ಮಿಸ್ಟರಿ ಮುದುಕ ಮತ್ತು ಕ್ರಿಕೆಟ್ ಮ್ಯಾಚು

ಮಿಸ್ಟರಿ ಮುದುಕ ಮತ್ತು ಕ್ರಿಕೆಟ್ ಮ್ಯಾಚು

’ಕೋರ್!’ ಮುದಿಯ ಜೋರಾಗಿ ಚಪ್ಪಾಳೆ ತಟ್ಟಿದ. ಆಗಷ್ಟೇ ಪ್ರಾರಂಭವಾಗಿದ್ದ ಬೆಳ್ಮಣ್ಣು ಪ್ರೀಮಿಯರ್ ಲೀಗಿನ ಸೆಮಿ ಫೈನಲ್ ಪಂದ್ಯದಲ್ಲಿ ನಮ್ಮ ಮತ್ತು ನಂದಳಿಕೆ ತಂಡದ ನಡುವೆ ಹಣಾಹಣಿ ನಡೆಯುತ್ತಿತ್ತು. ರಾಜೀವ್ ಮತ್ತು ಪ್ರವೀಣ್ ಆಗಲೇ ಕ್ರೀಸಿಗಿಳಿದಿದ್ದರು. ಮೊದಲ ಚೆಂಡನ್ನೇ ಪುಲ್ ಮಾಡಿದ ರಾಜೀವ್ ಹೊಡೆತ ಚೆಂಡನ್ನು ಆಗಲೇ ಬೌಂಡರಿಯಾಚೆ ಅಟ್ಟಿತ್ತು. ಪೆವಿಲಿಯನ್ ಎಂಬ ಬೌಂಡರಿ ಪಕ್ಕದಲ್ಲಿ ನೀರು ಎಂಬ ಎನರ್ಜಿ ಡ್ರಿಂಕನ್ನು ಕುಡಿಯುತ್ತಾ ನಾನು ಒಮ್ಮೆ ಮುದಿಯನನ್ನು ನೋಡಿದೆ.

ಊರಿನ ಯಾವುದೇ ರೀತಿಯ ಪಂದ್ಯಾಟವಿರಲಿ ಮಿಸ್ಟರಿ ಮುದುಕನೆಂದೇ ಖ್ಯಾತಿ ಪಡೆದಿದ್ದ ವ್ಯಕ್ತಿ ಅಲ್ಲಿ ಹಾಜರಿರುತ್ತಿದ್ದುದು ಸಾಮಾನ್ಯವಾಗಿತ್ತು. ಯಾರೂ ಆತನನ್ನು ಯೌವ್ವನದಲ್ಲಿ ನೋಡಿಲ್ಲದಿದ್ದುದರಿಂದ ಆತನೊಬ್ಬ ಬೆಳ್ಮಣ್ಣಿನ ಪರಿಸರದಲ್ಲಿ ದಂತಕಥೆಯಾಗಿದ್ದ. ಆತ ಯಾವುದೋ ಆಟದಿಂದ ನಿವೃತ್ತನಾಗಿ ಬಂದಿದ್ದಾನೆಂದೂ, ಅಪರಿಮಿತ ವಾಗ್ಮಿಯೆಂದೂ, ಗೊತ್ತಿರದ ಯಾವುದೋ ಭಾಷೆಯ ಬರಹಗಾರನೆಂದೂ, ಬಲು ದೊಡ್ಡ ದಾರ್ಶನಿಕನೆಂದೂ, ಬಹು ದೊಡ್ಡ ಕ್ರಿಮಿನಲ್ ಅಂಡರ್ ಗ್ರೌಂಡ್ ಆಗಿ ಈ ರೀತಿ ಛದ್ಮವೇಷ ಹಾಕಿದ್ದಾನೆಂದು ಒಬ್ಬೊಬ್ಬರು ಒಂದೊಂದು ಕಥೆ ಹೇಳುತ್ತಿದ್ದರು. ಇನ್ನು ಕೆಲವರಂತೂ ಎಲ್ಲಿಂದಲೋ ಮುದುಕನಾಗಿಯೇ ಉದ್ಭವನಾಗಿದ್ದಾನೆ ಎನ್ನುತ್ತಿದ್ದರು. ಆದರೆ ಯಾರೊಡನೆಯೂ ಒಡನಾಟವನ್ನಿಟ್ಟುಕೊಳ್ಳದೆ ಸಾಯಂಕಾಲದ ಹೊತ್ತಿಗೆ ಮಾತ್ರ ಆತ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಪ್ರತ್ಯಕ್ಷವಾಗಿಬಿಡುತ್ತಿದ್ದ. ಆತ ಪ್ರೀಮಿಯರ್ ಲೀಗಿನ ಮುಖ್ಯ ಆಕರ್ಷಣೆ ಮತ್ತು ನೋಡುಗರೇ ಇಲ್ಲದ ಪಂದ್ಯಗಳಿಗೆ ಖಾಯಂ ವೀಕ್ಷಕನಾಗಿದ್ದರಿಂದ ನಮಗಂತೂ ಬಹಳ ಪ್ರಿಯನಾಗಿದ್ದ.

 

http://t2.gstatic.com/images?q=tbn:aPbyiWGt43QZpM:http://www.arthursclipart.org/cricket/bw/cricket4.gif&t=1ಎಲ್ಲರೂ ಖುಶಿಯಿಂದ ಬೊಬ್ಬಿಟ್ಟ ದನಿ ನನ್ನ ಯೋಚನೆಗಳನ್ನು ಮ್ಯಾಚಿನತ್ತ ಹರಿಸಿತು. ಯಾರೋ ಸ್ಪಿನ್ನರು ತನ್ನ ಮೂರನೇ ಚೆಂಡಿನಲ್ಲಿ ರಾಜೀವ್ ಬಲಿ ತೆಗೆದಿದ್ದ. ನಿಧಾನಗತಿಯ ಆ ಚೆಂಡಿನಲ್ಲಿ ರಾಜೀವ್ ಹೇಗೆ ಬೋಲ್ಡ್ ಆದನೆಂದು ಯಾರಿಗೂ ಅರ್ಥವಾಗಲಿಲ್ಲ. ಆಶೀಶ್ ಮುಖವನ್ನೊಮ್ಮೆ ನೋಡಿದೆ. ಪಂಕಜ್ ಆಗಲೇ ಎದ್ದು ನಿಂತಿದ್ದರಿಂದ ನನ್ನ ನಂಬರ್ ಇವರ ನಂತರ ಆಗಿರಬಹುದೆಂದು ಅನಿಸಿತ್ತು, ಕಳೆದ ಮ್ಯಾಚಿನಲ್ಲೂ ನಾನೂ ಮತ್ತು ಪಂಕಜ್ ಸೇರಿ ಕೊನೆಯ ಮೂರು ಓವರುಗಳಲ್ಲಿ ಯದ್ವಾ ತದ್ವಾ ಹೊಡೆದು ಗೆಲುವಿಗೆ ಕಾರಣವಾಗಿದ್ದೆವು. ಅದರಲ್ಲೂ ಪಂಕಜ್ ಹೊಡೆದಿದ್ದ ಹ್ಯಾಟ್ರಿಕ್ ಸಿಕ್ಸು ಅವನಿಗೆ ಬೆಳ್ಮಣ್ಣಿನ ಯುವರಾಜ್ ಎಂಬ ಬಿರುದನ್ನೂ ಕೊಟ್ಟಿತ್ತು. ಆ ಓವರಿನಲ್ಲಿ ಮತ್ತೆ ಯಾವುದೇ ರನ್ ಬರಲಿಲ್ಲ.

