ಕಾಮನ್ ವೆಲ್ತ್ ಗೇಮ್ಸ್ ‘ಸರ್ಕಸ್’ ಅಡಿ ಅಪ್ಪಚ್ಚಿಯಾದ ‘ಸ್ಲಂ -ಡಾಗ್’ ಗಳ ಬೆನ್ನೇರಿ...

ಕಾಮನ್ ವೆಲ್ತ್ ಗೇಮ್ಸ್ ‘ಸರ್ಕಸ್’ ಅಡಿ ಅಪ್ಪಚ್ಚಿಯಾದ ‘ಸ್ಲಂ -ಡಾಗ್’ ಗಳ ಬೆನ್ನೇರಿ...

‘ಕಾಮನ್ ವೆಲ್ತ್ ಗೇಮ್ಸ್’ ಅರ್ಥಾತ್ ‘ಕಾಂಗ್ರೆಸ್ ವೆಲ್ತ್ ಗೇಮ್ಸ್’ ಎಂದು ಲೇವಡಿ ಮಾಡಿ ನಮ್ಮ ಮಾಧ್ಯಮಗಳು ಕ್ರೀಡಾಕೂಟದ  ಸಂಘಟನೆಯಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಭಾಗಿಯಾದವರಾದಿಯಾಗಿ ‘ಸುರೇಶ’ ನಂತೆ ಬಿಂಬಿಸಿ, ದೇಶದ ಮಾನವನ್ನು ‘ಕಲ್ ಮಾಡಿ’ಹರಾಜಿಗಿಟ್ಟವು. ಈ ಬೆಳವಣಿಗೆಗಳು ನಿಮ್ಮ ಗಮನಕ್ಕಿದೆ. ಆದರೆ ಈಗ ಅದು ಇತಿಹಾಸ.

 

ಈ ಕ್ರೀಡಾಕೂಟವೆಂಬ ಸರ್ಕಸ್ಸಿನ ಪೂರ್ವಾರ್ಧ ಹಾಗೂ ಉತ್ತರಾರ್ಧಗಳು ನಮ್ಮ ಮಾಧ್ಯಮಗಳನ್ನು ಅಷ್ಟಾಗಿ ತಟ್ಟಿಲ್ಲವೆಂಬುದು ಸೋಜಿಗ. ಕಾರಣ ಹಾರಾಡುವವರಿಗೆ ನಮ್ಮ ಮಾಧ್ಯಮಗಳ ಸುದ್ದೀಶರು ತುತ್ತೂರಿಯಾಗುತ್ತಾರೆ ಹೊರತು, ಧ್ವನಿ ಇಲ್ಲದವರಿಗೆ ಧ್ವನಿವರ್ಧಕರಾಗಲು ಸಿದ್ಧರಿಲ್ಲ! ಅದಕ್ಕೊಂದು ನಿದರ್ಶನ ಇಲ್ಲಿದೆ.

 

