ಸಿಂಗಪುರ ಕರ್ನಾಟಕ ವೈಭವದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನ - ಸಾಹಿತ್ಯ-ಸಂವಾದದಲಿ ಪ್ರಶ್ನೋತ್ತರ...

ಸಿಂಗಪುರ ಕರ್ನಾಟಕ ವೈಭವದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನ - ಸಾಹಿತ್ಯ-ಸಂವಾದದಲಿ ಪ್ರಶ್ನೋತ್ತರ...

ನವೆಂಬರ್ ೯ ರ ಸಂಜೆ ಸಿಂಗಪುರ ಕರ್ನಾಟಕ ವೈಭವದ ಸಾಹಿತ್ಯ-ಸಾಂಸ್ಕೃತಿಕ ಸಮ್ಮೇಳನಕ್ಕಾಗಿ ಆಹ್ವಾನಿತರಾಗಿದ್ದ ಪ್ರೊ. ನಿಸಾರ್ ಅಹಮದ್, ಸಾಹಿತಿ ಜಯಂತ್ ಕಾಯ್ಕಿಣಿ ಹಾಗೂ ದಟ್ಸ್ ಕನ್ನಡ ಸಂಪಾದಕ ಎಸ್.ಕೆ.ಶ್ಯಾಮ್‍ಸುಂದರ್ ಅವರೊಡನೆ ಸಿಂಗಪುರದ ಗೋವಿಂದಸ್ವಾಮಿ ಕಲ್ಯಾಣ ಮಂಟಪದಲಿ ಸಾಹಿತ್ಯ-ಸಂವಾದ ಕಾರ್ಯಕ್ರಮ ಏರ್ಪಡಿಸಿತ್ತು.

ಸಾಹಿತ್ಯ-ಸಂವಾದದಲಿ ಪ್ರಶ್ನೋತ್ತರ...

 

೧>. ಪ್ರೊ. ನಿಸಾರ್ ಅವರಿಗೆ: ನಿಮ್ಮ ಕವನಗಳಲ್ಲಿ ನೋವು ಇದೆ, ಬರೆಯಲು ಪ್ರೇರಣೆ ಏನು?

ಪ್ರೊ.ನಿಸಾರ್: ನನ್ನ ಇಡೀ ಬರವಣಿಗೆಯ ಸೆಲೆ ನೋವಿನ ಎಳೆ. ನಾವು ಉಸಿರಾಡುತ್ತಿರುವ ವಾತಾವರಣ, ಜನ್ಮದಿಂದ ಹೊತ್ತು ತಂದ ಸಂಘರ್ಷ, ತಿಕ್ಕಾಟ, ಒಳತೋಟಿಯಿಂದ ಹೊರಬಂದದ್ದು. ಎರಡು ಸಂಸ್ಕೃತಿಗಳ ಬಗ್ಗೆ ನಿಂದು ಬರೆಯುವುದು ಬಲು ಕಷ್ಟ. ಕುರಿಗಳು ಸಾರ್ ಕುರಿಗಳು ಇದು ೬೩ರಲ್ಲಿ ಚೀನಿಯರ ಆಕ್ರಮಣ ಬಹಳ ಆಘಾತ ನೀಡಿತು. ಆಗ ಬಂದದ್ದು ಕುರಿಗಳು ಸಾರ್ ಕುರಿಗಳು. ಈ ನೋವು ಬೇರೆಯವರಿಗೆ ಅರ್ಥ ಆಗೋಲ್ಲ. ಕೆಲವೊಮ್ಮೆ ಅನಿಸುತ್ತೆ ನಮ್ಮನ್ನು ಸಾಕಿದವರೇ ಕಟುಕಿಗಳಾಗಿ, ನಮ್ಮನ್ನು ಕುರಿಗಳಾಗಿ ಮಾಡುತ್ತಾರಲ್ಲಾ ಎಂದು ನೋವಾಗುತ್ತದೆ. ನಮ್ಮ ಬೆವರಿನ ಹಣ ಪೋಲಾಗುತ್ತಿದೆ ಎಂದು ನೋವಾಗುತ್ತದೆ. ಸಂವೇದನಾಶೀಲ ಕವಿ ಮಾತಿನ ಮೂಲಕ ವ್ಯಕ್ತ ಪಡಿಸುತ್ತಾನೆ. ಕವಿ ಆದವನು ಒಳಿತನ್ನು ಮಾಡುವುದಕ್ಕೆ ಇದನ್ನು ಮಾಡಬೇಕು. ಸಾಹಿತ್ಯದಲಿ ವಿನಮ್ರತೆ ಇರಬೇಕು, ಧಾಷ್ಟ್ಯ ಸಲ್ಲದು. ಇದೀಗ ಭಾವನಾತ್ಮಕ ಕಡಿಮೆ ಆಗುತ್ತಿದೆ, ಘೋಷಣೆ ಜಾಸ್ತಿ ಆಗುತ್ತಿದೆ.

