ನಾನು ಡಚಾವು-ಭಾಗ ೧
ಅಕ್ಟೋಬರ್ ಕೊನೆಯ ವಾರಾಂತ್ಯ ಹಾಗೂ ಕನ್ನಡ ರಾಜ್ಯೋತ್ಸವದ ದಿನ (ಇಲ್ಲಿ ಬ್ಯಾಂಕ್ ಹಾಲಿಡೇ) ಜರ್ಮನಿಯ ಪುರಾತನ,ಹಾಗೂ ದೊಡ್ಡ ನಗರಗಳೊಂದಾದ ಮ್ಯುನಿಕ್ ನಗರಕ್ಕೆ ನನ್ನ ೬ ಸಹೋದ್ಯೋಗಿಗಳೊಂದಿಗೆ ಹೋಗಿದ್ದೆ.ಮೂರು ದಿನಗಳ ಈ ಪ್ರವಾಸದ ಸ್ಥಳಗಳನ್ನು ಮೊದಲೇ ನಿರ್ಧರಿಸಿಯಾಗಿತ್ತು.ಜರ್ಮನಿಯ ಇತಿಹಾಸ ತಕ್ಕಮಟ್ಟಿಗೆ ತಿಳಿದಿದ್ದರಿಂದ ಈ ನಗರದಿಂದಲೇ ಹಿಟ್ಲರನ ರಾಜಕೀಯ ದಿನಗಳು ಪ್ರಾರಂಭವಾಗಿದ್ದು ಎಂಬ ಅರಿವಿತ್ತು.ಗ್ಯಾಸ್ ಚೇಂಬರ ಹಿಂಸೆಗಳ ಬಗ್ಗೆ ಓದಿ ಅರಿತಿದ್ದೆನಾದರೂ ಆ ಸ್ಥಳಗಳ ಹೆಸರು ನೆನಪಿನಲ್ಲಿರಲಿಲ್ಲ.ಇಲ್ಲಿಯೇ ಸಮೀಪದಲ್ಲಿ ಅಂತಹದ್ದೊಂದು ಸ್ಥಳ ಇದೆ ಎಂದು ತಿಳಿದದ್ದು ಮಾಹಿತಿ ಕೇಂದ್ರದಲ್ಲಿನ ಪುಸ್ತಕ ಓದಿದಾಗಲೇ.ಆ ಸ್ಥಳವೇ ಡಚಾವು ನಗರ..
ಸೋಮವಾರದ ದಿನ ಹೋಗಬೇಕೆಂದು ಕೊಂಡಿದ್ದ ಆಸ್ಟ್ರಿಯಾದ ಸಾಲ್ಸಬರ್ಗ್ ಎಂಬ ಸುಂದರ ನಗರದ ಭೇಟಿಯನ್ನು ರದ್ದು ಮಾಡಿ ಈ ಐತಿಹಾಸಿಕ ಶಿಬಿರ ನೋಡಲು ಹೊರಟೆ.ಒಬ್ಬನೇ ಹೊರಟಿದ್ದ ನನಗೆ ಸಮನಸ್ಕ ಗೆಳೆಯ ಬಾಲಾಜಿ ಸಹ ಜೊತೆಯಾದ.ಸುದೈವದಿಂದ ಶಿಬಿರ ತಲುಪುತ್ತಲೇ ಕ್ರೆಗ್ ಎಂಬ ಗೈಡ್ ಸಹ ಸಿಕ್ಕ.ಆತ ನಮ್ಮನ್ನು ಮೊಟ್ಟಮೊದಲ ಹಾಗೂ ನಾಜ್ಹಿಗಳ ಸಂಪೂರ್ಣ ಆಡಳಿತ ಕಾಲದವರೆಗೆ ಇದ್ದ ಏಕೈಕ ಕಾನ್ಸಂಟ್ರೆಶನ್ ಶಿಬಿರದ ಭಯಾನಕ ಇತಿಹಾಸದ ಪರಿಚಯ ಮಾಡಿಸಿಕೊಡತೊಡಗಿದ.೧೯೪೫ ರಲ್ಲಿ ಅಮೇರಿಕನ್ ಪಡೆಗಳು ಕೈದಿಗಳನ್ನು ಈ ಶಿಬಿರದಿಂದ ಮುಕ್ತಿ ಕೊಡಿಸಿದ ನಂತರ ಬಂದ ಜರ್ಮನ್ ಸರಕಾರಗಳು ದಂಗೆಗಳಿಗೆ ಕಾರಣವಾಗಬಹುದು ಎಂಬ ದೂರದೃಷ್ಟಿಯಿಂದ ಶೇಕಡಾ ೬೦ ರಷ್ಟು ಮೂಲ ಶಿಬಿರವನ್ನು ನಾಶ ಮಾಡಿದ್ದರೂ,ಜಗತ್ತಿಗೆ ಇತಿಹಾಸದ ಪರಿಚಯವಿರಲಿ ಎಂಬ ದೃಷ್ಟಿಯಿಂದ ಅದನ್ನು ಸ್ಮಾರಕವನ್ನಾಗಿ ರಕ್ಷಿಸುತ್ತ ಬಂದಿದ್ದಾರೆ.
ಶಿಬಿರದ ಒಳಗೆ ಹೆಜ್ಜೆ ಇಟ್ಟಾಗಿಂದ ಆ ಕಾಲದಲ್ಲಿ ಅಲ್ಲಿ ನಡೆದಿರಬಹುದಾದ ಸಂಪೂರ್ಣ ದೃಶ್ಯಗಳು,ನೋವು,ಯಾತನೆಗಳೆಲ್ಲವೂ ಕಣ್ಣ ಮುಂದೆ ಹಾದುಹೋದವು,ನನ್ನ ಮನಃ ಪಟಲದಲ್ಲಿ ಭದ್ರವಾದವು,ಕ್ಯಾಮೆರಾದಲ್ಲೂ ಸೆರೆಯಾದವು.ಖುದ್ದು ಡಚಾವು ನಗರವೇ ,ಇಲ್ಲಿ ಮಡಿದವರ ರೋದನವನ್ನು ನನ್ನ ಮುಂದೆ ಇಡುತ್ತಿದೆಯೇನೋ ಎಂಬಂತೆ ಭಾಸವಾಗುತ್ತಿತ್ತು.ಆ ರೋದನವೇ ಅಕ್ಷರ ರೂಪ ಪಡೆದು ಇಲ್ಲಿ ಬಂದಿದೆ.
ಈ ಲೇಖನದಲ್ಲಿ ಅಪೂರ್ಣತೆ ಏನಾದರೂ ಅನಿಸಿದರೆ ಅದು ನನ್ನದು.
---------
ನಾನು ಡಚಾವು.ಮುನಿಚ್ (ಮ್ಯೂನಿಕ್ ) ನಿಂದ ಸುಮಾರು ೧೫ ಕಿ ಮಿ ದೂರವಿರುವ ಒಂದು ಪುಟ್ಟ ನಗರ.ಯುರೋಪ್ ನ ಇತರ ನಗರಗಳಂತೆ ಅತೀ ಆಕರ್ಷಕವಲ್ಲದಿದ್ದರೂ,ಪ್ರಕೃತಿದತ್ತ ಎಲ್ಲ ಉಡುಗೊರೆಗಳೂ ನನ್ನಲ್ಲಿವೆ. ಲುಡ್ವಿಗ್ ಥೋಮ ಅಂತಹ ಕೆಲ ಮಹಾನ್ ಜನರ ತಾಯ್ನಾಡು ನಾನೇ.ಯಾಮ್ಪರ್ ಎಂಬ ಸುಂದರ ನದಿ,ಸುತ್ತಮುತ್ತಲೂ ಇರುವ ಹಸಿರು ಕಾನನಗಳು,ಬೆಟ್ಟಗುಡ್ಡಗಳು ನನ್ನ ಸೌಂದರ್ಯ ವರ್ಧಕಗಳು.ಎಷ್ಟೋ ವರ್ಷಗಳ ವರೆಗೆ ಎಷ್ಟೋ ಜನರ ನೆಮ್ಮದಿಯ ತಾಣವಾಗಿದ್ದೆ.
೧೯೧೪ ರಿಂದ ೧೯೧೮ ರ ವರೆಗೆ ನಡೆದ ಮೊದಲ ಮಹಾಯುಧ್ಧದಲ್ಲಿ ಜರ್ಮನಿಯು ಸೋತು ಹೋಯಿತು.ನಂತರದಲ್ಲಿ ಶುರುವಾದದ್ದು ತೀವ್ರತರವಾದ ಹಣದುಬ್ಬರ.ಈ ದಿನಗಳಲ್ಲಿ ಉದ್ಯೋಗಗಳು ಕಡಿಮೆಯಾದವು,ಜನರು ಹಸಿವಿನಿಂದ ಕಂಗೆಟ್ಟರು.೧೯೨೯ ರವರೆಗೂ ಇದ್ದ ಈ ಸ್ಥಿತಿ ಕ್ರಮೇಣ ಸುಧಾರಿಸಲಾರಂಭಿಸಿತು.ಇದೇ ಸಮಯವೆಂದು ಜರ್ಮನ್ ಕಮ್ಯುನಿಸ್ಟ್ ಪಕ್ಷ,ಮತ್ತು ೧೯೧೮ ರಲ್ಲಿ ಹುಟ್ಟಿಕೊಂಡ ಜರ್ಮನ್ ವರ್ಕರ್ಸ್ ಪಾರ್ಟಿ,(೧೯೧೯ ರಲ್ಲಿ ಅದು ನ್ಯಾಷನಲ್ ಸೋಷಿಯಲಿಸ್ಟ್ ಜರ್ಮನ್ ವರ್ಕರ್ಸ್ ಪಾರ್ಟಿ (NSDAP) ಅಂತಾಯಿತು.)ಹಾಗೂ ಇನ್ನಿತರೇ ಪಾರ್ಟಿಗಳು ತಮ್ಮ ಬೇಳೆ ಬೇಯಿಸಿ ಕೊಳ್ಳಲಾರಂಭಿಸಿದವು.ಜನರ ವಿಶ್ವಾಸ ಗಳಿಸಲು ಹೊಸ ಹೊಸ ತಂತ್ರ ಹೂಡಲಾರಂಭಿಸಿದವು.ಇದೇ ಸಮಯದಲ್ಲಿ ನವೀನತೆ ಯನ್ನು ತರುತ್ತೇವೆಂಬ ಕನಸನ್ನು ಬಿತ್ತಿ ೧೯೩೨ ರಲ್ಲಿ NSDAP ಅಧಿಕಾರಕ್ಕೆ ಬಂದಿತು.ಪಕ್ಷದ ಶಕ್ತಿಯುತ ಪ್ರತಿನಿಧಿ ಅಡಾಲ್ಫ್ ಹಿಟ್ಲರ್ ಸರ್ವಾಧಿಕಾರಿಯಾದ.
