ಗೌಡಪ್ಪನ ಮೀಸೆ ಪುರಾಣ

ಗೌಡಪ್ಪನ ಮೀಸೆ ಪುರಾಣ

ಬೆಳಗ್ಗಿನ ನಮ್ಮ ಬಯಲು ಕಾರ್ಯ ಮುಗಿಸಿಕೊಂಡು ವಾಪಸ್ಸು ಮನೆಗೆ ಹೋಗುತ್ತಿದ್ದೆವು. ಆಗ ಎದುರುಗಡೆ ಒಬ್ಬ ಮೀಸೆ ಇಲ್ಲದ ವ್ಯಕ್ತಿ ಚೊಂಬು ಹಿಡಿದುಕೊಂಡು ಕೆರೆತಾವ ಹೋದ. ಯಾರಲಾ ಇವನು ಅಂದ ಸುಬ್ಬ. ಯಾರೋ ಹೊಸದಾಗಿ ಅಧಿಕಾರಿ ಬಂದಿರಬೇಕು ಕಲಾ ಅಂದ ಸೀನ, ಸರಿ ನಿಂಗನ ಚಾ ಅಂಗಡಿ ಹೋಗಿ ಕುಂತ್ವಿ. ಅಟ್ಟೊತ್ತಿಗೆ ಆ ಮೀಸೆ ಇಲ್ಲದ ವ್ಯಕ್ತಿನೂ ಅಲ್ಲೇ ಬಂದು " ಲೇ ನಿಂಗ ಒಂದು ಅರ್ಧ ಚಾ ಕೊಡಲಾ ಅಂದ." ನಿಂಗ ಅಂಗೇ ರೈಸಾಗಿ. ಯಾಕಲಾ ಏಕವಸನದಾಗೆ ಮಾತಾಡಿಸ್ತೀಯಾ, ಹೇಂಗೈತೆ ಮೈಗೆ ಅನ್ನುವುದರೊಳಗೆ ಸುಬ್ಬ, ಸೀನ, ತಂತಿ ಪಕಡು ದಬು,ದುಬು ಅಂತಾ ನಾಯಿ ಹೊಡೆದಂಗೆ ಹೊಡೆದಿದ್ರು. ಲೇ ನಾನು ಕಲಾ ಅಂದ ಆ ವ್ಯಕ್ತಿ. ನಾನು ಕಲಾ ಗೌಡಪ್ಪ. ಮೀಸೆ ಇಲ್ಲ ಕಲಾ ಅಂತ ಅತ್ತ. ಏ ಥೂ ನೀವಾ ಹೇಳಕ್ಕೆ ಆಯಕ್ಕಿಲ್ವಾ ಅಂದ ನಿಂಗ.



ಗೌಡ್ರೆ ಯಾಕ್ರೀ ಮೀಸೆ ತೆಗಿದಿರಿ. ಬೆಳಗ್ಗೆ ನಮ್ಮ ಮನೆ ಕೊಟ್ಟಿಗೆಯಲ್ಲಿ ಸೇವಿಂಗ್ ಮಾಡ್ ಕಂತಾ ಕುಂತಿದ್ದೆ. ರೇಸರ್್ನಲ್ಲಿ ಮೀಸೆ ಟ್ರಿಮ್ ಮಾಡ್ತಾ ಇದ್ದೆ, ಲಕ್ಸ್ಮಿ ಒದೀತು ಕಲಾ, ಅದಕ್ಕೆ ಅರ್ಧ ಮೀಸೆ ಹೋತು. ಅಸಹ್ಯ ಆಯ್ತದೆ ಅಂತಾ ಇನ್ನ ಅರ್ಧ ನಾನೇ ತೆಗೆದುಬಿಟ್ಟೆ  ಅಂದ. ಲಕ್ಸ್ಮಿ ಅಂದ್ರೆ ನಿಮ್ಮ ಮನೆ ಕೆಲಸದೋಳ. ಅಲ್ಲ ಕಲಾ ನಮ್ಮ ಮನೆ ಹಸಾ ಅಂದ ಗೌಡಪ್ಪ. ಏ ಥೂ. ಸೇವಿಂಗ್ ಮಾಡ್ಕಳಕ್ಕೆ ಇನ್ನೆಲ್ಲು ಜಾಗ ಸಿಕ್ಕಲಿಲ್ವಾ ಅಂದ ಸೀನ. ಸರಿ ಹೋಗ್ಲಿ ಬುಡಿ. ಅದಕ್ಕೊಂದು ಐಡಿರೀಯಾ ಮಾಡುವ ಸರಿ ಈಗ ಹೋಗಿ ಅಂದ ಸುಬ್ಬ. ಗೌಡಪ್ಪನ ಹೆಂಡರು ಯಾರೋ ಬೇರೆ ಗಂಡಸು ಮನೆ ಒಳಿಕ್ಕೆ ಬಂದಿದಾನೆ ಅಂತ ಲಟ್ಟಣಿಗೆ ತಗೊಂಡು ಹಣೆಗೆ ಸಾನೇ ಕುಕ್ಕಿದ್ಲು. ಮಗಂದು ಹಣೆ ಮೇಲೆ ಸಣ್ಣ ಚೆಂಡು ಇಟ್ಟಂಗೆ ಆಗಿತ್ತು. ಪಕ್ಕದ ಮನೆ ರಾಜಮ್ಮ ಅಂತಿದ್ಲಂತೆ. ನಿಮ್ಮ ಮನೆಗೆ ಬಂದಿರೋ ಗಂಡಸು ಸ್ಮಾರ್ಟಾಗಿ ಇದಾರೆ ಅಂತ ಏ ಥೂ. ಗೌಡಪ್ಪ ಅಂದ್ ಮ್ಯಾಕೆ ಸುಮ್ಕೆ ಹೋತಂತೆ.
ಸರಿ ಸಂಜೆ ಎಲ್ಲಾ ಸಿದ್ದೇಸನ ಗುಡಿ ತಾವ  ಸೇರಿದ್ವಿ. ಕಿಸ್ನ ಒಂದು ಚೀಲದಲ್ಲಿ ಇದ್ದಿಲು ಹಂಗೇ ಒಂದು ಚೊಂಬು ನೀರು ತಂದ. ಯಾಕಲಾ ಅಂದ ಗೌಡಪ್ಪ. ಅದೇನೋಪ್ಪಾ ಸುಬ್ಬ ತರಕ್ಕೆ ಹೇಳವ್ನೆ . ಸರಿ ಇದ್ದಿಲನ್ನ ಸಣ್ಣಗೆ ಪುಡಿ ಮಾಡಲಾ ಅಂದ ಸುಬ್ಬ. ಯಾಕಲಾ. ತಡಕಳೀರಿ ಗೌಡ್ರೆ. ಸಣ್ಣಗ್ಗೆ ಮೆಣಸಿನ ಪುಡಿ ತರಾ ಮಾಡಿ, ಅದಕ್ಕೆ ನೀರು ಚುಮುಕಿಸಿ ಜಾಮೂನು ಹಿಟ್ಟು ಮಾಡದಂಗೆ ಮಾಡಿದ್ದಾತು. ಅಂಗೇ ಚರ್ಮಕ್ಕೆ ಹಿಡೀಲಿ ಅಂತಾ ಸ್ವಲ್ಪ ಬೆಲ್ಲ, ಹರಳೆಣ್ಣೆ ಹಾಕಿದ್ದಾತು. ಹಾ ಗೌಡರೆ ಈಗ ತಿರುಗಿರಿ ಅಂದು. ಸುಬ್ಬ ಗೌಡಪ್ಪನ ಮುಖದ ಮ್ಯಾಕೆ ಮೀಸೆ ಬರೆದ. "ಮೀಸೆ ಇಲ್ಲದ ಗೌಡಪ್ಪ ಸೂರನೂ ಅಲ್ಲ ಧೀರನೂ ಅಲ್ಲ" ಅಂದ ಸೀನ. ಯಾಕಲಾ ಕಡಿತತಾ, ಸುಮ್ಕಿರಲಾ ಅಂದ ಗೌಡಪ್ಪ. ಮಗಂದು ಮೀಸೆ ಅನ್ನೋದು ವೀರಪ್ಪನ್ ಮೀಸೆ ಇದ್ದಂಗೆ ಇತ್ತು. ವೀರಪ್ಪನ್ ತಮ್ಮ ಸೂರಪ್ಪನ್ ಕಲಾ ಇವನು ಅನ್ನೋನು ಕಿಸ್ನ. ಸ್ವಲ್ಪ ಡಿಡಿಟಿ ಹಾಕ್ರಲಾ ಇರುವೆ ಬಂದಾತು ಅಂದ ಸೀನ.  ಲೇ ಇದ್ದಿಲು ಒಂದು ತರಾ ಹೆಣದ ವಾಸನೆ ಬತ್ತಾ ಇದೆ ಅಂದ ಗೌಡಪ್ಪ. ಕಿಸ್ನ ಇದ್ದಿಲನ್ನ ಮಸಾಣದಿಂದ ತಂದಿದ್ದ. ಏ ಥೂ.
