ಅಣ್ಣ-ತಮ್ಮಂದಿರ ಸಂಬಂಧ
ನಮ್ಮ ತಾತ ಗುಂಡಪ್ಪನವರು, ಅವರ ತಮ್ಮ ಕೃಷ್ಣಪ್ಪ. ಇದ್ದ ಪುಟಗೋಸಿ ಜಮೀನಿನ ವಿಚಾರದಲ್ಲಿ ವಿವಾದವೆದ್ದು ಕೋರ್ಟ್ ಮೆಟ್ಟಿಲು ಹತ್ತಿದರಂತೆ. ಐದು ಮೈಲು ದೂರದ ಹೊಳೇನರಸೀಪುರದ ಕೋರ್ಟಿಗೆ ಅಲೆಯುವಂತಾಯ್ತು. ಕೋರ್ಟಿಗೆ ಹೋಗಬೇಕಾದದಿನ ಬೆಳಗ್ಗೆ ಎದ್ದು ನಮ್ಮ ತಾತ ಸ್ನಾನ ಸಂಧ್ಯಾದಿಗಳನ್ನು ಮುಗಿಸಿ ನೇರವಾಗಿ ತಮ್ಮನ ಮನೆಗೆ ಹೋಗಿ ನಾದಿನಿ ಕೈಲಿ ಕಾಫೀ ಇಸ್ಕೊಂಡು ಕುಡಿದು " ಕೃಷ್ಣ, ಇವತ್ತು ಕೋರ್ಟ್ ಇದೆ, ನೆನಪಿದೆಯಾ? ತಿಂಡಿಗೆ ಇಲ್ಲಿಗೇ ಬರಲಿ ಅಂತ ನಿಮ್ಮತ್ತಿಗೆ ಹೇಳಿದ್ದಾಳೆ, ಅಲ್ಲೇ ಬಂದ್ ಬಿಡು, ತಿಂಡಿ ತಿಂದು ಹೊರಟು ಬಿಡೋಣ.ತಡಮಾಡಬೇಡ" ಅಂತಾ ಹೇಳಿ ನಮ್ಮ ತಾತ ಮನೆಗೆ ಬಂದು ತಯಾರಿ ಮಾಡಿಕೊಳ್ಳುವುದರೊಳಗೆ ನಮ್ಮ ಚಿಕ್ಕ ತಾತ ನಮ್ಮನೆಯಲ್ಲಿ ಹಾಜರಾಗುತ್ತಿದ್ದರಂತೆ.
"ಕೃಷ್ಣ , ನಿಮ್ಮಣ್ಣನನ್ನೂ ಕರೆಯೋ ತಡವಾಗಲಿಲ್ಲವೇನೋ" ಅಂತಾ ಇಬ್ಬರನ್ನೂ ಕರೆದು ಹೊಟ್ಟೆತುಂಬಾ ತಿಂಡಿಕೊಟ್ಟು , ಲೋ ಕೃಷ್ಣ ವಾಪಸ್ ಬರುವುದು ತಡವಾಗಬಹುದು, ರೊಟ್ಟಿ ಕಟ್ಟಿಕೊಡ್ತೀನಿ, ಮಧ್ಯಾಹ್ನ ಊಟದ ಬದಲು ತಿಂದು ಸೂರ್ಯ ಮುಳುಗುವುದರೊಳಗೆ ಮನೆ ಸೇರಿಬಿಡಿ, ನಿಮ್ಮಣ್ಣಂಗೋ ಕಣ್ಣೂ ಕಾಣುಲ್ಲ ಜೋಪಾನ! "- ನಮ್ಮಜ್ಜಿ ಹೇಳುತ್ತಿದ್ದ ಮಾತನ್ನು ನಮ್ಮ ಸೋದರತ್ತೆ ಆಗಾಗ ನೆನೆದು ನಗ್ತಾ ಇದ್ರು. ಹೋಗುತ್ತಿದ್ದುದು ಭೂ ವ್ಯಾಜ್ಯಕ್ಕಾಗಿ ಕೋರ್ಟಿಗೆ. ಅದೂ ಒಬ್ಬರ ವಿರುದ್ಧ ಒಬ್ಬರು. ಆದರೂ ಕೋರ್ಟಿಗೆ ಹೋಗುವಾಗ ಬರುವಾಗ ಹರಟೆ ಹೊಡೆದುಕೊಂಡು ,ತಮಾಶೆ ಮಾಡಿಕೊಂಡು ಇಬ್ಬರ ಮಧ್ಯೆ ಏನೂ ವ್ಯಾಜ್ಯವೇ ಇಲ್ಲವೇನೋ ಎಂಬಂತೆ ಕೋರ್ಟಿಗೆ ಹೋಗಿ ಬರ್ತಿದ್ರಂತೆ. ಹಾಗಾದಮೇಲೆ ಕೋರ್ಟಿಗೆ ಯಾಕೆ ಹೋಗಬೇಕಾಗಿತ್ತು, ತಮ್ಮ ತಮ್ಮಲ್ಲೇ ಮಾತುಕತೆ ಮೂಲಕ ಒಪ್ಪಂದ ಮಾಡಿಕೊಳ್ಳುವುದಕ್ಕೆ ಆಗ್ತಾ ಇರಲಿಲ್ವಾ? ಅಂತಾ ಪ್ರಶ್ನೆ ಏಳುತ್ತೆ, ಆದರೆ ಅಂದಿನ ಜನ ದಡ್ದರು. ಊರಿನ ಶ್ಯಾನುಭೋಗರು, ಪಟೇಲರುಗಳು ಸೇರಿ ಅಣ್ಣ ತಮ್ಮಂದಿರ ಮಧ್ಯೆ, ಅಪ್ಪ-ಮಕ್ಕಳ ಮಧ್ಯೆ, ಕೊನೆಗೆ ಗಂಡ ಹೆಂಡಿರ ಮಧ್ಯೆಯೂ ತಂದ್ ಹಾಕಿ ಬಿಡುತ್ತಿದ್ದರಂತೆ.
ಅದೇನೇ ಇರಲಿ, ನಮ್ಮ ತಾತ ಮತ್ತು ಚಿಕ್ಕತಾತ ಸಾಯೋ ವರೆಗೂ ಅನ್ಯೋನ್ಯವಾಗೇ ಇದ್ರಂತೆ. ಆದರೆ ಈ ಮನೆ ಹಾಳ ಶ್ಯಾನುಭೋಗರು ಪಟೆಲರು ಸೇರಿಕೊಂಡು ಇವರುಗಳ ಮಧ್ಯೆ ವ್ಯಾಜ್ಯ ತಂದು ಹಾಕಿದ್ದರು ಅಷ್ಟೆ. ನನಗೆ ಈ ಪ್ರಸಂಗ ತುಂಬಾ ಇಷ್ತವಾಯ್ತು. ಕಾರಣ ಕೋರ್ಟಿನ ವ್ಯಾಜ್ಯ ಅದರ ಪಾಟಿಗೆ ಅದಿರಲಿ, ಅದೇನೋ ತೀರ್ಮಾನ ವಾಗುತ್ತೆ. ಆದರೆ ಅಣ್ಣ-ತಮ್ಮಂದಿರ ಸಂಬಂಧ ಶಾಶ್ವತವಾಗಿರಬೇಕು, ಅಲ್ವಾ?
ಕೊನೆಮಾತು: ಅಂದಿನ ಕಾಲದಲ್ಲಿ ಹೆಂಗಸರು ತಮ್ಮ ಗಂಡನಿಗಿಂತ ಮೈದುನನನ್ನು ಸಲುಗೆಯಿಂದ, ಪ್ರೀತಿಯಿಂದ ಮಾತನಾಡಿಸುತ್ತಿದ್ದರು, ಅಂತೆಯೇ ಗಂಡಸರು ತಮ್ಮ ತಮ್ಮಂದಿರಿಗಿಂತಲೂ ನಾದಿನಿಯರನ್ನು ತಮ್ಮ ಮಕ್ಕಳಂತೆ ಸಲುಗೆಯಿಂದ ಮಾತನಾಡಿಸುತ್ತಿದ್ದರು, ಈ ಕಾಲದಲ್ಲಿ?
Comments
ಉ: ಅಣ್ಣ-ತಮ್ಮಂದಿರ ಸಂಬಂಧ
In reply to ಉ: ಅಣ್ಣ-ತಮ್ಮಂದಿರ ಸಂಬಂಧ by kavinagaraj
ಉ: ಅಣ್ಣ-ತಮ್ಮಂದಿರ ಸಂಬಂಧ
ಉ: ಅಣ್ಣ-ತಮ್ಮಂದಿರ ಸಂಬಂಧ
ಉ: ಅಣ್ಣ-ತಮ್ಮಂದಿರ ಸಂಬಂಧ
In reply to ಉ: ಅಣ್ಣ-ತಮ್ಮಂದಿರ ಸಂಬಂಧ by asuhegde
ಉ: ಅಣ್ಣ-ತಮ್ಮಂದಿರ ಸಂಬಂಧ