ವಿಶೇಷ ದೀಪಾವಳಿ ಫ್ರಮ್ ಗೌಡಪ್ಪ
ಬೆಳಗ್ಗೆನೇ ಗೌಡಪ್ಪ ತಲೆ ಮೇಲೆ ಟವಲ್ ಹಾಕಂಡು ಹೊರಗೆ ಬಂದು ನೋಡ್ತಾನೆ. ಮನೆ ಮುಂದೆ ಸಾನೇ ಸಗಣಿ ಅದರ ಮ್ಯಾಕೆ ಚೆಂಡು ಹೂವು. ಗೌಡ ತಕ್ಷಣನೇ ಅವನ ಹೆಂಡರು ಬಸಮ್ಮನ್ನ ಕರೆದು, ಏನಮ್ಮಿ ಇದು, ಹಸಾನ ಕೊಟ್ಟಿಗೇಲಿ ಕಟ್ಟಲಿಲ್ವಾ ಅಂದ. ಯಾಕ್ರೀಈಈ, ಇಲ್ಲೇ ಸಗಣಿ ಹಾಕೈತೆ. ಏ ಇವತ್ತು ದೀಪಾವಳಿ ಅದಕ್ಕೆ ಸಗಣಿಗೆ ಇಟ್ಟು ಪಾಂಡವರ ಪೂಜೆ ಮಾಡಿದೀನಿ ಅಂತು ಗೌಡನ ಹೆಂಡರು ಬಸವಿ. ಹಿಂಗಾದ್ರೆ ಪಾಂಡವರು ಬರಕ್ಕಿಲ್ಲಾ. ಸೊಳ್ಳೆ ಕೂತು ಚಿಕನ್ ಗುನ್ಯಾ ಬತ್ತದೆ ಅಂದ ಗೌಡಪ್ಪ. ಬಸಮ್ಮ ಹೆಂಗೆ ಪೂಜೆ ಮಾಡಿದ್ಲು ಅಂದ್ರೆ ಒಂದೊಂದು ಸಗಣಿ ಗುಪ್ಪೆ ಸಣ್ಣ ಗುಡ್ಡ ಕಂಡಂಗೆ ಕಾಣೋದು. ಏನಾದ್ರೂ ತುಳಿದ್ರೆ. ಒಂದು ಬಕ್ಕಿಟ್ಟು ನೀರು ಬೇಕು, ತೊಳೆಯೋಕ್ಕೆ. ಇನ್ನೂ ಪಕ್ಕದ ಮನೆಯಿಂದ ಸಗಣಿ ಇನ್ನೂ ತರ್ತಾನೆ ಇದ್ಲು. ಯಾಕಮ್ಮಿ ನಮ್ಮ ಮನೆ ಸಗಣಿ ಖಾಲಿ ಆಯ್ತಾ. ಏ ನಮ್ಮ ಹಸಕ್ಕೆ ನಿನ್ನೆಯಿಂದ ಭೇದಿ ಆಗ್ತಾ ಐತೆ. ಅಂಗಾಗಿ ಸಗಣಿ ಫುಲ್ ಡೈಲ್ಯೂಟ್ ಆಗೈತೆ ಇಡಕ್ಕೆ ಬರಕ್ಕಿಲ್ಲಾ, ಬೇಕಾದ್ರೆ ಸಾರಿಸ್ಬೋದು ಅಂದ್ಲು. ಏ ಥೂ ಹೋಗು ಅತ್ಲಾಗೆ ಅಂದ ಗೌಡಪ್ಪ. ಮಗ ಸೆಂಟ್ ಹಾಕ್ಕಂಡಿದ್ರು, ಹತ್ತಿರ ಹೋದ್ರೆ ಸಗಣಿ ವಾಸನೆನೇ ಬರೋದು.
