ನನ್ನ ಆತ್ಮಹತ್ಯೆ ಪ್ರಯತ್ನ..

ನನ್ನ ಆತ್ಮಹತ್ಯೆ ಪ್ರಯತ್ನ..

ಮೊನ್ನೆ ಹೆಗ್ಡೆ ಅವರ ಕವನ ಓದಬೇಕಾದಾಗ ನೆನಪಿಗೆ ಬಂದದ್ದು. ಸುಮಾರು ೧೬ ವರ್ಷದ ಹಿಂದಿನ ಮಾತು ಆಗಿನ್ನೂ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದೆ. ಆಗ ನನಗೆ ಸಿಕ್ಕಾಪಟ್ಟೆ ಕೋಪ ಬರುತ್ತಿತ್ತು, ಅಂದರೆ ಸುಮ್ಮ ಸುಮ್ಮನೆ ಕೋಪ ಮಾಡಿಕೊಳ್ಳುವುದು ಎಲ್ಲದಕ್ಕೂ ಹಠ ಮಾಡುವುದು, ಚಿಕ್ಕ ಚಿಕ್ಕ ವಿಷಯಕ್ಕೆ ಗಲಾಟೆ ಮಾಡುವುದು ಹೀಗೆ. ಆ ವಯಸ್ಸು ಅಂತಹುದು. ಇನ್ನೊಂದು ಕೆಟ್ಟ ಅಭ್ಯಾಸವೆಂದರೆ ಕೋಪ ಬಂದಾಗಲೆಲ್ಲ ಮನೆ ಬಿಟ್ಟು ಹೋಗುತ್ತೇನೆ, ಸತ್ತು ಹೋಗುತ್ತೇನೆ ಇಂಥಹ ಮಾತುಗಳನ್ನು ಆಡುತ್ತಿದ್ದೆ. ಮೊದಮೊದಲು ಬೈಯ್ಯುತ್ತಿದ್ದ ಅಪ್ಪ ಅಮ್ಮ ನಂತರ ಬೇಸತ್ತು ಏನಾದರೂ ಮಾಡಿಕೋ ಎನ್ನುತ್ತಿದ್ದರು. ಕೆಲವೊಮ್ಮೆ ಅಪ್ಪನ ಕೈ ರುಚಿಯ ಅನುಭವವೂ ಆಗಿದೆ (ಅಂದರೆ ಒದೆಗಳು ಬಿದ್ದಿವೆ) ಆದರೂ ನನ್ನ ಹಠ ಕಮ್ಮಿ ಆಗಿರಲಿಲ್ಲ.


