ನೆನಪಿನ ಬುತ್ತಿ:: ಶಾಲೆ ಬಿಟ್ಟ ಆ ಸಂಜೆ

ನೆನಪಿನ ಬುತ್ತಿ:: ಶಾಲೆ ಬಿಟ್ಟ ಆ ಸಂಜೆ


ಏಳನೇ ತರಗತಿಯ ಕೊನೆಯ ದಿನ, ಎಲ್ಲಾ ಮೇಷ್ಟ್ರು ,ಸಿಸ್ಟರ್, ಟೀಚರ್ ಗಳು ಸೇರಿ ನನ್ನನ್ನು ಸೇರಿದಂತೆ ೬೦ ಮಂದಿಯ ಬಾಚ್ ಗೆ ಅಂದು ಬೀಳ್ಕೊಟ್ಟಿದ್ದರು, ಅದು ನಮ್ಮ ಪ್ರಾಥಮಿಕ ಶಾಲೆಯ ಕೊನೆಯ ದಿನವಾಗಿತ್ತು. ಎಲ್ಲರೂ  ಆಟೋಗ್ರಾಫ್ ಕೊಡುವ ಮತ್ತು ಬೇರೆಯವರಿಂದ ಆಟೋಗ್ರಾಫ್ ಪಡಕೊಳ್ಳುವ ತವಕದಲ್ಲಿದ್ದರು, ಕೆಲ ಹುಡುಗರಂತೂ ತಮಗೆ ಬೇಕಾದ ಹುಡುಗಿಯರ ಮನೆ ಫೋನ್ ನಂಬರ್ ಮತ್ತು  ವಿಳಾಸ ಸಂಗ್ರಹಿಸುವಲ್ಲಿ ಬಿಸಿಯಾಗಿದ್ದರು (ಆಗ ಮೊಬೈಲ್ ನ ಹಾವಳಿ ಶುರುವಾಗಿರಲಿಲ್ಲ ...)ಎಲ್ಲಾ ವಿದ್ಯಾರ್ಥಿಗಳು ಆಟೋಗ್ರಾಫ್ ಬುಕ್ ಮೇಲೆ "ನಮ್ಮ ಸ್ನೇಹ ಅಮರವಾಗಿರಲಿ"ಎಂದು ಬರೆದದ್ದೇ ಬರೆದದ್ದು. ಇಂದಿಗೂ ನನ್ನ ನೆನಪಲ್ಲಿರುವುದು ಗೋಪಾಲ್ ನನ್ನ ಬುಕ್ ಮೇಲೆ ಬರೆದಿರುವ "ಗೋಮಟೇಶ್ವರ ನಿಗೆ ಚಡ್ಡಿ ಯಾವಾಗ ಹಾಕುವರೋ ಅಂದಿನ ತನಕ ನನ್ನ ನಿನ್ನ ಸ್ನೇಹವಿರಲಿ " ಎಂಬ ಬರಹ.