ಅಟ್ಟೊತ್ತಿಗೆ ನಮ್ಮ ಸ್ನೇಹಿತರ ಗುಂಪು ಗೌಡಪ್ಪನ ಮನೆತಾವ ಸೇರಿದ್ವಿ. ಕಿಸ್ನ ಹಿಂದಗಡೆ ಬ್ಯಾಂಡೇಜ್ ಸುತ್ತುಕೊಂಡು ಬಂದ, ಯಾಕಲಾ ಅಂದ ಗೌಡಪ್ಪ, ಏ ಹಸಕ್ಕೆ ಪೂಜೆ ಮಾಡ್ತಾ ಇದ್ದೆ. ಹಸ ಪೂಜೆ ಆದ್ ಮ್ಯಾಕೆ ಕರುಗೆ ಪೂಜೆ ಮಾಡುವ ಅಂತಾ ಬಗ್ಗಿದ್ದೆ, ಅದರಮ್ಮ ನಮ್ಮ ಕರುಗೆ ಏನೋ ಮಾತ್ತಾನೆ ಅಂತ ಹಿಂದುಗಡೆಯಿಂದ ತಿವಿದು ಹಿಂಗ್ ಮಾಡೈತೆ. ಮೂಲ್ಯಾಗೆ ಕಿಸ್ಕಂಡಿದ್ದೆ ಕಲಾ. ನಮ್ಮ ಅಣ್ಣ ಆಸ್ಪತ್ರಗೆ ಕರ್ಕಂಡು ಹೋದ ಅಂದ ಕಿಸ್ನ. ಡಾಕಟರುಗೆ ತೋರಿಸಿದ್ರೆ ಹೊಲಿಗೆ ಹಾಕಕ್ಕೆ ಬರಕ್ಕಿಲ್ಲ ಅಂಗೇ ಗಾಳಿ ಆಡ್ಲಿ ಅಂದವ್ರೆ. ಅವಾಗವಾಗ ಬಿಸಿ ನೀರ್ನಾಗೆ ಕುಂತ್ಕ ಅಂತ ಹೇಳವ್ರೆ ಅಂದ ಕಿಸ್ನ. ಮಗಂದು ಕೋಡು ಇನ್ನೊಂದು ಸ್ವಲ್ಪ ಉದ್ದ ಇದ್ದಿದ್ರೆ ಮಗಂದು ಮುಂದೆ ಬಂದಿರೋದು ಅಂದ ಸುಬ್ಬ.
ಸರಿ ಗೌಡಪ್ಪನ ಮಗಳು ಮಿಡಿ ಹಾಕ್ಕಂಡು ಬಂತು. ಯಾಕವ್ವಾ ಲಂಗ ದಾವಣಿ ಇಲ್ವಾ ಅಂದ ಗೌಡಪ್ಪ. ಹೊಲಸಿದ್ದು ಲಂಗನೇ ಒಗಿದ ಮ್ಯಾಕೆ ಹಿಂಗಾಗೈತೆ ಅಂತು. ಇದೇ ಹಿಂಗೆ ಆಗಿರಬೇಕಾದ್ರೆ ನಿಮ್ಮ ಹೆಂಡರು ಬ್ಲೌಸ್ ಏನಾಗಿರಬೋದು ಅಂದ ಸುಬ್ಬ. ಲೇ ಬಸವಿ ಹಳೇ ಬ್ಲೌಸೇ ಹಾಕಳೇ ಅಂದ ಗೌಡಪ್ಪ. ಯಾಕ್ರೀ. ಲೇ ಅದು ಸ್ಲೀವ್ ಲೆಸ್ ಆಗಿರ್ತದೆ ಕಲಾ ಅಂದ. ಏ ಥೂ. ಎಣ್ಣೆ ನೀರು ಸ್ನಾನ ಮಾಡಕಂಡು ಬರ್ತೀನಿ ಕನ್ರಲಾ, ಇಲ್ಲೇ ಚಾ ಕುಡಿತಾ ಕುಂತಿರಿ ಅಂದ ಗೌಡಪ್ಪ. ಕಿಸ್ನ ನಂಗೂ ಸ್ವಲ್ಪ ಎಣ್ಣೆ ಕೊಡಿ ಹೊಟ್ಟೆಗೆ ಹುಯ್ಕಂತೀನಿ ಅಂದ. ಲೇ ಇದು ತಲೆಗೆ ಹಾಕೋ ಎಣ್ಣೆ ಅಂದ್ ಮ್ಯಾಕೆ ಸುಮ್ಕಾದ. ನಿಮ್ಮ ಸ್ನಾನ ಆದ್ ಮ್ಯಾಕೆ ನಂಗೂ ಸ್ವಲ್ಪ ಬಿಸಿನೀರು ಉಳಿಸಿ ಅಂದ ಕಿಸ್ನ. ಯಾಕಲಾ, ಕುಂತ್ಕಳಕ್ಕೆ, ನಮ್ಮ ಮನೇಲಿ ಅನ್ನ ಬಸೆದ ಗಂಜಿ ಐತೆ ಅದ್ರಾಗೆ ಕುಂತ್ಕಳುವಂತೆ ನಡೆಯಲಾ ಅಂದ ಸುಬ್ಬ. ಏ ಥೂ,
ಸರಿ ಗೌಡಪ್ಪನ ಹೆಂಡರು ಕೆಟ್ಟ ಚಾ ಕೊಟ್ಲು. ಲೋಟ ತೊಳೆದು ಹೋಗ್ರಲಾ ಅಂತು. ಬೇಕಾಗಿತ್ತಾ. ಸರಿ ಎಲ್ಲಾ ನಿಂಗನ ಚಾ ಅಂಗಡಿ ತಾವ ಹೋದ್ವಿ. ಮತ್ತೆ ಬೈಟು ಚಾ, ಪ್ಲಾಸ್ಟಿಕ್ ಲೋಟದಾಗೆ. ತೊಳಿಯೋದು ತಪ್ತು ಅಂದ ಸೀನ. ಸರಿ ನಿಂಗನ ಮಗ ಚಿಲ್ಟು ಪಟಾಕಿ ಹೊಡಿತಾ ಇದ್ದ. ಅಂಗಡೀಲಿ ಬೀಡಿ ಸೇದುತ್ತಿದ್ದೋರಿಗೆ ಬೀಡಿ ಹೊಗೆ ಯಾವುದು ಪಟಾಕಿ ಹೊಗೆ ಯಾವುದು ಅಂತಾ ಗೊತ್ತಾಯ್ತಿರಲಿಲ್ಲ. ಆದ್ರೂ ಮುಂಡೇವು ಎಳೆದಿದ್ದೇಯಾ. ಕೆಮ್ಮೋವು ಗುಕ್ಕೂ, ಗುಕ್ಕೂ ಅಂತ. ಎಲ್ಲಾವೂ ತುಪ್ಪದ ಫ್ಯಾಕ್ಟರಿ. ಕಫ ುಗಿಯೋವು. ನಿಂಗನ ಮಗ 4ಕಟ್ಟು ಬೀಡಿ ತಗೊಂಡು ಹೋಗಿ ಬೆಂಕಿ ಹಚ್ಚಿದ್ದ. ಯಾಕಲಾ ಅಂದ್ರೆ ಬಡ್ಡೆ ಐದ ಸರಪಟಾಕಿ ಅನ್ನೋನು. ಅಪ್ಪ ಢಮ್ ಅನ್ಲಿಲ್ಲ ಅನ್ನೋನು. ಚಿಲ್ಟು ಊದಿನ ಕಡ್ಡಿ ಬಿಸಾಕಿದೋನೆ ಚಾ ಒಲೆಯಲ್ಲಿ ಉರಿತಿದ್ದ ಕೊಳ್ಳಿ ತಗೊಂಡು ರಸ್ತೆಗೆ ಬಂದ, ಯಾಕಲಾ ಮಗನೇ ಅಂದ ನಿಂಗ. ದೊಡ್ಡ ಪಟಾಕಿ ಹೊಡೆಯೋಕ್ಕೆ ಇದೇ ಬೇಕು ಊದಿನಕಡ್ಡಿ ಆಯಕ್ಕಿಲ್ಲಾ ಅಂದ ಚಿಲ್ಟು. ನಾವು ಸಾನೇ ದೊಡ್ಡ ಪಟಾಕಿ ಹೊಡಿತಾನೆ ಅಂತ ನೋಡ್ತಾನೇ ಇದ್ವಿ. ಎಲ್ಲಿ ಐತಲಾ ದೊಡ್ಡ ಪಟಾಕಿ. ಒಳಗೆ ಕೆಂಪುಗೆ ಎತ್ತರಗೆ ಐತೆ, ಪೈಪು ಕಿತ್ತು ಬೆಂಕಿ ಹಚ್ಚಬೇಕು ಅಂದ. ಅಯ್ಯೋ ಮುಂಡೆದೇ ಅದು ಅಡುಗೆ ಸಿಲಿಂಡರ್ ಕಲಾ ಅಂದ ನಿಂಗ. ಲೇ ನಿಂಗ ನೀನೇದ್ರೂ ಕೇಳದೇ ಹೋಗಿದ್ದರೆ ನಿನ್ನ ಮಗ ನಮಗೆಲ್ಲಾ ಹೊಗೆ ಹಾಕಿಸ್ತದ್ದ ಅಂದ ತಂತಿ ಪಕಡು ಸೀತು.
ಅಟ್ಟೊತ್ತಿಗೆ ಗೌಡಪ್ಪ ಬಂದ. ಲೇ ನೋಡ್ರಲಾ, ನಮ್ಮ ಅಳಿಯ ಬೆಂಗಳೂರಿಂದ ಸಾನೇ ಪಟಾಕಿ ಕಳಿಸಾವ್ನೆ, ಎಲ್ಲಾ ಸಂಜೆ ಮನೆತಾವ ಬನ್ರಿ ಹೊಡೆಯುವಾ ಅಂದ. ಅಟ್ಟೊತ್ತಿಗೆ ಸುಬ್ಬ ಮೊದಲು ನಮ್ಮನೆಗೆ ಬಂದು ಪಟಾಕಿ ಹೊಡೆಯೋದನ್ನ ನೋಡ್ರಿ ಅಂದ. ನೀನು ಪಟಾಕಿ ತಂದಿದೇನ್ಲಾ ಅಂದ ಸೀನ, ಹೂ ಕಲಾ ಆದರೆ ನಮ್ಮ ಪಟಾಕಿ ವಾಯು ಮಾಲಿನ್ಯ ಮಾಡಕ್ಕಿಲ್ಲಾ ಅಂದ ಸುಬ್ಬ. ಅದು ಹೆಂಗಲಾ. ನಿನ್ನೆ ನಮ್ಮ ಮನೆಯ ಎಲ್ಲಾರೂ ಬೇಳೆ ಒಬ್ಬಟ್ಟು ಸಾನೇ ತಿಂದಿದೀವಿ. ಸಂಜೆ ತಾವ ಭಾರೀ ಸವಂಡ್ ಬತ್ತದೆ ಬರ್ರಲಾ ಅಂದ ಸುಬ್ಬ. ಏ ಥೂ. ಲೇ ಮೊದಲು ಇವನನ್ನ ಕರ್ಕಂಡು ಹೋಗಿ ಎಮಿಸನ್ ಟೆಸ್ಟ್ ಮಾಡ್ಸರಲಾ, ಅಂಗೇ ಬ್ಯಾಕಿಗೊಂದು ಪ್ಲಗ್ ಹಾಕ್ರಲಾ ಅಂದ ಗೌಡಪ್ಪ. ಒಂದು ಬಾಕ್ಸ್ ಪಟಾಕಿ ತಗೊಂಡರೆ ಮೊಬೈಲ್ ಫ್ರೀ ಕಲಾ ಅಂದ ಸೀನ. ಪಟಾಕಿಗೆ ಎಷ್ಟಲಾ ರೇಟು, ಒಂದು ಬಾಕ್ಸ್ ಪಟಾಕಿಗೆ ಕೇವಲ 8ಸಾವಿರ ಅಂದ ಸೀನ. ಏ ಥೂ.
