ಪಕ್ಷ(ಪಾತ)ಅತೀತ ಮಾಧ್ಯಮ ಎಲ್ಲಿದೆ?

ಪಕ್ಷ(ಪಾತ)ಅತೀತ ಮಾಧ್ಯಮ ಎಲ್ಲಿದೆ?

 

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಹಗರಣಗಳ ಅಸ್ಥಿಪಂಜರಗಳು ಕಪಾಟುಗಳೊಳಗಿನಿಂದ ಒಂದೊಂದಾಗಿ ಹೊರಬೀಳುತ್ತಿರುವುದು ನಮ್ಮ ಮಾಧ್ಯಮಗಳಿಗೆ ಸುಗ್ಗಿಯಾಗಿ ಪರಿಣಮಿಸಿದೆ. ಈ ಸುಗ್ಗಿಯ ಫಸಲನ್ನು ಕೊಯ್ದುಕೊಳ್ಳುವ ಕೆಲಸವನ್ನು ಮುದ್ರಣ ಹಾಗೂ ವಿದ್ಯುನ್ಮಾನ ಈ ಎರಡೂ ಮಾಧ್ಯಮಗಳೂ ಬಲು ಉಮೇದಿನಿಂದ ನಡೆಸಿವೆ. ಸಂತೋಷವೇ. ಆದರೆ, ಮಾಧ್ಯಮಗಳಿಗಿರಬೇಕಾದ ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತ ಮನೋಭಾವ ಇವು ಈ ಉಮೇದಿನ ಹಿಂದೆ ಇವೆಯೇ ಎಂದು ಗಮನಿಸಿದಾಗ ನಿರಾಶೆಯಾಗುತ್ತದೆ.
  ಒಂದೊಂದು ಪತ್ರಿಕೆಯೂ/ಟಿವಿ ವಾಹಿನಿಯೂ ಒಂದೊಂದು ಒಲವು - ಒಂದೊಂದು ಮುನಿಸು ಇಟ್ಟುಕೊಂಡು ಆ ಒಲವು ಮತ್ತು ಮುನಿಸಿಗನುಗುಣವಾಗಿ ಸುದ್ದಿಗಳನ್ನು ರೂಪುಗೊಳಿಸಿ ಇಂದು ನಮ್ಮೆದುರಿಡುತ್ತಿವೆ. ಯಾವ ಪತ್ರಿಕೆಯಲ್ಲೂ/ಟಿವಿ ವಾಹಿನಿಯಲ್ಲೂ ನಮಗೆ ನಿಷ್ಪಕ್ಷಪಾತದಿಂದ ಕೂಡಿದ ಮತ್ತು (ರಾಜಕೀಯ) ಪಕ್ಷಾತೀತವಾದ ಸ್ವಚ್ಛ-ಸಂಪೂರ್ಣ ಸುದ್ದಿ ಸಿಗುತ್ತಿಲ್ಲ.
  ಒಂದು ದಿನಪತ್ರಿಕೆಗೆ ಕಾಂಗ್ರೆಸ್ ಸರ್ಕಾರ ಮಾಡಿದ್ದೆಲ್ಲಾ ಸರಿಯೆಂಬಂತೆ ಕಂಡರೆ ಇನ್ನೊಂದಕ್ಕೆ ಕಾಂಗ್ರೆಸ್ಸಿನ ಎಲ್ಲ ನಡೆಯೂ ತಪ್ಪೆಂದು ಭಾಸವಾಗುತ್ತಿದೆ! ಒಂದು ಪತ್ರಿಕೆಗೆ ಬಿಜೆಪಿಯು ಪರಮ ಆದರ್ಶ ಪಕ್ಷವಾಗಿ ಕಂಡುಬಂದರೆ ಇನ್ನೊಂದಕ್ಕದು ಪರಮ ದುಷ್ಟ ಪಕ್ಷವಾಗಿ ಕಂಡುಬರುತ್ತಿದೆ! ಮತ್ತೊಂದೆರಡು ಪತ್ರಿಕೆಗಳು ತಾವು ನಿಷ್ಪಕ್ಷಪಾತಿಗಳೆಂದು ತೋರಿಸಿಕೊಳ್ಳಲೆತ್ನಿಸುತ್ತಿವೆಯಾದರೂ ಅವುಗಳ ವರದಿಗಾರಿಕೆಯಲ್ಲಿ ಮತ್ತು ಸುದ್ದಿಯ ಆಯ್ಕೆಯಲ್ಲಿ ಅವುಗಳ ಎಡ/ಬಲ ಒಲವು ಸ್ಪಷ್ಟಗೋಚರವಾಗುತ್ತಿದೆ! ಇವೆಲ್ಲದರ ಪರಿಣಾಮ, ಓದುಗರಾದ ನಮಗೆ ನಿಜಸುದ್ದಿಯ ಅರಿವೇ ಸಂಪೂರ್ಣವಾಗಿ ಆಗುತ್ತಿಲ್ಲ.