ದೆಹಲಿಯ ಶ್ರಮಿಕ ಸಂಘ ಇತ್ತೀಚೆಗೆ ‘ಹೌಸಿಂಗ್ ಆಂಡ್ ಲ್ಯಾಂಡ್ ರೈಟ್ಸ್ ನೆಟವರ್ಕ್’ (ಎಚ್.ಎಲ್.ಆರ್.ಎನ್) ಪ್ರಕಟಿಸಿದ ವಿಸ್ತೃತವಾದ ವರದಿಯೊಂದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಕಳೆದ ೨೦೦೩ ರಲ್ಲಿ ಭಾರತ ಕಾಮನ್ ವೆಲ್ತ್ ಕ್ರೀಡಾಕೂಟ ಸಂಘಟಿಸುವ ಜವಾಬ್ದಾರಿ ಹೊತ್ತ ದಿನದಿಂದ ಮುಕ್ತಾಯವಾಗುವವರೆಗೆ ದೆಹಲಿಯಲ್ಲಿದ್ದ ೩೫೦ಕ್ಕೂ ಹೆಚ್ಚು ಕೊಳಚೆ ಪ್ರದೇಶ ಹಾಗೂ ಅಲ್ಲಿ ಮೂರ್ನಾಲ್ಕು ದಶಕಗಳಿಂದ ವಾಸವಾಗಿದ್ದ ೩ ಲಕ್ಷಕ್ಕೂ ಹೆಚ್ಚು ಬಡವರನ್ನು ನಿರ್ದಾಕ್ಷಿಣ್ಯವಾಗಿ ಬೀದಿಗೆ ತಳ್ಳಿದೆ. ಅವರಿಗೆ ಸೂಕ್ತ ಪುನರ್ವಸತಿ ಕಲ್ಪಿಸದೇ, ಕೇವಲ ೧/೩ ದಷ್ಟು ಮುಂಗೈ ಜೋರಿನ ಜನರಿಗೆ ಮಾತ್ರ ಮೂಗಿಗೆ ತುಪ್ಪ ಹಚ್ಚಿ, ಕೊಳಚೆ ನಿವಾಸಿಗಳ ಮನೆಗಳನ್ನು ಕಿತ್ತೆಸೆಯಲಾಗಿದೆ. ಅಂದರೆ, ಈಗ ನಡೆದಿದೆ ಎನ್ನಲಾದ ಭ್ರಷ್ಟಾಚಾರಕ್ಕಿಂತ ಮೂರು ಪಟ್ಟು ಹೆಚ್ಚಿನ ‘ಹ್ಯುಮನ್ ಕಾಸ್ಟ್’ ಇಲ್ಲಿ ಬಡವರು ಭರಿಸಿದ್ದಾರೆ. ‘ಇದು ದೊಡ್ಡವರ ಸಣ್ಣತನಗಳ ವಿರಾಡ್ ರೂಪ’!     

 

ಭಾರತ ಕಾಮನ್ ವೆಲ್ತ್ ಕ್ರೀಡಾಕೂಟ ಸಂಘಟಿಸುವ ಜವಾಬ್ದಾರಿ ಹೊತ್ತ ದಿನದಿಂದ ಸೂರಿಲ್ಲದ ಜನ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಮಾಡಿದ ಹೋರಾಟ ಅರಣ್ಯರೋದನಕ್ಕೆ ಸಮನಾಗಿದೆ. ಪಡಿತರ ಚೀಟಿ, ಚುನಾವಣಾ ಗುರುತಿನ ಪತ್ರ ಹೊಂದಿರದ ಬಹುತೇಕ ಸ್ಲಂ ನಿವಾಸಿಗಳನ್ನು ಎತ್ತಿ ಹೊರದಬ್ಬಿದಾಗ ಕಿತ್ತು ಹೋದ ಮನೆಯ ತಾರಸಿ, ಸಾಮಾನು ಸರಂಜಾಮುಗಳನ್ನು ಪೇರಿಸಿಕೊಂಡು ಹರಕು-ಮುರುಕು ಮನೆ ಕಟ್ಟಿಕೊಳ್ಳುವಂತೆ ಅಮಾನವೀಯವಾಗಿ ಸಹ ನಡೆಸಿಕೊಳ್ಳಲಾಯಿತು. ಇಡೀ ಮನೆ ಧರಾಶಾಯಿಯಾದಾಗ ಅವರಿಗೆ ದೊರಕಿದ್ದು ಹರಿದು ಹೋದ ಪ್ಲಾಸ್ಟಿಕ್, ಮುರಿದ ಗಳಗಳು, ಹರಿದ ತಗಡುಗಳು. ಜೆ.ಸಿ.ಬಿಗಳ ಅಬ್ಬರದ ಧ್ವನಿಯ ಮಧ್ಯೆ ಇವರ ಆಕ್ರಂದನ ನಮ್ಮ ಮಾಧ್ಯಮಗಳಿಗೆ ಕೇಳಿಸಲೇ ಇಲ್ಲ.    