ಸರಿ ಸಂಜೆತಾವ ಎಲ್ಲಾ ಗೌಡಪ್ಪನ ಮನೆ ಮುಂದೆ ಸೇರಿದ್ವಿ. ದೀಪಕ್ಕೆ ಗೌಡನ ಹೆಂಡರು ಕ್ಯಾನಲ್ಲಿ ಸೀಮೆ ಎಣ್ಣೆ ಹಾಕ್ತಾ ಇದ್ಲು. ಯಾಕವ್ವಾ. ಆತ್ಮಹತ್ಯೆ ಮಾಡ್ಕಳವಾ ಅಂತಾ ತಂದಿದ್ದೆ. ವೇಸ್ಟ್ ಆಯ್ತದೆ ಅಂತಾ ದೀಪಕ್ಕೆ ಹಾಕ್ತಾ ಇದೀನಿ ಅಂತೂ. ಅಂಗಾರೆ ನಿಮ್ಮ ಮನ್ಯಾಗೆ ಇರೋ ಮುದುಕಿನೂ ವೇಸ್ಟ್, ಅದನ್ನ ಏನ್ ಮಾಡ್ತೀಯಾ ಅಂದ ಕಿಸ್ನ. ಬಳ್ಳಾರಿಗೆ ಕಳಿಸ್ತೀನಿ. ಯಾಕವಾ. ಅಲ್ಲಿ ಡೆಂಗ್ಯೂ ಐತೆ, ಮಣ್ಣು ಮಾಡೋ ಖರ್ಚು ಉಳಿತತೆ ಅಂತು. ಗೌಡಪ್ಪ ಚೆಡ್ಡಿ ಬನೀನ್ನಾಗೆ ಹೊರಗೆ ಬಂದ. ಲೇ ಗೌಡನ್ನ ಕರೆಯಲೇ ಅಂದ ಸುಬ್ಬ. ಲೇ ನಾನೇ ಕಲಾ. ಏ ಥೂ. ನೋಡ್ರಲಾ ಆಂದು ಸರ ಪಟಾಕಿ ಹಚ್ಚೋನು ಗೌಡಪ್ಪ, ಕಿಸ್ನ ಮದ್ದು ಕಿತ್ತು ಕೊಡುತ್ತಿದ್ದ. ಯಾವುದು ಢಮ್ ಅನ್ನಲ್ವೋ ಅದು ಕಿಸ್ನಂಗೆ ಫ್ರೀಯಾಗಿ ಕೊಟ್ಟು, ಉಸಾರಾಗಿ ಮಡಿಕಳಲ್ಲಾ ಅನ್ನೋನು, ಪಟಾಕಿ ಹಚ್ಚಿ ಕುಣಿಯೋನು. ಸಗಣಿ,ಡಬ್ಬದಲ್ಲಿ ಇಟ್ಟು ಮಜಾ ತಗಳೋನು. ಒಂದು ಕಿತಾ ಅವನ ಮುಖಕ್ಕೆ ಸಗಣಿ ಸಿಡಿದಿತ್ತು. ಇವನ ಐಡಿರೀಯಾಕ್ಕೆ ಹಳೇ ಕಲಗಚ್ಚು ಹುಯ್ಯಾ ಅನ್ನೋನು ಸುಬ್ಬ. ಏ ಥೂ.
