ರೈಟ್ರು ಭಟ್ರು ಹೇಳಿದ “ಚೌಡಿಯ ಕಣ್ಣು ಕಟ್ಟಿದ” (ನಿಜ)ಕತೆ!!!!

ರೈಟ್ರು ಭಟ್ರು ಹೇಳಿದ “ಚೌಡಿಯ ಕಣ್ಣು ಕಟ್ಟಿದ” (ನಿಜ)ಕತೆ!!!!

                          ಮೊನ್ನೆ ಮುಸ್ಸಂಜೆಲಿ ಆಡಾಡ್ ಮಳೆ ಜೋರ್ ಬರ್ತಿದ್ದಾಗ-ಮಳೆ ನಿರೀಕ್ಷೆಯಿಲ್ಲದೆ ಮನೇಲಿ ಕೊಡೆ ಬಿಟ್ಟ್ ಬಂದಿದ್ದ ರೈಟ್ರುಭಟ್ರು-ಅದು ಇದು ಮಾತಾಡ್ತಾ-ನಂಬಿಕೆ ಆಚಾರಗಳ ವಿಚಾರ ಬಂದಾಗ-ಇತ್ತೀಚೆಗಷ್ಟೇ ನಡೆದ-ಅವರು ಬೇರೆ ಯಾರಿಗೂ ಹೇಳಬೇಡಿ ಎಂದು ಹೇಳಿ ಹೇಳಿದ-ಒಂದು ನಿಜ ಘಟನೆ ಇಗೋ ನಿಮ್ಮ ಮುಂದೆ. (ರೈಟ್ರುಭಟ್ರು –ಹಾಗೆಂದರೇನು?? ಎಂಬ ಯೋಚನೆ ನಿಮ್ಮ ತಲೆಯಲ್ಲಿ ಬಂದರೆ ನಿಮಗಾಗಿ ಹೆಚ್ಚಿನ ಮಾಹಿತಿ-ಹೆಚ್ಚು ಜಮೀನು ಇರುವ ಅಥವಾ ಜಮೀನಿನಿಂದ ದೂರದಲ್ಲಿ ವಾಸಿಸುತ್ತಿರುವ ಜನ ಜಮೀನಿನಲ್ಲಿ ನಡೆಯುವ ಕೆಲಸ ಕಾರ್ಯಗಳ ಮೇಲ್ವೀಚಾರಣೆಗಾಗಿ ಇರಿಸಿರುವ ವ್ಯಕ್ತಿಯನ್ನ ರೈಟ್ರು ಎಂದು ಕರೆಯುತ್ತಾರೆ. ಸದಾಶಿವ ಭಟ್ರು ಪಕ್ಕದ ಎಸ್ಟೇಟ್ನಲ್ಲಿ ಈ ಕೆಲಸ ಮಾಡ್ತಾ ಇದ್ದಾರೆ. ಆದ್ದರಿಂದ ಅವರನ್ನು ಜನ ಕರೆಯುವುದು ರೈಟ್ರುಭಟ್ರು ಅಂತನೇ!!!) ಈ ನಿಜಕತೆಯ ದ್ವಿತೀಯಾರ್ದದಲ್ಲಿ ಬರುವ ಪಾತ್ರದಾರಿಗಳಿಗೆ ಮೊದಲಾರ್ದದಲ್ಲಿ ನಡೆದ ಘಟನೆಯ ಬಗ್ಗೆ ಕಿಂಚತ್ತೂ ಅರಿವಿಲ್ಲ. ಆ ಘಟನೆಯ ಬಗ್ಗೆ ಸ್ವಲ್ಪ ಸುಳಿವು ಅವರಿಗೆ ಬಂದರೂ ನಿಜಕತೆಯ ಮೊದಲಾರ್ದದಲ್ಲಿ ಬರುವ ಪಾತ್ರದಾರಿಗಳನ್ನು ಅವರು ಸಮಾ ಬಯ್ಯದೆ ಬಿಡುವುದಿಲ್ಲ!!!! ಈ ನಿಜಕತೆ ಇಂತಿದೆ- 

