗ್ ಆಗುತ್ತೆ ಅಂತಾ ಹೇಳ್ತಾ ಇದ್ರು. ಸರ್ ವಿಮಾನ ಇಳಿಸೋಬೇಕಾದ್ರೆ ಹೆಡ್ ಲೈಟ್ ಆಫ್ ಆದ್ರೆ ಏನ್ ಮಾತ್ತೀರಾ ಸಾ ಅಂದ ದೊನ್ನೆ ಸೀನ. ಅದಕ್ಕೆ ಅಂತಾ ಸೀಮೆ ಎಣ್ಣೆ ಬುಡ್ಡಿ ಮಡಗಿರ್ತೀವಿ ಅಂದ್ರು. ಕವಿ ನಾಗರಾಜರು ತಮ್ಮ ಹಳೆಯ ಕಥೆಗಳನ್ನು ಹೇಳಿದರು. ಸೀನ ನಮ್ಮ ಅಪ್ಪ ದೊಡ್ಡ ನಿಂಗಪ್ಪ ಪರಿಚಯ ಇದಾರಾ ಸಾ, ಯಾಕೇಂದ್ರೆ ತುರ್ತು ಪರಿಸ್ಥಿತಿ ಇದ್ದಾಗ. ಅವರ ಗ್ಯಾಂಗ್ ಕಳ್ಳತನ ಮಾಡಿ ಬಳ್ಳಾರಿ ಜೈಲು ಸೇರಿದ್ರು ಅಂದ. ಮಿನಿ ದಂಡು ಪಾಳ್ಯದೋರು ತರಾ. ಇನ್ನು ಶರ್ಮಾರವರು ಜೇನು ಸಾಕಾಣಿಗೆ ಬಗ್ಗೆ ಹೇಳ್ತಾ ಇದ್ರೆ, ಕಿಸ್ನ ಬಾಯಿ ಬುಟ್ಕಂಡು ಕೇಳ್ತಾ ಇದ್ದ. ಯಾಕಲಾ. ಲೇ ಕಟ್ಟಿಗೆ ಒಡೆಯೋಕ್ಕೆ ಹೋದಾಗ ಬೀಡಿ ಸೇದಬೇಕೋ ಬೇಡವೋ ಎನ್ನುವುದು ಅವನ ಡೌಟ್. ಎಲ್ಲಿ ಜೇನು ಕಚ್ತದೋ ಅಂತಾ.

ಸರಿ ಸಂಜೆ ಸಿದ್ದೇಸನ ಗುಡಿತಾವ ಕಾರ್ಯಕ್ರ ಸುರುವಾತು. ರಂಗನ ಮೈಕ್ ಸೆಟ್ ಗುಯ್ ಅಂತಾ ಇತ್ತು. ಅರೆ ಪ್ರಸನ್ನ ಯಾವಾಗ ಬಂದ್ರಿ. ಇಲ್ಲ ರಂಗ ಪೋನ್ ಮಾಡಿ ಕರಿಸಿದ್ದ ಅಂದ್ರು. ಬಡ್ಡೆ ಐದ ನನ್ನ ಅಸಿಸ್ಟೆಂಟ್ ಅನ್ನೋನು. ಲೈಟಿನ ಸರ ಹಾಕ್ತಾ ಇದ್ರು. ಗೌಡಪ್ಪ ಸುರು ಹಸ್ಕಂಡ ಭಾಸಣ. ನೋಡಿ ಮಹಾಜನಗಳೆ ಇವರೆಲ್ಲಾ ಸಾನೇ ಸಾಧನೆ ಮಾಡವ್ರೆ. ಇವತ್ತು ಇವರಿಗೆ ಅಂತಾ ಸನ್ಮಾನ ಮಾತ್ತಾ ಇದೀವಿ. ನಾವು ಕೊಡೋ ಸಣ್ಣ ಕಾಣಿಕೆ ಸ್ವೀಕರಿಸಿ ಧನ್ಯರಾಗಿಸಬೇಕು ಸಿವಾ ಅಂದ. ಸರಿ ಮುಂದುಗಡೆ ಚೇರ್ ಹಾಕಿದ್ವಿ. ಮೊದಲು ಶರ್ಮಾರವರಿಗೆ ಸನ್ಮಾನ. ಶರ್ಮಾ ಎದ್ದೋರೆ ಚೇರ್ ಮೇಲೆ ಬಂದು ಹಾರ್ಕಂಡು ಕೂತರು. ಯಾಕ್ ಸಾ. ಜಮಖಾನ ಎಡವಿದೆ ಕಣ್ರೀ. ಸಿವಾ ಇನ್ನೊಂದು ಸ್ವಲ್ಪ ಮುಂದೆ ಹೋಗಿದ್ರೆ. ಸುಬ್ಬಿ ಹಲ್ಲು ನಿಮ್ಮ ಮಖಕ್ಕೆ ನೆಟ್ಕಳೋದು ಅಂದ ಸುಬ್ಬ. ಸರೀ ಲೇ ಹಾರ ಕೊಡ್ರಲಾ ಅಂದೋನು ಗಂಧದ ಹಾರ ಹಾಕ್ದ. ಮನೆಗೆ ಸಾಗ್ವಾನಿ ಮಂಚ ಮಾಡಿಸಿದ್ನಂತೆ. ಅದ್ರಾಗೆ ಬಂದ ಸಿಪ್ಪೆನ್ನ ದಾರದಾಗೆ ಪೋಣಿಸಿ ಗಂಧದ ಸೆಂಟ್ ಹಾಕ್ಸಿದ್ದ. ಶರ್ಮಾರವರು ಇದೇನು ಗಂಧ ಮತ್ತೆ ಸಾಗ್ವಾನಿ ವಾಸನೆ ಬತ್ತದಲ್ಲಾ ಅಂದ್ರು. ನಮ್ಮ ಕಡೆ ಗಂಧ ಹಿಂಗೆಯಾ ಅಂದ. ಸಾಲು ಎಲ್ರಲಾ ಅಂದ್ರೆ. ಮಗಾ ಸಾಲೇ ತಂದಿಲ್ಲ. ಅಲ್ಲೇ ಇದ್ದ ಜನ ಚಳಿ ಅಂತಾ ಸಾಲು ಹೊದ್ದಕೊಂಡು ಬಂದಿದ್ರು. ಅದನ್ನೇ ಇಸ್ಕಂಡು ಕೊಡವಿದರೆ ಕೆಜಿಗಟ್ಟಲೆ ಮಣ್ಣು ಅದನ್ನೇ ಹಾಕಿದ್ದಾತು. ಹಣ್ಣಿನ ತಟ್ಟೆ ಕೊಡ್ರಲಾ ಅಂದ್ರೆ. ತಟ್ಟೇಗೆ ಪೊಪ್ಪಾಯಿ, ಕಲ್ಲಂಗಡಿ ಮಗಾ ಹಲಸಿನಹಣ್ಣು ಇಡೀದು ಮಡಗವ್ನೆ. ಪಾಪ ಶರ್ಮಾರವರು ಇಟ್ಕಳೋಕೆ ಸರ್ಕಸ್ ಮಾಡ್ತಾ ಇದ್ರು. ಯಾಕ್ರೀ ಗೌಡ್ರೆ. ಲೇ ಚೀಪಾಗಿ ಅಂತಾ ಸಿಕ್ಕಿದ್ದು ಇದೆ ಹಣ್ಣು ಕಲಾ ಅಂದ ಗೌಡಪ್ಪ.