 

೨>. ಜಯಂತ್ ಅವರಿಗೆ: ನಿಮ್ಮ ಬರಹದಿಂದ ಪ್ರಭಾವಿತನಾಗಿ ಪ್ರೇರೇಪಣೆ ಮಾಡಿರುವ ಬಗ್ಗೆ ಅನುಭವ ಆಗಿದೆಯಾ?

ಜಯಂತ್: ನನ್ನ ಬರವಣಿಗೆಯಿಂದ ನನಗೆ ವಿನೀತ ಭಾವನೆ ಬಂದಿದೆ, ಜಗತ್ತನ್ನು ಕಾಣುವ ಆಸೆ ಮೂಡುತ್ತೆ. ನಾನು ಬರೆದುದು ನನ್ನ ಬದುಕಿನ ಪ್ರಯಾಣದ ಮೇಲೆ. ಬರವಣಿಗೆ ಬರೆವಾಗ ಮಾತ್ರ ನಾವು ಬರಹಗಾರರು. ಬರವಣಿಗೆಯಲಿ ಅನುಭವ, ಮಾಹಿತಿ ರಕ್ತಗತ ಆಗಬೇಕು. ಮಾಹಿತಿ ಕಲೆಹಾಕಿ ಬರೆದರೆ ಅದಕ್ಕೆ ತಾಳಿಕೆ ಗುಣ ಇರಬೇಕು. ಆತ್ಮ ವಿಮುಖನಾಗಿ ಅನುಭವಿಸಬೇಕು. ಸಂವೇದನವನ್ನು ಪರಿವರ್ತಿಸುವುದಕ್ಕೆ ಸಾಹಿತ್ಯ ಕುಮ್ಮಕ್ಕು ನೀಡುತ್ತೆ. ಪರೋಕ್ಷವಾಗಿ ಸಂಗೀತ, ಸಾಹಿತ್ಯ ಪ್ರೇರೇಪಣೆ ಕೊಡುತ್ತೆ.

೩>.ಕವನ, ಕಥೆ ಬರೆವಾಗ ಅದು ಇನ್ನೊಬ್ಬರು ಓದುತ್ತಾರೆ ಎಂಬ ಲಕ್ಷ್ಯ ಇರುವುದಾ?

ಜಯಂತ್: ನಾವು ಬರೆಯುವುದೇ ಇನ್ನೊಬ್ಬರು ಓದುತ್ತಾರೆ ಎಂದು ಗೊತ್ತಿರುವುದಕ್ಕೇ. ಖಚಿತವಾಗಿ ಇಂಥವರಿಗೇ ಎಂಬ ಲಕ್ಷ್ಯ ಇರುವುದಿಲ್ಲ. ಬರವಣಿಗೆ, ಕವನ ಒಂದು ಸ್ಪಂದನ ಮಾತ್ರ. ಅದು ಈಜು ಕಲಿಯುತ್ತಲ್ಲೇ ನದಿ ದಾಟುವ ಪ್ರಯತ್ನ ಮಾತ್ರ.

 

೪>. ಕನ್ನಡ ಸಾಹಿತ್ಯದ ಮಟ್ಟ ಕುಸಿಯುತ್ತಿದೆಯೇ? ಕಾರಣ ಏನು? ಇದು ಎಲ್ಲ ಸಾಹಿತ್ಯಕ್ಕೂ ಅನ್ವಯಿಸುತ್ತದೆ?

ಪ್ರೊ. ನಿಸಾರ್: ಬರವಣಿಗೆ ಕುಂಠಿತವಾಗುತ್ತಿಲ್ಲ. ಒಂದು ರೀತಿಯಲಿ ಬೆಳೆಯುತ್ತಲಿದೆ. ದಿನಂಪ್ರತಿ ಪುಸ್ತಕಗಳು ಮುದ್ರಣಗೊಳ್ಳುತ್ತಲಿವೆ. ಆದರೆ ಗುಣಮಟ್ಟ ಕುಸಿಯುತ್ತಿದೆ. ಒಟ್ಟಾರೆ ಸಾಹಿತ್ಯದಲಿ ಒಂದು ತೇಜೋಹೀನತೆ ಕಂಡು ಬರುತ್ತಿದೆ. ಕಾವ್ಯ ವೈಯುಕ್ತಿಕ ಎಂಬ ಭಾವನೆ ಕಾಣಿಸದಿದ್ದಲ್ಲಿ ನಾವು ಭಾವನಾತ್ಮಕವಾಗಿ ಕುಬ್ಜರಾಗುತ್ತಿದ್ದೇವೆ.