ಇಷ್ಟೆಲ್ಲಾ ನಡೆದು ಮತ್ತೆ ನನ್ನ ನೆಮ್ಮದಿಯ ದಿನಗಳು ಬಂದುವೆಂದು ಹಾಯಾಗಿ ಇರತೊಡಗಿದೆ.ಆದರೆ,
೧೯೩೩-೧೯೪೫ ರ ನಡುವೆ ಇಲ್ಲಿ ಬಂದವರಲ್ಲಿ ಹೆಚ್ಚಿನ ಜನ ಪೋಲನ್ ನ ಜನರು(೪೦೩೯೫),ನಂತರ ಜರ್ಮನ್ರು (೩೧೪೫೬).ಸೌ ಜೆಟ್ ಯುನಿಯನ್ ದವರು (೨೫೧೧೩), ಹೀಗೆ ವಿವಿಧ ದೇಶಗಳ ಪಟ್ಟಿ ಸುಮಾರು ೨ ಲಕ್ಷದವರೆಗೂ ಬೆಳೆಯುತ್ತ ಹೋಗುತ್ತದೆ.ನನ್ನ ಹೆಸರು,ನಾಜಿ ಸರಕಾರ ಇರುವವರೆಗೆ,ಅಂದರೆ ಸುಮಾರು ೧೨ ವರ್ಷಗಳ ಕಾಲ ಇದ್ದ ಏಕೈಕ ಕಾನ್ಸನ್ಟ್ರೆಶನ್ ಶಿಬಿರ ಎಂದು ಕುಖ್ಯಾತವಾಯಿತು.ಎಲ್ಲಿಯೂ ಬಗ್ಗದ ಘಟಾನುಘಟಿಗಳಿಗೆ ಇಲ್ಲಿ ಕಳುಹಿಸಿ ಮುಕ್ತಿ ದೊರಕಿಸಲಾಗುತ್ತಿತ್ತು.ನಾನು ಕೈದಿಗಳ ಪಾಲಿಗೆ ನರಕವಾದೆ.ಇಲ್ಲಿ ಕ್ರಿಮಿನಲ್ಗಳು,ಯುಧ್ಧ ಕೈದಿಗಳು,ಸಲಿಂಗ ಕಾಮಿಗಳು,ಧರ್ಮಗುರುಗಳು,ಸರ್ಕಾರದ ವಿರೋಧಿಗಳು,ಜೀವ್ ರು ,ಇಮಿಗ್ರಂಟ್ಸ್,ಅಷ್ಟೇ ಅಲ್ಲ ಬೇರೆ ಕಾನ್ಸನ್ಟ್ರೆಶನ್ ಶಿಬಿರದಿಂದ ಬಂದವರೆಲ್ಲರೂ ಇದ್ದರು.
-ಮುಂದುವರೆಯುವುದು..
Comments
ಉ: ನಾನು ಡಚಾವು..
In reply to ಉ: ನಾನು ಡಚಾವು.. by santhosh_87
ಉ: ನಾನು ಡಚಾವು..
ಉ: ನಾನು ಡಚಾವು..
In reply to ಉ: ನಾನು ಡಚಾವು.. by ksraghavendranavada
ಉ: ನಾನು ಡಚಾವು..
ಉ: ನಾನು ಡಚಾವು..
In reply to ಉ: ನಾನು ಡಚಾವು.. by malathi shimoga
ಉ: ನಾನು ಡಚಾವು..