ಸರಿ ಎಲ್ಲಾ ಊರೊಳಗೆ ಹೊಂಟ್ವಿ. ಗೌಡಪ್ಪನ ನೋಡಿ ಎಲ್ಲರೂ ಸಾನೇ ಮರ್ವಾದೆ. ಎಣ್ಣೆ ರಾಜ ಎದುರಿಗೆ ಸಿಕ್ಕ, ಅಣ್ಣೋ ಮೀಸೆ ಎಲ್ಲಿ ಟ್ರಿಮ್ ಮಾಡಿಸದೆ ಹೇಳಣ್ಣೋ ಸಕತ್ತಾಗೈತೆ ಅಂದ. "ಮೂಚ್ ಮುಂಡ ಸೆಲೂನ್"ನಲ್ಲಿ ಮಾಡಿಸಿದೆ ಕಲಾ. ಎಲ್ಲಿ ಬತ್ತದೆ. ಇಲ್ಲೇ ಕೆರೆತಾವ ಹೋಗಲಾ. ಪ್ರತೀ ಸನಿವಾರ ಕಟಿಂಗ್ ಸೇವಿಂಗ್ ಫ್ರೀ. ಯಾಕೆ. ಅವರ ಅಪ್ಪ ಸತ್ತಿದ ದಿನಾ ಅಂತೆ ಕಲಾ. ವಡೆ ಪಾಯಸ ಕೊತ್ತಾರಾ ಏ ಥೂ. ಲೇ ಸುಬ್ಬ ನಿನಗೆ ಹೆಂಗಲಾ ಈ ಮೇಕಪ್ ಎಲ್ಲಾ ಬತ್ತದೆ ಅಂದ ಗೌಡಪ್ಪ. ಏ ನಾನು ಬಳ್ಳಾರಿ ಜೈಲಿನಿಂದ ತಪ್ಪಿಸಿಕೊಂಡಾಗ ಹಿಂಗೆ ಬೇರೆ ಬೇರೆ ಮೀಸೆ ಬರೆದುಕೊಂಡು ಪೊಲೀಸರಿಗೆ ಮೋಸಾ ಮಾಡ್ತಾ ಇದ್ದೆ. ಏ ಥೂ. ಹಚ್ಚಿದ ಇದ್ದಿಲು ಪುಡಿ ಪೂರ್ತಿ ಒಣಗಿತ್ತು. ಗೌಡಪ್ಪ ಲೇ ಬಾಯಿ ಸೆಳಿತದೆ ಕಲಾ ಅನ್ನೋನು. ಮಗಂದು ಭಟ್ಟಿ ಜಾರಿದಾಗ ಹಾಕೋ ಪಟ್ಟು ಹಾಕಂದಂಗೆ ಆಗಿತ್ತು. ಬೀಡಿ ಸೇದಿ ಬಂಗಾರಪ್ಪನ ತರಾ ಬರೀ ಎಡಗಡೆಯಿಂದ ಹೊಗೆ ಬಿಡೋನು. ಯಾಕ್ರೀ. ಇದ್ದಿಲು ಕಚ್ಕಂಡು ಬಿಟ್ಟೈತೆ ಅನ್ನೋನು. ಏ ಥೂ. ಮೀಸೆ ಮೇಲೆ ನೊಣ ಬಂದು ಕೂರೋದು. ಅಣ್ಣಾ ನೊಣ ಓಡಿಸಕ್ಕೆ  ಟಿಕ್ ಟ್ವೆಂಟಿ ಹುಯ್ಯಲಾ ಅಂದ ಸೀನ. ಯಾಕೆ ಹೇಳು ಅಂಗೇ ನಮ್ಮ ಮನೆ ಮುಂದೆ ಹೊಗೆ ಹಾಕ್ಸಲಾ ಅಂದ ಗೌಡಪ್ಪ.
