ನನ್ನಿಂದಾಗೇ ಇಷ್ಟೆಲ್ಲಾ ಆಗಿದ್ದು…!

ನನ್ನಿಂದಾಗೇ ಇಷ್ಟೆಲ್ಲಾ ಆಗಿದ್ದು…!


ಅಂದೂ ಕೂಡ ಎಂದಿನಂತೆ ಮುಂಜಾನೆ ಐದು ಘಂಟೆಗೆ ನನ್ನ ಚರದೂರವಾಣಿಯಲ್ಲಿ ಎಚ್ಚರಿಕೆಯ ಘಂಟೆ ಹೊಡೆದುಕೊಂಡಾಗಲೇ ನಿದ್ದೆಯಿಂದ ಎದ್ದಿದ್ದೆ.

ಎರಡು ಲೋಟ ನೀರನ್ನು ಬಿಸಿಮಾಡಿ ಕುಡಿದು, ಹಲ್ಲುಜ್ಜಿ, ಮುಖ ತೊಳೆದುಕೊಂಡು, ಎಂದಿನಂತೆ ಮುಂಜಾನೆಯ ನಡಿಗೆಗೆ ಹೊರಡುವಾಗ ಸರಿಯಾಗಿ ಐದೂ ಇಪ್ಪತ್ತೈದು.

ಮಾಮೂಲಿನಂತೆ, ದಾರಿಯಲ್ಲಿ ಸಿಕ್ಕ ಪರಿಚಯಸ್ತರಿಗೆ ಮುಗುಳ್ನಗೆ ಕೊಡುತ್ತಾ, ನಮಸ್ಕಾರ ಮಾಡುತ್ತಾ, ನಡಿಗೆ ಮುಗಿಸಿ, ಮನೆಗೆ ಬರುವಾಗ ಆರೂವರೆಗಿನ್ನೂ ಐದು ನಿಮಿಷ ಬಾಕಿ.

ಆ ನಂತರವೂ ಮಾಮೂಲಿನ ದಿನಚರಿಯೇ. “ಗ್ರೀನ್ ಟೀ” ಸೇವನೆ, ಅಂದು ತೊಡುವ ಬಟ್ಟೆಗಳಿಗೆ ಇಸ್ತ್ರಿ, ಮುಖಕ್ಷೌರ, ಸ್ನಾನ, ದೂರದರ್ಶನದ ಕನ್ನಡ ಸುದ್ದಿವಾಹಿನಿಗಳಲ್ಲಿ ಅಂದಿನ ಪ್ರಮುಖ ಸುದ್ದಿಗಳನ್ನು ಕೇಳುತ್ತಾ, ವಿಜಯಕರ್ನಾಟಕದ ಪ್ರಮುಖ ತಲೆಬರಹಗಳನ್ನು ಓದುತ್ತಾ, ತಿಂಡಿ ಮುಗಿಸಿ ಎದ್ದೆ.

ಬಟ್ಟೆ ಧರಿಸಿ, ಇನ್ನೇನು ನನ್ನ “ಹೆಲ್ಮೆಟ್” ಕೈಗೆತ್ತಿಕೊಳ್ಳಬೇಕು ಅನ್ನುವಾಗ ಯಾರೋ ಬಾಗಿಲಾಚೆಯಿಂದ ಕರೆದಂತಾಯ್ತು.

ಬಾಗಿಲು ತೆರೆದರೆ,  ತನ್ನ ಬೆನ್ನ ಹಿಂದೆ ಚೀಲ ನೇತಾಡಿಸಿಕೊಂಡಿದ್ದ, ಓರ್ವ ಸ್ಪುರದ್ರೂಪಿ ಯುವಕ ನಿಂತಿದ್ದ.

“ಯಾರಪ್ಪಾ ಏನ್ ಬೇಕಾಗಿತ್ತು?” ಅಂದೆ,

ಅದಕ್ಕೆ “ಸಾರ್ ನಾನು ವಿಜಯ್ ಕುಮಾರ್ ಅಂತ. ನಿಮ್ ಜೊತೆ ಸ್ವಲ್ಪ ಮಾತಾಡ್ಬೇಕಿತ್ತು… ನೀವು ಈ ಕಂಪನಿಯಲ್ಲಿ ಕೆಲಸ ಮಾಡೋದಲ್ವಾ?”  ಅಂದವನು, ನಾನು ಕೆಲಸ ಮಾಡುವ ಕಂಪನಿಯ ಹೆಸರನ್ನೂ ಹೇಳಿದ.

“ಹೌದು... ಹೌದು ಏನ್ ಕೆಲ್ಸಾ … ?” ಕೇಳಿದೆ.