ಮುಂದಿನ ಓವರು ಕೂಡ ಒಬ್ಬ ಸ್ಪಿನ್ನರ್ ಹಾಕಿ ಅದರಲ್ಲಿ ಕೇವಲ ಒಂದು ರನ್ ಬಂದಿತ್ತು. ಕಾಮೆಂಟರ್ ಮೈಕಿನಲ್ಲಿ ಜೋರಾಗಿ ಹೇಳಿದ ’ಬೆಳ್ಮಣ್ಣು ತಂಡ ಎರಡು ಓವರಿನಲ್ಲಿ ಒಂದು ವಿಕೆಟ್ ಕಳೆದುಕೊಂಡು ಐದು ರನ್ ಗಳಿಸಿದೆ’. ಮೂರನೇ ಓವರ್ ಕೂಡ ಸ್ಪಿನ್ನರ್ ಹಾಕಲು ಅನುವಾದಾಗ ನಂದಳಿಕೆ ಟೀಮಿನ ಸ್ಟ್ರಾಟೆಜಿ ನನಗೆ ಅರ್ಥವಾಗತೊಡಗಿತ್ತು. ಫಾಸ್ಟ್ ಬೌಲರುಗಳನ್ನು ನನಗಾಗಿಯೇ ಮೀಸಲಿಟ್ಟು ಸ್ಪಿನ್ನರುಗಳನ್ನು ಬಳಸುತ್ತಿದ್ದಾರೆಂದು! ಅದರಲ್ಲೂ ಶೈಲೇಶ್ ಎನ್ನುವ ಫಾಸ್ಟ್ ಬೌಲರ್ ಬಗ್ಗೆ ಕೇಳಿದ್ದೆ. ಮುದಿಯ ಸುಮ್ನೆ ಕೂತಿದ್ದ. ಸೋಡಾ ಬುಡ್ಡಿ ಗ್ಲಾಸು, ಕೈಯಲ್ಲೊಂದು ಕೋಲು ಮತ್ತು ಮುಖ ತುಂಬಾ ಗಡ್ಡ. ಒಂದು ರೀತಿಯಲ್ಲಿ ಹೇಳುವುದಾದರೆ ವೃದ್ಧಾಪ್ಯದ ಎಲ್ಲಾ ವರ್ಣನೆಗಳೂ ಆತನಿಗೊಪ್ಪುತ್ತಿದ್ದವು. ಆದರೂ ಆತ ಏನೂ ಸಮಸ್ಯೆ ಇಲ್ಲದವರಂತೆ ಇದ್ದ. ನಿಜಕ್ಕೂ ಇಲ್ಲವೋ ಏನೋ ಅಥವಾ ಮ್ಯಾಚಿನಲ್ಲಿ ಮರೆಯುತ್ತಾನೆಯೋ! 

ಇದ್ದಕಿದ್ದಂತೆ ’ಯೇ’ ಎಂದು ಯಾರೋ ಬೊಬ್ಬಿಟ್ಟರು. ಪಂಕಜ್ ಕ್ಯಾಚು ಕೊಟ್ಟು ಮರಳಿ ಬರುತ್ತಿದ್ದರು. ಆಗ ಆಶೀಶ್ ಎದ್ದು ನಿಂತು ಹೊರಟರು. ನನಗೋ ಆಶ್ಚರ್ಯವಾಯಿತು. ಏಕೆಂದರೆ ವನ್ ಡೌನ್ ಅಥವಾ ಟು ಡೌನ್ ಬಿಟ್ಟು ನಾನು ಈವರೆಗೆ ಬ್ಯಾಟಿಂಗ್ ಮಾಡಿದ್ದಿಲ್ಲ. ಇರಲಿ ಎಂದು ನಾನು ಎದ್ದು ಮರದ ನೆರಳಲ್ಲಿ ಬಂದು ಕೂತೆ. ಅಲ್ಲಿಂದ ಸ್ವಲ್ಪ ದೂರದಲ್ಲೇ ಮುದುಕ ಕುಳಿತಿದ್ದ. ಆಗಲೇ ಪ್ರವೀಣ್ ರನ್ ಔಟ್ ಆದರು. ಅಂಥ ಗಂಭೀರ ವಾತಾವರಣದಲ್ಲೂ ನನಗೆ ನಗು ಬಂದಿತು. ಆರನೇ ಪಂದ್ಯ, ಅದರಲ್ಲಿ ನಾಲ್ಕು ಸಲ ರನ್ ಔಟ್. ಭಾರ ಕಡಿಮೆ ಮಾಡಲು ಕ್ರಿಕೆಟ್ ಆಡುವ ಪ್ರವೀಣ್ ನಮಗೆ ಇಂಝಿಯ ಪ್ರತಿರೂಪವೇ ಆಗಿದ್ದರು. ಸ್ವಲ್ಪ ಹಿರಿಯರಾದ್ದರಿಂದ ಅವರೆದುರಲ್ಲಿ ಏನೂ ಹೇಳಲು ಹೋಗುತ್ತಿರಲಿಲ್ಲ. ಅಮರನನ್ನು ಕರೆಸಿದಾಗ ಮಾತ್ರ ನನಗೆ ಏನೋ ಗಡಿಬಿಡಿ ಆಗ್ತಾ ಇದೆ ಎಂದೆನಿಸಿತು.