  ವಿವಿಧ ಸುದ್ದಿಗಳಿಗೆ ಪ್ರಾಮುಖ್ಯ ನೀಡುವ ವಿಷಯದಲ್ಲಿಯೂ ಪತ್ರಿಕೆಗಳ ದೃಷ್ಟಿಗಳು ಭಿನ್ನ-ವಿಭಿನ್ನ. ರಾಜ್ಯ ಬಿಜೆಪಿ ಸರ್ಕಾರದ ಗೊಟಾಳೆಗಳಿಗೆ ಒಂದೆರಡು ಪತ್ರಿಕೆಗಳು ಇನ್ನಿಲ್ಲದ ಮಹತ್ತ್ವ ನೀಡಿದರೆ ಇನ್ನೊಂದೆರಡು ಪತ್ರಿಕೆಗಳು ಆ ಗೊಟಾಳೆಗಳನ್ನು ಬಹುತೇಕ ಸಂಪೂರ್ಣ ಅಲಕ್ಷಿಸುತ್ತಿವೆ. ಮತ್ತೊಂದೆರಡು ಪತ್ರಿಕೆಗಳು ತಮ್ಮಿಚ್ಛೆಗನುಗುಣವಾಗಿ ಎಷ್ಟು ಬೇಕೋ ಅಷ್ಟನ್ನೇ, ಯಾವ ಶೈಲಿಯಲ್ಲಿ ಬೇಕೋ ಆ ಶೈಲಿಯಲ್ಲಿ ಓದುಗರೆದುರಿಡುತ್ತಿವೆ. ಕೇಂದ್ರ (ಯುಪಿಎ) ಸರ್ಕಾರದ ಟೂಜಿ ಹಗರಣದ ವರದಿಗಾರಿಕೆಗೂ ಈ ಮಾತು ಅನ್ವಯ.
  ಪತ್ರಿಕೆಗಳ ಕಥೆ ಹೀಗಾದರೆ ಟಿವಿ ವಾಹಿನಿಗಳ ಕಥೆ ಇನ್ನೂ ಅತ್ತತ್ತ. ಇಂಗ್ಲಿಷಿನ ಮೆಜಾರಿಟಿ ವಾಹಿನಿಗಳು ಬಲಪಂಥೀಯ ಸರ್ಕಾರ ಮತ್ತು ಸಂಸ್ಥೆಗಳನ್ನು ದೇಶದ್ರೋಹಿಗಳಂತೆ ಬಿಂಬಿಸುವುದರಲ್ಲಿ ಮತ್ತು ಭಾರತವನ್ನು ಕೊಳಕು-ಕುತ್ಸಿತ-ದರಿದ್ರ ದೇಶವನ್ನಾಗಿ ಚಿತ್ರಿಸುವುದರಲ್ಲಿ ಅದೇನೋ ಸಂತೋಷ ಕಾಣುತ್ತಿವೆ! ನಿಜವಾಗಿ ಭಾರತವು ಕೊಳಕು-ಕುತ್ಸಿತ-ದರಿದ್ರ ದೇಶವೇ? ಹಸಿವು-ಅಸಮಾನತೆಗಳು ಭಾರತದಲ್ಲಿವೆ, ನಿಜ. ಆದರೆ ಅವು ಭಾರತದಲ್ಲಿ ಮಾತ್ರ ಇವೆಯೇ? ಬೇರೆಡೆ ಇಲ್ಲವೇ? ಅಥವಾ, ಭಾರತದಲ್ಲಿ ಅವು ಇತರೆಲ್ಲ ದೇಶಗಳಿಗಿಂತ ಹೆಚ್ಚು ಇವೆಯೇ? ಇತರ ಬಹುಪಾಲು ದೇಶಗಳಿಗಿಂತ ಭಾರತದಲ್ಲಿ ಪ್ರಖರವಾಗಿ ವಿಜೃಂಭಿಸುತ್ತಿರುವ ಸ್ನೇಹ-ಸಹನೆ-ಶಾಂತಿ-ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಂಸಾರಿಕ ಮತ್ತು ಸಾಮಾಜಿಕ ಮೌಲ್ಯ ಇವು ಈ ಇಂಗ್ಲಿಷ್ ವಾಹಿನಿಗಳ ಗಮನಕ್ಕೇಕೆ ಬರುತ್ತಿಲ್ಲ?