“ಸರ್  ಒಳಗೆ ಬರಬಹುದಾ?” ಆತ ಕೇಳಿದ.

“ಹೂಂ ಬನ್ನಿ.. ಬನ್ನಿ… ಕೂತ್ಕೊಳ್ಳಿ ಏನ್ ವಿಷಯ..?” ಅಂದೆ.

“ಸಾರ್… ನಂದೊಂದು ಕೆಲಸ ಇದೆ, ನಿಮ್ಮಿಂದ ಸಹಾಯ ಆಗ್ಬೇಕು. ಆಗೋದಿಲ್ಲ ಅಂತ ಅನ್ಬೇಡಿ…” ಅಂದ.

“ಸರಿ ಹೇಳಿ … ಬೇಗ ಹೇಳಿ… ಆದ್ರೆ ಮಾಡೋಣ…ಏನ್ ಕೆಲ್ಸಾ…?”

“ಈ ಪ್ಯಾಕೆಟ್ಟನ್ನು ನಿಮ್ ಆಫೀಸಿನಲ್ಲಿ ರಾಮ್ ಕುಮಾರ್ ಅಂತ ಇದಾರಲ್ವಾ ಅವರಿಗೆ ತಲುಪಿಸ್ಬೇಕು ಸರ್…”

“ಯಾರು ರಾಮ್ ಕುಮಾರ್ ನಂಗೊತ್ತಿಲ್ಲಲ್ವಾ… ಯಾವ ಟೀಂ ನವರು…?”

“ನಿಮಗೆ ಗೊತ್ತಿರೋಕೆ ಸಾಧ್ಯ ಇಲ್ಲಾ ಸಾರ್…ಅವರು ಹೊಸದಾಗಿ ಸೇರಿಕೊಂಡಿರೋರು … ನಾನ್  ಅವರಿಗೆ ಫೋನ್ ಮಾಡ್ತೀನಿ … ಅವರೇ ಬಂದು ತಗೋತಾರೆ ಸಾರ್…” ಅಂದ.

ನಾನು ಜಾಸ್ತಿ ಯೋಚನೆ ಮಾಡಲಿಕ್ಕೇ ಹೋಗದೇ  “…ಸರಿ ಸರಿ.. ಅವ್ರಿಗೆ ಹೇಳಿಬಿಡು ನನ್ನ ಬಳಿಯಿಂದ ತೆಗೆದುಕೊಂಡು ಹೋಗೊದಕ್ಕೆ .” ಅಂತ ಹೇಳಿದವನೇ, ಆ ಪ್ಯಾಕೆಟ್ಟನ್ನು ತೆಗೆದುಕೊಂಡು, ನನ್ನ ಮೋಟಾರ್ ಸೈಕಲ್ ಏರಿ ಹೊರಟುಬಿಟ್ಟೆ.

ಆತ ತನ್ನ ಮೋಟಾರ್ ಸೈಕಲ್ಲಿನತ್ತ ಹೋಗ್ತಾ ಇದ್ದ.

ನಾನು ಎಂದಿನಂತೆ ಕಛೇರಿಯ ಒಳಗೆ ಹೋದವನೇ, ನನ್ನ ಡೆಸ್ಕಿನ ಮೇಲೆ ಆ ಪ್ಯಾಕೆಟ್ಟನ್ನು ಇಟ್ಟು, ನನ್ನ ಲ್ಯಾಪ್‍ಟಾಪ್ ಹೊರತೆಗೆದು ಆನ್ ಮಾಡಿದೆ.

ಅಷ್ಟರಲ್ಲಿ ನನ್ನ ಚರವಾಣಿ ಗಂಟೆ ಬಡಿದುಕೊಳ್ಳತೊಡಗಿತು.

ನೋಡಿದ್ರೆ ನನ್ನ ಹೆಂಡತಿಯ ಕರೆ. “ಏನು?” ಅಂದೆ.

“ಅವರು ಮತ್ತೆ ಬಂದಿದ್ದಾರೆ… ನಿಮ್ಮ ಹತ್ತಿರ ಮಾತಾಡ್ಬೇಕಂತೆ…”

“ಮತ್ತೆ ..? ಮತ್ತೆ ಯಾಕೆ ಮನೆಗೆ ಬಂದ ಆತ …? ಸರಿ… ಕೊಡು ಆತನಿಗೆ…..ಹಲೋ…ಹಲೋ…”

“ಸರ್… ನಾನ್ ವಿಜಯ್ ಕುಮಾರ್ ಸರ್…”