’ನೀನ್ ಹೋಗ್ಬೇಕಿತ್ತು’ ಅಂತ ಯಾರೋ ಹೇಳಿದ ಹಾಗೆ ಆಯಿತು. ತಿರುಗಿ ನೋಡಿದರೆ ಆ ಮುದುಕ ಮಾತಾಡ್ತಿದ್ದ. ನಾನು ಏನೂ ಹೇಳಲಿಲ್ಲ. ನನಗೆ ಮುಂದಿನ ಅವಸ್ಥೆ ಏನಾಗುತ್ತದೆ ಎಂದು ಗೊತ್ತಿತ್ತು. ನಿರೀಕ್ಷಿಸಿದಂತೆ ಕೆಲವು ನೀರಸ ಓವರುಗಳು ನಡೆದವು. ಏಳನೇ ಓವರ್ ತನಕ ಆಡಿದ ನಂತರ ಅಮರ್ ಮತ್ತು ಅದರ ಬೆನ್ನಿಗೆ ಸಂದೀಪ್ ಔಟಾಗಿ ನನ್ನ ಸಹನೆಯನ್ನು ಪರೀಕ್ಷಿಸಿದರು. ಆದರೂ ನನ್ನನ್ನು ಕರೆಸದೇ ವಿಘ್ನೇಶ್ ಹೋದಾಗ ಮಾತ್ರ ನನ್ನ ಸಹನೆ ಕಟ್ಟೆಯೊಡೆದು ಬೈಗುಳವೊಂದು ಸಹಜವಾಗಿಯೇ ಹೊರಬಂದಿತ್ತು.

’ನೀನು ಯಾಕೆ ಇನ್ನೂ ಹೋಗಿಲ್ಲ’ ಎಂದು ಪುನಃ ಮೆಲ್ಲನೆ ಕೇಳಿದ ಮುದುಕ. ನಾನು ಮತ್ತೊಮ್ಮೆ ಮುದುಕನನ್ನು ನೋಡಿದೆ. ಇದ್ದಕಿದ್ದಂತೆ ಜನಪ್ರಿಯನಾಗಿದ್ದ ಆತನನ್ನು ಯಾವ ಯಾವ ಸಭೆಗಳಿಗೆ, ಭಾಷಣಗಳಿಗೆ, ಉದ್ಘಾಟನೆಗಳಿಗೆ ಆಹ್ವಾನಿಸಿ ಆತನನ್ನು ನಿಜಕ್ಕೂ ಸೆಲೆಬ್ರಿಟಿ ಮಾಡಲು ಊರಿನ ಜನ ಪ್ರಯತ್ನಿಸಿದ್ದರು. ಆದರೆ ಆತನ ನಕಾರದಿಂದ ಬೇಸರಗೊಂಡು ಸ್ವಾಭಿಮಾನಿಗಳಿಗೆ ಆತ ಅಹಂಕಾರಿಯಾಗಿ ಮತ್ತೆ ಉಳಿದವರಿಗೆ ಇಂಥ ಸಣ್ಣ ಪುಟ್ಟ ಸಭೆಗಳಿಗಿಂತ ಆತನ ಯೋಗ್ಯತೆ ತೀರಾ ಹೆಚ್ಚೆಂಬಂತೆ ಕಾಣಿಸಿದ್ದ. ಆತನೊಡನೆ ಯಾರು ಮಾತಿಗಾರಂಭಿಸಿದರೂ ಎಲ್ಲರ ಮಾತುಗಳಿಗೆ ಇತಿಶ್ರೀ ಅವನದೊಂದು ಮಾತು ಹಾಡುತ್ತಿತ್ತು. ಅದಕ್ಕೆ ಉತ್ತರ ಯಾರ ಬಳಿಯೂ ಇರುತ್ತಿರಲಿಲ್ಲ. ಕೆಲವರು ಜನರ ವಿಚಾರಗಳನ್ನು ಭಂಗಗೊಳಿಸಿ ಊರಿನ ಸಾತ್ವಿಕತೆಯನ್ನು ಹಾಳುಗೆಡವುತ್ತಿದ್ದಾನೆ ಎಂದೆಲ್ಲಾ ದೇವಳದ ಅರ್ಚಕರು ಮತ್ತು ಸಂಪ್ರದಾಯಸ್ಥರು ಸುದ್ದಿ ಹಬ್ಬಿಸಿದರೂ ಆತ ತನ್ನ ಪಾಡಿಗೆ ತಾನು ಇರುತ್ತಿದ್ದ. ಊರಿನ ಕೆಲ ಬುದ್ಧಿ ಜೀವಿಗಳಿಗೆ ಈಗೀಗ ಆತ ಆಂಟಿ-ಸೋಶಿಯಲ್ ತರ ಕಾಣತೊಡಗಿರುವುದೂ ಸತ್ಯ! ಆದರೆ ಇದೆಲ್ಲದರ ಪರಿವೆ ಅವನಿಗಿದ್ದಂತಿಲ್ಲ, ಇದರಿಂದ ಆತ ನಿಗೂಢ ರಹಸ್ಯಗಳಲ್ಲೊಂದಾಗುತ್ತಾ ಸಾಗಿದ್ದ.