 

ಅಮ್ಮ ತನ್ನ ಮೊಮ್ಮಕಳನ್ನು ಕಾಯುತ್ತ ಕುಳಿತ ದೃಶ್ಯ.

 

ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಮಿಲೂನ್ ಕೊಠಾರಿ ಹೇಳುತ್ತಾರೆ.."ಕಾಮನ್ ವೆಲ್ತ್ ಕ್ರೀಡಾಕೂಟ ಸಂಘಟಿಸುವ ಸಲುವಾಗಿಯೇ ೩೫೦ಕ್ಕೂ ಹೆಚ್ಚು ಸ್ಲಂಗಳನ್ನು ಅನಾಮತ್ತಾಗಿ ಒಕ್ಕಲೆಬ್ಬಿಸಲಾಗಿದೆ ಎಂಬ ಬಗ್ಗೆ ಸಾಕಷ್ಟು ಪುರಾವೆಗಳು ನಮಗೆ ಸಿಗುತ್ತವೆ. ಆದರೆ ದೆಹಲಿ ಸರಕಾರ ಮಾತ್ರ ಹಾಗೇನಿಲ್ಲ ಎಂಬ ಮಿಥ್ಯಾ- ವಾಸ್ತವದಲ್ಲಿ ಬದುಕುತ್ತಿದೆ".

 

ಕಾಮನ್ ವೆಲ್ತ್ ಕ್ರೀಡಾಕೂಟವಂತೂ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಸರಕಾರ ಘೋಷಿಸಿದೆ. ಆದರೆ ಕ್ರೀಡಾಕೂಟವನ್ನು ಯಶಸ್ವಿಯಾಗಿಸುವುದಕ್ಕಾಗಿಯೇ ಬಡವರನ್ನು ಒಕ್ಕಲೆಬ್ಬಿಸಿದ್ದ ಸರಕಾರ ಈಗ ಅವರ ಧ್ವನಿ ಕೇಳಲು ಸಹ ಇಚ್ಛೆಪಡುತ್ತಿಲ್ಲ. ಸರಕಾರ-ಖಾಸಗಿ ಹಾಗೂ ಅರೆಸರಕಾರಿ ಅವರು ಒಟ್ಟಾಗಿ ಕ್ರೀಡಾಕೂಟ ಸಂಘಟಿಸಿ, ಈಗ ಭ್ರಷ್ಟಾಚಾರದ ಕೆಸರು ಮೆತ್ತಿಸಿಕೊಂಡು ದೇಶವ್ಯಾಪಿ ಸುದ್ದಿಯಾಗುತ್ತಿರುವಾಗ ಬಡವರು ಮಾತ್ರ ಅದೇ ಎ.ಆರ್.ರೆಹೆಮಾನ್ ಅವರ ‘ಜೈ ಹೋ’ ಹಾಡುವುದೊಂದು ಬಾಕಿ ಇದೆ.

 

