ಪ್ರಾಣೇಶ ರಾಯರ ಮಂಗನ ಪ್ರಸಂಗ
ಪ್ರಾಣೇಶ ರಾಯರು ಎಂದರೆ ಬೀದಿಯಲ್ಲಿ ಇರೋರಿಗೆಲ್ಲಾ ವಸಿ ತಲೆ ನೋವೆ. ರೇಡಿಯೋ ಆಫ್ ಮಾಡಿದರು ಒದರುಕೊಳ್ಳುತ್ತದಲ್ಲಾ ಆ ರಿತಿ ಇವರು. ನಾನು ಬೆಳಗ್ಗೆ ಎದ್ದು ಸೇವಿಂಗ್ ಮಾಡಿ, ಸ್ನಾನ ಮಾಡಿ, ಪ್ಯಾಂಟ್, ಸರ್ಟು ಹಾಕ್ಕೊಂಡು, ಕೈಲ್ಲೊಂದು ಊಟದ ಚೀಲ ಮಡಿಕ್ಕೊಂಡು ಡ್ಯೂಟಿಗೆ ಹೊಂಟೆ. ಇನ್ನೇನು ಸೈಕಲ್ ಹತ್ತಬೇಕು. ಎದರುಗಡೆ ಪ್ರಾಣೇಶ ರಾಯರು. ಇವರಿಗೆ ನಾವೆಲ್ಲರೂ, ಅವರೂ ಅಲ್ಲ, ಅವಳೂ ಅಲ್ಲ ಅಂತೀವಿ. ಕೆಲಸದಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ.
ಹರಿ ನಾಮ, ದಾಸರ ಪರದಗಳು ಅಂದರೆ ಪಂಚ ಪ್ರಾಣ ಇವರಿಗೆ. ಧಾರ್ಮಿಕ ಕಾರ್ಯಕ್ರಮ ಯಾವುದೇ ನಡೆದರೂ ಇವರು ಹಾಜರ್. ಮಠದ ಅಥವಾ ಖಾಸಗಿ ಕಾರ್ಯಕ್ರಮವಿದ್ದಾಗ ಕೂಡ ಕರೆಯದೇ ಬರುವ ಅತಿಥಿ ಇವರು. ಇವರು ಬರುವುದನ್ನು ಇಷ್ಟೊಂದು ವಿಶೇಷವಾಗಿ ಯಾಕೆ ಹೇಳುತ್ತಿದ್ದೇನೆಂದರೆ ಕನಿಷ್ಟ ಎಂದರೂ 10 -15 ದಾಸರ ಪದಗಳು, ಹರಿ ನಾಮಗಳನ್ನು ಒಗೆಯುತ್ತಾರೆ. ಅದನ್ನು ಹಿಡಿಯುವುದು ಬಿಡುವುದು ಅವರವರಿಗೆ ಸೇರಿದ್ದು.
ನೀವು ನಂಬಿದ್ರೆ ನಂಬಿ ಬಿಟ್ಟರೆ ಬಿಡಿ. ಇವರ ಗಾಯನ ಆಲಿಸಿ ಆಲಿಸಿ ನನಗೂ ಎಷ್ಟೋ ಹರಿ ನಾಮಗಳು ಬಾಯಿಗೆ ಬರುತ್ತೆ. ನಂಗೆ ಗೊತ್ತಿಲ್ಲದೇನೇ ಬಾತ್ ರೂಂನಲ್ಲಿ ಗೊಣಗುತ್ತಿರುತ್ತೇನೆ. ಇಲ್ನೋಡು ಎರಡನೇ ಪ್ರಾಣೇಶರಾಯರು ಅಂತಾ ನನ್ನ ಹೆಂಡರು. ಸಹವಾಸ ದೋಸ. ಊಟಕ್ಕೆ ಕೂತಾಗ ನಿಲ್ಲಿಸಿ ಊಟ ಮಾಡಿ ಸಾಮಿ ಅಂದ್ರೂ ಮಾಡಲ್ಲ. ಎಲ್ಲರೂ ಕೈ ತೊಳೆಯಲು ಹೋದ ಮೇಲೆ ಇವರ ಊಟ ಪ್ರಾರಂಭ. ಅಡಿಗೆಯವರು ಇವನು ಯಾಕಾದ್ರೂ ಬರುತ್ತಾನೋ ಅಂತಾ ಸಾಪ ಹಾಕ್ತಾರೆ. ವಿ.ಐ.ಪಿ ತರಹ ಇವರಿಗೆ ಒಬ್ಬರಿಗೆ ಬಡಿಸಬೇಕು ಅಂತಾ.