“ಹೂಂ.. ಗೊತ್ತಾಯ್ತು … ಏನ್ ಕೆಲ್ಸ ರಾಮ್ ಕುಮಾರಿಗೆ ಹೇಳಿದ್ರಾ…?” ಅಂದೆ

“ಸರ್… ಆತ ಇಂದು ಕಛೇರಿಗೆ ಬರ್ತಾ ಇಲ್ವಂತೆ… ಒಂದು ಕೆಲ್ಸ ಮಾಡಿ ಸರ್… ನಿಮ್ಮ ಡೆಸ್ಕ್ ಮೇಲೇ ಇಟ್ಟು ಕೊಳ್ಳಿ … ನಾಳೆ ತೆಗೆದುಕೊಳ್ತಾರೆ ಅವರು… ” ಅಂದ

“ಇದು ಸ್ವಲ್ಪ ಜಾಸ್ತಿ ಆಯು ಕಣ್ರೀ… ಏನೋ ಉಪಕಾರ ಮಾಡೋಣ ಅಂತ ನೋಡಿದ್ರೆ…ಇದೊಳ್ಳೇ ತಲೆನೋವು ನನಗೆ…”

“ತಲೆನೋವು ಮಾಡ್ಕೋಬೇಡಿ ಸಾರ್… ನಾನ್ ನಿಮ್ಮ ಮನೆ ಒಳಗೆ ಇದ್ದೇನೆ… ಮನೆಯ ಬಾಗಿಲು ಮುಚ್ಚಿದೆ…ನಿಮ್ ಹೆಂಡತಿ ನನ್ನ ಎದುರು ಸೋಫಾ ಮೇಲೆ ಕೂತಿದ್ದಾರೆ … ನನ್ ಕೈಯಲ್ಲಿ ಗನ್ ಇದೆ…ನಾನ್ ಹೇಳಿದಷ್ಟು ಮಾಡಿ… ನಿಮ್ ಡೆಸ್ಕಿನ ಮೇಲೆ ಇಟ್ಟು … ಜೀವದ ಆಸೆ ಇದ್ರೆ … ಹಾಗೇ ಅರ್ಧ ಘಂಟೆಯಲ್ಲಿ…ಮನೆಗೆ ವಾಪಸ್ ಬಂದು ಬಿಡಿ… ಸರಿಯಾಗಿ ಇನ್ನು ನಲವತ್ತೈದು ನಿಮಿಷಕ್ಕೆ ಅದರಲ್ಲಿರೋ ಬಾಂಬ್  ಬ್ಲಾಸ್ಟ್ ಆಗುತ್ತೆ… ರಿಮೋಟ್ ಕಂಟ್ರೋಲರಿಂದ ಸಿಡಿಸುತ್ತಾರಂತೆ...ನೀವು ವಾಪಸ್ ಬರದಿದ್ರೆ ನೀವೂ ಹೋಗ್ತೀರಿ… ನಂಬಿಕೆ ಬರದಿದ್ರೆ ನಿಮ್ ಹೆಂಡ್ತೀನಾ ಕೇಳಿ… ಮೇಡಮ್ ತಗೋಳ್ಳಿ …ನಿಮ್ ಯಜಮಾನ್ರಿಗೆ ಸ್ವಲ್ಪ ಹೇಳಿ…”

ನನ್ನ ದೇಹವೆಲ್ಲಾ ಕಂಪಿಸುವುದಕ್ಕೆ ಶುರು ಆಯ್ತು

“ಹಲೋ…ಹಲೋ… ಏನೇ ಇದು ..”

“ರೀ… ಹೌದು … ನೀವು ಬೇಗ ವಾಪಾಸ್ ಬಂದ್ ಬಿಡಿ… ಬನ್ನಿ… ನನಗೆ ಭಯ ಆಗ್ತಾ ಇದೆ…ಜಾಸ್ತಿ ಮಾತಾಡಬೇಡಿ… ಆತ ಏನ್ ಬೇಕಾದ್ರೂ ಮಾಡಬಹುದು… ” ಆಕೆ ಅಳುವುದಕ್ಕೆ ಶುರುಮಾಡಿ ಆಗಿತ್ತು.

“ಸರಿ ಬರ್ತೀನಿ ಕಣೇ…ಬರ್ತೀನಿ…”

ಅಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಲು ಆಗಲಿಲ್ಲ. ಹತ್ತೇ ನಿಮಿಷದಲ್ಲಿ ಸೀದಾ ಮನೆ ಕಡೆ ಹೊರಟೆ. ಮನೆಯನ್ನು ತಲುಪುವಾಗ ಆತ ಹೇಳಿದ ಅವಧಿ ಪೂರ್ತಿ ಆಗುತ್ತಾ ಬಂದಿತ್ತು.

