೧೯ ಆಗಸ್ಟ್ ೨೦೦೫

೧೯ ಆಗಸ್ಟ್ ೨೦೦೫

ನಿನ್ನೆಯ ದಿನ ವರಮಹಾಲಕ್ಷಿ ವ್ರತ, ರಕ್ಷಾ ಬಂಧನ ಮತ್ತು ಯಜುರುಪಾಕರ್ಮ. ಮುಂಬೈನಲ್ಲಿ ರಕ್ಷಾ ಬಂಧನಕ್ಕಾಗಿ ಇಂದು ಶನಿವಾರ ರಜೆ ಘೋಷಿಸಿದ್ದಾರೆ. ಆದರೇ ರಜೆ ಇರಲಿ ಇಲ್ಲದಿರಲಿ ಮುಂಬೈವಾಸಿಗಳು ಹಬ್ಬವನ್ನಂತೂ ಆಚರಿಸಿಯೇ ಆಚರಿಸುತ್ತಾರೆ. ಶುಕ್ರವಾರ ರಕ್ಷಾಬಂಧನವಾದ್ದರಿಂದ ಅಂದು ರಜೆ ಇಲ್ಲದಿದ್ದರೂ ಹೆಚ್ಚಿನ ಜನರು ಕಛೇರಿ ಕಾರ್ಯಾಲಯಗಳಿಗೆ ರಜೆ ಹಾಕಿದ್ದರು. ಬೆಳಗ್ಗೆ ಕೆಲಸಕ್ಕೆಂದು ಹೊರಟಾಗ ಲೋಕಲ್ ಟ್ರಿನ್ ನಲ್ಲಿ ಸಾಮಾನ್ಯದ ಜನಜಂಗುಳಿ ಇರಲೇ ಇಲ್ಲ. ಎಲ್ಲೆಲ್ಲೂ ಸ್ಮಶಾನದ ವಾತಾವರಣ. ಇದೇನಪ್ಪ ನಾನು ಗೊತ್ತಿಲ್ಲದೇ ರಜೆಯ ದಿನ ಬ್ಯಾಂಕಿಗೆ ಹೋಗುತ್ತಿದ್ದೇನಾ ಅಂತ ಸ್ವಲ್ಪ ಯೋಚಿಸುವಂತಾಯ್ತು. ಸ್ನೇಹಿತರುಗಳನ್ನು ಕಂಡ ಮೇಲೆ ಆ ಸಂಶಯ ನಿವಾರಣೆ ಆಯ್ತು. ಗಂಡಸರು ತಮ್ಮ ತಮ್ಮ ಅಕ್ಕ ತಂಗಿಯರ ಮನೆಗೆ ರಾಖಿಯನ್ನು ಕಟ್ಟಿಸಿಕೊಳ್ಳಲು ಹೋಗುವರು. ಹೋಗುವಾಗ ತಮ್ಮ ಸಂಸಾರ ಸಮೇತರಾಗಿ ಹೋಗುವರು. ಆದ್ದರಿಂದ ಬೆಳಗ್ಗೆ ಅಷ್ಟು ಬೇಗ ಜನಜಂಗುಳಿ ಇರಲಿಲ್ಲ. ಈ ವಿಷಯ ನನಗೆ ಸಂಜೆ ಮನೆಗೆ ಮರುಳುವ ಸಮಯದಲ್ಲಿ ಅರಿವಾಯಿತು. ಸಂಜೆ ಬರುವಾಗ ಎಲ್ಲೆಲ್ಲಿ ನೋಡಿದರೂ ಮಕ್ಕಳ ಅರಚಾಟ ಕಿರುಚಾಟ. ಪುಟ್ಟ ಪುಟ್ಟ ಮಕ್ಕಳ ದಂಡೇ ಎಲ್ಲೆಲ್ಲಿಯೂ ಕಾಣುತ್ತಿತ್ತು. ಲೋಕಲ್ ಒಳಗೆ ಮಕ್ಕಳೊಡನೆ ತಂದೆ ತಾಯಿಗಳು ಬಂದರೆ ಇದ್ದ ಪ್ರಯಾಣಿಕರೆಲ್ಲಾ ಎದ್ದು ನಿಲ್ಲಬೇಕಾಯ್ತು. ಪಾಪ ಮಕ್ಕಳನ್ನು ಎತ್ತಿಕೊಂಡ ತಾಯಿಯನ್ನು ನಿಲ್ಲಲು ಬಿಡುವುದೇ - ಕೂತುಕೊಳ್ಳಲು ಜಾಗ ಕೊಡಬೇಕು. ಲೋಕಲ್ ಚರ್ಚ್ ಗೇಟ್ ನಿಂದ ದಾದರಿಗೆ ಬರುವುದರೊಳಗೆ ಮುಂದೆ ಬರುವ ಮಗು ತಾಯಂದಿರುಗಳಿಗೆ ಕೂತುಕೊಳ್ಳಲಲ್ಲ, ನಿಲ್ಲಲೇ ಸ್ಥಳವಿಲ್ಲ. ಆದರೂ ಇಲ್ಲಿಯ ಜನರು ಸ್ವಲ್ಪ ಬೇಜಾರಿಲ್ಲದೇ, ಇರುಸು ಮುರುಸುಗಳಿಲ್ಲದೇ ಅವರುಗಳಿಗೆ ಹೇಗೋ ಜಾಗ ಮಾಡಿಕೊಡುವರು. ಅವರುಗಳೂ ಅಷ್ಟೇ, ಹೆಂಗಸರ ಕಂಪಾರ್ಟ್ ಮೆಂಟ್ ಬಿಟ್ಟು ಗಂಡಸರ ಕಂಪಾರ್ಟ್ ಮೆಂಟಿಗೇ ಬರುವರು. ಇದಕ್ಕೆ ಕಾರಣವೇನೆಂದರೆ, ಮೊದಲನೆಯದಾಗಿ, ಗಂಡಸರು ತಮ್ಮೊಂದಿಗಿರುವುದು, ಎರಡನೆಯದಾಗಿ, ಇದು ಸುರಕ್ಷಿತ ಸ್ಥಳ. (ಹೆಂಗಸರ ಡಬ್ಬಿಯಲ್ಲೇ ಕಳ್ಳತನಗಳು ಜಾಸ್ತಿ ಆಗುವುದು). ಮತ್ತು ಮೂರನೆಯದಾಗಿ ಹೆಚ್ಚಿನದಾಗಿ ಮಾನವಂತಿಕೆ ತೋರುವುದು ಇಲ್ಲಿಯೇ. ಪ್ರತಿ ಹಬ್ಬಗಳಲ್ಲೂ ಇಂತಹ ವಾತಾವರಣ ನೋಡುವುದು ಸರ್ವೇ ಸಾಮಾನ್ಯ.
Rating
No votes yet

Comments