ಇವರಿಗೆ ಹಾಡು ಹೇಳಲು ಒತ್ತಾಯ ಮಾಡಲೇಬೇಕಿಲ್ಲ ಅದು ತಾನಾಗಿಯೇ ಸುರುವಾಗುತ್ತೆ. ನಿಲ್ಸೋದಕ್ಕೆ ಮಾತ್ರ ಒತ್ತಾಯ ಮಾಡ್ಬೇಕು. ಇವರು ಕಾರ್ಯಕ್ರಮಗಳಲ್ಲಿ ಹಾಡು ಹೇಳುವಾಗ ಮೈಕ್ ಆಫ್ ಮಾಡಿದ್ದು ಉಂಟು. ಕೇಳಿ ಕೇಳಿ ಸಾಕಾಗಿ. ಈಗ ವಿಷಯಕ್ಕೆ ಬರುತ್ತೇನೆ. ನಮಸ್ಕಾರ ಅಂದೆ. ಕೇಳ್ಳಿಲ್ಲ. ಅಡ್ ಬಿದ್ದೆ ಸಾಮಿ. ಇದೇ ನೋಡಿ ನಾನು ಮಾಡಿದ ತಪ್ಪು. ಅವರು ಪ್ರತಿಯಾಗಿ ನಮಸ್ಕಾರ ಕೋಮಲ್ ಅಂದರು.
ಇನ್ನೇನು ಸೈಕಲ್ ಹತ್ತಬೇಕು ಡ್ಯೂಟಿಗಾ, ಒಂದು ನಿಮಿಷ ಕೋಮಲ್ ಅಂದ್ರು. ಕರೆಂಟ್ ಬಿಲ್, ವಾಟರ್ ಬಿಲ್ ಕಟ್ಟಕ್ಕೆ ಹೇಳ್ತಾರೆ ಅಂದ್ಕಂಡು ಬೇಗ ಬಿಲ್ ಕೊಡಿ ಅಂದೆ. ಅದಲ್ಲಾ. ಇವತ್ತು ನಾವು ಯಾರಿಗೆ ಉಪಕಾರ ಮಾಡುತ್ತೇವೋ ಅದನ್ನು ದೇವರು ಗಮನಿಸಿರುತ್ತಾನೆ. ನಮಗೂ ಒಂದು ದಿನ ನಿಶ್ಚಿತವಾಗಿ ಸಹಾಯ ಮಾಡುತ್ತಾನೆ. ನಿಮ್ಮ ಎಲ್ಲಾ ಬಿಲ್ ಗಳನ್ನು ನಾನೇ ಕಟ್ಟಿದ್ದೇನೆ. ನನಗಿನ್ನೂ ಪ್ರಮೋಸನ್ ಸಿಕ್ಕೇ ಇಲ್ಲಾ ಅಂದೆ. ಅದಲ್ಲಪ್ಪಾ, ನಮ್ಮ ಜೀವನದ ಕಾರ್ಯಗಳನ್ನು ನಾವು ಪರಿಪೂರ್ಣವಾಗಿ ನಿರ್ವಹಿಸಬೇಕು. ಅಕ್ಕಪಕ್ಕದವರ ಜೊತೆ ಸಹ ಬಾಳ್ವೆ ನಡೆಸಬೇಕು. ಇಲ್ಲದ್ದಿದ್ದರೆ ಮನುಷ್ಯನಾಗಿ ಹುಟ್ಟಿ ನಾವು ಅಪ್ರಯೋಜಕರಾಗುತ್ತೇವೆ ಅಂದರು. ನಿನ್ನೆ ನಾನು ಯಾರ ಹತ್ರಾನೂ ಜಗಳವಾಡಿಲ್ಲವಲ್ಲ. ಅಂದು ಯೋಚಿಸುತ್ತಿರುವಾಗಲೇ ಎಲ್ಲೆಡೆ ದೇವರಿದ್ದಾನೆ. ಅವನ ನಾಮ ಸ್ಮರಣೆಯಿಂದ ನಮ್ಮ ಸುತ್ತಮುತ್ತಲಿನ ವಾತವಾರಣ ಪರಿಶುದ್ದವಾಗುತ್ತದೆ ಎಂದು ಭಕ್ತ ಕನಕದಾಸ ಚಿತ್ರ ಗೀತೆಯ ಎರಡು ಲೈನ್ ಒಗೆದ್ರು.