ಸರಿ ಕೊಟ್ಟಿಗೆಯಲ್ಲಿ ನೋಡಿದ್ರೆ ಹಸಾನೇ ಇರ್ಲಿಲ್ಲ. ಪಟಾಕಿ ಸವಂಡ್್ಗೆ ಎಲ್ಲಾ ಹಗ್ಗ ಹರ್ಕಂಡು ಹೋಗಿದ್ವು. ಲೇ ಕಿಸ್ನ ಬಾಟಲಿ ತಗೊಂಡು ಬಾರಲಾ ರಾಕೆಟ್ ಹಚ್ಚಬೇಕು ಅಂದ ಗೌಡಪ್ಪ. ಸರಿ ಬಾಟಲಿ ಬಂತು, ಗೌಡಪ್ಪ ರಾಕೆಟ್ ಹಚ್ಚಿ ನೋಡ್ರಲಾ ಅಂದ. ರಾಕೆಟ್ ಸೀದಾ ಎದುರುಗಡೆ ರಾಜಮ್ಮನ ಮನೆ ಒಳಗೆ ಹೋಗಿ ಢಮ್ ಅಂತು. ಅವಳ ಗಂಡ ಅಮ್ಮಾ ಅಂದ. ನೋಡಿದ್ರೆ ಮಂಚದ ಮ್ಯಾಕೆ ಮಕ್ಕೊಂಡಿದ್ನಂತೆ ಪಂಚೆಯೊಳಗೆ ಹೋಗಿ ಢಮ್ ಅಂದಿತ್ತು, ಪಕ್ಕದ ಮನೆ ಸೀತಮ್ಮ ಬಂದು ಕಿಸ್ನಂಗೆ ಹೊಡಿತಾ ಇದ್ಲು. ಯಾಕವಾ. ಲೇ ಇವನು ನನ್ನ ಮಗು ಫೀಡಿಂಗ್ ಬಾಟಲಿ ತಂದು ಕೊಟ್ಟವ್ನೆ ಅಂದ್ಲು. ಕೊನೆಗೆ ಖಾಲಿ ಪೇಂಟ್ ಡಬ್ಬದಾಗೆ ಹಚ್ಚುತ್ತಿದ್ದ, ಮಗಂದು ಎರಡು ಕಿತಾ ಪೊಲೀಸ್ ಠಾಣೆ ಹತ್ತಿರ ಹೋಗಿ ಢಮ್ ಅಂತು. ಮುಂದಿದ್ದ ಸೆಂಟ್ರಿ ಪೊಲೀಸ್ ಯಾರೋ ಭಯೋತ್ಪಾದಕರು ಬಾಂಬ್ ಹಾಕ್ತಾವ್ರೆ ಸಾ ಅಂತಿದ್ದಾಗೆನೇ ಟೇಸನ್್ಗೆ ಬೀಗ ಹಾಕ್ಕೊಂಡು ಹೋಗಿದ್ವು.
ನೋಡ್ರಲಾ ಇದು ವಿಸೇಸ ಪಟಾಕಿ ಅಂತೆ, ಅಂದು ಡಬ್ಬಲ್ ಸವಂಡ್ ಲಕ್ಸ್ಮೀ ಪಟಾಕಿ ಹಚ್ಚಿದ. ಮಗಂದು ಉಲ್ಟಾ ಇಟ್ಟಿದ್ದ. ಒಂದು ಇಲ್ಲಿ ಢಮ್ ಅಂದ್ರೆ ಇನ್ನೊಂದು ಎಲ್ಲೋ ಹೋಗಿ ಢಮ್ ಅನ್ನೋದು. ಎರಡನೇದು ಢಮ್ ಅನ್ನೋ ತನಕ ಎಲ್ಲರಿಗೂ ಗಾಬರಿ. ಎಲ್ಲಿ ಕಾಲುಕೆಳಗೆ ಬತ್ತದೋ ಅಂತಾ. ಸರಿ ರಾತ್ರಿ ಹತ್ತಾತು. ಈಗ ಮಸಿಕುಡಿಕೆ ಹಚ್ಚುತ್ತೀನಿ ಅಂದ. ಅದು