                 ಒಮ್ಮೆ ಕಾಪಿತೋಟದಲ್ಲಿ ಕೆಲಸ ಮಾಡಿಸುತ್ತಿರುವಾಗ ತಮ್ಮ ಕತ್ತಿ ನಾಪತ್ತೆಯಾಗಿದ್ದು ರೈಟ್ರುಭಟ್ರು ಗಮನಕ್ಕೆ ಬಂತು. ಸ್ವಲ್ಪ ಹೊತ್ತಿನ ಮುಂಚೆ ಉಪಯೋಗಿಸಿದ ಕತ್ತಿ ಇದ್ದಕ್ಕಿದ್ದಂತೆ ನಾಪತ್ತೆ!! ಅಲ್ಲೇ ಕೆಲಸಮಾಡುತ್ತಿರುವ ಯಾರದ್ದೋ ಕಿತಾಪತಿ ಎಂದೆಣಿಸಿದ ರೈಟ್ರುಭಟ್ರು ನನ್ ಕತ್ತಿ ಎಲ್ಲಿ? ಯಾರ್ ತಗಂಡಿದ್ದೀರಿ? ಎಂದು ವಿಚಾರಣೆ ಶುರುಮಾಡಿದರು. ಎಲ್ಲಾ ಕೆಲಸಗಾರರೂ ತಮಗೆ ಗೊತ್ತಿಲ್ಲ,ತಮಗೆ ಗೊತ್ತಿಲ್ಲ-ಎಂದೇ ಹೇಳಿದರು. ಸುಳ್ಳು ಹೇಳ್ತೀರಾ, ತಡಿರಿ ಬುದ್ದಿಕಲಿಸ್ತೀನಿ ಎಂದ ರೈಟ್ರುಭಟ್ರು ಕೊನೆಯ ಬಾಣವಾಗಿ ತೆಂಗಿನ ಕಾಯಿಯೊಂದಕ್ಕೆ ಕುಂಕುಮ ಹಚ್ಚಿ ನೀವ್ಯಾರೂ ನನ್ನ ಕತ್ತಿ ಮುಟ್ಟಿಲ್ಲ ತಾನೇ. ಈ ಕಾಯಿ ಮುಟ್ಟಿ ಹೇಳಿ. ಆ ಮೇಲ್ಮಕ್ಕಿ ಚೌಡಿಯೇ ನೋಡಿಕೊಳ್ಳಲಿ ಎಂದು ಹೇಳಿ ಅಲ್ಲಿದ್ದ ಎಲ್ಲಾ ಕೆಲಸಗಾರರ ಕೈಲಿ ಆ ಕಾಯಿ ಮುಟ್ಟಿಸಿ ಹೇಳಿದಂತೆ ಅದನ್ನು ತೆಗೆದುಕೊಂಡು ಹೋಗಿ ಕಾಡು ಉಡಿಯ ಮದ್ಯೆ ಇದ್ದ ಮೇಲ್ಮಕ್ಕಿ ಚೌಡಿಯ ಚಿಕ್ಕ ಗುಡಿಯ ಮುಂದೆ ಇಟ್ಟುಬಂದರು. (ಬಹುಶಃ ಕೆಲಸಗಾರರ್ಯಾರೂ ಆ ಕತ್ತಿ ತೆಗೆದುಕೊಂಡಿರಲಿಕ್ಕಿರಲಿಲ್ಲ. ರೈಟ್ರುಭಟ್ರು ಎಲ್ಲೋ ಇಟ್ಟಿರಬೇಕು. ಮೇಲ್ಮಕ್ಕಿ ಚೌಡಿ ತುಂಬಾ ಪ್ರಸಿದ್ದಿ!!! ಚೌಡಿ ಹೆಸರು ಕೇಳುತ್ತಿದ್ದಂತೆ-ನಿಜವಾಗಿ ಯಾರಾದ್ರೂ ತಗಂಡಿದ್ರೆ-ನೋಡಿ ಭಟ್ರೇ. ಇಲ್ಲೇ ಸಂದಿ ಬಿದ್ದಿದ್ಯಲ್ಲಾ ಎಂದು ಹೇಳಿ ಕತ್ತಿ ಕೊಡುತ್ತಿದ್ದಾರೆ ವಿನಾ ಅಪ್ಪಿತಪ್ಪಿ ಕಾಯಿ ಮುಟ್ಟುತ್ತಿರಲಿಲ್ಲ!!! ರೈಟ್ರುಭಟ್ರು ಅದನ್ನು ನನ್ನಜೊತೆ ಮಾತನಾಡುತ್ತಿರುವಾಗ ಒಪ್ಪಿಕೊಂಡರು). ಇದು ಮೊದಲಾರ್ದ ನಡೆದ ಘಟನೆಯಾದರೆ ದ್ವಿತಿಯಾರ್ದ ಮುಂದೆ ಓದಿ-

