ಸ್ವಗತ

ಸ್ವಗತ

ಇಂದು ಕೊನೆಗೂ ನಿನ್ನ ಆಸೆ ಈಡೇರಿಸಲು ನಾನು ಬರೆಯಲು ಹೊರಟಿರುವ ಈ ಬರಹವನ್ನು ಪ್ರಾರಂಭಿಸುವ ಮೊದಲು ನನ್ನ ಮನದಲ್ಲಿ ದುಗುಡ, ನ್ಯಾಯ ಸಲ್ಲಿಸಬಲ್ಲೆನೇ? ಇನ್ನೊಬ್ಬರನ್ನು ಮೆಚ್ಚಿಸಲೆಂದೇ ಬರೆದು ಸ್ವಂತದ ಖುಶಿಗೆ ಬರೆವೆನೆಂಬ ಆಷಾಢಭೂತಿತನಕ್ಕೆ ಮತ್ತು ಇನ್ನೊಬ್ಬರ ಭಾವನೆಗಳನ್ನು ಕದ್ದು ಕಾಗದಕ್ಕಿಳಿಸಿ ಓದುವವರಿಗೆ ಸಂತೋಷವನ್ನೋ ಅಥವಾ ನೋವನ್ನೋ ಕೊಡುವ ಸೃಜನಶೀಲ ಪರಂಪರೆಗೆ ನಿನ್ನನ್ನೂ ಸಲ್ಲಿಸುತ್ತಿದ್ದೇನೆಯೇ, ಗೊತ್ತಿಲ್ಲ. ಆದರೆ ನಿನ್ನ ಬಗ್ಗೆ ಬರೆಯಲೇ ಬೇಕು ಎಂದು ತೀರ್ಮಾನಿಸಿದ್ದೇನೆ. ಏಕೆಂದರೆ ಬದುಕು ಇಂದು ತಂದೊಡ್ಡಿರುವ ಕವಲುಗಳಲ್ಲಿ ಇನ್ನು ಮುಂದೆ ನಿನ್ನ ಬಗ್ಗೆ ಬರೆಯಬಲ್ಲೆನೋ.. ನನಗೇ ಗೊತ್ತಿಲ್ಲ.

ಇಷ್ಟಕ್ಕೂ ಅಕ್ಕ ನಿನ್ನ ಬಗ್ಗೆ ಹೇಳಿದಾಗ ನನಗೆ ಮೊತ್ತ ಮೊದಲ ಬಾರಿಗೆ ಹೆಣ್ಣೊಬ್ಬಳಲ್ಲಿ ಕುತೂಹಲ ಬಂದಿತ್ತು. ಅವಳ ಬ್ಯಾಚ್ ಮೇಟ್ ಆಗಿದ್ದರೂ ನಿನಗೆ ನನ್ನೊಡನೆ ಮಾತನಾಡಬೇಕೆಂಬ ಆಸೆಯಿದೆ ಎಂದು ಹೇಳಿದಾಗ ನನಗೇನೋ ಹೇಳಲಾರದ ಭಾವನೆ. ಅಲ್ಲಿಯವರೆಗೆ ಹುಡುಗಿಯೆಂದರೆ ಯಾವುದೋ ಭಯಾನಕ ಸ್ವಪ್ನದಂತೆ ಬೆಚ್ಚಿಬೀಳುತ್ತಿದ್ದ ನನಗೆ ಬಸ್ಸಿನಲ್ಲಿ ನಿನ್ನ ನೋಡಲೇ ಬೇಕೆಂದೆನಿಸಿತ್ತು. ಅದಕ್ಕಾಗಿ ಮಾರನೇ ದಿನ ನನ್ನ ಕಣ್ಣುಗಳು ನಿನಗಾಗಿ ಹುಡುಕಾಡಲಿದ್ದವು, ಆದರೆ ಬಸ್ ಹತ್ತುವ ವೇಳೆಗೆ ನೀನು ನನ್ನ ನೋಡಿ ಮುಗುಳ್ನಕ್ಕಾಗ ಆ ಹುಡುಗಿ ನೀನೇ ಎಂದು ಅರಿವಾಯಿತು.