’ಗೊತ್ತಿಲ್ಲ, ಕ್ಯಾಪ್ಟನ್ ಇನ್ನೂ ಹೋಗಲು ಹೇಳಿಲ್ಲ, ಅದಕ್ಕೆ ಹೋಗಿಲ್ಲ’ ನನ್ನ ಧ್ವನಿಯಲ್ಲಿ ಹತಾಶೆಯಿತ್ತು. ’ಎಲ್ಲಾ ಔಟ್ ಆಗ್ತಾ ಇದ್ದಾರೆ, ಇನ್ನೂ ನನ್ನ ಯಾಕೆ ಕಳಿಸ್ಲಿಲ್ಲ ಅಂತ ಅರ್ಥ ಆಗ್ತಾ ಇಲ್ಲ’ ಎಂದೆ.

’ನಿನ್ನ ಮೊದ್ಲೇ ಕಳಿಸಿರ್ಬೇಕಿತ್ತು. ಚೆನ್ನಾಗಿ ಹೊಡೀತಿ’ ಎಂದ. ’ಅರ್ರೇ.. ಇನ್ನೊಬ್ಬ ಹೋದ’ ಮತ್ತೆ ಮುಖ್ಯ ಆಟಗಾರರೆಂದು ನಾಮಾಂಕಿತರಾದವರು ಯಾರೂ ಉಳಿದಿರಲಿಲ್ಲ. ಆದ್ದರಿಂದ ಕರೆ ನನಗೆ ಬಂತು. ಇದರಿಂದ ಆಶಿಶಿಗೆ ನಾನು ಟೀಮಿನಲ್ಲಿದ್ದೇನೆ ಎಂದು ಮರೆತು ಹೋಗಿಲ್ಲ ಎಂದು ಸ್ಪಷ್ಟವಾಯಿತು.