                 ಮೇಲ್ಮಕ್ಕಿ ಚೌಡಿಯ ಗುಡಿಯ ಆಸುಪಾಸಿನಲ್ಲೇ ಮೇಲ್ಮಕ್ಕಿ ಹೆಗ್ಡೇರು ಕುಟುಂಬಕ್ಕೆ ಸೇರಿದ ಜಮೀನಿದೆ. ಮೊದಲು ಒಂದೇ ಮನೆಯಲ್ಲಿದ್ದ ಕುಟುಂಬ ಬೆಳೆದಂತೆ ಒಡೆದು ಇಂದು ಅಲ್ಲಿ ಮೂರ್ನಾಲ್ಕು ಮನೆಗಳಾಗಿವೆ. ಇತ್ತೀಚೆಗೆ ಯಾರೋ ಒಬ್ಬರ ಮನೇಲಿ ತುಂಬಾ ಅನಾರೋಗ್ಯ ಖರ್ಚು ವೆಚ್ಚಗಳಾದಾಗ ಹಾಗು ಇನ್ಯಾರೋ ಒಬ್ಬರ ಮನೇಲಿ ಜಾನುವಾರುಗಳಿಗೆ ಪದೇಪದೆ ತೊಂದರೆಯಾದಾಗ ಹೆಗ್ಡೇರು ಕುಟುಂಬದ ಹಿರಿ ಸದಸ್ಯರೆಲ್ಲಾ ಸೇರಿ ಸರಿಯಾದ ಕಡೆ ಕೇಳಿಸುವುದೆಂದು ತೀರ್ಮಾನಿಸಿದ್ದಾರೆ. ಅಂತೆಯೇ ನಾಲ್ಕೈದು ಮನೆ ಹಿರಿಯರು ಒಟ್ಟಾಗಿ, ನಿಮಿತ್ಯ ಹೇಳುವ ಮೂರ್ನಾಡು ರಾಮಭಟ್ಟರನ್ನು ಕಂಡಿದ್ದಾರೆ. ಕವಡೆ ಹಾಕಿದ ರಾಮಭಟ್ಟರುನಿಮ್ಮ ಪರಿಸರದಲ್ಲಿ ಯಾವುದೋ ಚೌಡಿನೋ, ಮತ್ಯಾವುದೋ ಇರಬೇಕು ನೋಡಿ. ಅದರ ಕಣ್ಣು ಕಟ್ಟಿದಹಾಗಿದೆ(!!!!), ಅದಕ್ಕೇ ತೊಂದರೆಗಳು-ಎಂದು ಅರುಹಿದ್ದಾರೆ. ಕಾಡಿನೊಳಗೆ ಉಡಿಯ ಮಧ್ಯದಲ್ಲಿರುವ ಮೇಲ್ಮಕ್ಕಿ ಚೌಡಿಯ ಪುಟ ಗುಡಿ ಜ್ಞಾಪಿಸಿಕೊಂಡು ಹೌದೌದು. ಹಾಗೊಂದಿರುವುದು ಹೌದು.-ಎಂದು ಹೆಗ್ಡೇರುಗಳು (ಭಟ್ಟರ ನಿಮಿತ್ಯ ಹೇಳುವ ಜ್ಞಾನದ ಬಗ್ಗೆ ವಿಸ್ಮಯಪಡುತ್ತಾ) ತಲೆ ಆಡಿಸಿದ್ದಾರೆ. ರಾಮಭಟ್ಟರ ಸಲಹೆಯಂತೆ ಆ ಚೌಡಿಗೆ ಹಣ್ಣು ನೈವೇದ್ಯ ಅರ್ಪಿಸಿ ಇನ್ನು ಮುಂದೆ ಸರಿಯಾಗಿ ನಡೆದುಕೊಳ್ಳುವತೀರ್ಮಾನ ಕೈಗೊಂಡಿದ್ದಾರೆ. 

