ಲಕ್ಷ್ಮೀ ಚೇಳು

Submitted by devaru.rbhat on Tue, 11/30/2010 - 16:44

ಚೇಳುಗಳು ಮಲೆನಾಡಿನಲ್ಲಿ ಮಳೆಗಾಲ ಕಳೆದು ಚಳಿಗಾಲ ಪ್ರಾರಂಭದಲ್ಲಿ, ಬಿರು ಬೇಸಿಗೆಗಳ ಸಂಜೆ ಸಮಯದಲ್ಲಿ ಕಾಣಬರುತ್ತವೆ. ಈ ಚಿತ್ರದಲ್ಲಿರುವ ಚೇಳಿಗೆ ನಮ್ಮಲ್ಲಿ ಕೆಂಪು ಬೆಣ್ಣೆ ಚೇಳು ಅಥವಾ ಲಕ್ಷ್ಮೀ ಚೇಳು ಎಂದು ಕರೆಯುತ್ತಾರೆ. ಇದು ಲಕ್ಷ್ಮಿಯ ಪ್ರತೀಕ ಎನ್ನುವ ಭಾವನೆ ನಮ್ಮಲ್ಲೆಲ್ಲಾ ಇದೆ. ಹಾಗಾಗಿ ಇದು ಮನೆಗೆ ಬಂದರೆ ಅದಕ್ಕೆ ಮೊದಲು ಅರಿಷಿನ ಕುಂಕುಮಗಳನ್ನು ಹಾಕಿ ನಂತರ ಅದನ್ನು ಅಕ್ಕಿ ವನಿಯುವ ಮರ ಗಳಲ್ಲಿ (ವಂದರಿಗಳಲ್ಲಿ) ಹಿಡಿದು ಹೊರಗೆ ಬಿಟ್ಟು ಬರುವುದು ವಾಡಿಕೆ. ಹಾಗೇ ಈ ಚಿತ್ರದಲ್ಲಿಯೂ ಚೇಳಿನ ಮೇಲೆ ಅರಿಷಿಣ ಕುಂಕುಮ ಹಾಕಿರುವುದನ್ನು ಕಾಣಬಹುದು. ಇದು ಕಂಡು ಬರುವುದು ಸ್ವಲ್ಪ ಅಪರೂಪವೇ ಸರಿ. ಬೇರೆಲ್ಲಾ ಚೇಳುಗಳನ್ನು ನಿರ್ದಯವಾಗಿ ಹೊಡೆದು ಸಾಯಿಸಿದರೂ ಇದನ್ನು ಮಾತ್ರಾ ಸಾಯಿಸುವವರು ಕಡಿಮೆ.

ಹಾಗಂತ ಇದು ಕಚ್ಚಿದರೂ ಸಹ ಸುಮಾರು 24 ಗಂಟೆಗಳ ಕಾಲ ಉರಿ ಇದ್ದೇ ಇರುತ್ತದೆ. (ನನಗೂ ಕಚ್ಚಿಸಿಕೊಂಡ ಅನುಭವ ಇದೆ) ಇದು ಕಚ್ಚಿದಾಗ ಉರಿ ಕಡಿಮೆ ಗೊಳಿಸಲು ಹಿಂದೆ ಹಣ್ಣಕೆಯ ರಸವನ್ನು ತೆಗೆದು ಗಾಯಕ್ಕೆ ಹಾಕುವುದು, ಎಲೆ ಅಡಿಕೆ ಬಾಯಲ್ಲಿ ಅಗಿದು ಅದರ ರಸವನ್ನು ಗಾಯದ ಜಾಗಕ್ಕೆ ಹಾಕುವುದು ಮಾಡುತ್ತಿದ್ದುದು ನನಗೆ ಅನುಭವಿಸಿದ ನೆನೆಪು.

ಇದೇ ರೀತಿಯ ಚೇಳುಗಳು ಬಯಲು ಸೀಮೆಗಳಲ್ಲಿ ಇರುವಂಥವುಗಳು ಮಾರಣಾಂತಿಕ ಎಂದು ಹೇಳುತ್ತಾರೆ. ನಮ್ಮ ಕಡೆಗಳಲ್ಲಿ ಮಾತ್ರಾ ಹಾಗೇನಿಲ್ಲ. ಒಂದು ದಿನಗಳ ಕಾಲ ಉರಿ ತಡೆಯುವುದು ಮಾತ್ರಾ ಕಷ್ಟದ ಕೆಲಸವೇ ಸರಿ. 

Rating
No votes yet

Comments