ಅದು ನಮ್ಮ ಬಾಲ್ಯದ ಕೊನೆಯ ಸಂಜೆ ಎಂದೇ ಹೇಳ ಬಹುದು, ಎಲ್ಲರು ದೂರವಾಗಬೇಕಾದ ಸಮಯವಾಗಿತ್ತು, ಎಲ್ಲರೂ ಮುಂದಿನ ಪ್ರೌಡ ಶಿಕ್ಷಣವನ್ನು ಎಲ್ಲಿ  ಮುಂದುವರಿಸುವುದು ಎಂದು ಪಟ್ಟಿ ತಯಾರು ಮಾಡುತಿದ್ದರು, ಮುಂದಿನ ದಿನದಲ್ಲಿ ಈಗಿನಂತೆ ಒಂದು ಗಂಡು ಹೆಣ್ಣು ಸ್ವಚ್ಚಂದ ವಾಗಿ ಮಾತಾಡಲು ಇಲ್ಲ ಆಟವಾಡುವಂತಿರಲಿಲ್ಲ, ಏನಿದ್ದರು ದೂರ ದಿಂದಲೇ ಹಾಯ್ ಬಾಯ್ ಹೇಳುವುದು ಅನಿವಾರ್ಯ ಎಂದು ಎಲ್ಲರಿಗು ಮನವರಿಕೆ ಆಗಿತ್ತು.ಅಂದು ನಮಗಾಗಿ ವಿಶೇಷ ಕೆಲವು ಕಾರ್ಯಕ್ರಮಗಳನ್ನು ಶಾಲೆಯಲ್ಲಿ ನಿಯೋಜಿಸಲಾಗಿತ್ತು, ಕಾರ್ಯಕ್ರಮ ಮುಗಿಯುತಿದ್ದಂತೆ ನಮ್ಮ ಜೀವನದ ಬಾಲ್ಯಎಂಬ ಅಮೂಲ್ಯ ಕೊಂಡಿಯೊಂದು ಕಳಕೊಂಡಂತೆ ಭಾಸವಾಗುತಿತ್ತು.ಕಾರ್ಯಕ್ರಮ ೩ ಗಂಟೆಯ ಸುಮಾರಿಗೆ ಮುಗಿಯಿತು, ಬಳಿಕ ೪:೩೦ -೫ ರ ತನಕ ಕ್ರಿಕೆಟ್ ಆಡಿದೆವು,ಬಳಿಕ ಎಲ್ಲರಿಗೆ ಬೀಳ್ಕೊಟ್ಟು ನಾನು ಜಯರಾಜ್ ಮತ್ತು ನವಿನಾಕ್ಷ ಮೂವರು ನಮ್ಮ ದಾರಿಯಲ್ಲಿ ಮನೆಗೆ ಹೊರಟೆವು.

ಅದು ಮಾವು ಬಿಡುವ ಸಮಯ ದಾರಿಯ ಮದ್ಯದಲ್ಲಿ ಒಂದು ದೊಡ್ಡ ತೋಟದ ಒಂಟಿ ಮನೆ, ಅಲ್ಲಿ ಯಾರು ವಾಸಿಸುತ್ತಿರಲಿಲ್ಲ, ಈ ವಿಷಯ ಎಲ್ಲರಿಗು ತಿಳಿದಿತ್ತು, ಅಂದು ಆ ಮಾವಿನಮಿಡಿ ಅದೇಕೋ ತುಂಬಾ ಸೆಳೆಯುತಿತ್ತು, ಮೂವರು ಆ ತೋಟದ ಗೇಟ್ ತೆಗೆದು ಒಳ ಹೊಕ್ಕೆವು. ಸರಿ ಸುಮಾರು ೮೦ ರಿಂದ  ೧೦೦ ವರ್ಷ ಹಳೆಯ ಒಂದು ದೊಡ್ಡ ಮರ,ಪ್ರತಿ ಗೆಲ್ಲಿಗೆ ೧೦೦೦ ಕ್ಕೂ ಹೆಚ್ಚು ಬಲಿತ ಮಾವಿನ ಕಾಯಿ , ತುಂಬಾ ಎತ್ತರದ ಮರ, ಆ ಎತ್ತರಕ್ಕೆ ನಮ್ಮ ಕಲ್ಲು ತಲುಪಿದರೆ ಕನಿಷ್ಟಪಕ್ಷ ಒಂದು ಕಾಯಿ ಕೆಳಗೆ ಬೀಳುವುದು ನಿಶ್ಚಿತ, ಆದರೆ ಆ ಎತ್ತರಕ್ಕೆ ಕಲ್ಲು ತಲುಪಿಸುವುದೇ ದೊಡ್ಡ ಸಾದನೆ ಆ ವಯಸ್ಸಿಗೆ.ಒಂದು ಹತ್ತು ಹನ್ನೆರಡು ಕಲ್ಲು ಎಸೆದಿರಬಹುದು ಅದರಲ್ಲಿ ಒಂದೇ ಒಂದು ಕಲ್ಲು ಗುರಿ ತಲುಪಿದ್ದು , ಆ ಒಂದೇ ಕಲ್ಲು ಕೆಳಗೆ ಬಿಳುವಾಗ ೩ ಆಗಿತ್ತು, ಮರ ತುಂಬಾ ಕಾಯಿ ಇರುವಾಗ ಎರಡೇ ಕಾಯಿಯಲ್ಲಿ ಮೂರು ಜನ ಹಂಚಿ ತಿನ್ನಲು ಮಜಾ ವಿರಲಿಲ್ಲ.ಒಬ್ಬರ ಹಿಂದೆ ಒಬ್ಬರಂತೆ ಸರದಿಯಲ್ಲಿ ಮೂವರು ಕಲ್ಲು ಎಸೆಯುತಿದ್ದೆವು.