                   ಜಮೀನಿನಂಚಿನ  ಕಾಡಿನಲ್ಲಿ ಪೊದೆಗಳ ಮದ್ಯದಲ್ಲಿ ಮರದ ಕೆಳಗೆ ತುಂಬಾ ಕಷ್ಟದಲ್ಲಿ ಗುಡಿಯೆಂದು ಹೇಳಬಹುದಾದ ಕಲ್ಲಿನ ರಚನೆಯೊಂದರ ಒಳಗಿರುವುದೇ ಮೇಲ್ಮಕ್ಕಿ ಚೌಡಿ(ಯ ಕಲ್ಲು). ಅದಕ್ಕೆ ಬರುವ ದಾರಿಯಲ್ಲಿನ ಹಾಗೂ ಸುತ್ತಮುತ್ತ ಬೆಳೆದ ಉಡಿಯನ್ನ ಸವರಿ ಚೌಡಿಯ ಗುಡಿಯ ಬಳಿಗೆ ಬಂದ ಹೆಗಡೆಯವರ ಕುಟುಂಬದ ಸದಸ್ಯರಿಗೆ (ರೈಟ್ರುಭಟ್ರು ಕುಂಕುಮ ಹಚ್ಚಿ ಇಟ್ಟಿದ್ದ) ತೆಂಗಿನ ಕಾಯನ್ನು ನೋಡಿ ಆಕಾಶವೇ ತಲೆಮೇಲೆ ಬಿದ್ದಂತಾಗಿದೆ!! ನಿಮಿತ್ಯ ಹೇಳಿದ್ದು ಸರಿ. ನೋಡಿ.ಯಾವನೋ ಸತ್ ಮಲಗ್ಯಾನೆ-ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಪಿಯುಸಿ ಓದುತ್ತಿರುವ ಹೆಗಡೇರ ಕುಟುಂಬದ ಹುಡುಗನೊಬ್ಬ ಆ ಕಾಯನ್ನು ಮುಟ್ಟಲು ಹತ್ತಿರ ಹೋಗುತ್ತಿದ್ದಂತೆ ತಡಿ ತಡಿ ತಡಿ ಮುಟ್ಬ್ಯಾಡ ಎಂದು ಅವನನ್ನು ತಡೆದ ಹೆಗ್ಡೇರ ಕುಟುಂಬದ ಹಿರಿತಲೆಯೊಬ್ಬರು  ಮುರ್ನಾಡಿಗ್ಹೋಗಿ ರಾಂಭಟ್ರನ್ನೇ ಕೇಣಾಣ-ಅಂತ ಎಲ್ಲರ ತಲೆಯಲ್ಲೂ ಬಂದಿರಬಹುದಾದ ಸಲಹೆಯನ್ನು ಬಾಯ್ಬಿಟ್ಟು ಹೇಳಿದರು.

                  ಮತ್ತೊಮ್ಮೆ ಅವರೆಲ್ಲರ ಸವಾರಿ ಮೂರ್ನಾಡು ರಾಂಭಟ್ಟರ ಮನೆಕಡೆ ಹೊರಟಿದೆ. ದೂರದಲ್ಲಿ ಕುಳಿತೇ ಕವಡೆ ಹಾಕಿ ಚೌಡಿಯ ಕಣ್ಣುಕಟ್ಟಿದ ವಿಷಯ ಹೇಳಿದ ರಾಂಭಟ್ಟರ ನಿಮಿತ್ಯದ ಸಾಮರ್ಥ್ಯ ಹೊಗಳಿಮುಂದೇನು ಮಾಡಬೇಕು ಎಂದು ತಲೆತಗ್ಗಿಸಿ ಕೇಳಿಕೊಂಡಿದ್ದಾರೆ. ನಾನು ಹೇಳಿರಲಿಲ್ಲವಾ ಎಂದೇ ಮಾತು ಶುರುಮಾಡಿದ ರಾಂಭಟ್ಟರು ಯೋಚನೆ ಮಾಡಬೇಡಿ. ಎಲ್ಲದಕ್ಕೂ ಒಂದು ಪರಿಹಾರ ಅಂತಿದೆಎಂದು ಅಭಯ ನೀಡಿ ನಿವಾರಣೆಗೆ ಕೈಗೊಳ್ಳಬೇಕಾದ ಕಾರ್ಯಗಳ ಒಂದು ಪಟ್ಟಿಯನ್ನೇ ನಿಡಿದರು. ಅದೆಲ್ಲಾ ನಿಮಗೇ ಬಿಟ್ಟಿದ್ದು. ಎಷ್ಟ್ ಜನ ಬೇಕು ಏನೇನ್ ಬೇಕು ಏನೇನ್ ಮಾಡ್ಬೇಕು ನೀವೇ ಮಾಡ್ಬಿಡಿ. ಖರ್ಚು ನಾವ್ ನಾಕೈದ್ ಮನೆಯವರ್ ಹಂಚ್ಕಂಡ್ ಕೊಡ್ತೀವಿ-ಎಂದು ಹೆಗ್ಡೇರುಗಳು ಹೇಳಲು ಅದೆಲ್ಲಾ ನನಗ್ ಬಿಟ್ಬಿಡಿ. ಖರ್ಚು ಅಂದಾಜು ಇಂತಿಷ್ಟಾಗಬಹುದು ಎಂದ ರಾಂಭಟ್ರು ಯಾವುದೋ ಒಂದು ದಿನ ಗೊತ್ತುಮಾಡಿ ಕೊಟ್ಟರು.