ಮುದುಕ ’ತಲೆಯಲ್ಲೇನೇ ಇರ್ಲಿ, ಆಡೋವಾಗ ಅದೆಲ್ಲಾ ಮರ್ತು ಆಡ್ಬೇಕು’ ಎಂದ. ’ನೀನು ಎದುರು ಬಂದು ಹೊಡೆಯೋ ಕಿಸ್ಕ್ ನಂಗೆ ಭಾಳ ಇಷ್ಟ. ನಂಗೆ ಗೊತ್ತು  ಇಕೆಟ್ ಹೆಚ್ಚಿಲ್ಲ, ಆದ್ರೂ ಒಂದಾದ್ರೂ ಹೊಡಿ’ ಎಂದು ಮುಗುಳ್ನಕ್ಕ. ನಾನು ಕ್ರೀಸಿಗಿಳಿದೆ. ನನ್ನ ಬಳಿ ಇರುವುದು ಈಗ ಮುಂದಿನ ಆರು ಓವರು. ಸ್ಕೋರ್ ಬೋರ್ಡಿನಲ್ಲಿ ಈಗ ೨೭ ರನ್. ಅಂದರೆ ಒಂಭತ್ತು ಓವರುಗಳಲ್ಲಿ ೩ರ ಸರಾಸರಿಯಂತೆ ರನ್ ಮಾಡಿದ್ದೀವಿ. ನಾಚಿಕೆಕೇಡು ಎಂದೆನಿಸಿತು.

’ನಿಧಾನಕ್ಕೆ ಆಡು, ವಿಕೆಟ್ ಉಳಿಸಬೇಕು’ ಎಂದು ಆಶೀಶ್ ಅಂದರು. ’ರನ್ನೇ ಇಲ್ಲ, ವಿಕೆಟ್ ಉಳಿಸಿ ಏನು ಮಾಡೋದು’ ಎನ್ನಬೇಕೆಂದು ಕೊಂಡರೂ ಆದರೂ ಮೊದಲ ಓವರ್ ಸೆಟ್ ಆಗಲು ಬಳಸೋಣವೆಂದು ’ಸರಿ’ ಎಂದೆ. ಆ ಓವರ್ ಸಿಂಗಲ್ಲುಗಳಲ್ಲಿ ನಡೆದರೆ ಮುಂದಿನ ಓವರಿನ ಶೈಲೇಶಿನ ಮೊದಲ ಚೆಂಡಲ್ಲೇ ಆಶೀಶ್ ಕ್ಯಾಚಿತ್ತರು. ನನಗೆ ನಿಜಕ್ಕೂ ಖುಶಿಯಾಗಿತ್ತು. ಶ್ರವಣ್ ಬಂದಾಗ ’ಬಾಲ್ ವೇಸ್ಟ್ ಮಾಡೋದು ಬೇಡ, ಸಿಂಗಲ್ ತೆಗೆದು ಕೊಡು, ನಾನು ನೋಡ್ಕೋತೇನೆ’ ಎಂದು ನನ್ನಾಟ ಆರಂಭಿಸಿದೆ. ಮುಂದಿನ ಓವರುಗಳಲ್ಲಿ ೭೦ ರನ್ ಗಳಿಸಿದ್ದೆವು. ಹದಿನೈದು ಓವರಿಗೆ ಎಂಭತ್ತೇಳು ರನ್ ಆಗಿತ್ತು. ಮ್ಯಾಚು ಉಳಿಸೋ ಸ್ಕೋರ್ ಆಗಿರಲಿಲ್ಲ ಎಂದು ನನಗೂ ಗೊತ್ತಿತ್ತು ಆದರೆ ಮುದುಕನ ಮಧ್ಯೆ ಮಧ್ಯೆ ಕೇಳುತ್ತಿದ್ದ ’ಕೋರ್’ ’ಕಿಸ್ಕ್’ಗಳು ಇಷ್ಟವಾಗುತ್ತಾ ಮುದುಕನೇ ಟೀಮಿಗಿಂತ ಆಪ್ತನಾದ.