  ಕನ್ನಡದಲ್ಲಂತೂ, ಒಂದು ವಾಹಿನಿಯು ಜೆಡಿಎಸ್ ಪಕ್ಷದ ಮುಖವಾಣಿಯಾದರೆ ಇನ್ನೊಂದು ವಾಹಿನಿಯು ಕಾಂಗ್ರೆಸ್ ಪಕ್ಷದ ವಕ್ತಾರನಾಗಿ ಹಾಗೂ ಮತ್ತೊಂದು ವಾಹಿನಿಯು ಬಿಜೆಪಿಯ ಸಿಂಪತೈಸರ್ ಆಗಿ ಕಾರ್ಯನಿರ್ವಹಿಸುತ್ತಿವೆ! ತಮಿಳೂ ಸೇರಿದಂತೆ ಇತರ ಭಾಷೆಗಳ ವಾಹಿನಿಗಳೂ ಈ ಪಕ್ಷಪಾತದಿಂದ ಹೊರತೇನಲ್ಲ.
  ಕಳೆದ ನಲವತ್ತೈದು ವರ್ಷಗಳಿಂದ ನಾನು ಬರವಣಿಗೆಯ ಜೊತೆಜೊತೆಗೇ ಸಾಮಾಜಿಕ ರಂಗದಲ್ಲೂ ಕ್ರಿಯಾಶೀಲನಾಗಿರುವುದರಿಂದಾಗಿ ಮತ್ತು ನನ್ನಿಂದ ಪ್ರೋತ್ಸಾಹಿತರಾದ ಅನೇಕರು ರಾಜಕೀಯ ರಂಗದಲ್ಲಿ ಉನ್ನತ ಸ್ಥಾನಗಳಿಗೇರಿರುವುದರಿಂದಾಗಿ ನನಗೆ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಅನೇಕ ಆಗುಹೋಗುಗಳ/ಸುದ್ದಿಗಳ ನಿಜಮಾಹಿತಿಗಳು ಲಭ್ಯವಾಗುತ್ತವೆ. ಇದರಿಂದಾಗಿ ನನಗೆ ಸುದ್ದಿ ಮಾಧ್ಯಮಗಳ ಪಕ್ಷಪಾತವು ಇತರ ಓದುಗರಿಗಿಂತ ಹೆಚ್ಚು ನಿಖರವಾಗಿ ಅರಿವಿಗೆ ಬರುತ್ತದೆ. (ಆದರೆ, ನಿಜಮಾಹಿತಿಯನ್ನು ಪ್ರಚುರಪಡಿಸಲು ನನಗೆ, ಮೂಲಾಧಾರವು ನೀಡಬೇಕಾದ ರಕ್ಷಣೆಯ ಕೊರತೆ ಅಡ್ಡಬರುತ್ತದೆ.)
  ಒಟ್ಟಿನಲ್ಲಿ ಹೇಳುವುದಾದರೆ, ನಮ್ಮ ಮಾಧ್ಯಮಗಳ ಪಕ್ಷಪಾತದ ನಡೆಯಿಂದಾಗಿ, ಪ್ರಜೆಗಳಾದ ನಾವು ’ಸಂಪೂರ್ಣ ನಿಜಸುದ್ದಿ’ಗಳಿಂದ ವಂಚಿತರಾಗುತ್ತಲೇ ಇದ್ದೇವೆ. ಇದೊಂದು ದುರಂತವೇ ಸರಿ.  

Comments