                   ಆ ದಿನದಂದು ಮೇಲ್ಮಕ್ಕಿಗೆ ರಾಮಭಟ್ಟರು ಮೂರ್ನಾಲ್ಕು ಮರಿಭಟ್ಟರುಗಳನ್ನ ಜೊತೆಗೆ ಕರೆದುಕೊಂಡುಬಂದು ಅಗತ್ಯದ ಪೂಜೆಗಳನ್ನು ಚೌಡಿಯ ಗುಡಿಯ ಪಕ್ಕ ಮಾಡಿದರು. ಊರಿನಲ್ಲಿರುವ ಹೆಗ್ಡೇರು ಕುಟುಂಬದ ಸದಸ್ಯರುಗಳಲ್ಲದೆ ಬೆಂಗಳೂರು ಸೇರಿದ್ದ ಹೆಗ್ಡೇರು ಕುಟುಂಬದ ಪಿಳಿಕೆಗಳೂ ಬಂದು ಸೇರಿದ್ದವು. ಹೊರಗೆ ಕೊಟ್ಟ ಹೆಣ್ಣುಮಕ್ಕಳೂ ಚಿಳ್ಳೆ ಪಿಳ್ಳೆಗಳೊಂದಿಗೆ ಬಂದಿದ್ದರು. (ಅಡಿಗೆ)ಭಟ್ಟರನ್ನು ಕರೆಸಿ ಉಟದ ವ್ಯವಸ್ಥೆಯೂ ಇತ್ತು. ಪೂಜೆಯೆಲ್ಲಾ ಮುಗಿಸಿ ಎಲ್ಲಾ ಸರಿಯಾಗಿದೆ. ಇನ್ನೇನು ಯೋಚನೆ ಮಾಡಬೇಡಿ ಎಂದು ಹೇಳಿ ರಾಮಭಟ್ಟರು ಪ್ರಸಾದ ಕೊಟ್ಟಾಗ ನೆರೆದ ಕುಟುಂಬದ ಸದಸ್ಯರಿಗೆಲ್ಲಾ ಯಾವುದೋ ಸಂಕಷ್ಟದಿಂದ ಹೊರಬಂದ ನಿರಾಳ ಭಾವ!!!

                     ದ್ವಿತಿಯಾರ್ದ ಘಟನೆ ಓದಿದ ಮೇಲೆ ನೀವೇ ಹೇಳಿ-ಮೊದಲಾರ್ದ ನಡೆದ ಘಟನೆ ಹೆಗಡೇರು ಕುಟುಂಬದವರಿಗೆ ಗೊತ್ತಾದರೆ ಸಮಾ ಬಯ್ಯುವುದಿಲ್ಲವೇ? ಇಡೀ ಘಟನೆಯನ್ನು ನೋಡಿದ ಎಸ್ಟೇಟ್ ಕೆಲಸಗಾರರು ಮುಸಿಮುಸಿ ನಗುತ್ತಿದ್ದಾರೆ.

