ಸುದ್ದಿ ವಾಹಿನಿಗಳು ತಿದ್ದಿಕೊಳ್ಳಬೇಕು

ಸುದ್ದಿ ವಾಹಿನಿಗಳು ತಿದ್ದಿಕೊಳ್ಳಬೇಕು

 
  ಕನ್ನಡದ ಕಿರುತೆರೆ ಸುದ್ದಿವಾಹಿನಿಗಳ ವರದಿಗಾರರು ಹಾಗೂ ನಿರೂಪಕರು ಕೆಲವೊಮ್ಮೆ ಎಷ್ಟು ಎಳಸಾಗಿ ಆಡುತ್ತಾರೆಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ.
  * ಜಿ.ವೆಂಕಟಸುಬ್ಬಯ್ಯ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದಾಗ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರಗೊಂಡ ಅವರ ಸಂದರ್ಶನದಲ್ಲಿ ವಾಹಿನಿಯ ವರದಿಗಾರ್ತಿಯು ಜಿವೆಂ ಅವರಿಗೆ ಕೇಳಿದ ಪ್ರಶ್ನೆ ಹೀಗಿತ್ತು. "ಈಗ ನಿಮಗೆ ಅಧ್ಯಕ್ಷ ಸ್ಥಾನದ ಗೌರವ ಸಿಕ್ಕಿದೆ, ಕನ್ನಡಕ್ಕೆ ಮುಂದೆ ಏನು ಕೆಲಸ ಮಾಡಬೇಕೂಂತಿದೀರಿ?"
    ಕನ್ನಡಕ್ಕಾಗಿ ದುಡಿಯುತ್ತಲೇ ೯೭ ವಸಂತಗಳನ್ನು ದಾಟಿರುವ ಹಿರಿಯ ಜೀವಕ್ಕೆ ಕೇಳುವ ಪ್ರಶ್ನೆಯೇ ಇದು? ಈ ಪ್ರಶ್ನೆ ಆಲಿಸಿ ಜಿವೆಂ ಅವರಿಗೆ ನಗು ಬಂತು. ಅವರು, "ನನಗೀಗ ೯೮ನೆಯ ವರ್ಷ. ಎಲ್ಲ ಕೆಲಸಗಳನ್ನೂ ನಿಲ್ಲಿಸಬೇಕೂಂತ ಇದ್ದೇನೆ", ಎಂದು ಉತ್ತರಿಸಿದರಾದರೂ, ಬೆನ್ನಿಗೇ, "ಅಧ್ಯಕ್ಷ ಪದವಿಯು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ", ಎಂದು ನುಡಿದು ಮುಂದಿನೆರಡು ವರ್ಷಗಳಲ್ಲಿ ತಾವು ಕೈಕೊಳ್ಳಬೇಕೆಂದಿರುವ ಕನ್ನಡದ ಕೆಲಸದ ಬಗ್ಗೆ ವಿವರಿಸಿ ಆ ವರದಿಗಾರ್ತಿಯ ಬೆಲೆ ಉಳಿಸಿದರು.
  * ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಮ್ಮಿಕೊಂಡಿದ್ದ ಪ್ರತಿಭಟನೆಯ ಬಗ್ಗೆ ಸಂಘದ ಇಬ್ಬರು ಪದಾಧಿಕಾರಿಗಳೊಡನೆ ಚರ್ಚೆಯನ್ನು ಪ್ರಸಾರ ಮಾಡಿದ ಇನ್ನೊಂದು ಸುದ್ದಿವಾಹಿನಿಯ ನಿರೂಪಕರು ಪದೇ ಪದೇ, "ಆಂಟಿ ಮೈನಾರಿಟಿ, ಆಂಟಿ ಕಾಂಗ್ರೆಸ್", ಎನ್ನುತ್ತ ಆ ಪದಾಧಿಕಾರಿಗಳ ತಲೆ ತಿನ್ನುತ್ತಿದ್ದರು. ಆರ್.ಎಸ್.ಎಸ್. ಎಂದರೆ ಇಷ್ಟೇ ಎಂದು ಅವರು ತೀರ್ಮಾನಿಸಿಬಿಟ್ಟಂತಿತ್ತು!
  * ಇದೇ ನಿರೂಪಕರು ತಮ್ಮ ಮಾಮೂಲು ಅಭ್ಯಾಸದಂತೆ ತಮ್ಮ ಮಾತಿನಲ್ಲಿ ಇಂಗ್ಲಿಷ್ ವಾಕ್ಯಗಳನ್ನು ಹೇರಳವಾಗಿ ಬಳಸುತ್ತಿದ್ದರು. ತಮ್ಮದು ಕನ್ನಡದ ವಾಹಿನಿ, ಇಂಗ್ಲಿಷ್ ಗೊತ್ತಿಲ್ಲದವರೂ ಕಾರ್ಯಕ್ರಮ ನೋಡುತ್ತಿರುತ್ತಾರೆ ಎಂಬ ಪ್ರಜ್ಞೆಯ ಕೊರತೆ ಅವರಿಗೆ!
  * ಅವರೊಡನೆ ಸಹನಿರೂಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯ ಬಗ್ಗೆಯಂತೂ ಬರೆಯಲಿಕ್ಕೇ ಮುಜುಗರವಾಗುತ್ತದೆ. ಭರ್ಜರಿ ಸೂಟು ಮತ್ತು ಮುಖದಮೇಲೆ ಕೃತಕ ನಗೆ ಬಿಟ್ಟು ಇನ್ನೇನೂ ಬಂಡವಾಳವಿಲ್ಲದ ಆ ವ್ಯಕ್ತಿ ಎಂದಿನ ತನ್ನ ಪಲಾಯನಸೂತ್ರದನುಸಾರ ಕಾರ್ಯಕ್ರಮದುದ್ದಕ್ಕೂ ಹುಸಿನಗೆ ನಗುವುದು, ಆಗಾಗ ಅರ್ಥಹೀನವಾಗಿ ತಮಾಷೆ ಮಾಡುವುದು ಮತ್ತು ತನ್ನ ವಿಷಯ ಅಜ್ಞಾನವನ್ನು ಮುಚ್ಚಿಕೊಳ್ಳಲು ಪದೇ ಪದೇ, "ಎಲ್ಲೋ ಒಂದು ಕಡೆ" ಎಂಬ ಪದಪ್ರಯೋಗ ಮಾಡುತ್ತ ಪರಮಜ್ಞಾನಿಯಂತೆ ಪೋಸು ಕೊಡುವುದು ಮಾಡುತ್ತಲೇ ಇದ್ದ!
    ಕನ್ನಡದ ಸುದ್ದಿ ವಾಹಿನಿಗಳು ತಿದ್ದಿಕೊಳ್ಳಬೇಕಾದ್ದು ಬಹಳ ಇದೆ.    

Comments