ಷಹೀದ್ ಅರ್ಜನ್ ದಾಸ್ ಕ್ಯಾಂಪಿಗೆ ನೀವು ಈಗ ಭೇಟಿ ನೀಡಬೇಕು. ಬೇಸಿಗೆಯ ಉರಿ ಬಿಸಿಲನ್ನು ತಗಡಿನ ಷೀಟಿನ ಕೆಳಗೆ ಕಳೆದು ಸುಟ್ಟಂತಾಗಿರುವ ಅವರು, ವಿಪರೀತ ಮಳೆಗಾಲದಲ್ಲಿ ತೇಲಿ ಹೋಗುತ್ತಿದ್ದ ಪಾತ್ರೆ-ಪಗಡಗಳನ್ನು ಉಳಿಸಿಕೊಳ್ಳಲು ಹೆಣಗಿ ಸಹ ಸುಸ್ತಾಗಿದ್ದಾರೆ. ಸದ್ಯ ದೆಹಲಿಯ ಮೈಕೊರೆಯುವ ಛಳಿಯಲ್ಲಿ ತಾವು ಜತೆಗೆ ತಮ್ಮ ಹೆಂಡತಿ-ಮಕ್ಕಳನ್ನು ಪೊರೆಯುವುದು ಹೇಗೆ ಎಂಬ ಗಭೀರ ಸಮಸ್ಯೆ ಅವರ ಮುಖದಲ್ಲಿ ಎದ್ದು ಕಾಣಿಸುತ್ತದೆ. ಹರಿದ ಟಾರ್ಪಾಲಿನ್, ಮುರಿದ ಕಬ್ಬಿಣದ ಸರಳುಗಳು, ಜೋಡಿಸಿಡಲಾದ ಇಟ್ಟಂಗಿ ಗೋಡೆಗಳು, ಮುರಿದ ಬಾಗಿಲು-ಕಿಟಕಿಗಳು ಅಲ್ಲಿವೆ. ಬಡವರ ಭಾರತ ಅವರಿಗೆ ಕಾಣಿಸಬಾರದು ಎಂದು ಭವ್ಯ-ಭಯಂಕರ ‘ಇಂಡಿಯಾ ಶೈನಿಂಗ್’, ‘ಸುಸ್ವಾಗತಂ’ ಕಟೌಟ್ ಗಳನ್ನು ನಿಲ್ಲಿಸಲಾಗಿದೆ. ಪರದೆಯ ಹಿಂದೆ ಬಗ್ಗಿ ನೋಡುವವರಾರು?

 

ಹೀಗೂ ಉಂಟೆ ಎಂದು ತಮಗೆ ಅನ್ನಿಸಿರಲಿಕ್ಕೂ ಸಾಕು!

 

ತೆರೆದ ದೊಡ್ಡ ಗಟಾರಿನ ಹಿಂದೆ ಸ್ವಾಂಕಿ ತ್ಯಾಗರಾಜ ಸ್ಟೇಡಿಯಂ ನಿರ್ಮಿಸಲಾಗಿದೆ. ನೆಟ್ ಬಾಲ್ ಸ್ಪರ್ಧೆಗಳನ್ನು ನಡೆಸಲು ಸುಮಾರು ೩೦೦ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸ್ಟೇಡಿಯಂ ನಿರ್ಮಿಸಲಾಗಿದೆ. ಇತ್ತ ಆ ಗಟಾರಿನ ಗುಂಟ ಸುಮಾರು ೩೦೦ ‘ಜುಗ್ಗಿ’ಗಳನ್ನು ಬಡವರು ನಿರ್ಮಿಸಿಕೊಂಡಿದ್ದಾರೆ. ಐದು ಮಕ್ಕಳ ತಂದೆ, ರಾಜ್ ಕುಮಾರ ಈ ಕ್ಲಸ್ಟರ್ ನಿವಾಸಿಗಳಲ್ಲಿ ಒಬ್ಬ. ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶಗಳಿಂದ ವಲಸೆ ಬಂದ ಕುಟುಂಬಗಳೇ ಇಲ್ಲಿ ಹೆಚ್ಚಾಗಿ ವಾಸವಾಗಿವೆ. ಆತ ಹೇಳುತ್ತಾನೆ.."ನಾವು ಮುಖ್ಯಮಂತ್ರಿ ಶೀಲಾ ದೀಕ್ಷಿತ ಅವರ ಮಗ ಸಂದೀಪ್ ಸಾಹೇಬರು ಎಂ.ಪಿ. ಆಗಿ ಆರಿಸಿ ಬರಲು ಕಾರಣೀಭೂತರಾಗಿದ್ದೇವೆ. ಆದರೆ ತತ್ಫಲವೆಂಬಂತೆ ನಮಗೆ ಈ ಗತಿ ನಮ್ಮ ಪ್ರತಿನಿಧಿಗಳು ಕರುಣಿಸಿದ್ದಾರೆ".

 

ರಾಜ್ ಕುಮಾರ್ ಅವರ ಮಕ್ಕಳು ನೆಲೆ ಕಳೆದುಕೊಂಡ ಮೇಲೆ ಶಾಲೆಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಈ ಕ್ಲಸ್ಟರ್ ನಲ್ಲಿ ವಾಸವಾಗಿರುವ ಪ್ರತಿಯೊಬ್ಬ ನಿರ್ವಸಿತ ‘ಸ್ಲಂ ಜೀವಿ’ ಅರ್ಥಾತ್ ‘ಸ್ಲಂ ಡಾಗ್’ ರೇಶನ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿ ಹೊಂದಿದ್ದಾರೆ! ಇದು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವ ಸಾಕಾರಗೊಳ್ಳುವ ಬಗೆ ಇರಬಹುದು! ಕೆಲವರಿಗೆ ಪಾಸ್ ಪೊರ್ಟ್ ಸಹ ಇವೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಆದರೂ ಅವರನ್ನು ಅನಾಮತ್ತಾಗಿ ಎತ್ತಂಗಡಿ ಮಾಡಲಾಗಿದೆ. ಎಲ್ಲವನ್ನೂ ಕಾನೂನು ಬದ್ಧವಾಗಿ ಹೊಂದಿದ್ದರೂ ದೆಹಲಿ ಸರಕಾರ ಒಕ್ಕಲೆಬ್ಬಿಸಿದ್ದಕ್ಕಾಗಿ ಮನನೊಂದು ಮನೋಜಕುಮಾರ್ ಎಂಬುವವರ ತಂದೆ ಆಘಾತಕ್ಕೆ ಒಳಗಾಗಿ ಮರಣವನ್ನಪ್ಪಿದ್ದಾರೆ. ಮನೋಜ್ ಪ್ರಶ್ನಿಸುತ್ತಾರೆ.."ಇಂಡಿಯಾ ಶೈನಿಂಗ್ ಎಂಬ ಭಾರತದ ಕನಸಿನ ಎದುರು ನಮ್ಮಂಥ ಸಣ್ಣವರ ಬದುಕುವ ಸಣ್ಣ ಕನಸುಗಳು ಅಡ್ಡಬರುತ್ತವೆ ಅಂತ ಕಾಣಿಸ್ತದೆ.."

 

ಷಹೀದ್ ಅರ್ಜನ್ ದಾಸ್ ಕ್ಯಾಂಪ್ ನಲ್ಲಿ ವಾಸಿಸುತ್ತಿದ್ದ ಸ್ಲಂ ಜನರಿಗೆ ೨೦೦೯ ರ ಜನೇವರಿಯಲ್ಲಿ ಕ್ರೀಡಾಕೂಟಕ್ಕೆ ಆಗಮಿಸುವವರ ವಾಹನಗಳ ಪಾರ್ಕಿಂಗ್ ಸೌಲಭ್ಯಕಾಗಿ ಒಕ್ಕಲೆಬ್ಬಿಸುತ್ತಿರುವುದಾಗಿ ಹೇಳಿ, ತರಾತುರಿಯಲ್ಲಿ ಆ ಕೆಲಸ ಮಾಡಿದರು. ಆದರೆ  ಆಶ್ಚರ್ಯ, ಕ್ರೀಡಾಕೂಟ ಮುಕ್ತಾಯವಾದರೂ ಇಂದಿಗೂ ಯಾವುದೇ ‘ಪಾರ್ಕಿಂಗ್ ಲಾಟ್’ ಅಲ್ಲಿ ತಲೆ ಎತ್ತಿಲ್ಲ! "ಕೊನೆ ದಿನದ ವರೆಗೂ ನಮ್ಮನ್ನು ಎತ್ತಂಗಡಿ ಮಾಡಿಸುತ್ತಿರುವ ಕುರಿತು ಯಾವುದೇ ಮುನ್ಸೂಚನೆ ನೀಡದೇ ಎಕಾಏಕಿ ಈ ಕೆಲಸ ಮಾಡಿದರು" ಎಂದು ಅಲ್ಲಿನ ನಿವಾಸಿಗಳು ದೂರುತ್ತಾರೆ. ಇಂದಿಗೆ ೧೦ ತಿಂಗಳುಗಳು ಕಳೆದರೂ ಕೇವಲ ಗಟಾರೊಂದು ಅಲ್ಲಿ ನಿರ್ಮಾಣವಾಗಿದ್ದು, ಯಾವ ಕೋನದಿಂದಲೂ ಅಲ್ಲಿ ಸ್ಲಂ ಇತ್ತು ಎಂದು ಗೊತ್ತಾಗದಂತೆ ನಾಮಶೇಷ ಮಾಡಲಾಗಿದೆ ಎಂಬುದು ಅವರ ಆರೋಪ.

