ಸೇವಾ ಪುರಾಣ -27:ಹೊಳೆನರಸಿಪುರ - ಅನುಭವ ಭರಪೂರ -1
ಹೊಳೆನರಸಿಪುರ - ಅನುಭವ ಭರಪೂರ
ಒಳಗೂ ನರಸಿಪುರ, ಹೊರಗೂ ನರಸಿಪುರ
ತ್ರಿಕುಟಾಚಲವೆಂದು ಕರೆಯಲ್ಪಡುತ್ತಿದ್ದ ಹೊಳೆನರಸಿಪುರ ಪ್ರಸಿದ್ಧ ಹೇಮಾವತಿ ನದಿ ತಟದಲ್ಲಿರುವುದರಿಂದ ಮತ್ತು ಲಕ್ಷ್ಮಿನರಸಿಂಹನ ಭವ್ಯ ದೇವಾಲಯದ ಕಾರಣದಿಂದ ಊರಿಗೆ ನರಸಿಂಹಪುರ, ನರಸಿಪುರ, ಹೊಳೆನರಸಿಪುರ ಎಂಬ ಹೆಸರು ಬರಲು ಕಾರಣವಾಗಿದೆ. ಒಂದೊಮ್ಮೆ ಐತಿಹಾಸಿಕವಾಗಿ, ಪೌರಾಣಿಕವಾಗಿ, ಧಾರ್ಮಿಕವಾಗಿ ಅನೇಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆಗರವಾಗಿದ್ದ ಈ ಹೊಳೆನರಸಿಪುರ ಎಂದರೆ ಈಗ ಎಲ್ಲರಿಗೂ ನೆನಪಿಗೆ ಬರುವುದೆಂದರೆ ಅಲ್ಲಿನ ರಾಜಕೀಯ. ಇಷ್ಟವಿರಲಿ ಇಲ್ಲದಿರಲಿ ಆ ತಾಲ್ಲೂಕಿನ ಜನರಿಗೆ ಒಂದಲ್ಲಾ ಒಂದು ರೀತಿಯಲ್ಲಿ ರಾಜಕೀಯದ ಝಳ ತಾಕುತ್ತಲೇ ಇರುತ್ತದೆ. ಇಂತಹ ಸ್ಥಿತಿಗೆ ಕಾರಣಕರ್ತರಾದವರ ಬಗ್ಗೆ ಹೊಸದಾಗಿ ತಿಳಿಸುವ ಅಗತ್ಯ ಕಾಣುವುದಿಲ್ಲ. ಒಂದೊಂದು ಊರಿಗೆ ಅದರದೇ ಆದ ವೈಶಿಷ್ಟ್ಯವಿರುತ್ತದೆ, ಉದಾ: ಕಳ್ಳ ಅರಸಿಕೆರೆ, ಸುಳ್ಳು ಬಾಣಾವರ, ಹೊನ್ನಾಳಿ ಹೊಡೆತ, ಇತ್ಯಾದಿಗಳಂತೆ ಹೊಳೆನರಸಿಪುರಕ್ಕೆ ಒಳಗೂ ನರಸಿಪುರ, ಹೊರಗೂ ನರಸಿಪುರ ಎಂಬ ಖ್ಯಾತಿ ಅಂಟಿಕೊಂಡಿದೆ. ಪಟ್ಟಣವನ್ನು ಆಳುತ್ತಿದ್ದ ಪಾಳೆಯಗಾರನ ವಿರುದ್ಧ ಆತನ ಆಪ್ತರೇ ಸಂಚು ಹೂಡಿ ಪಕ್ಕದ ಸಾಮಂತನೊಂದಿಗೆ ಕೈಜೋಡಿಸಿ ಯುದ್ಧ ನಡೆಯುವಂತೆ ಮಾಡಿದ್ದರು. ಪಾಳೆಯಗಾರ ಕೋಟೆಯ ರಕ್ಷಣೆಗಾಗಿ ಹೋರಾಡಲು ನೋಡಿದರೆ ವಿರುದ್ಧವಾಗಿ ಕಾದಾಡುವವರ ಜೊತೆಗೆ ನರಸಿಪುರದ ಸೈನಿಕರೂ ಇದ್ದರು. ತಮ್ಮವರ ಜೊತೆಗೆ ತಮ್ಮವರೇ ಕಾದಾಡಬೇಕಾಗಿ ಬಂದ ಪ್ರಸಂಗದಿಂದ ಒಳಗೂ ನರಸಿಪುರ, ಹೊರಗೂ ನರಸಿಪುರ ಎಂಬ ಮಾತು ಆಗ ಚಾಲ್ತಿಗೆ ಬಂದಿತು. ರಾಜಕೀಯ ನಾಯಕರುಗಳ ನಡವಳಿಕೆಗಳು ಈ ಮಾತಿಗೆ ಪುಷ್ಟಿ ನೀಡುತ್ತಿದೆಯಲ್ಲವೇ? ಈ ಖ್ಯಾತಿಯ ಹೊಳೆನರಸಿಪುರ ನನಗೆ ಅನೇಕ ರೀತಿಯ ಅನುಭವಗಳನ್ನು ನೀಡಿದ ಊರು.
