ಭಗವಾನ್ ಶ್ರೀಕೃಷ್ಣನೇ ಅವತಾರವೆತ್ತಿ ಬರಬೇಕೇನೋ!

ಭಗವಾನ್ ಶ್ರೀಕೃಷ್ಣನೇ ಅವತಾರವೆತ್ತಿ ಬರಬೇಕೇನೋ!

 

  ರಾಜ್ಯದ ಇಂದಿನ ರಾಜಕೀಯ ದುಃಸ್ಥಿತಿಯನ್ನು ಕಂಡಾಗ ನನಗೆ ಭಗವದ್ಗೀತೆಯ ಹದಿನಾರನೆಯ ಅಧ್ಯಾಯದ ಕೆಲವು ಶ್ಲೋಕಗಳು ನೆನಪಾಗುತ್ತವೆ. ’ದೈವಾಸುರಸಂಪದ್ವಿಭಾಗಯೋಗ’ ಪ್ರಸ್ತುತಿಯಾದ ಆ ಅಧ್ಯಾಯದಲ್ಲಿ ಅಸುರಗುಣಸಂಜಾತರನ್ನು ಬಣ್ಣಿಸುವ ಹಲವು ಶ್ಲೋಕಗಳಿದ್ದು ಆ ಪೈಕಿ ಕೆಲವು ಶ್ಲೋಕಗಳನ್ನು ನನ್ನ ಭಾವಾನುವಾದ ಸಹಿತ ಇಲ್ಲಿ ನೀಡಿದ್ದೇನೆ. ನಮ್ಮ ಇಂದಿನ ಬಹುಪಾಲು ರಾಜಕಾರಣಿಗಳಿಗೆ ಈ ಬಣ್ಣನೆ ಸರಿಯಾಗಿ ಒಪ್ಪುತ್ತದೆ. ಓದಿನೋಡಿ.

ದಂಭೋ ದರ್ಪೋಭಿಮಾನಶ್ಚ
ಕ್ರೋಧಃ ಪಾರುಷ್ಯಮೇವ ಚ/
ಅಜ್ಞಾನಂ ಚಾಭಿಜಾತಸ್ಯ
ಪಾರ್ಥ, ಸಂಪದಮಾಸುರೀಮ್//

ಕಾಪಟ್ಯ ದರ್ಪ ಮೇಣ್ ದುರಭಿಮಾನವದು
ಕ್ರೋಧ ಗರ್ವವು ಮತ್ತು ಅಜ್ಞಾನವದುವೆ
ಅಸುರಗುಣಸಂಜಾತ ಜನರಲ್ಲಿ ಇರುವ
ಹೆಗ್ಗುರುತುಗಳು ಹೇ, ಪಾರ್ಥ, ತಿಳಿ ನೀನು

ಪ್ರವೃತ್ತಿಂ ಚ ನಿವೃತ್ತಿಂ ಚ
ಜನಾ ನ ವಿದುರಾಸುರಾಃ/
ನ ಶೌಚಂ ನಾಪಿ ಚಾಚಾರೋ
ನಸತ್ಯಂ ತೇಷು ವಿದ್ಯತೇ//

ಸತ್ಕಾರ್ಯವನ್ನು ದುಷ್ಕೃತಿತ್ಯಾಗವನ್ನು
ಅಸುರಗುಣಿಗಳು ಇವರು ಅರಿಯರೆಂದೆಂದೂ
ಶುದ್ಧಿ ಸನ್ನಡೆ ಮತ್ತು ಸತ್ಯಸಂಧತೆಯು
ಇರದು ಈ ರಾಕ್ಷಸಪ್ರಾಯರಲಿ ಎಂದೂ

ಕಾಮಮಾಶ್ರಿತ್ಯ ದುಷ್ಪೂರಂ
ದಂಭಮಾನಮದಾನ್ವಿತಾಃ/
ಮೋಹಾದ್ಗೃಹೀತ್ವಾಸದ್ಗ್ರಾಹಾನ್
ಪ್ರವರ್ತಂತೇಶುಚಿವ್ರತಾಃ//