ನೆಕ್ಸ್ಟ್ ಗೋಪಿನಾಥರಾಯರು. ಅಂಗಂತಿದ್ದಾಗೆನೇ ರಾಯರು ಷರ್ಟ್ ಬಿಚ್ಚಿ ಒಂದು ಹತ್ತು ಡಿಪ್ಸ್ ಹೊಡೆದರು. ಯಾಕ್ ಸಾ. ನಿಮ್ಮ ಹಣ್ಣಿನ ತಟ್ಟೆ ಇಸ್ಕೊಬೇಕು ಅಂದ್ರೆ ಸಕ್ತಿ ಬೇಕಲಪ್ಪಾ ಅಂದು ಅಂಗೇ ಒಂದು ಎರಡು ಸ್ಪೂನ್ ಜೀವನ್ ಟೋನ್ ಕುಡಿದ್ರು. ಅವರ ಹೆಂಡರು ರೀ ಜೀವನ್ ಟೋನ್ ಇಲ್ಲಿದೆ. ನೀವು ಕುಡಿದಿದ್ದು ಗ್ರೈಪ್ ವಾಟರ್ ಅಂದ್ರು. ಹೋಗಲಿ ಬಿಡು ಭಟ್ಟಿ ಜಾರಕ್ಕಿಲ್ಲ ಅಂದ್ರು. ಅವರಿಗೂ ಶರ್ಮಾರವರಿಗೆ ಮಾಡಿದ ತರಾನೇ ಸೇಮ್ ಟು ಸೇಮ್. ಆದರೆ ಸನ್ಮಾನ ಮಾಡಿದ್ದು ಕಿಸ್ನ. ಸಾ ನಂಗೂ ಬಂದೂಕು ಹಿಡಿಯೋದು ಹೇಳಿಕೊಡಿ ಸಾ ಅಂದ. ಯಾಕಪ್ಪಾ. ಅವಾಗವಾಗ ಕಳ್ಳನಾಟ ಹೊಡಿತಾ ಇರ್ತೀನಿ ಫಾರೆಸ್ಟ್ ನೋರು ಬೆನ್ನು ಹತ್ತಿದಾಗ ಬೇಕಾಯ್ತದೆ ಅಂದ. ತಕ್ಷಣನೇ ರಾಯರು ಫಾರೆಸ್ಟ್ ಆಫೀಸಿಗೆ ಪೋನ್ ಮಾಡಿ ಕಿಸ್ನನ್ನ ಹಿಡಿದುಕೊಟ್ಟರು. ಲೇ ಎಲ್ಲೇ ಬುಲೆಟ್ ಅಂದ್ರು ಅವರ ಹೆಂಡರಿಗೆ. ರೀ ಮನೇಲಿ ಷೋಕೇಸ್ ನಲ್ಲಿ ಇಟ್ಟಿದೀನಿ ಅಂದ್ರು. ಥೂ ಇಂತ ಕಡೆ ಎಲ್ಲಾ ತರಬೇಕು ಅಂತಿದ್ದಾಗೆನೇ ಗೌಡಪ್ಪ ಟೇಬಲ್ ಕೆಳಗೆ ಹೋಗಿದ್ದ. ಆ ನಾಟಾ ಮಾರೋನೆ ಗೌಡಪ್ಪ.