ಇವರು ನನಗೆ ಬೋಧನೆ ಮಾಡ್ತಾ ಇದ್ರೆ ದಾರಿಯಲ್ಲಿ ಹೋಗುವವರು ಒಮ್ಮೆ ನನ್ನ ಮುಖ ನೋಡಿ ತಲೆಯಾಡಿಸುತ್ತಾ ಹೋಗುತ್ತಿದ್ದರು. ನನ್ನ ಹೆಂಡ್ತಿ ಮನೆಯಿಂದ ಹೊರಗೆ ಬಂದು ಡ್ಯೂಟಿಗೆ ಟೇಂ ಆಗುತ್ತಾ ಅಂತಾ ನನ್ನ ಹೆಣ ಎತ್ತಿದ್ರಿ. ಈ ಯಪ್ಪನ ಜೊತೆ ಏನ್ ನಿಮ್ಮ ಮಾತು. ಈ ಯಪ್ಪಂದು ಇಡೀ ದಿನ ದಾಸರ ಪದ ಕೇಳಿ ಕೇಳಿ ಸಾಕಾಗೋಗಿದೆ, ತೊಲಗಬಾರ್ದೆ ಎಂದು ಗೊಣಗಿದಳು. ರಾಯರೇ ನೀವು ಏನ್ ಹೇಳಬೇಕು ಅಂತಾ ಇದೀರಿ ದಯವಿಟ್ಟು ಬೇಗ ಹೇಳ್ರಿ. ನಂಗೆ ಡ್ಯೂಟಿಗೆ ಟೇಂ ಆಗಿದೆ ಎಂದೆ. ಅವರ ಪ್ರವಚನ, ಪದಗಳನ್ನು ಕೇಳಿ ಆಗಲೇ ಒಂದು ಕಿವಿಯಲ್ಲಿ ರಕ್ತ ಸೋರಿದಂತೆ ಭಾಸವಾಗುತ್ತಿತ್ತು. ಆದರೆ ನಮ್ಮ ರಾಯರು ಎಷ್ಟು ಅಚಲ ಎಂದರೆ ತಮ್ಮ ಪ್ರವಚನದ ಜೊತೆಗೆ ಪದಗಳನ್ನು ಮಾತ್ರ ದೇವರು ಮೈಮೇಲೆ ಬಂದಂತೆ ಹಾಡುತ್ತಲೇ ಇದ್ದರು. ಈಗ ತಪ್ಪಿಸ್ಕೋ ಬೇಕು.