ಸ್ವಲ್ಪದರಲ್ಲೇ ಯಾರೋ ಬೆನ್ನಿಗೆ ಹಾಕಿದ ಬಾಗ್ ಎಳೆದ ಅನುಭವವಾಯಿತು ಹಿಂದೆ ತಿರುಗಿ ನೋಡಿದಾಗ ೪೫ ತುಂಬಿದ ಒಬ್ಬ ವ್ಯಕ್ತಿ, ಮುಖದಲ್ಲಿ ದಟ್ಟ ಮೀಸೆ, ಮುಖದಿಂದ ೨ ಇಂಚು ಮೇಲೆ ಎದ್ದು ನಿಂತ ೨ ಲಿಂಬೆ ಗಾತ್ರದ ದೊಡ್ಡ ಕಣ್ಣ ಬುಡ್ದೆ ನೋಡಿದರೆ ಹೆದರಿಕೆ ಹುಟ್ಟುತ್ತಿತ್ತು, ಮೂವರು ತುಂಬಾ ಹೆದರಿದ್ದೆವು, ನಮ್ಮನ್ನು ಆ ತೋಟದ ಒಂದು ಮೂಲೆಗೆ ಕರಕೊಂಡು ಹೋಗಿ ನಿಮ್ಮ ಮನೆಯಲ್ಲಿ ತಿಳಿಸುವೆ ಎಂದು ಗದರಿಸಲಾರಂಬಿಸಿದರು, ನನ್ನ ಅಪ್ಪನ ಹೆಸರು ಕೆಳುತಿದ್ದಂತೆ ನನಗೆ ಗೊತ್ತು ನಿನ್ನ ತಂದೆಯವರು, ನೋಡು ಇನ್ನು ಮುಂದೆ ಯಾವತ್ತು ಹೀಗೆ ಕದಿಯ ಬಾರದು ತಂದೆಯವರಲ್ಲಿ ಹೇಳಿದರೆ ನಿನ್ನನ್ನು ಸರಿ ದಾರಿಗೆ ತರುತ್ತಾರೆ .. ಹೇಳುತ್ತೇನೆ ನೋಡು ಎಂದಾಗ ಗೊತ್ತಿಲದೇ ಮೈಯಲ್ಲೆಲ್ಲ ಕಂಪನ ಹೆಚ್ಚಲಾರಂಬಿಸಿತು.ಕೈಯಲ್ಲಿದ್ದ ಸಪುರದ ಕೋಲಿನಿಂದ ಹೊಡೆತ ಅಷ್ಟೇನೂ ಜೋರಾಗಿರ ದಿದ್ದರುಮನಸಿನ ಮೇಲೆ ಬಲವಾದ ಗಾಯ ಮಾಡಿತ್ತು.