ಹಾಗೆ ಹೀಗೆ ಮಾತಾಡುತ್ತಾ ಬೆಳೆದ ನಮ್ಮ ಸ್ನೇಹ ನಾನೂ ಊಹಿಸದಷ್ಟು ಗಾಢವಾಗಿ ಬೆಳೆದದ್ದು ಹೇಗೋ ನನಗೀಗಲೂ ಆಶ್ಚರ್ಯವಾಗುತ್ತದೆ. ಪದವಿಯಲ್ಲಿ ಕಲಿಯುತ್ತಿದ್ದ ನೀನು, ಹತ್ತನೆಯಲ್ಲಿ ಕಲಿಯುತ್ತಿದ್ದ ನಾನು ಬೆಳಗ್ಗೆ ಮಾತನಾಡೋ ಹರಟೆಗಳಿಗೆ ನಿನ್ನ ಗೆಳತಿಯರೂ ಜೊತೆಗಾಗಿದ್ದು ಹದಿನೈದು ನಿಮಿಷದ ಸ್ಕೂಲಿನ ನಡಿಗೆಯನ್ನೇ ಮರೆಸಿಬಿಡುತ್ತಿತ್ತು. ಅಂತರ್ಮುಖಿಯಾಗಿ ನನ್ನದೇ ಲೋಕದಲ್ಲಿರುತ್ತಿದ್ದವ ಮನಸ್ಸಿನ ಭಾವನೆಗಳನ್ನೂ ಮುಕ್ತವಾಗಿ ಮೊದಲು ಹಂಚಿಕೊಂಡದ್ದು ನಿನ್ನೊಡನೆಯೇ. ವಯಸ್ಸಿನ ಕಾರಣ ಹಾಗೆ ಬದಲಾದೆನೋ ಅಥವಾ ನೀನು ನನ್ನನ್ನ ಪರಿವರ್ತಿಸಿದೆಯೋ?

ಎಷ್ಟೋ ಸಲ ಅನಿಸುತ್ತಿತ್ತು ನಾವಿಬ್ಬರೂ ರಾಧಾ ಕೃಷ್ಣರಂತೆ ಎಂದು. ಅಧ್ಯಾತ್ಮಿಕ ಅನುರಾಗ! ಆದರೆ ರಾಧಾಕೃಷ್ಣರ ಸಂಬಂಧ ನಿಜವಾಗಿಯೂ ಇತ್ತೋ ಅಥವಾ ನಂತರ ಬದಲಾದ ಸಾಮಾಜಿಕ ಸ್ಥಿತಿಗತಿಗಳಲ್ಲಿ ಅದೂ ಸೃಷ್ಟಿಯಾಗಿ ಪುರಾಣವೆನ್ನುವ ಭಾಗದಲ್ಲಿ ಸೇರ್ಪಡೆಗೊಂಡಿತೋ ಗೊತ್ತಿಲ್ಲ. ಏಕೆಂದರೆ ನಾವು ಬದುಕುವ ಈ ಲೋಕದಲ್ಲಿ ಸಾಮಾನ್ಯ ವ್ಯಕ್ತಿಯೂ ಕೂಡ ವೈಭವೀಕರಿಸಲ್ಪಟ್ಟು ದಂತಕತೆಯಾಗುವ ಪರಿಯನ್ನೂ ನೀ ನೆನಪಿಗೆ ಕೊಟ್ಟ ’ಸರಸಮ್ಮನ ಸಮಾಧಿ’ಯಿಂದಲೇ ಅರಿತೆ. ಒಂದು ರೀತಿ ಧರ್ಮದ ಮೂಲ ಬಂಡವಾಳವೂ ಅದೇ ಅಲ್ವಾ.. ಏನು ತುಂಬಾ ದೊಡ್ಡದು ದೊಡ್ಡದು ಮಾತಾಡ್ತಾ ಇದ್ದಾನೆ ಅಂದ್ಕೊಳ್ತಿದ್ದಿಯೇನೋ.. ಇರಲಿ ಬಿಡು.