ಅಂದಿನ ಮ್ಯಾಚು ಸೋತರೂ ನಂದಳಿಕೆ ಟೀಮಿನ ಎಷ್ಟೋ ಜನ ಬಂದು ನನ್ನ ಆಟಕ್ಕೆ ಮತ್ತು ಶ್ರವಣ್ ಜೊತೆಗಾರಿಕೆಗೆ ಅಭಿನಂದಿಸೋರೇ. ಮೊದಲ ಬಾರಿ ಸೆಮಿ ಫೈನಲ್ ಪ್ರವೇಶಿಸಿಯೂ ಈ ರೀತಿ ಸೋತಿದ್ದು ನನಗೆ ಬೇಸರವೆನಿಸಿತ್ತು. ನಿಲ್ಲಲೂ ಮನಸ್ಸಿರಲಿಲ್ಲ. ಮನೆಯತ್ತ ಹೊರಟೆ. ಮುದುಕನೂ ಹೋಗುತ್ತಿದ್ದ. ಸಿಟ್ಟಿನಿಂದ ’ಮೊನ್ನೆ ಮ್ಯಾಚಲ್ಲಿ ನಾನು ಅವನನ್ನು ರನ್ ಔಟ್ ಮಾಡಿಸಿದ್ದರ ಸೇಡು ತೀರಿಸ್ಕೊಳ್ತಿದ್ದಾನೆ, ಅಷ್ಟೇ’ ಎಂದೆ. ಅವನಿಗೂ ಕೇಳಿಸ್ತಾ ಇತ್ತು ಎಂದು ಗೊತ್ತಿದ್ದರೂ ನನ್ನ ಧ್ವನಿ ಗುಸುಗುಸು ಆಗಿತ್ತು. ’ಏನಂದೆ ನೀನು’ ಎಂದು ಕೇಳಿದ. ನನಗೇನು ಭಯವಿರಲಿಲ್ಲ, ಜೋರಾಗಿಯೇ ಹೇಳಿದೆ.



http://www.fotosearch.com/bthumb/IMZ/IMZ107/nan0040.jpg’ಅಧಿಕಾರ ಒಂದು ರೀತಿ ಹಾಗೆಯೇ ಅನ್ನು. ಏನೇನೋ ಮಾಡಿಸಬಲ್ಲುದು’ಎಂದವ ’ನಿನ್ನ ಮೇಲೆ ಸೇಡು ತೀರಿಸ್ಕೊಳ್ತಿದಾನೆ ಅಂತ ನಿನಗನಿಸತ್ತೆ, ಆದರೆ ಸತ್ಯ ಬೇರೆಯೇ ಆಗಿರ್ಬಹುದು’ ನಾನು ಅವನ ಮಾತುಗಳನ್ನು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಅವನು ಮುಂದುವರಿಸಿದ.

’ಅವ್ರ ಟೀಮ್ ಗೆಲ್ಲೋದಿಕ್ಕೆ ನಿಮ್ಮ ಕಪ್ತಾನ ಕಾರಣ ಅನ್ಸತ್ತೆ. ಇಲ್ಲಾಂದ್ರೆ ನಿನ್ನ ಕೊನೆ ತನಕ ಇಡೋದ್ರಲ್ಲಿ ಅರ್ಥ ಇರ್ಲಿಲ್ಲ’

’ಅದು ನಂಗೆ ಗೊತ್ತು, ಅದಕ್ಕೇ ಸೋತಿದ್ದು’

’ಹಾಗಲ್ಲ, ನಂದಳಿಕೆ ಮೊದಲ ವರ್ಷ ಪೈನಲಿನಲ್ಲಿ ಸೋತಿದ್ರು. ಎರಡ್ನೇ ಸರ್ತಿ ಕೂಡ ಪೈನಲ್ನಲ್ಲಿ ಸೋತಿದ್ರು ಆದ್ರಿಂದ ಈ ಬಾರಿ ಗೆಲ್ಲಿಕ್ಕೆ ಆಸೆಯಿರತ್ತೆ. ಅಲ್ಲಿ ಹೋಗ್ಬೇಕಾದ್ರೂ ನಿಮ್ಮನ್ನ ಸೋಲಿಸ್ಬೇಕು. ನಿಮ್ಮನ್ನ ಸೋಲಿಸ್ಲಿಕ್ಕೆ ಈ ಬಾರಿ ಕಷ್ಟ ಇತ್ತು. ನೀನು, ಪಂಕಜ್, ರಾಜೀವ್ ಒಳ್ಳೆ ಪಾರ್ಮ್ ನಲ್ಲಿದ್ರಿ. ಅದರಲ್ಲೂ ನೀನು ತುಂಬಾ ಹೊಡೀತಿ. ನಿನ್ನ ಬದಿಗಿಟ್ರೆ ಉಳಿಯೋದು ರಾಜೀವ್ ಅವನಿಗೆ ಸ್ಪಿನ್ ಆಡಕ್ಕಾಗಲ್ಲ, ಪಂಕಜ್ ಅಷ್ಟೇನೂ ಚೆನ್ನಾಗಿ ಆಪ್ಸೈಡಲ್ಲಿ ಆಡಲ್ಲ’ ಎಂದ. ನಾನು ಉತ್ತರ ಕೊಡಲಿಲ್ಲ. ’೧೫,೦೦೦ ಹಣದಲ್ಲಿ ೨,೫೦೦ ಆಶೀಶಿಗೆ ಸಿಕ್ಕರೆ ಅದು ನೀವು ಗೆದ್ರೂ ಅಷ್ಟು ಸಿಗ್ತಿರ್ಲಿಲ್ಲ, ಅಲ್ವಾ. ನಿಮಗೆ ಸಿಗೋ ಹಣನ್ನ ನೀವಾಗಿ ಹಂಚ್ಕೋತೀರ, ಅದ್ರಲ್ಲಿ ಒಂದೋ ಒಂದೂವರೆನೋ ಸಿಗ್ಬಹುದು. ಸಾವಿರ ಹೆಚ್ಚು ಸಿಗೋದಾದ್ರೆ ಯಾವನ್ ಬಿಡ್ತಾನೆ’ ಎಂದ.

