ಉತ್ತರಗಳಿಗಿಂತ ಪ್ರಶ್ನೆಗಳೇ ಕಾಡುವವೇ ಕೊನೆವರೆಗೆ?

ಉತ್ತರಗಳಿಗಿಂತ ಪ್ರಶ್ನೆಗಳೇ ಕಾಡುವವೇ ಕೊನೆವರೆಗೆ?

ಇಂದೂ ಮನಸ್ಸಿನಾಳದಲ್ಲಿ ಕದಡುತ್ತಿವೆ ಅಲೆಗಳು
ನಾಟಿದ ಕಲ್ಲೊಂದು ಉಳಿಸಿದ ಅವಶೇಷದಂತೆ
ತೊರೆದರೂ ಬಿಡದೆ ಬಂದಪ್ಪುವವು ಗೋಜಲುಗಳು
ವಿಕ್ರಮನ ಬೆನ್ನೇರಿದ ಕಳೇಬರದಂತೆ

ತಾನಾಗಿ ಬೆಸೆದ ಭಾವಗಳಿಗಿಲ್ಲಿ ಸಂಬಂಧಗಳ ತೊಡಕು
ಮನಸ್ಸುಗಳ ನಡುವೆ ಗೋಡೆಗಳ ಬೆಳೆಸಿ ಸಾಗುವುದು ಬದುಕು
ಇತ್ತ ರಾಗದ ಮಧ್ಯೆ ಕೂಡಿ ಬರದ ಯಾವುದೋ ತಪ್ಪಿದ ತಾಳ
ಹುಡುಕುವುದು ಲೋಕ ಇನ್ಯಾವುದೋ ರಾಗದ ಮೇಳ

ಕಾರಣಗಳ ಅರಸುತ್ತಾ ಎದೆ ಬಿರಿದು ಹಾಡುವ ಆಸೆಗಳಲಿ
ಮೂಡುವುದು ಒಮ್ಮೊಮ್ಮೆ ಕಳೆದು ಹೋಗುವ ಭಯ
ಆದರೂ ಮುಗಿದು ಹೋದ ಕನಸಿನ ಕಲ್ಪನೆಗಳಲಿ
ಮತ್ತೆ ಚಿಗುರೊಡೆವುವು ಸಂವೇದನೆಗಳೆಂಬ ಆಶಯ

ಎಲ್ಲವೂ ಸರಿಯಿದೆ, ಕಾದಿದೆ ಒಳ್ಳೆಯ ಗಮ್ಯವೊಂದು
ಎನ್ನುವುದು ಮನವ ಗೊಂದಲಗಳ ನಿವಾರಿಸಲೆಂದೇ
ಮತ್ತಷ್ಟು ನೆನಪುಗಳ ಧಾರೆಯಲಿ ತೊಯ್ದು
ಅನರ್ಥವೆನಿಸುವ ಬಂಧಗಳಲಿ ಅರ್ಥ ಹುಡುಕಲೆಂದೇ

ಕನವರಿಕೆಗಳಿಗೆ ಕೊಡಬಹುದೇ ಕನಸುಗಳ ಕಲ್ಪನೆ
ಚಿಗುರೊಡೆದರೂ ಬದುಕಿಯಾವೇ ನನ್ನಲ್ಲಿ ನಾನು ಇರುವವರೆಗೆ
ಮನಸ್ಸೆಂಬುದು ಗೋಜಲುಮಯವಾಗಿ ಕೇಳಿದೆ ಮತ್ತೊಮ್ಮೆ ಪ್ರಶ್ನೆ
ಉತ್ತರಗಳಿಗಿಂತ ಪ್ರಶ್ನೆಗಳೇ ಕಾಡುವವೇ ಕೊನೆವರೆಗೆ?

Rating
No votes yet

Comments