ಜೈಲಿನ ಕೈದಿಯಾಗಿದ್ದವನು ಜೈಲು ಸೂಪರಿಂಟೆಂಡೆಂಟ್ ಆದದ್ದು
ಹೊಳೆನರಸಿಪುರದ ತಾಲ್ಲೂಕು ಕಛೇರಿಯಲ್ಲಿ ಉಪತಹಸೀಲ್ದಾರ್ ಆಗಿ ಕರ್ತವ್ಯಕ್ಕೆ ಹಾಜರಾದಾಗ ನನಗೆ ಇನ್ನೊಂದು ಜವಾಬ್ದಾರಿ ಸಹ ನಿರ್ವಹಿಸಬೇಕಾಯಿತು. ಅದೆಂದರೆ ಹೊಳೆನರಸಿಪುರದ ಜೈಲಿನ ಸೂಪರಿಂಟೆಂಡೆಂಟ್ ಕೆಲಸ. ಆಗ ಕರ್ನಾಟಕದಲ್ಲಿದ್ದ ಜೈಲುಗಳ ಪೈಕಿ ೨೨ ಉಪಕಾರಾಗೃಹಗಳನ್ನು ಕಂದಾಯ ಇಲಾಖೆಯ ಮೇಲ್ವಿಚಾರಣೆಗೆ ಒಳಪಡಿಸಲಾಗಿತ್ತು. ಆ ಪೈಕಿ ಹೊಳೆನರಸಿಪುರದ ಕಾರಾಗೃಹವೂ ಒಂದಾಗಿತ್ತು. ಉಪತಹಸೀಲ್ದಾರರು ಪದನಿಮಿತ್ತ ಜೈಲು ಸೂಪರಿಂಟೆಂಡೆಂಟ್ ಆಗಿರುತ್ತಿದ್ದರು. ಆ ಕೆಲಸಕ್ಕಾಗಿ ಅವರಿಗೆ ಗೌರವ ವೇತನವಾಗಿ ತಿಂಗಳಿಗೆ ೨೫ ರೂ. ಕೊಡಲಾಗುತ್ತಿತ್ತು. ಅವರಿಗೆ ಸಹಾಯಕನಾಗಿ ಒಬ್ಬ ತಾಲ್ಲ್ಲೂಕು ಕಛೇರಿಯ ನೌಕರರ ಸೇವೆಯನ್ನೇ ಬಳಸಿಕೊಳ್ಳಬೇಕಾಗಿದ್ದು ಅದಕ್ಕಾಗಿ ಆ ಸಹಾಯಕನಿಗೆ ಹತ್ತು ರೂ. ಸಂಭಾವನೆ ಕೊಡಲಾಗುತ್ತಿತ್ತು. ೧೩ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಿದ ೬ ತಿಂಗಳು ಜೈಲಿನಲ್ಲಿ ಕಳೆದಿದ್ದ ಕೈದಿಯೊಬ್ಬ ಜೈಲಿನ ಸುಪರಿಂಟೆಂಡೆಂಟ್ ಆಗಿ ಕಾರ್ಯ ನಿರ್ವಹಿಸುವ ಅವಕಾಶ ಎಲ್ಲರಿಗೂ ಸಿಗಲಾರದು. ಅಂತಹ ಅವಕಾಶ ನನಗೆ ಒದಗಿತ್ತು. ಜೈಲಿನ ಗಾರ್ಡುಗಳು ಪೋಲಿಸ್ ಇಲಾಖೆಯಿಂದ ಎರವಲು ಸೇವೆಯ ಮೇಲೆ ಕೆಲಸ ಮಾಡುತ್ತಿದ್ದರು. ಕೈದಿಗಳಿಗೆ ಆಹಾರ ಸಾಮಗ್ರಿಗಳನ್ನು ಟೆಂಡರ್ ಪಡೆದಿದ್ದ ಗುತ್ತಿಗೆದಾರರು ಒದಗಿಸುತ್ತಿದ್ದರು. ಒಟ್ಟಿಗೆ ಎಂಟು ಕೈದಿಗಳಿಗೆ ಅಲ್ಲಿ ಸ್ಥಳಾವಕಾಶವಿತ್ತು.