ನೀನೇ ಹೇಳುವಂತೆ ನಿನ್ನೆಲ್ಲಾ ನೋವುಗಳನ್ನು ಮರೆಸುವಂಥ ಗೆಳೆಯ ನಾನಾಗಿದ್ದೆ. ಆದರೆ ನೀನಿದನ್ನು ಹೇಳಿದಾಗಲೂ ನಾನು ಒಮ್ಮೆಯೂ ನಿನ್ನ ನೋವು ಏನು ಎಂದು ಕೇಳಲಿಲ್ಲ. ಅಪ್ಪನೂ ಇಲ್ಲದೆ, ಅಣ್ಣ ಏನು ಎತ್ತ ಅಂತ ಇಲ್ಲದೆ ಅದೂ ಊರಿನಲ್ಲಿ ಬದುಕುವುದು ಹೇಗೆಂದು ಈಗ ಅರ್ಥವಾಗುತ್ತದೆ ನೋಡು. ನಿನ್ನ ನೋವುಗಳಿಗೆ ಸ್ಪಂದಿಸಲಾರದಷ್ಟು ಸ್ವಾರ್ಥಿಯಾಗಿದ್ದೆನೇ? ಆದರೂ ನಮ್ಮ ನಡುವಿದ್ದ ಸಂಬಂಧ ಗಟ್ಟಿಯಾಗೇ ಇತ್ತು. ಆಗ ಹತ್ತನೇ ತರಗತಿ ಮುಗಿಸುವ ವೇಳೆಗೆ ಕೊನೆಯ ದಿನ ನಿನ್ನ ಮುಖದಲ್ಲಿ ಅಳುವಿದ್ದುದನ್ನೂ ನನ್ನ ಗೆಳೆಯನೇ ಹೇಳಿದ್ದರಿಂದ ಗೊತ್ತಾಯಿತು. ಮತ್ತೆ ನೀನು ಕೊಟ್ಟ ಪತ್ರದಲ್ಲಿ ನಿನ್ನ ಮನಸ್ಸಿನ ಸಂವೇದನೆಗಳನ್ನು ಓದುತ್ತಾ ನನಗೇನು ಹೇಳಬೇಕೋ ಗೊತ್ತಾಗಲಿಲ್ಲ. ಅಷ್ಟು ಸಣ್ಣ ವಯಸ್ಸಿಗೆ ನಿನ್ನ ಪ್ರೀತಿಯ ಡೋಸೇಜ್ ತುಂಬಾ ಹೆಚ್ಚಾಯಿತು ಅಥವಾ ಅದಕ್ಕೆ ನಾನು ಅರ್ಹನಾಗಿರಲಿಲ್ಲ. ಇಲ್ಲವಾದಲ್ಲಿ ಮತ್ತೆ ಮತ್ತೆ ಕ್ಷುಲ್ಲಕ ಕಾರಣಗಳನ್ನಿಟ್ಟುಕೊಂಡು ನೀನು ನಿನ್ನ ಮನದ ಭಾವನೆಗಳನ್ನು ಬರೆದು ಕೊಡುತ್ತಿದ್ದ ಕವಿತೆಗಳನ್ನು ಅಪಾರ್ಥ ಮಾಡಿಕೊಂಡು ನಿನ್ನೊಡನೆ ಜಗಳ ಮಾಡಿ ಎಲ್ಲರೂ ಸ್ವಾರ್ಥಿಗಳೇ ಎಂಬುದನ್ನು ನಿನಗೆ ತೋರಿಸಿಕೊಡುತ್ತಿದ್ದೆನೇ?

ಆದರೂ ನನ್ನೊಡನೆ ಮಾತನಾಡಬೇಕೆಂಬ ಬಿಡದ ನಿನ್ನ ಹಂಬಲ, ಪರಮಾಪ್ತ ಗೆಳೆಯನೆಂಬ ನಿನ್ನ ವಿಶ್ವಾಸಗಳೆಲ್ಲಾ ಮತ್ತೆ ನಿನ್ನ ಸನಿಹಕ್ಕೆ ಕರೆತಂದವು. ಪಿಯೂ ಮುಗಿಯುತ್ತಿದ್ದಂತೆ ನನ್ನ ನಿನ್ನ ನಡುವಿದ್ದ ಪ್ರೀತಿ ಕಡಿಮೆಯಾಗದಿದ್ದರೂ ಸಂಪರ್ಕ ಕಡಿದೇ ಹೋಯಿತು. ಬದುಕಿನ ವಿಪರ್ಯಾಸಗಳನ್ನು, ಅದು ಕೊಡುವ ನೋವುಗಳನ್ನೂ ಕೇಳಿದರೂ ನನಗೆ ನಿನಗೆ ಸಮಾಧಾನ ಮಾಡಲೂ ಆಗಲಿಲ್ಲ. ಮತ್ತೆ ಮತ್ತೆ ನಿನ್ನ ಸಂಪರ್ಕಿಸಲು ಪ್ರಯತ್ನಿಸಿದಾಗಲೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಹಳೆ ನೆನಪುಗಳನ್ನು, ನೀನು ಮರೆಯಬೇಕೆನ್ನುವ ವಿಷಯಗಳನ್ನು ನೆನಪಿಸುತ್ತಾ, ನಿನಗೆ ನಾನು ನನ್ನ ದೃಷ್ಟಿಯಲ್ಲಿ ಅಪರಾಧಿಯಾಗುತ್ತಾ ಸಾಗಿದ್ದೇನೆ. ಅದರಲ್ಲೂ ಕಳೆದ ವರ್ಷ ’ನೀನು ಇದನ್ನೆಲ್ಲಾ ಯಾಕೆ ಕೇಳ್ತಾ ಇದ್ದಿ’ ಎಂದು ನೋವಿನಿಂದ ಹೇಳಿದಾಗ ನಾನೇಕೋ ನಿನಗೆ ನೋವು ಕೊಡಲೆಂದೇ ಹುಟ್ಟಿದವನೋ ಎಂದೆನಿಸಿತು. ಅದರ ನಂತರ ನಿನಗೆ ಕರೆ ಮಾಡಲಿಲ್ಲ. ಮೊನ್ನೆ ಊರಿಗೆ ಬಂದಿದ್ದಾಗ ನಿನ್ನ ಅಮ್ಮ ತೀರಿಕೊಂಡದ್ದು ಕೇಳಿ ಖೇದವೆನಿಸಿತು. ಆಗಲೂ ಏನೆಂದು ನಿನ್ನನ್ನು ಎದುರಿಸಲಿ ಎನಿಸಿತು.  ಅದಕ್ಕೆ ಭೇಟಿ ಮಾಡದೆ ಮರಳಿ ಬಂದೆ.

ನಿನ್ನ ಕಷ್ಟಗಳಲ್ಲೆಲ್ಲಾ ನಿನ್ನ ಆಪ್ತ ಗೆಳೆಯನಾದ ನಾನು ನಿನ್ನ ಜೊತೆಗಿರಬೇಕಿತ್ತು. ನಿನ್ನ ದುಃಖಕ್ಕೆ ಸಮಾಧಾನಿಸುವ ಹೆಗಲಾಗಬೇಕಿತ್ತು. ಆದರೆ ಒಮ್ಮೆಯೂ ಇರದ ಪಾಪಿ ನಾನು. ಬಹುಶಃ ನೀನೆಷ್ಟೇ ಸಮಾಧಾನಪಡಿಸಿದರೂ ಆ ಭಾವನೆ ನನ್ನಿಂದ ಹೋಗದು. ಯಾರಿಂದ ನಾನು ಇಷ್ಟು ಬದಲಾದೆನೋ ಅವಳ ಬದುಕನ್ನು ಬಿಟ್ಟು ಉಳಿದವರೊಡನೆ ನಾನು ಈಗ ಒಬ್ಬರ ಸಮಸ್ಯೆ ಅರ್ಥ ಮಾಡಿಕೊಂಡು ಪರಿಹಾರ ನೀಡಲು ಯತ್ನಿಸುವ ಸಹೃದಯಿ, ನಂಬಬಹುದಾದ ವ್ಯಕ್ತಿ. ಆದರೆ ವಿಪರ್ಯಾಸವೆಂದರೆ ನಿನ್ನ ವಿಷಯದಲ್ಲಿ ನನಗೇನೂ ಮಾಡಲಾಗುತ್ತಿಲ್ಲ. ಬಹುಷಃ ನನ್ನ ಬದುಕಿನ ಅತಿ ದೊಡ್ಡ ದುರಂತವೆಂದರೆ ಇದೇ.

ಕೊನೆಯದಾಗಿ, ನಿನ್ನ ಬಗ್ಗೆ ಬರೆದು ನಿನಗೆ ನ್ಯಾಯ ಸಲ್ಲಿಸುವೆನೆಂಬ ಭರವಸೆ ನನ್ನಲ್ಲಿಲ್ಲ. ಏಕೆಂದರೆ ಇದನ್ನು ಬರೆಯುವ ಮುನ್ನ ಇದ್ದ ದುಗುಡ ಹೆಚ್ಚಾಗಿದೆಯೇ ಹೊರತು ಕಡಿಮೆಯಾಗಲಿಲ್ಲ. ಬಹುಶಃ ಆಗುವುದೂ ಇಲ್ಲ. ಇನ್ನೂ ಎಷ್ಟೋ ವಿಷಯಗಳನ್ನು ಹೇಳಲಿಕ್ಕಿದೆ, ಅದಕ್ಕೆ ಲಿಖಿತ ರೂಪ ಬೇಡವೆನಿಸುತ್ತದೆ. ಒಂದು ಮಾತು ಮಾತ್ರ ನಿಜ. ನನ್ನ ಬದುಕು ಬದಲಿಸಿದವಳು ನೀನು, ನನ್ನ ವ್ಯಕ್ತಿತ್ವವೆಂದು ಕರೆಯುವ ಹೊರನೋಟದಲ್ಲಿ ನೀನು ಹಚ್ಚಿದ ಬಣ್ಣದ ಮೆರುಗು ತುಂಬಾ ಹೆಚ್ಚು. ಆ ಮೂಲಕ ನೀನು ನನ್ನೊಳಗೆ ಎಂದಿಗೂ ಶಾಶ್ವತ! ಸದ್ಯಕ್ಕೆ ಇಷ್ಟು ಮಾತ್ರ ಹೇಳಬಲ್ಲೆ, ಅದೂ ನಿನಗಲ್ಲ! ಆದರೆ ಮುಂದೊಮ್ಮೆ ಖಂಡಿತವಾಗಿಯೂ ನಿನಗೆ ಇದನ್ನೆಲ್ಲಾ ಹೇಳುವೆ.

Rating
No votes yet

Comments