ಇವರಿಗೆ ಬೈದರೆ ಬೇಜಾರುಗುತ್ತೆ ಏನ್ ಮಾಡ್ಲಿ ಅಂತಾ ಯೋಚಿಸುತ್ತಿದ್ದಾಗಲೇ ಯಾರೋ ಹೇಳಿದ್ದು ಜ್ಞಾಪಕಕ್ಕೆ ಬಂತು " ರಾಯರೇ ನಿಮ್ಮ ಟವಲ್ನಾ ಮಂಗ ತೊಗಂಡು ಹೋಗಿತ್ತಂತೆ ಹೌದಾ" ಅಂದೆ. ಅಷ್ಟೆ, ರಾಯರು ತಕ್ಷಣ, ಮುಂಡೇದೇ ನಿನಗೆ ಯಾರೋ ಹೇಳಿದ್ದು, ಹಿರಿಯರು ಅಂದ್ರೆ ಮುಂಡೇವಕ್ಕೆ ಗೌರವ ಇಲ್ಲಾ ಅಂತಾ ಹೊರಟೇ ಹೋದ್ರು. ಸಾಯಂಕಾಲ ಮನೆಗೆ ಬಂದು ನನ್ನ ಹೆಂಡ್ರಿಗೆ ರಾಯರು ಟವಲ್ ಅಂದ್ರೆ ಸಿಟ್ಟಾಗ್ತರಲ್ಲೇ ಯಾಕೇ ಅಂದೆ.
ಅದಾ......., ಹೋದ ಮಂಗಳವಾರ ಬೆಳಗ್ಗೆ ಸ್ನಾನಕ್ಕೆ ಹೊರಟಿದ್ರಂತೆ. ಅವರ ಹೆಂಡ್ತಿ ಒಸಿ ಕಾಪಿ ಕುಡ್ಕೊಂಡು ಹೋಗಿ ಅಂದಾವ್ರೆ. ಈ ಯಪ್ಪ ಬಿಸಿಯಾಗಕ್ಕೆ ಟೇಂ ಹಿಡಿತದೆ ಅಂತಾ ಪೇಪರ್ ಹಿಡ್ಕೊಂಡು ಜಗಲಿ ಮೇಲೆ ಓದ್ತಾ ಕೂತಿದ್ರು. ಇದ್ದಕಿದ್ದಂತೆ ಮಂಗಗಳ ಜಗಳ ಸುರುವಾಯ್ತು. ಒಂದು ಮಂಗ ಇವರ ಮೇಲೆ ಬಿದ್ದು, ಟವಲ್ನ ಎಳ್ಕೊಂಡು ಹೋಗೇ ಬಿಡ್ತು. ಇವರು ಲಂಗೋಟಿಯಲ್ಲಿದ್ರು. ತಕ್ಷಣಕ್ಕೆ ಗೊತ್ತಾಗಿಲ್ಲ. ವಯಸ್ಸಾಗಿದೆ ನೋಡಿ. ಯಾಕೋ ತಣ್ಣನೆ ಗಾಳಿ ಬತ್ತದಲ್ಲಾ ಅಂತಾ ನೋಡ್ಕೊಂಡೈತೆ. ಆಗ ಗಾಬರಿಯಾಗಿ ರಸ್ತೆಯಲ್ಲಿ ಒಂದು ರೌವಂಡ್ ಹಾಕಾವ್ರೆ. ಅಲ್ಲಿದ್ದವರಿಗೆಲ್ಲಾ ರಾಯರು ಏನಾದರೂ ಮೆಂಟ್ಲ್ ಗಿಂಟ್ಲ್ ಆಗ್ ಬಿಟ್ಟರಾ ಅಂತ ಡೌಟು. ಲಂಗೋಟಿಯಲ್ಲಿ ಯಾಕೆ ಹಿಂಗ್ ತಿರುಗುತ್ತಾ ಇದಾರೆ ಅಂದ್ಕೊಳ್ಳುವಷ್ಟರಲ್ಲೇ. ರಾಯರು ತಕ್ಷಣವೇ ಪಕ್ಕದ ಮನೆಗೆ ನುಗ್ಗಿದಾರೆ. ಅವರ ಮನೆಯವರೆಲ್ಲಾ ರಾಯರ ಅವತಾರ ನೋಡಿ ಜೋರಾಗಿ ಅಯ್ಯೋಓಓಓಓಓಓಓಓಓಓಓಓಓಓಓ ಅಂತಾ ಕೂಗಿದ್ರು ಅಂದ್ಲು.