                       ಇದೊಂದು ಕೇವಲ ಮತ್ತೊಂದು ನಗೆಬರಹವಾಗಿ ಕೊನೆಯಾಗದಿರಲೆಂದು ಈ ಪ್ಯಾರ- ನಮ್ಮ ಜೀವನದಲ್ಲಿ (ಸಹಜವಾಗಿ ನಡೆಯುವ) ಇಷ್ಟ-ಅನಿಷ್ಟ ಘಟನೆಗಳನ್ನು ನಿರ್ದರಿಸುವುದು ಯಾವುದು??ನಾವು ಹುಟ್ಟಿದ ಸಮಯದಲ್ಲಿನ ಆಕಾಶದಲ್ಲಿನ ಗ್ರಹನಕ್ಷತ್ರಗಳ ಸ್ಥಾನವೇ? (ಸಾಮಾನ್ಯ ಭಾಷೆಯಲ್ಲಿ-ಜಾತಕ,ಕುಂಡಲಿನಿ,Horoscope) ಅಥವಾ ನಮ್ಮ ಅಪ್ಪಂದೋ ಅಮ್ಮಂದೋ ಮಕ್ಕಳದ್ದೋ ಸೋಸೆದೋ ಜಾತಕವಾ? ಅಥವಾ ನಮ್ಮ ಆತ್ಮ ಈಗಿರುವ ದೇಹವನ್ನು ಸೇರುವುದಕ್ಕೆ ಮುಂಚೆ ಹಿಂದಿದ್ದ ಯಾವುದೋ ದೇಹದಲ್ಲಿ ನಡೆಸಿದ ಕರಾಮತ್ತುಗಳೇ? ಅಥವಾ ನಾವು ಕೈಗೊಳ್ಳುವ (ಸಂಖ್ಯಾದರಿತ) ಮಂತ್ರಗಳ ಪಠಣ ಹಾಗು ಹೋಮ ಹವನಗಳಾ? ಅಥವಾ ದೂರದ ಯಾವುದೋ ಒಂದು ದೇವಸ್ಥಾನಕ್ಕೆ ಹೋಗಿ ದರುಶನ ಮಾಡಿ ಚೀಟಿ ಮಾಡಿಸಿ ಸೇವೆ ಕೈಗೊಂಡ ಮೇಲೆ ಕಣ್ಣು ಬಿಟ್ಟು ನಮ್ಮ ಮೇಲೆ ಕೃಪೆತೋರುವ ಆ ದೇವರಾ?(ತೊಂದರೆ ಬಂದಾಗಹೊಗಿಬರ್ತೀವಿ ಅಂತ ಹರಕೆ ಹೊತ್ತರೂ ಸಮಸ್ಯೆ ಪರಿಹಾರವಾಗು(ತ್ತಂ)ತ್ತೆ!!!). ನೀವೇ ಹೇಳಬೇಕು-ಇವೆಲ್ಲವುವಾ ಅಥವಾ ಯಾವುದಾದರೂ ಒಂದಾ ಎರಡಾ ಅಥವಾ ಬೇರೆಯಾವುದಾದಾರಾ??? ಓದಿದವರು ದಯವಿಟ್ಟು ಉತ್ತರಿಸಿ.(ನನ್ನನಿಸಿಕೆಯಂತೆ ಇವೆಲ್ಲಾ ನಮ್ಮ ಇಷ್ಟ-ಅನಿಷ್ಟಗಳ ಮೇಲೆ ಎಳ್ಳಷ್ಟೂ ಪ್ರಭಾವಬೀರುವುದಿಲ್ಲ. ಬದಲಾಗಿ ಅಳುಕುವ ಮನಸ್ಸಿಗೆ ಸ್ವಲ್ಪ ಮಾನಸಿಕ ನೆಮ್ಮದಿ ನೀಡುತ್ತವೆ. ಆದರೆ ಅದಕ್ಕಾಗಿ ತೆರುವ ಬೆಲೆಯೆಷ್ಟು?)

                    ವಿ.ಸೂಮೇಲ್ಮಕ್ಕಿ ಚೌಡಿ ಬಗ್ಗೆ ಹಾಗೆಲ್ಲಾ ಹಗುರವಾಗಿ ಮಾತಾಡಬಾರದಿತ್ತು, ಮೂರ್ನಾಡು ರಾಮಭಟ್ಟರು ತುಂಬಾ ಪ್ರಸಿದ್ದರು, ಅವರ ಬಗ್ಗೆ ನಿಮಗೇನ್ ಗೊತ್ತು-ಎಂದೆಲ್ಲಾ ಕ್ಯಾತೆ ತೆಗೆಯುವವರಿಗಾಗಿ-ಮೇಲೆ ಹೇಳಿದ ಘಟನೆ ಮಾತ್ರ ನೂರಕ್ಕೆ ನೂರು ಸತ್ಯ. ಪಾತ್ರಗಳು ಹಾಗು ಸ್ಥಳಗಳ ಹೆಸರು ಬದಲಿಸಲಾಗಿದೆ ಅಷ್ಟೆ.                           

      ಇತ್ತೀಚಿಗೆ ನನ್ನ ಬ್ಲಾಗ್(http://machikoppa.blogspot.com/)ನಲ್ಲಿ ಬರೆದ ಒಂದು ಲೇಖನ. ಬನ್ನಿ, ಒಮ್ಮೆ ಬ್ಲಾಗ್ ನೋಡಿ.

Comments