ಮುಖ್ಯವಾಗಿ ಮನಗಾಣಬೇಕಾದ್ದು-ಭಾಷೆ ಬಳಸುವ, ಬರೆಸುವ ರೀತಿ. ಈಗ ಅದು ಲೋಕಾಭಿರೂಢಿ ಆಗಿದೆ. ಸೃಜನಶೀಲತೆ ಕಮ್ಮಿ ಆಗಿದೆ. ವಾಚ್ಯತೆ ಬೆಳೆಯುತ್ತಿದೆ, ಚಮತ್ಕಾರಿಕ ಬರವಣಿಗೆ ಹೆಚ್ಚಿದೆ. ಬಹಳಷ್ಟರಲ್ಲಿ ತಿರುಳಿರುವುದಿಲ್ಲ. ಮತ್ತೆ ಸಾಹಿತ್ಯಕ್ಕೆ ಸಮತೋಲನ ಸ್ಥಿತಿ ಬರುವುದು ಎಂಬ ನಂಬಿಕೆ ಇದೆ, ಬರಲಿ ಎಂದು ಹಾರೈಸುತ್ತೇನೆ.

"ಕವಿ ಸಮಾಜದ ಅಂತರಂಗಕ್ಕೆ ತನ್ನ ಅಂತರಂಗದಿಂದ ಪ್ರತಿಸ್ಪಂದಿಸುತ್ತಾನೆ, ಕವಿತೆ ಎಂಬುದು ಅವ್ಯಕ್ತವನ್ನು ವ್ಯಕ್ತ ಪಡಿಸುವಂತಹುದು. ಕವನ ಭಾವನೆಗಳನ್ನು ಅಭಿವ್ಯಕ್ತಿಗೊಳುಸುವಂತಹುದು. ವಸ್ತುವಿನ ಮೂಲ ಕಾವ್ಯ- ನಾವು ಬರೆಯುವುದು ನಮ್ಮಿಂದ ಬಿಡುಗಡೆ ಆಗುವುದಕ್ಕಾಗಿ. ನಾವು ಬರವಣಿಗೆಯ ಮೂಲಕ ಕೆಲವೊಂದು ವಿಷಯಗಳನ್ನು ಅರಿಯುತ್ತೇವೆ, ಜಗತ್ತನ್ನು ನೋಡುವ ಪ್ರಯತ್ನ ಪಡುತ್ತೇವೆ ಎಂದರು.

ಬಂದಿದ್ದ ಆಹ್ವಾನಿತರು ಅವರವರ ಕ್ಷೇತ್ರದಲಿ ಬಹಳ ಪ್ರಸಿದ್ಧಿ ಪಡೆದವರು. ಸಭಿಕರೊಂದಿಗೆ ಒಂದಾಗಿ ಬೆರೆತು ಸಾಹಿತ್ಯ, ಕವನ, ಬರವಣಿಗೆಗಳ ಬಗ್ಗೆ ಸಲಹೆ, ಮಾಹಿತಿಗಳನು ನೀಡಿದ ಕವಿ ಪ್ರೊ. ನಿಸಾರ್, ಸಾಹಿತಿ ಜಯಂತ್ ಕಾಯ್ಕಿಣಿ, ಅದುವೆ ಕನ್ನಡ ಸಂಪಾದಕ ಶ್ಯಾಮ್ ಅವರಿಗೆ ಸಿಂಗಪುರದ ಕನ್ನಡಿಗರು ಆಭಾರಿ.

ಈ ಸಾಹಿತ್ಯ ಈ ಸಂಜೆ ಭಿನ್ನವಾಗಿತ್ತು,  ಇಲ್ಲೊಂದು ಆತ್ಮೀಯತೆಯಿತ್ತು, ಆದರವಿತ್ತು, ಚೊಕ್ಕವಾಗಿತ್ತು, ಕಲಿಯುವುದು ಸಾಕಷ್ಟಿತ್ತು.

Comments