ಗಾಬರಿಯಾಗಿ ನಾನೂ ರಾಯರ ಅವತಾರ ನೋಡೋಕ್ಕೆ ಹೋಗಿದ್ದೆ ಕಣ್ರಿ ಅಂದ್ಲು. ಥೂ.... ಹಾಳಾಗಿ ಹೋಗ್ಲಿ. ಅಲ್ಲೇ ಅವರ ಮನೆಯೊಳಗೆ ಹೋಗಬಹುದಿತ್ತಲ್ಲಾ ಅಂದೆ. ಅವರ ಮನೇಲಿ ಒಂದು ಗೂಬೆಯಿದೆಯಲ್ಲಾ (ರಾಯರ ಮೊಮ್ಮಗ), ಯಾವಾಗಲೂ ಬಾಗಿಲು ಹಾಕೋ ದುರ್ಬುದ್ದಿ, ರಾಯರು ಜಗಲಿ ಮೇಲೆ ಕೂರ್ತಿದ್ದಾಗೇನೇ ಅವನು ಬಾಗಿಲು ಹಾಕಿದ್ದಾನೆ ಎಂದ್ಲು. ಆಮ್ಯಾಕೆ ಅವರ ಹೆಂಡರು ಬಂದ್ರು ಸ್ಯಾನೆ ಉಗದಾವ್ರೆ, ಮಂಗ ಟವಲ್ ಬಿಚ್ಕೊಂಡು ಹೋಗೋ ತನಕ ಏನ್ ಮಾಡ್ತಿದ್ರಿ. ಊರನೋರಿಗೆಲ್ಲಾ ದರ್ಶನ ಕೊಟ್ರಾ. ಅದೇನ್ ಬಾಳೋ ನಿಮ್ದು. ಈಗ ರಾಯರ ಹೆಂಡತಿ ಕಟ್ಟಪ್ಪಣೆ ಹೊರಡಿಸಿದ್ದಾರಂತೆ ಜಗುಲಿ ಮೇಲೆ ಕೂತುಕೊಳ್ಳಬೇಕೆಂದರೆ ಕಚ್ಚೆ ಪಂಚೆ ಉಟ್ಕೊಂಡು ಕೂತ್ಕೊಳ್ಳಿ. ಕಡೇ ಪಕ್ಸ ಮಂಗ ಎಳೆಯಬೇಕಾದ್ರೆ ಗೊತ್ತಾಯ್ತದೆ ಅಂತಾ, ಈಗ ರಾಯರು ಎದುರು ಬಂದಾಕ್ಷಣವೇ ಅವರಿಂದ ತಪ್ಪಿಸಿಕೊಳ್ಳಲು ರಾಮ ಬಾಣ. ರಾಯರೇ ಅದೇನು ಮಂಗನ ಕಥೆ ಅಂದ್ರೆ ಸಾಕು, ಹಿರಿಯರು, ದೊಡ್ಡೋರು ಅನ್ನೋ ಗೌರವವಿಲ್ಲ ಈ ಮುಂಡೇವಕ್ಕೆ ಅಂತಾ ಕ್ಯಾಕರಿಸಿ ಉಗೀತಾರೆ.
Comments
ಉ: ಪ್ರಾಣೇಶ ರಾಯರ ಮಂಗನ ಪ್ರಸಂಗ
In reply to ಉ: ಪ್ರಾಣೇಶ ರಾಯರ ಮಂಗನ ಪ್ರಸಂಗ by suresh nadig
ಉ: ಪ್ರಾಣೇಶ ರಾಯರ ಮಂಗನ ಪ್ರಸಂಗ
In reply to ಉ: ಪ್ರಾಣೇಶ ರಾಯರ ಮಂಗನ ಪ್ರಸಂಗ by suresh nadig
ಉ: ಪ್ರಾಣೇಶ ರಾಯರ ಮಂಗನ ಪ್ರಸಂಗ
ಉ: ಪ್ರಾಣೇಶ ರಾಯರ ಮಂಗನ ಪ್ರಸಂಗ
In reply to ಉ: ಪ್ರಾಣೇಶ ರಾಯರ ಮಂಗನ ಪ್ರಸಂಗ by kavinagaraj
ಉ: ಪ್ರಾಣೇಶ ರಾಯರ ಮಂಗನ ಪ್ರಸಂಗ