"ಸಂನ್ಯಾಸಿಗೇಕೆ ಶೂಲಪ್ರಾಪ್ತಿ?"

"ಸಂನ್ಯಾಸಿಗೇಕೆ ಶೂಲಪ್ರಾಪ್ತಿ?"

 


ಉಡುಪಿ ಕೃಷ್ಣದೇವಾಲಯವನ್ನು ಅಷ್ಟಮಠಗಳ ಸುಫರ್ದಿಗೆ ಒಪ್ಪಿಸಿಕೊಡುವ ರಾಜ್ಯ ಸರಕಾರದ ಆದೇಶದ ಕಾನೂನು ಮಜಲುಗಳನ್ನು,ಪೇಜಾವರ ಶ್ರೀಗಳು ಜನತೆಗೆ ಇಷದವಾಗಿ ತಿಳಿಸಿಕೊಟ್ಟಿದ್ದಾರೆ. ಅದಕ್ಕೆ ಇದೊಂದು ಪ್ರತಿಕ್ರಿಯೆ.ಈ Unconventional ಪ್ರತಿಕ್ರಿಯೆಗಾಗಿ ಮೊದಲೇ ಕ್ಷಮೆ ಕೋರುತ್ತೇನೆ.


“ಸಾಲವೆಂಬುದು ಶೂಲ” - ಹೀಗೊಂದು ಗಾದೆ. “ಸಂನ್ಯಾಸಿಗೇಕೆ ಶೂಲಪ್ರಾಪ್ತಿ?” ಎಂಬ ಇನ್ನೊಂದು ಧ್ವನಿಪೂರ್ಣ ಗಾದೆಯೂ ಕನ್ನಡದಲ್ಲಿದೆ.


ಸಮಾಜದ ಎಲ್ಲಾ ಸಂಕೋಲೆಗಳಿಂದ - ಜುಟ್ಟು-ಜನಿವಾರದ ಸಂಪ್ರದಾಯ ಸಂಕೇತದಿಂದ ಸಹ - ಮುಕ್ತರಾದವರು, ಸಂನ್ಯಾಸಿಗಳು ಎಂಬುದು ನಂಬಿಕೆ. ಸಮಾಜದ ವ್ಯವಹಾರಗಳಲ್ಲಾಗಲೀ, ಅದರ ಲಾಭ-ಕಷ್ಟಗಳಲ್ಲಾಗಲೀ ಆಸಕ್ತಿಯಿಲ್ಲದವರು, ಈ ಮಂದಿ ಎನ್ನುವುದು ವಿಶ್ವಾಸ. ಅದರಿಂದಲೇ ಜನ ಸಂನ್ಯಾಸಿ-ಗುರು-ಜಂಗಮರಿಗೆ ಶರಣಾಗುವುದು; ಮನಬಿಚ್ಚಿ ಕಷ್ಟ-ಸುಖಗಳನ್ನು ಹೇಳಿಕೊಂಡು ಪರಿಹಾರ ಕೇಳಿಕೊಳ್ಳುವುದು. ಸ್ವಾಮಿಗಳಾದವರ ಯೋಗಿಕ, ದೈವಿಕ ವೈಯಕ್ತಿಕ ಅನುಭವಗಳಿಗಿಂತಲೂ, ಜನರ ಕಷ್ಟ-ಕೋಟಲೆಗಳನ್ನು ಹೃದಯದಿಂದ ಕಂಡು ಸ್ಪಂದಿಸುವ ಅವರ ಈ ವ್ಯಾಪಕ ಅನುಭವಕ್ಕೇ ಹೆಚ್ಚಿನ ಸಾಮಾಜಿಕ ಮೌಲ್ಯ.


ಅದು ಬಿಟ್ಟು, ಸ್ವಾಮಿಗಳೇ ಹೇಳುವಂತೆ, ಕೋಟ್ಯಂತರ ರೂಪಾಯಿ ವ್ಯವಹಾರದ, ದೈನಂದಿನ ಸಂತರ್ಪಣೆ ಇತ್ಯಾದಿ “ಕಾಷ್ಠ-ವ್ಯಸನ”ಗಳನ್ನು ಸಂನ್ಯಾಸಿಗಳು ಸ್ವಸಂತೋಷದಿಂದ ಮೇಲೆಳೆದುಕೊಳ್ಳುವುದಾದರೆ, ಇದಕ್ಕಾಗಿ ಅವರು ಹುಂಡಿಹಣಕ್ಕೆ ಆಸೆ ಪಡುವುದೂ ತಪ್ಪಾಗುವುದಿಲ್ಲ; ಅದರ ಪ್ರಾಮಾಣಿಕ ನಿಭಾವಣೆಗೆ ಇನ್ನಷ್ಟು ಕೋಟಿಗಳ ಸಾಲವಾಗುವುದೂ ಸುಳ್ಳಲ್ಲ. ಆದರೆ ಶ್ರೀಮಧ್ವಚಾರ್ಯರು ಏರ‍್ಪಡಿಸಿ, ಶ್ರೀವಾದಿರಾಜರು ಸುಧಾರಿಸಿದರೆನ್ನಲಾಗುವ ಪರ್ಯಾಯದ ಅರ್ಥ, ಅಷ್ಟಮಠಾಧಿಪತಿಗಳು ಎರಡು ವರ್ಷ ಸಾಲ ಮಾಡಿ 14 ವರ್ಷ ದುಡಿದ ಅದನ್ನು ತೀರಿಸುವ ಲೌಕಿಕಕ್ಕಷ್ಟೇ ಸೀಮಿತವೇ?

Comments