ಮನೆಗೆ ಬಂದವನೇ ಯಾವುದರಲ್ಲೂ ಉಲ್ಲಾಸ ಇಲ್ಲದಂತೆ ಆಗಿ ಹೋಗಿತ್ತು, ೭ :೩೦ ಆಗುತಿದ್ದಂತೆ ಹಸಿವಿಲ್ಲದಿದ್ದರೂ ಹಸಿವಾಗುತ್ತಿದೆ , ನಿದ್ದೆ ಬರುತ್ತಿದೆ ಎಂದು ಊಟ ಮುಗಿಸಿ ಮಲಗಿ ಕೊಂಡೆ. ತಂದೆಯವರಿಗೆ ಅವರು ಎಲ್ಲಿ ಎಲ್ಲಾ ವಿಚಾರ ಹೇಳಿರುವರೋ ... ತಂದೆಯವರ ಕೈಯಿಂದ ಇನ್ನಷ್ಟು ಒದೆ ತಿನ್ನಬೇಕೋ ಎಂಬ ಚಿಂತೆಯಲ್ಲೇ ಅಂದು  ತಂದೆಯವರು ಮನೆಗೆ ಬರುವಮುಂಚೆಯೇ ಮಲಗಿದ್ದೆ.

ಒಂದು ವಾರ ಕಳೆಯಿತು , ಇನ್ನು ತಂದೆಯವರು ಎಂದೂ ಬೈದಿರಲಿಲ್ಲ, ಎಲ್ಲೂ  ನಾನು ಕದ್ದು ಸಿಕ್ಕಿಹಾಕಿ ಕೊಂಡ  ವಿಚಾರ ಅವರಿಗೆ ಗೊತ್ತಾಗಿದೆ ಎಂದು ತೋರಿಸಿ ಕೊಡಲೇ ಇಲ್ಲ. ಮುಂದಿನ ವಾರ ನಾನು ರಜೆಯಲ್ಲಿ ಅಂಗಡಿಯಲ್ಲಿ ಕೂತಿರಬೇಕಾದರೆ ಅಂಗಡಿಗೆ ಬಂದ ಆ ವ್ಯಕ್ತಿನನ್ನಲ್ಲಿ  "ಚಿಕ್ಕಂದಿನಲ್ಲಿ ತಪ್ಪು ಮಾಡುವುದು ಸಹಜ.. ನಾನು ತಿದ್ದಿದ್ದೇನೆ... ಮುಂದೆಂದು ಮಾಡ ಬೇಡ ..."ಎಂದಾಗ , ತಂದೆಯವರು ಏನು ಗೊತ್ತಿಲ್ಲದವರ ಮುಖ ಛಾಯೆಯಲ್ಲಿದ್ದರು. ಇದನ್ನು ನೋಡಿ ಅವರು ಏನು ಇವರಲ್ಲಿ ಹೇಳಿಲ್ಲ ಎಂಬುದು ಖಾತ್ರಿ ಆಯಿತು.

ತಂದೆಯವರು ಹೊಡೆಯಲಿಲ್ಲ ಬಡಿಯಲಿಲ್ಲ, ಆದರೆ ಆ ವ್ಯಕ್ತಿಯ ಒಂದೇ ಸಣ್ಣ ಹೊಡೆತ ಮತ್ತು ಆ ಗಾಂಭೀರ್ಯ ನುಡಿ  ಮನಸ್ಸಲ್ಲಿ ಇನ್ನೆಂದೂ ಅಂತಹ  ಕೆಲಸ ಮಾಡಲು ಹೋಗಬೇಡ ಎಂದು ನನಗೆ ಆಜ್ಞೆ ನೀಡಿತ್ತು. ಆಒಂದು ಸಣ್ಣ ಸಂಜೆ ದೊಡ್ಡದಾದ ನಿರ್ಧಾರಕ್ಕೆ ಮುನ್ನುಡಿ ಆಯಿತು.    



ಕಾಮತ್  ಕುಂಬ್ಳೆ

ಹಿಂದಿನ ತುತ್ತು : http://sampada.net/blog/kamathkumble/15/10/2010/28508

Rating
No votes yet

Comments