 

ಹೀಗಿತ್ತು ಕಾಮನ್ ವೆಲ್ತ್ ಕ್ರೀಡಾಕೂಟದ ವರ್ಣರಂಜಿತ ಉದ್ಘಾಟನಾ ಸಮಾರಂಭ.

 

ಕೋಠಾರಿ ಅವರು ಹೇಳುವ ಪ್ರಕಾರ.."ಅಭಿವೃದ್ಧಿಯ ಹೆಸರಿನಲ್ಲಿ ಒಕ್ಕಲೆಬ್ಬಿಸಲು ಮುಂದಾದವರು ಅಲ್ಲಿನ ನಿವಾಸಿಗಳಿಗೆ ಸೂಕ್ತ ಕಾಲಾವಕಾಶ ನೀಡಬೇಕಿತ್ತು. ತಾವೇ ಮುಂದಾಗಿ ನೆಲೆ ಕಂಡುಕೊಳ್ಳಲು ಅಥವಾ ಆಡಳಿತವೇ ಮುಂದಾಗಿ ಪುನರ್ವಸತಿ ಕಲ್ಪಿಸಲು ಯೋಜಿಸಬಹುದಿತ್ತು. "ವಿಶ್ವ ಸಂಸ್ಥೆಯ ತತ್ವ-ಸಿದ್ಧಾಂತ ಹಾಗೂ ನಿಯಮಾವಳಿಗಳ ಪ್ರಕಾರ ಅಭಿವೃದ್ಧಿಯ ಹೆಸರಿನಲ್ಲಿ ಒಕ್ಕಲೆಬ್ಬಿಸುತ್ತಿರುವವರಿಗೆ ಸೂಕ್ತ ಮಾಹಿತಿ ನೀಡದೇ ಮುಂದುವರೆದಿರುವುದು ಸ್ಪಷ್ಟ ಉಲ್ಲಂಘನೆ. ಮೇಲಾಗಿ ಆಳುವ ಸರಕಾರ ಅಲ್ಲಿ ವಾಸಿಸುವ ಜನರ ಹಕ್ಕುಗಳಿಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕಾದದ್ದು ಅನಿವಾರ್ಯ. ಆದರೆ ಈ ಬೆಳವಣಿಗೆಯಿಂದ ಸಾಕಷ್ಟು ಮಾನವ ಹಕ್ಕುಗಳಿಗೆ ಚ್ಯುತಿ ಬಂದಿದೆ. ಉದಾಹರಣೆಗೆ ಅವರ ಬದುಕುವ ಹಕ್ಕು ಕಸಿದಂತಾಗಿದೆ. ಸೂರು ಕಿತ್ತುಕೊಳ್ಳಲಾಗಿದೆ. ವಯೋವೃದ್ಧರು, ಮಹಿಳೆಯರು ಹಾಗೂ ಮಕ್ಕಳಿಗೆ ವಿಶೇಷವಾಗಿ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ನರಳುವಂತೆ ಮಾಡಿದೆ. ಮಕ್ಕಳು ಶಿಕ್ಷಣದ ಹಕ್ಕು ಸೇರಿದಂತೆ ಅನೇಕ ಮೂಲಭೂತವಾದ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಸುಮಾರು ೬೦ ಸಾವಿರ ಜನ ದೆಹಲಿಯ ಜನನಿಬಿಡ ಪ್ರದೇಶಗಳಲ್ಲಿ ನಿರ್ಗತಿಕರಾಗಿ ಭಿಕ್ಷೆ ಬೇಡುವಂತಾಗಿದೆ; ಕ್ರೀಡಾ ಗ್ರಾಮದಿಂದಲೇ ಸುಮಾರು ೫೦ ಸಾವಿರ ಜನ ಭಿಕ್ಷುಕರನ್ನು ಹೊರದಬ್ಬಲಾಗಿದೆ. ವೈಜ್ಞಾನಿಕವಾಗಿ ಒಕ್ಕಲೆಬ್ಬಿಸಿ, ಅದರ ಗಂಭೀರ ಪರಿಣಾಮಗಳನ್ನು ಸಹ ಗಮನಿಸದೇ ಈ ಕೆಲಸಕ್ಕೆ ಕೈಹಾಕಿರುವುದು ಅಕ್ಷಮ್ಯ" ಎಂದು ಅಭಿಪ್ರಾಯ ಪಟ್ಟಿದ್ದಾರೆ.