ಸರೀ ಊರಲ್ಲಿ ಎಲ್ಲಾ ಒಂದು ರವಂಡ್ ಹಾಕಿದ್ದಾತು. ಇದ್ದಕ್ಕಿದ್ದಂತೆ ಜೀಪಲ್ಲಿ ಬಂದ ಪೊಲೀಸರು ಗೌಡಪ್ಪನ್ನ ಎತ್ತಾಕಂಡು ಹೋದ್ರು. ಯಾಕ್ ಸರ್. ನಮಗೆ ವೀರಪ್ಪನ್ ಇನ್ನೂ ಬದುಕಿದಾನೆ ಅಂತಾ ಅನುಮಾನ ಇದೆ ಅಂದ್ರು. ರೀ ನಾನು ಕಣ್ರೀ ಮಾಜಿ ಅಧ್ಯಕ್ಸ ಗೌಡ ಅಂದ್ರೂ ಬಿಡದೆ ನಾಯಿ ತರಾ ಜೀಪಲ್ಲಿ ಎತ್ತಾಕಂಡು ಹೋಗೇ ಬಿಟ್ರು. ಗೌಡ ಬಿಡ್ಸರಲೇ ಅನ್ನೋನು.
ಬೆಳಗ್ಗೆ ವಿಧವೆ ತರಾ ಗೌಡಪ್ಪ ಮನೆ ಮುಂದೆ ಕುಂತಿದ್ದ. ಯಾಕ್ರೀ ಗೌಡ್ರೆ ಮೀಸೆ ಎಲ್ಲಿ ಹೋತು ಅಂದೆ ಆಟೆಯಾ. ಮಗಾ 70ಎಂಎಂ ಪಿಚ್ಚರ್ ಕಥೆ ಹೇಳ್ದ. ನೋಡಲಾ ವೀರಪ್ಪನ್ ಅಂತ ಒಪ್ಪಿಕೊಳಲೇ ಅಂತಾ ರಾತ್ರಿ ಇಡೀ ಸಾನೇ ವರ್ಕ್ ಮಾಡಿದ್ರು. ಪೊಲೀಸ್ ರಾಜಮ್ಮನ ಗಂಡನೂ ನನ್ನ ಮ್ಯಾಕೆ ಹಳೇ ಸೇಡು ತೀರಿಸ್ಕಂಡ ಕಲಾ. ಕೋಲಿಗೆ ಹರಳೆಣ್ಣೆ ಮೆಣಸಿನ ಪುಡಿ ಹಚ್ಚಿ ಕೂರದಂಗೆ ಮಾಡವ್ರೆ. ಮುಖ ತೊಳೆದುಕೊಂಡು ಬಾ ಇನ್ನೂ ಹೊಡಿಬೇಕು ಅಂದ್ರು. ಮುಖ ತೊಳೆದು ಒಳಗೆ ಹೋದ್ರೆ. ನೀನು ಯಾರಲಾ ಅಂದ್ವು. ಆಮ್ಯಾಕೆ ವೀರಪ್ಪನ್ ತಪ್ಪಿಸ್ಕಂಡ ಅಂತಾ ಎಲ್ಲಾವೂ ನನ್ನೊಬ್ಬನ್ನೇ ಟೇಸನ್್ನಾಗೆ  ಬಿಟ್ಟು ಹಿಡಯಕ್ಕೆ ಹೋದ್ರು ಕಲಾ. ಅವರು ಆಕಡೆ ಹೋದ್ರು ನಾನು ಈ ಕಡೆ ಬಂದೆ ಅಂದ.

ಅಟ್ಟೊತ್ತಿಗೆ ಸುಬ್ಬ ಬಂದು ಗೌಡ್ರೆ ಎಲ್ರಿ ಮೀಸೆ. ಸಾನೇ ಕಷ್ಟ ಪಟ್ಟು ಬರೆದಿದ್ದೆ ಅಂದ. ಅಯ್ಯೋ ನಿನ್ನ ಮೀಸೆಗೆ ಬಸಮ್ಮನ ಹಳೇ ಎಕ್ಕಡ ಹಾಕ. ಬದುಕಿ ಬಂದಿದೀನಿ ಅಂತಾ ಖುಸಿ ಪಡಲಾ ಅಂದ. ನೀನೇನು ಭಗತ್ ಸಿಂಗ್ ಖುಸಿ ಪಡಕ್ಕೆ ಅಂದ ಕಿಸ್ನ. ಈಗ ಗೌಡಪ್ಪನ ನೋಡಿದ್ರೆ ಪಾಪಾ ಅನ್ನಿಸ್ತದೆ. ಸಾಲೆ ಹೋಗಲ್ಲಾ ಅಂತಾ ಐಕ್ಳು ಅಳ್ತಾರಲ್ಲಾ ಅಂಗೆ ಅಳ್ತಾವ್ನೆ.

Comments