ತೃಪ್ತಿಯಾಗದ ಕಾಮನೆಗಳನ್ನು ಹೊಂದಿ
ಮೌಢ್ಯದಿಂ ತಪ್ಪು ಸಿದ್ಧಾಂತಗಳ ಅಪ್ಪಿ
ಮಲಿನಗುಣಿಗಳು ಇವರು ತೋರುವರು ಇಲ್ಲಿ
ಅಸುರಗುಣಗಳನು ಈ ಬಾಳಪಥದಲ್ಲಿ

ಚಿಂತಾಪರಿಮೇಯಾಂ ಚ
ಪ್ರಲಯಾಂತಾಮುಪಾಶ್ರಿತಾಃ/
ಕಾಮೋಪಭೋಗಪರಮಾಃ
ಏತಾವದಿತಿ ನಿಶ್ಚಿತಾಃ//

ಮರಣಪರ್ಯಂತ ಇರುವಂತಹ ಅಸಂಖ್ಯ
ವ್ಯಸನಗಳ ಆಶ್ರಯವ ಪಡೆದವರು ಇವರು
ಕಾಮೋಪಭೋಗವೇ ಪರಮಸುಖವೆಂದು
ದೃಢವಾಗಿ ನಂಬಿದಂಥವರು ಈ ಜನರು

ಆಶಾಪಾಶಶತೈರ್ಬದ್ಧಾಃ
ಕಾಮಕ್ರೋಧಪರಾಯಣಾಃ/
ಈಹಂತೇ ಕಾಮಭೋಗಾರ್ಥಮ್
ಅನ್ಯಾಯೇನಾರ್ಥಸಂಚಯಾನ್//

ನೂರಾರು ಆಸೆಗಳ ಪಾಶಕೊಳಪಟ್ಟು
ಕಾಮಕ್ರೋಧಗಳೆಡೆಗೆ ಮನವ ಹರಿಬಿಟ್ಟು
ವಿಷಯಭೋಗಕ್ಕಾಗಿ ಅನ್ಯಾಯದಿಂದ
ಧನವ ಗಳಿಸಲು ಸದಾ ಹೆಣಗುವರು ಇವರು

ಇದಮದ್ಯ ಮಯಾ ಲಬ್ಧಮ್
ಇಮಂ ಪ್ರಾಪ್ಸ್ಯೇ ಮನೋರಥಮ್/
ಇದಮಸ್ತೀದಮಪಿ ಮೇ
ಭವಿಷ್ಯತಿ ಪುನರ್ಧನಮ್//

ಇಷ್ಟು ಸಂಪತ್ತನ್ನು ಹೊಂದಿದೆನು ಇಂದು
ಈ ಬಯಕೆಗಳನು ಈಡೇರಿಪೆನು ಈಗ
ಇಷ್ಟು ಇದೆ ಸಂಪತ್ತು ಬರುವುದಿನ್ನಷ್ಟು
ಎಂದು ತಮ್ಮೊಳು ತಾವೆ ಗುಣಿಸುವರು ಇವರು

  ನಮ್ಮ ಇಂದಿನ ಬಹುಪಾಲು ರಾಜಕಾರಣಿಗಳು (ಎಲ್ಲರೂ ಅಲ್ಲ) ಇಂತಹ ಅಸುರಗುಣಿಗಳೇ ತಾನೆ? ಇವರನ್ನು ಸರಿಪಡಿಸುವ ಅಥವಾ ಸಂಹರಿಸುವ ಬಗೆ ಹೇಗೆ?
  ’....ವಿನಾಶಾಯ ಚ ದುಷ್ಕೃತಾಮ್....ಸಂಭವಾಮಿ ಯುಗೇ ಯುಗೇ’ ಎಂದು ಘೋಷಿಸಿರುವ ಭಗವಾನ್ ಶ್ರೀಕೃಷ್ಣನೇ ಅವತಾರವೆತ್ತಿ ಬರಬೇಕೇನೋ!

Comments