ಮನೆಯ ಬಾಗಿಲು ಮುಚ್ಚಿತ್ತು. ಕರೆಗಂಟೆ ಬಾರಿಸಿದೆ. ಆತನೇ ಬಾಗಿಲು ತೆರೆದ.

“ಸಾರ್…ನನ್ನ ಕೆಲಸ ಮುಗೀತು... ಸಾರಿ ಸಾರ್...ನನ್ನ ಅಮ್ಮ ನಿನ್ನೆಯಿಂದ ಇನ್ಯಾರದೋ ಬಂಧಿಯಾಗಿ ನಮ್ಮ ಮನೆಯಲ್ಲಿ ಕೂತಿದ್ದಾರೆ ಸಾರ್… ನನಗೆ ಕೊಟ್ಟಿರುವ ಕೆಲಸ ಮಾಡದೇ ಹೋದರೆ ನನ್ನ ಅಮ್ಮನ ಪ್ರಾಣ ತೆಗೀತಾರೆ…. ನನ್ನ ಕೆಲಸ ಮುಗೀತು… ಈ ಪ್ಯಾಕೆಟಿನಲ್ಲಿ ನಿಮ್ಮ ಪಾಲಿನ ಹಣ ಇದೆ… ಇದನ್ನು ನಿಮಗೆ ಕೊಟ್ಟು ಬರಲು ಹೇಳಿದಾರೆ. ನಾನಿನ್ನು ಬರ್ತೀನಿ … ನಾನು ನನ್ನ ಅಮ್ಮನನ್ನು ಬಿಡಿಸಿಕೊಳ್ಳಬೇಕು …”  ಅಂದವನೇ ಆತನ ಬೈಕ್ ಏರಿ ಹೊರಟೇ ಬಿಟ್ಟಿದ್ದ.

ನನ್ನ ಪತ್ನಿ ಬಿಟ್ಟ ಕಣ್ಣು ಬಿಟ್ಟುಕೊಂಡೇ ಕೂತಿದ್ದಾಳೆ … ಕಣ್ಣೀರು ಧಾರಾಕಾರವಾಗಿ ಹರಿಯುತ್ತಿದೆ….

ನನಗೇನು ಮಾಡಬೇಕೆಂದೇ ತೋಚುತ್ತಿಲ್ಲ…

ಸಮಯ ಮೀರಿ ಹೋಗಿದೆ. ಆ ಬಾಂಬ್ ಈಗಾಗಲೇ ಸಿಡಿದು … ನಮ್ಮ ಕಛೇರಿಯ ಕಟ್ಟಡ ಕುಸಿದು ಹೋಗಿರಬಹುದು…

ಟಿವಿ ಹಾಕಿ ಟಿವಿ೯ನಲ್ಲಿ ಏನು ಬರ್ತಾ ಇದೆ ಅಂತ ನೋಡಿದ್ರೆ…

ಕೆಂಪು ಅಕ್ಷರಗಳಲ್ಲಿ ಬ್ರೇಕಿಂಗ್…ನ್ಯೂಸ್… ಬರ್ತಾ ಇದೆ.

ನಗರದ ಪ್ರತಿಷ್ಟಿತ ಐಟಿ ಕಂಪನಿಯೊಂದರಲ್ಲಿ ಬಾಂಬ್ ಸ್ಫೋಟ….ಬಹುಮಹಡಿ ಕಟ್ಟಡ ಕುಸಿತ … ೫೦ ಕ್ಕೂ ಹೆಚ್ಚು ಸಾವು…

ನಾನು ಸೋಫಾದ ಮೇಲೆ ಕುಕ್ಕರಿಸಿದವನೇ ತಲೆ ಮೇಲೆ ಕೈಹೊತ್ತು…ನನ್ನ ಅಸಹಾಯಕತೆಗಾಗಿ ಮರುಗಿದೆ….

“ನನ್ನಿಂದಾಗೇ ಇಷ್ಟೆಲ್ಲಾ ಆಗಿದ್ದು.. ಎಷ್ಟು ಮಂದಿ ಹೋದ್ರು ಕಣೇ… ಏನೇ ಮಾಡ್ಲೀ ನಾನು…ಅಯ್ಯೋ ದೇವ್ರೆ…”

“ರೀ…ರೀ… ನಿಮ್ ಮೊಬೈಲ್  ಅಲಾರ್ಮ್ ಹೊಡ್ಕೋತಾ ಇದೆ… ಏಳೋಲ್ವಾ… ಇವತ್ತು ವಾಕಿಂಗ್… ಹೋಗೋಲ್ವಾ…?”
*****************

Rating
No votes yet

Comments