ಇದೀಗ ಸುರೇಶ್ ಹೆಗ್ಡೆ, ಸೇಮ್ ಟು ಸೇಮ್. ಆದ್ರೆ ಹಣ್ಣು ಮಾತ್ರ ಸ್ವಲ್ಪ ಬೇರೆ. ಪೊಪ್ಪಾಯಿ ಬದಲು ಬನಾಸ್ಪತ್ರೆ. ಅಂಗೇ ಸಾಲು ಬದಲು ಬೆಸೀಟ್. ಯಾಕೇಂದ್ರೆ ಸಾಲು ತಂದೋರು ಇಬ್ರೇ ಇದ್ರು. ಗೌಡಪ್ಪ ಅವರಿಗೆ ನೂರು ರೂಪಾಯಿ ಕೊಟ್ಟು ಗಲಾಟಿ ಮಾಡ್ ಬೇಡ್ರಲಾ ಅಂತಿದ್ದ. ಹೆಗ್ಡೆಯೋರು ತಮ್ಮ ಹಿಂದಿನ ವಿಮಾನದ ಅನುಭವಗಳನ್ನು ಹೇಳ್ತಾ ಇದ್ರು. ಸಾ ನಮ್ಮ ಹಳ್ಳೀಲಿ ವಿಮಾನ ಇಳಿಸ್ಬೋದಾ ಸಾ ಅಂದ ಸುಬ್ಬ.ಇಳಿಸ್ಬೋದು ಆದ್ರೆ ಯಾರು ಬದಕಕ್ಕಿಲ್ಲಾ ಅಂದ್ರು. ಲೇ ಅದೇನು ನಮ್ಮ ಇಸ್ಮಾಯಿಲ್ ಬಸ್ ಏನ್ಲಾ ಅಂದ ಗೌಡಪ್ಪ.

ಇದೀಗ ಕವಿ ನಾಗರಾಜರು ಅಂತಿದ್ದಾಗೆನೇ ಎಲ್ಲರೂ ಜನಗಣಮನ ಹೇಳಿದ್ರು. ಭಾರತ್ ಮಾತಾ ಕೀ ಜೈ. ವಂದೇ ಮಾತರಂ. ಶುಕ್ಲಾಂ ಭರದರಂ ಹೇಳ್ದ ಸುಬ್ಬ. ಇದ್ಯಾಕ್ ಲಾ. ಲೇ ಇದು ಘೋಷಣೆ ಅಲ್ವೆನ್ಲಾ ಅಂದ. ಸರಿ ಸನ್ಮಾನ ಮಾಡಿದ್ವಿ. ಇವರು ಹಿರಿಯರು ಅಂತ ಅಂಗೇ ಒಂದು ಕೋಲು ಕೊಟ್ವಿ. ಹಣ್ಣಿನ ತಟ್ಟೆ ಇವರ ಕೈಯಲ್ಲಿ ಹಿಡಿದು ಕೊಳ್ಳೋಕೆ ಆಗಕ್ಕಿಲ್ಲಾ ಅಂತ ಪೂರ್ಣಾಹುತಿಗೆ ಹಾಕಬೇಕಾದ್ರೆ ತಟ್ಟೆ ಮುಟ್ಟಿಸ್ದಂಗೆ ಗೌಡಪ್ಪನೇ ಮುಟ್ಟಿಸಿ ಹಿಂದಿಟ್ಟ. ಸಾ ಖಾತೆ ಬದಲಾವಣೆ ಮಾಡಿಸ್ಬೇಕು ಅಂದ್ರೆ ಏನ್ ಮಾಡಿಸ್ಬೇಕು ಸಾ ಅಂದ ನಿಂಗ. ಲೇ ಇದೇನು ಗ್ರಾಮ ಸಭೆ ಅನ್ಕಂಡ್ಯೇನ್ಲಾ. ಸನ್ಮಾನ ಕಲಾ ಅಂದ ಗೌಡಪ್ಪ. ಅಂಗೇ ಶಾಸ್ತ್ರಿಗಳಿಗೂ ಅಂಗೇ ಮಾಡಿದ್ವಿ. ಸುಬ್ಬ ಜಮೀನು ಮೇಲೆ ಸಾಲ ತಗೋಳೋಕ್ಕೆ ಏನ್ ಮಾಡಬೇಕು ಸಾ ಅಂತಿದ್ದ. ಅದಕ್ಕೆ ಅವರು ನಾನು ಬ್ಯಾಂಕ್ ಬಿಟ್ಟು ಸಾನೇ ವರ್ಷ ಆಗೈತೆ. ಅದೂಲ್ಲದೆ ಅಲ್ಲಿ ಕ್ರೆಡಿಟ್, ಡೆಬಿಟ್ ಬಗ್ಗೆ ಆಡಿಟ್ ಮಾಡಿಸಿ ಹೇಳ್ಬೇಕಾಗುತ್ತೆ ಕಣಪ್ಪಾ, ಕವಿತೆ ರಾಜಕೀಯದ ಬಗ್ಗೆ ಮಾತ್ರ ಕೇಳಪ್ಪಾ ಅಂದ್ರು. ಸರಿ ಕಾರ್ಯಕ್ರಮ ಮುಗೀತು. ಮುಗಿದಾಗ ರಾತ್ರಿ ಎರಡು ಗಂಟೆ. ಎಲ್ಲಾ ಕುಟುಂಬದವರು ದಾರ್ಯಾಗೆ ವ್ಯಾನ್ ಕೆಟ್ಟಾಗ ಒಳಗೆ ಮಲಗಿರ್ತಾರಲ್ಲಾ ಅಂಗೆ ಡೋರ್ ತಕ್ಕೊಂಡ್ ಮಲಗಿದ್ರು. ಡ್ರೇವರ್ ಕೆಳಗೆ ಸೊಳ್ಳೆ ಬತ್ತಿ ಮಡಗಿದ್ದ. ಹುಸಾರ್ ಕಲಾ ಡೀಸಲ್ ಗೆ ತಗಲೀತು ಅಂತಿದ್ರು ಗೋಪಿನಾಥರಾಯರು. ಗೌಡಪ್ಪ ನಂಗೂ ಒಂದು ಕೆಲಸ ನೋಡಿ ಸಾ ಅಂದ. ನೋಡಪ್ಪಾ ಒಂದು ಕೆಲಸ ಇದೆ. 20ಸಾವಿರ ಸಂಬಳ ಕೆಲಸ ರಾತ್ರಿ ಹೊತ್ತು ಮಾತ್ರ ಅಂದ್ರು. ರಾಯರು ಅದು ಏನ್ ಸಾ. ರಾತ್ರಿ ಬರುತ್ತಲ್ಲಾ ಶತಾಬ್ದಿ ರೈಲು. ಅದ್ರುದ್ದು ಏನಾದ್ರೂ ಹೆಡ್ ಲೈಟ್ ಆಫ್ ಆದ್ರೆ, ನೀನು ಬ್ಯಾಟರಿ ಹಿಡಿಕೊಂಡು ಮುಂದೆ ಓಡ್ತಾ ಇರಬೇಕು ಅಷ್ಟೆ. ಯಾಕೇಂದ್ರೆ ರೈಲು ಹಳಿ ಮೇಲೆ ಹೋಗ್ಬೇಕಲ್ವಾ ಅಂದ್ರು. ಅದಕ್ಕೆ ಪಿಟಿ ಉಸಾ ನೋಡ್ಕಳ್ಳಿ ಅಂದ. ಅಂತೂ ರಾತ್ರಿನೆ ಹೋದ್ರು.

ಬೆಳಗ್ಗೆ ಗೌಡಪ್ಪಂಗೆ ಸನ್ಮಾನದ ಖರ್ಚು ಕೇಳಿದ್ರೆ. 10ಸಾವಿರ ತೋರಿಸಿದ. ಹೆಂಗ್ರೀ ಅಂದ್ರೆ, ಮಗಾ ನಾವೆಲ್ಲಾ ಹೋದ್ ಮ್ಯಾಕೆ ಅವರ ಮನೆಯೋರಿಗೆಲ್ಲಾ ಸನ್ಮಾನ ಮಾಡವ್ನೆ. ಅಂಗೇ ಸಮಾಜ ಸೇವಕ ಅಂತ ಅವನೂ ಸನ್ಮಾನ ಮಾಡಿಸ್ಕಂಡಿದ್ದ. ಏ ಥೂ

Rating
No votes yet

Comments