ನಾ ಕಂಡದ್ದು
ಇದು ನಿನ್ನೆಯ ಸಂಜೆ ನಾನು ನೋಡಿದ ಒಂದು ಘಟನೆ.
ಎಂದಿನಂತೆ ೬.೧೪ರ ಬೊರಿವಿಲಿ ಲೋಕಲ್ ಹಿಡಿಯಲು ಚರ್ಚ್‍ಗೇಟ್ ಸ್ಟೇಷನ್ನಿಗೆ ಬಂದೆ. ಅದೇ ಪ್ಲಾಟ್‍ಫಾರ್ಮ್‍ಗೆ ಮೊದಲು ಬರುವ ಗಾಡಿ ೬.೦೮ರ ಭಾಯಂದರ್ ಫಾಸ್ಟ್ ಲೋಕಲ್. ಪಕ್ಕದ ಪ್ಲಾಟ್‍ಫಾರ್ಂಗೆ ೬.೧೧ರ ವಿರಾರದ ಗಾಡಿ ಬರುತ್ತದೆ. ಇಲ್ಲಿಯ ಲೋಕಲ್ ಬಗ್ಗೆ ಒಂದು ಸಣ್ಣ ಪೀಠಿಕೆ.
ಚರ್ಚ್‍ಗೇಟ್ ಸ್ಟೇಷನ್ನಿನಿಂದ ನಾಲ್ಕು ಹಳಿಗಳ ಮೇಲೆ ಲೋಕಲ್ ಟ್ರೈನ್‍ಗಳು ಹೊರಡುವುವು. ಮೊದಲೆರಡು (೧-೨) ಹಳಿಗಳ ಮೇಲೆ ನಿಧಾನಗತಿಯ ಗಾಡಿಗಳು ಮತ್ತು ೩ - ೪ ರ ಹಳಿಗಳ ಮೇಲೆ ವೇಗದ ಗತಿಯ ಗಾಡಿಗಳು ಹೊರಡುವುವು. ಏಕ ಕಾಲಕ್ಕೆ ಒಂದು ನಿಧಾನ ಮತ್ತು ವೇಗದ ಗಾಡಿಗಳು ಹೊರಡುವುವು.
ಈ ಭಾಯಂದರ್ ಗಾಡಿ ಎಂದಿಗೂ ತುಂಬುವುದಿಲ್ಲ. ಸ್ವಲ್ಪ ಖಾಲಿಯಾಗೇ ಇರುತ್ತದೆ. ಜನರಿಗೆ ಪ್ರಯಾಣಿಸಲು ಆರಾಮೆನಿಸುವುದು. ಆದರೆ ಈ ವೇಗ ಗತಿಯ ಗಾಡಿಗಳು (ಬೊರಿವಿಲಿಯಿಂದ ಮುಂದೆ ಹೋಗುವುವು) ಬೊರಿವಿಲಿವರೆವಿಗೆ ಕೆಲವು ನಿಲ್ದಾಣಗಳಲ್ಲಿ ನಿಲ್ಲುವುವು ಮತ್ತು ನಾನು ಸೇರಬೇಕಿರುವ ಗೊರೆಗಾಂವಿನಲ್ಲಿ ನಿಲ್ಲುವುದಿಲ್ಲ. ಹಾಗಾಗಿ ಆ ಗಾಡಿಯಲ್ಲಿ ನಾನು ಪ್ರಯಾಣಿಸುವಂತಿರಲಿಲ್ಲ. ಅಂದು ಆ ಗಾಡಿ ಪ್ಲಾಟ್‍ಫಾರಂಗೆ ಬಂದದ್ದು ೬.೦೭ಕ್ಕೆ. ಪ್ಲಾಟ್‍ಫಾರ್ಂನಲ್ಲಿ ಬಹಳ ಜನಸಂದಣಿ ಇದ್ದಿತ್ತು. ಗಾಡಿ ಬಂದು ನಿಂತು ಮೊಟರ್ ಮನ್ ಮತ್ತು ಗಾರ್ಡ್‍ಗಳು ಬದಲಾಗಿ ಇನ್ನೊಂದು ನಿಮಿಷಕ್ಕೆ ವಾಪಸ್ ಹೊರಡಬೇಕಿತ್ತು. ಅಷ್ಟರೊಳಗೆ ಒಳಗಿದ್ದ ಜನರು ಇಳಿದು ಪ್ಲಾಟ್‍ಫಾರಂ ಮೇಲಿರುವ ಜನರು ಹತ್ತಬೇಕು. ಇಂತಹ ಸನ್ನಿವೇಶಗಳು ದಿನನಿತ್ಯದ ಸಾಮಾನ್ಯ ಸಂಗತಿ. ಎಂತಹ ಮಿಂಚಿನ ಕಾರ್ಯಾಚರಣೆ ನಡೆಯುವುದೆಂಬುದನ್ನು ಊಹಿಸುವುದರ ಬದಲು ಒಮ್ಮೆ ಕಣ್ಣಲ್ಲಿ ನೋಡಿದರೇ ಚಂದ.