ಹೀಗಿರುವಾಗ ಒಮ್ಮೆ ಶಾಲೆಗೆ ದಸರಾ ರಜೆ ಸಂದರ್ಭ ಅಥವಾ ಮಧ್ಯ ವಾರ್ಷಿಕ ಪರೀಕ್ಷೆಯ ರಜೆಯೋ ನೆನಪಿಲ್ಲ. ಒಟ್ಟಿನಲ್ಲಿ ರಜೆ ಇತ್ತು. ಆಗ ಒಂದು ದಿನ ಮಧ್ಯಾನ್ಹ ಹೀಗೆ ಯಾವುದೋ ವಿಷಯಕ್ಕೆ ಮನೆಯಲ್ಲಿ ಅಮ್ಮನ ಹತ್ತಿರ ಜಗಳ ಮಾಡಿಕೊಂಡು ಕೋಪದಲ್ಲಿ ನಾನು ಸತ್ತು ಹೋಗ್ತೀನಿ ಎಂದೇ. ನನ್ನ ಗಲಾಟೆಯಿಂದ ಬೇಸತ್ತು ಹೋಗಿದ್ದ ನನ್ನ ತಾಯಿ ಹಾಳಾಗಿ ಹೋಗು ಏನಾದರೂ ಮಾಡಿಕೊ ಎಂದರು. ಅಷ್ಟು ದಿನ ಬರೀ ಮಾತಲ್ಲಿ ಹೇಳುತ್ತಿದ್ದ ನಾನು ಸೀದಾ ಬಚ್ಚಲು ಮನೆಗೆ ಹೋದೆ. ಅಲ್ಲಿ ನನಗೆ ಕಂಡದ್ದು ಫಿನಾಯಿಲ್ ಬಾಟಲ್. ಸೀದಾ ಬಾಟಲ್ ತೆರೆದು ಅದೇ ಮುಚ್ಚಳದಲ್ಲಿ ಬಗ್ಗಿಸಿಕೊಂಡು ಏನೂ ಯೋಚನೆ ಮಾಡದೆ ಕುಡಿದೆ ಬಿಟ್ಟೆ. ತಕ್ಷಣ ಗಂಟಲೆಲ್ಲ ಒಗರು ಒಗರಾಯಿತು. ಸರಿ ಇನ್ನೇನು ಕುಡಿದದ್ದಾಯಿತು ಇನ್ನು ಸ್ವಲ್ಪ ಹೊತ್ತಿನಲ್ಲಿ ಸತ್ತು ಹೋಗುತ್ತೇನೆಂದು ಏನು ಮಾತಾಡದೆ ಸೀದಾ ನನ್ನ ರೂಮಿಗೆ ಬಂದು ಕಣ್ಣು ಮುಚ್ಚಿ ಮಲಗಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಲಿಲ್ಲ ಬದಲಿಗೆ ಬಾಯಿ ಒಗರು ಮಾತ್ರ ಹಾಗೆ ಇತ್ತು. ಸರಿ ಎದ್ದು ಅಡಿಗೆಮನೆಗೆ ಹೋಗಿ    ಸಕ್ಕರೆ ಡಬ್ಬ ತೆಗೆದು ಎರಡು ಚಮಚ ಸಕ್ಕರೆ ಬಾಯಿಗೆ ಹಾಕಿಕೊಂಡೆ. ಆದರೂ ಆ ಒಗರು ಹೋಗಲಿಲ್ಲ. ಸರಿ ಮನೆಯಿಂದ ಆಚೆಬಂದೆ ನಮ್ಮ ಮನೆಯ ಪಕ್ಕದಲ್ಲೇ ಒಂದು ಸೀಬೇಕಾಯಿಯ ಮರ ಇತ್ತು. ಚಾವಣಿ ಮೇಲೆ ಹತ್ತಿ ಮರದಲ್ಲಿ ಬಿಟ್ಟಿದ್ದ ಸುಮಾರು ಕಾಯಿಗಳನ್ನು ಕಿತ್ತು ತಿಂದು ಸ್ವಲ್ಪ ಹೊತ್ತು ಅಲ್ಲೇ ಮಲಗಿದೆ. ಆಗ ಸ್ವಲ್ಪ ಒಗರು ಕಮ್ಮಿ ಆಯಿತು. ಕೆಳಗಿಳಿದು ಮನೆಗೆ ಬಂದು ನಮ್ಮ ತಾಯಿಯ ಹತ್ತಿರ ಹೇಳಿದೆ ನಾನು ಪ್ಹೆನಯಿಲ್ ಕುಡಿದಿದ್ದೇನೆ. ಇನ್ನು ಸ್ವಲ್ಪ ಹೊತ್ತಿನಲ್ಲಿ ಸತ್ತು ಹೋಗುತ್ತೇನೆ ಎಂದೆ. ನಾನು ಹೆದರಿಸಲು ಹಾಗೆ ಹೇಳುತ್ತಿದ್ದೇನೆ ಎಂದುಕೊಂಡು ಮೊದಲು ಸಾಯಿ ನೆಮ್ಮದಿ ಆದರೂ ಸಿಗತ್ತೆ ಎಂದರು. ಸರಿ ಮತ್ತೆ ಹೋಗಿ ಮಲಗಿಕೊಂಡೆ. ಯಾವಾಗ ನಿದ್ದೆ ಹತ್ತಿತೋ ಆಮೇಲೆ ಎದ್ದಾಗ ಅರಿವಾಯಿತು ನಾನಿನ್ನು ಸತ್ತಿಲ್ಲ ಎಂದು. ಮತ್ತೆ ನಮ್ಮ ತಾಯಿಯ ಹತ್ತಿರ ಹೋಗಿ ನಡೆದ ವಿಷಯಗಳನ್ನೆಲ್ಲ ಹೇಳಿದಾಗ ಬಹಳ ನೊಂದುಕೊಂಡರು. ನಮ್ಮ ತಂದೆ ಕೆಲಸ ಮುಗಿಸಿ ಬಂದ ಮೇಲೆ ವಿಷಯ ತಿಳಿದು ಅವರು ಬಹಳ ನೊಂದುಕೊಂಡರು.


ನಂತರ ಅರಿವಾಯಿತು ನಾನೆಂತ ಹೇಡಿ ಕೆಲಸ ಮಾಡಿದೆ ಎಂದು. ಅದೇ ಕೊನೆ ಮತ್ತೆ ಯಾವತ್ತೂ ಅಂಥಹ ಹೇಡಿ ಕೆಲಸಕ್ಕೆ ಕೈ ಹಾಕಲಿಲ್ಲ...

Comments