ಹತ್ಕಂಡು ಸ್ವಲ್ಪ ಹೊತ್ತಿಗೇನೇ ಕಿಸ್ನ ಆಫ್ರಿಕದೋರು ತರಾ ಆಗಿದ್ದ. ಯಾಕಲಾ, ಲೇ ಬೆಂಕಿ ಬಿದ್ದು ಕೂದಲು ಸುಟ್ಟೈತೆ ಕಲಾ ಅಂದ. ಹಚ್ರಲಾ ಅರಿಸಿನ. ಸರಿ ಗೌಡಪ್ಪನ ಹೆಂಡರು ಚಕ್ರ ಹೊಡೀರಿ ಅಂತಾ ಇತ್ತು. ಇಲ್ಲಿ ಬೇಡ ಕಣಮ್ಮಿ ಒಳಗೆ ಹಚ್ಚುವಾ ಅಂದ. ಸರಿ ಚಕ್ರ ಹಚ್ಚಿ ಸ್ವಲ್ಪ ಹೊತ್ತಿಗೇನೇ ಗೌಡಪ್ಪನ ಮನೆ ಮುಂದೆ, ಒಳಗೆ ಇದ್ದೋರು ಎಲ್ಲಾ ಖಾಲಿ. ಯಾಕ್ರಲಾ. ಮಗಂದು ಚಕ್ರ, ಪಟಾಕಿ ಬಾಕ್ಸ್ ಒಳಗೆ ಸೇರ್ಕಂಡಿತ್ತು. ಎಲ್ಲೆಂದೆರಲ್ಲಿ ಸವಂಡ್. ಕಡೆಗೆ ಬಾಗಿಲು ತೆಗೆದರೆ ಸುಟ್ಟು ಮನೆ ಆದಂಗೆ ಆಗಿತ್ತು. ಲಕ್ಸ್ಮೀ ಪೂಜೆಗೆ ಅಂತಾ ಇಟ್ಟಿದ್ದು, 10ಸಾವಿರನೂ ಸುಟ್ಟು ಹೋಗಿತ್ತು. ಈಗ ಗೌಡಪ್ಪಂಗೆ ಪಟಾಕಿ ಅಂದ್ರೆ, ಮೈದಾನದಾಗೆ ಹೊಡೆಯುವಾ ಅಂತಾನೆ. ಸುಬ್ಬ ನಮ್ಮ ಪಾಟಾಕಿನೇ ಬೆಸ್ಟ್ ಕಲಾ. ಸ್ವಲ್ಪ ವಾಸನೆ ಬತ್ತದೆ ಅಷ್ಟೆ. ಯಾವುದು ಹಾನಿ ಆಗಕ್ಕಿಲ್ಲಾ ಅಂತಾನೆ ಬಡ್ಡೆ ಐದ.
Comments
ಉ: ವಿಶೇಷ ದೀಪಾವಳಿ ಫ್ರಮ್ ಗೌಡಪ್ಪ
In reply to ಉ: ವಿಶೇಷ ದೀಪಾವಳಿ ಫ್ರಮ್ ಗೌಡಪ್ಪ by kavinagaraj
ಉ: ವಿಶೇಷ ದೀಪಾವಳಿ ಫ್ರಮ್ ಗೌಡಪ್ಪ
ಉ: ವಿಶೇಷ ದೀಪಾವಳಿ ಫ್ರಮ್ ಗೌಡಪ್ಪ
In reply to ಉ: ವಿಶೇಷ ದೀಪಾವಳಿ ಫ್ರಮ್ ಗೌಡಪ್ಪ by kamath_kumble
ಉ: ವಿಶೇಷ ದೀಪಾವಳಿ ಫ್ರಮ್ ಗೌಡಪ್ಪ
ಉ: ವಿಶೇಷ ದೀಪಾವಳಿ ಫ್ರಮ್ ಗೌಡಪ್ಪ
ಉ: ವಿಶೇಷ ದೀಪಾವಳಿ ಫ್ರಮ್ ಗೌಡಪ್ಪ