ಮೊದಲು ನನಗಿಷ್ಟವಾಗಬೇಕು!

Submitted by ರಘುನಂದನ on Thu, 11/11/2010 - 23:07

ಶಿಲ್ಪಿಯೊಬ್ಬ ತದೇಕಚಿತ್ತನಾಗಿ ಮೂರ್ತಿಯೊಂದನ್ನು ಕೆತ್ತುತ್ತ ಕುಳಿತಿದ್ದ. ಆತನ ಸುತ್ತಮುತ್ತ ಸ್ವಲ್ಪೇ ಸ್ವಲ್ಪ ಕಿವಿ ತುಂಡಾದದ್ದೋ, ಮೂಗಿನ ಬಳಿ ಸ್ವಲ್ಪೇ ಸ್ವಲ್ಪ ಕುಳಿ ಬಿದ್ದದ್ದೋ, ಕಣ್ಣಿನ ರೆಪ್ಪೆ ಒಂದಿನಿತೇ ಮುಕ್ಕಾದದ್ದೋ, ಕೈಬೆರಳ ಬಳಿ ಚಕ್ಕಳೆಯುದುರಿದ್ದೋ ಒಟ್ಟಿನಲ್ಲಿ ಭಗ್ನಗೊಂಡಿದ್ದು ಎನ್ನುವಂತಹ ಒಂದೆರಡು ಮೂರ್ತಿಗಳೂ ಬಿದ್ದಿದ್ದವು. ಈ ಎಲ್ಲ ಮೂರ್ತಿಗಳೂ ಶಿಲ್ಪಿಯು ಸಧ್ಯ ನಿರ್ಮಿಸುತ್ತಿರುವ ದೇವರದ್ದೇ.ಸಧ್ಯಕ್ಕೆ ಅದು ಕೃಷ್ಣನ ವಿಗ್ರಹ ಎಂದಿಟ್ಟುಕೊಳ್ಳಿ. ಮೇಲ್ಕಾಣಿಸಿದ ಸೂಕ್ಷ್ಮ ಕುಂದುಗಳು ಕಾಣಿಸದಿದ್ದರೆ ಎಲ್ಲವೂ ಅದ್ಭುತವಾಗಿಯೇ ತಯಾರಾಗಿದ್ದವು. ಆದರೂ ಟಿಕ್ ಟಿಕ್ ಸದ್ದು ನಡೆದೇ ಇತ್ತು.

ದಾರಿಹೋಕನೋರ್ವ ಶಿಲ್ಪಿಯ ಬಳಿ ಬಂದ. ಮೂರ್ತಿಯ ಕೆತ್ತನೆ ಸಾಗಿಯೇ ಇತ್ತು. ಈ ಮೂರ್ತಿಯೂ ಅದ್ಭುತವಾಗಿ ಕಾಣಿಸುತ್ತಿತ್ತು. ದಾರಿಹೋಕ ಶಿಲ್ಪಿಯನ್ನು ಮಾತಿಗೆಳೆಯಲು ಯತ್ನಿಸಿದ. ಶಿಲ್ಪಿಯು ತಲೆಯೆತ್ತದೆ, ಶಿಲೆಯೊಂದಿಗೆ ಮಾತನಾಡುತ್ತಲೇ ದಾರಿಹೋಕನ ಪ್ರಶ್ನೆಗಳಿಗೂ ಉತ್ತರಿಸಿದ.  ದಾರಿಹೋಕ ಕೊನೆಯದಾಗಿ ಕೇಳಿದ " ಅಲ್ಲ! ಇಲ್ಲಿ ಬಿದ್ದಿರುವ ಮೂರ್ತಿಗಳಲ್ಲಿ ಎದ್ದು ಕಾಣಬಹುದಾದ ದೋಷಗಳಾದರೂ ಏನಿವೆ? ಅವುಗಳನ್ನೇ ಸಾಗಿ ಹಾಕಿದ್ದರೂ ಆಗುತ್ತಿತ್ತಲ್ಲ? ಸೂಜಿಯತುದಿಯಂತಹ ದೋಷಗಳು ಯಾರ ಕಣ್ಣಿಗೆ ಕಾಣಿಸುತ್ತವೆ? ಯಾರು ನೋಡುತ್ತಾರೆ ಅದನ್ನು?" 


ಶಿಲ್ಪಿ ಉತ್ತರಿಸಿದ.

"ಆ ದೋಷಗಳು ನನ್ನ ಕಣ್ಣಿಗೆ ಕಾಣಿಸುತ್ತವೆ. ನಾನು ಅವನ್ನು ನೋಡುವೆ.  ಅಷ್ಟಕ್ಕೂ ಬೇರಾರೋ ನೋಡುವರು, ಅವರಿಗೆ ತೃಪ್ತಿಯಾಗಬೇಕು ಎನ್ನುವ ಹಟವೇನೂ ನನಗಿಲ್ಲ. ನನಗೆ ತೃಪ್ತಿಯಾಗುವುದು ಮುಖ್ಯ. ಮೂರ್ತಿಗೆ ಪೂಜೆ ಸಲ್ಲುವಾಗ ನಾನು ನೋಡಿದರೆ ಆ ದೋಷಗಳು ಖಂಡಿತವಾಗಿಯೂ ನನ್ನ ಮನಸ್ಸಿಗೆ ತಾಕುವುವು. ಆಗ ತಪ್ಪಿತಸ್ಥನ ಭಾವನೆಯಿಂದ ತೊಳಲುವ ಬದಲು, ಮೊದಲೇ ಇನ್ನಷ್ಟು ಶ್ರಮ ಹಾಕಿದರೆ ಪರಿಪೂರ್ಣವಾದ ಪ್ರತಿಮೆಯು ತಯಾರಾಗುವುದು"


ದಾರಿಹೋಕ ವಿನಮ್ರನಾಗಿ ಕೈಜೋಡಿಸಿ ಮುನ್ನಡೆದ. ಶಿಲ್ಪಿಯ ಕುಟೀರದಲ್ಲಿ ಟಿಕ್ ಟಿಕ್ ಟಿಣ್, ಟಿಕ್ ಟಿಣ್ ಟಿಣ್ ಸದ್ದು ಮುಂದುವರೆಯಿತು.