೬.೦೭ಕ್ಕೆ ಸರಿಯಾಗಿ ಗಾಡಿ ಪ್ಲಾಟ್‍ಫಾರ್ಂನಲ್ಲಿ ಬರುತ್ತಿದ್ದಂತೆ ಇಳಿಯುವವರು ಹಾರುವ ಸಮಯಕ್ಕೆ ತಕ್ಕಂತೆ ಏರುವವರು ಒಳಕ್ಕೆ ಹಾರುವರು. ಆಗ ಒಬ್ಬ ಮನುಷ್ಯ ಒಂದು ಕ್ಷಣ ಇತ್ತ ನೋಡಿ ಅತ್ತ ಹಾರುವದರೊಳಗೆ ಕಂಪಾರ್ಟ್‍ಮೆಂಟಿನ ಬಾಗಿಲ ಮಧ್ಯದ ಕಬ್ಬಿಣದ ಕೋಲನ್ನು ಹಿಡಿಯಲಾಗಲಿಲ್ಲ. ಈ ಎಲ್ಲ ದೃಶ್ಯಗಳು ಸಾಮಾನ್ಯವಾದ್ದರಿಂದ ನನ್ನ ಗಮನ ಆ ಕಡೆಗೆ ಹೋಗಿರಲಿಲ್ಲ. ಇದ್ದಕ್ಕಿದ್ದಂತೆ ಧಡ್ ಎಂಬ ಶಬ್ದ ಕೇಳಿ ನಾ ಅತ್ತ ಕಡೆ ನೋಡಿದೆ. ಆತನ ತಲೆಯಿಂದ ಬಳಬಳನೆ ರಕ್ತ ಸುರಿಯುತ್ತಿತ್ತು. ಪ್ಲಾಟ್‍ಫಾರ್ಮ್‍ನ ಮೇಲೆ ಬಿಸಿ ರಕ್ತ ಹೆಪ್ಪುಗಟ್ಟಹತ್ತಿತ್ತು. ಗಾಡಿಯ ಕಬ್ಬಿಣದ ಬಾಗಿಲಿಗೂ ರಕ್ತದ ಗುರುತು ಹತ್ತಿತ್ತು. ರಕ್ತ ಎಷ್ಟು ಬೇಗ ಹೆಪ್ಪುಗಟ್ಟುವುದು ಎನ್ನುವದನ್ನೂ ಅಂದೇ ನಾ ನೋಡಿದ್ದು. ಆ ಮನುಷ್ಯ ಬೀಳುತ್ತಿದ್ದಂತೇ ಆ ಗಾಡಿಯೇರಬೇಕಾಗಿದ್ದ ಹಲವರಲ್ಲಿ ಕೆಲವರು ಕೆಳಗೇ ನಿಂತು ಆತನನ್ನು ಹಿಡಿದು ಪಕ್ಕಕ್ಕೆ ತಂದು ಬೆಂಚಿನ ಮೇಲೆ ಕುಳ್ಳಿರಿಸಿದರು. ನಂತರದ ಗಾಡಿಗಾಗಿ ಕಾಯುತ್ತಿದ್ದ ಕೆಲವರು ಆತನ ಕುಡಿಯಲು ನೀರನ್ನಿತ್ತು ಶುಶ್ರೂಷೆಗೆ ಅಣಿಮಾಡುತ್ತಿರುವಂತೆಯೇ - ಮೊದಲು ಆತನನ್ನು ಕರೆತಂದ ಜನರು ಓಡಿ ಗಾಡಿಯನ್ನು ಹಿಡಿದರು. ಕ್ಷಣಮಾತ್ರದಲ್ಲಿ ಗಾಡಿ ಏನೂ ಆಗದಂತೆ ಮುಂದೆ ಹೋಗಿತ್ತು. ಹಿಂದೆಯೇ ನಮ್ಮ ಗಾಡಿ ಬಂದು ನಾವೆಲ್ಲರೂ ನಮ್ಮ ನಮ್ಮ ಗೂಡಿಗೆ ತೆರಳಲು ಹತ್ತಿದೆವು. ಈ ಮಧ್ಯೆ ರೈಲ್ವೇ ಸಿಬ್ಬಂದಿ ತಳ್ಳುವ ಕುರ್ಚಿಯನ್ನು ತಂದು ಆತನನ್ನು ರೈಲ್ವೇ ವೈದ್ಯರ ಹತ್ತಿರಕ್ಕೆ ಕರೆದೊಯ್ದಿದ್ದರು. ಆತನಿಗಾದ ಘಾಸಿ ಎಷ್ಟರ ಮಟ್ಟಿನದೆಂದು ತಿಳಿಯಲಿಲ್ಲ. ನನ್ನ ಅನಿಸಿಕೆಯ ಪ್ರಕಾರ ಇನ್ನೊಂದೆರಡು ದಿನಗಳಲ್ಲಿ ಆತ ಮತ್ತೆ ಅದೇ ಗಾಡಿಗೆ ಬರುವನು ಮತ್ತು ಹಾಗೆಯೇ ಮತ್ತೆ ಗಾಡಿಯೊಳಕ್ಕೆ ಹಾರುವನು.
ಮುಂಬೈ ಜೀವನವೇ ಇಷ್ಟು. ಗಾಯವಾಗುತ್ತಲೇ ಇರುವುದು ಹಿಂದೆಯೇ ಮಾಗುವುದು.
Comments
ಮುಂಬೈ ಜೀವನ