 

ಈ ಗಣ್ಯರಿಗೆ ಕೇಳಿಸಿತೇ ಬಡವರ ಮೊಕರೋದನ..

 

ದೆಹಲಿ ನ್ಯಾಯಾಲಯದ ಎದುರು ಈಗಾಗಲೇ ನಾಲ್ಕು ದಾವೆಗಳನ್ನು ಹೂಡಲಾಗಿದೆ. ಒಕ್ಕಲೆಬ್ಬಿಸಿದ ಕ್ರಮ, ಪುನರ್ವಸತಿ  ಹಾಗೂ ಸೂಕ್ತ ಪರಿಹಾರ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ನಾಲ್ಕು ಭಾಗವಾಗಿ ಅದನ್ನು ವಿಂಗಡಿಸಿದೆ. ಜತೆಗೆ ಮಧ್ಯಸ್ಥಿಕೆ ವಹಿಸಿ ಬಡವರ ಪರ ತೀರ್ಪು ಸಹ ನೀಡಿದೆ. ದೆಹಲಿ ಉಚ್ಚ ನ್ಯಾಯಾಲಯದ (ಸದ್ಯ) ನಿವೃತ್ತ ಮುಖ್ಯನ್ಯಾಯಮೂರ್ತಿ  ಎ.ಪಿ.ಶಹಾ ಅವರು ತಮ್ಮ ತೀರ್ಪಿನಲ್ಲಿ ತುಂಬ ಕಠೋರ ಶಬ್ದಗಳಲ್ಲಿ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದು ಕಿಡಿಕಾರಿದ್ದಾರೆ. ಆದರೆ ಕೊನೆಯ ನಿರ್ಣಯವನ್ನು ಹೈಕೋರ್ಟಿನ ಮುಖ್ಯ ಪೀಠಕ್ಕೆ ಅವರು ಒರ್ಗಾಯಿಸಿದ್ದಾರೆ. ಜತೆಗೆ ಮುದ್ದತ್ತನ್ನು ಮುಂದಿನ ನಾಲ್ಕು ತಿಂಗಳುಗಳಿಗೆ ಮುಂದೂಡಿದ್ದಾರೆ..ಅಲ್ಲಿಯ ವರೆಗೆ ಬಡವರ ಗತಿ ಏನು? ಕಾಲ ಉತ್ತರಿಸಲಿದೆ.

 

ಕಾಮನ್ ವೆಲ್ತ್ ಕ್ರೀಡಾಕೂಟದ ಲಾಂಛನ..

 

ಇಲ್ಲಿಗೆ ನಾವು ಸಹ ನಮ್ಮ ಮನಸ್ಸನ್ನು ‘ಕಲ್ -ಮಾಡಿ’ಕೊಂಡಿದ್ದೇವೆ..

 

 

Comments