ಫೋರನ್ನೂ ’ಕೋರ್’ ಎನ್ನುವ ಅವನ ಚರ್ಯೆಗೆ ಬೆರಗಾದ ನನಗೆ ಆ ಹೊತ್ತಿಗೆ ನಿಜಕ್ಕೂ ಆತನ ಬಗ್ಗೆ ಜನರಾಡುವ ಮಾತುಗಳು ನಿಜವೆನಿಸಿತು. ನಿಜಕ್ಕೂ ಈತ ತಲೆ ತಿನ್ತಾನೆ, ಇವನಿಂದ ದೂರ ಇರುವುದೊಳ್ಳೆಯದು ಎಂದೆನಿಸಿತು.

’ನಿಂಗೆ ಪಿಸ್ಕಿಂಗು ಏನೂ ಅಂತ ಗೊತ್ತಾ’ ಎಂದ. ನಾನು ಹೆಸರು ಕೇಳಿದ್ದೆನಾದರೂ ಯಾವತ್ತೂ ಅದರಲ್ಲಿ ಆಸಕ್ತಿ ಇರಲಿಲ್ಲ. ಇಲ್ಲವೆಂದೆ. ’ಆದ್ರೆ ನಿಮ್ಗೆ ಹೇಗ್ ಗೊತ್ತು ಇದೆಲ್ಲಾ’

’ನಿನ್ನೆ ಆಶೀಶ್ ಮತ್ತೆ ಆ ಟೀಮಿನ ಕಪ್ತಾನನ್ನ ಒಟ್ಟಿಗೆ ನೋಡಿದ್ದೆ. ಹಾಗೆ ಸ್ವಲ್ಪ ಆಚೆ ಈಚೆ ಸುದ್ದಿಗಳು ಗೊತ್ತು’ ಎಂದು ಆತ ವಿಜಯದ ನಗೆ ನಕ್ಕ.

 ’ಹಾಗೆಲ್ಲಾ ಇರಲಿಕ್ಕಿಲ್ಲ, ಸುಳ್ಳು ಸುಳ್ಳು ಏನೋ ಹೇಳ್ತಾನೆ ಇವ’ ಅಂದುಕೊಂಡು ಮನೆಗೆ ಹೊರಟೆ. ಆತ ಸತ್ಯ ಹೇಳಿದನೋ ಸುಳ್ಳೋ ಎಂಬ ವಿಚಾರ ನನ್ನ ಯೋಚನಾ ಮಟ್ಟವನ್ನೂ ಮೀರಿದ್ದಾಗಿತ್ತು. ಇನ್ನು ಅವನೊಂದಿಗೆ ಮಾತನ್ನಾಡುವುದಿಲ್ಲ ಎಂದು ನಿರ್ಧರಿಸಿದ್ದೆ.


Rating
No votes yet

Comments