ಪ್ರಾರಂಭಿಕ ಸಂಘರ್ಷ
ಜೈಲಿನ ಗಾರ್ಡುಗಳು ಪೋಲಿಸ್ ಇಲಾಖೆಯವರಾಗಿದ್ದು ಠಾಣೆಯ ಸಬ್ ಇನ್ಸ್ಪೆಕ್ಟರರು ಸರತಿಯಂತೆ ಅವರನ್ನು ಬದಲಾಯಿಸುತ್ತಿದ್ದರು. ಗಾರ್ಡುಗಳ ವೇತನ ಠಾಣೆಯಲ್ಲಿಯೇ ಪಾವತಿಯಾಗುತ್ತಿತ್ತು. ಹೀಗಾಗಿ ಆಡಳಿತಾತ್ಮಕವಾಗಿ ಅವರನ್ನು ನಿಯಂತ್ರಿಸುವುದು ಸುಲಭದ ಕೆಲಸವಾಗಿರಲಿಲ್ಲ. ಹೆಚ್ಚಾಗಿ ಜೈಲಿನ ಕೆಲಸ ಮಾಡಲು ಪೋಲಿಸರು ಇಷ್ಟಪಡುತ್ತಿರಲಿಲ್ಲ. ನಾನು ಜೈಲಿನ ಅಧೀಕ್ಷಕನಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಗಾರ್ಡುಗಳ ಕುಮ್ಮಕ್ಕಿನೊಂದಿಗೆ ಅಲ್ಲಿನ ಕೈದಿಗಳು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಕೊಡುತ್ತಿದ್ದ ಆಹಾರ ಕಡಿಮೆ ಮತ್ತು ಕಳಪೆ ಎಂಬ ಕಾರಣದಿಂದ ಅಂದು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದ ಕೈದಿಗಳನ್ನು ಅವರು ಬರುವುದಿಲ್ಲ ಎಂದು ಹೇಳುತ್ತಿದ್ದಾರೆಂದು ಗಾರ್ಡುಗಳು ನನಗೆ ತಿಳಿಸಿದರು. ಅವರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವುದು ಪೋಲಿಸರಿಗೆ ಕಷ್ಟವೇನಾಗಿರಲಿಲ್ಲ. ಆದರೆ ಅವರದೇ ಕುಮ್ಮಕ್ಕಿದ್ದುದರಿಂದ ಕರೆದೊಯ್ದಿರಲಿಲ್ಲ ಎಂದು ನನಗೆ ಅರ್ಥವಾಗಿತ್ತು. ಒಳ ಉದ್ದೇಶ ಜೈಲು ಸುಪರಿಂಟೆಂಡೆಂಟರು ತಾವು ಹೇಳಿದಂತೆ ಕೇಳುವಂತೆ ಮಾಡಬೇಕೆಂಬುದಾಗಿತ್ತು. ತಹಸೀಲ್ದಾರರ ಮಧ್ಯಪ್ರವೇಶಕ್ಕೆ ನಾನು ಕೋರಿದರೆ ಅವರು ನೀನುಂಟು, ನಿನ್ನ ಜೈಲುಂಟು ಎಂದಿದ್ದರು. ಮಧ್ಯಾಹ್ನದ ವೇಳೆಗೆ ನ್ಯಾಯಾಲಯದಿಂದ ನನಗೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಕೈದಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೆ ಇದ್ದುದಕ್ಕೆ ಕಾರಣ ವಿವರಿಸಲು ನೋಟೀಸು ಬಂದಿತು. ನಾನು ಅಂದು ಸಾಯಂಕಾಲವೇ ನ್ಯಾಯಾಲಯದ ಕಲಾಪ ಮುಗಿದ ನಂತರ ನ್ಯಾಯಾಧೀಶರ ಅನುಮತಿ ಪಡೆದು ಅವರನ್ನು ಅವರ ಛೇಂಬರಿನಲ್ಲೇ ಭೇಟಿ ಮಾಡಿ ವಿವರಣೆ ನೀಡಿದೆ. ನಾನು ಆಗಿನ್ನೂ ಅಧಿಕಾರ ವಹಿಸಿಕೊಂಡಿದ್ದು ಸಂಬಂಧಿಸಿದವರೊಂದಿಗ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿಯೂ, ವಿಷಯ ಮುಂದುವರೆಸಬಾರದೆಂದು ಮಾಡಿಕೊಂಡ ಮನವಿಯನ್ನು ಅವರು ಪುರಸ್ಕರಿಸಿದರು. ಅಲ್ಲಿಂದ ಬಂದವನೇ ಪೋಲಿಸ್ ಇನ್ಸ್ಪೆಕ್ಟರರನ್ನು ಕಂಡು ಮಾತನಾಡಿದೆ. ವಿಷಯ ಅರಿತ ಅವರು ಗಾರ್ಡುಗಳಿಗೆ ಗದರಿಸಿದರಲ್ಲದೆ ಜೈಲಿನಲ್ಲಿದ್ದ ಕೈದಿಗಳಿಗೆ ಪೋಲಿಸ್ ಭಾಷೆಯಲ್ಲೇ ಧಮಕಿ ಹಾಕಿದಾಗ ಅವರು ತೆಪ್ಪಗಾದರು ಮತ್ತು ಸತ್ಯಾಗ್ರಹ(?) ಮುಗಿಸಿದರು. ನಂತರ ಆಹಾರ ಸರಬರಾಜು ಮಾಡುವ ಗುತ್ತಿಗೆದಾರನನ್ನು ಕರೆದು ವಿಚಾರಿಸಿದೆ. ಸರಬರಾಜಾಗುವ ಆಹಾರ ಸಾಮಗ್ರಿಗಳಲ್ಲಿ ಪೋಲಿಸರಿಗೂ ಭಾಗ ಕೊಡಬೇಕಾಗಿದ್ದ ಬಗ್ಗೆ ಆತ ತಿಳಿಸಿದ. ಈ ಸಂಗತಿ ನನ್ನ ಅನುಭವದಿಂದಲೇ ತಿಳಿದಿದ್ದ ನಾನು ಕಟ್ಟುನಿಟ್ಟಾಗಿ ಯಾವುದೇ ಕಾರಣಕ್ಕೂ ಕೈದಿಗಳಿಗೆ ಕೊಡಬೇಕಾದ ಪ್ರಮಾಣ ಕಡಿತವಾಗಬಾರದು ಎಂದು ಎಚ್ಚರಿಕೆ ನೀಡಿದ್ದಲ್ಲದೆ ನನ್ನ ಗುಮಾಸ್ತರಿಗೆ ಖುದ್ದಾಗಿ ಅಳತೆ/ತೂಕ ಮಾಡಿಸಿ ಒಳ್ಳೆಯ ಸಾಮಗ್ರಿ ಪಡೆದು ಕೈದಿಗಳಿಗೆ ಒದಗಿಸುವಂತೆ ಆದೇಶ ಮಾಡಿದೆ. ಪ್ರಾರಂಭದಲ್ಲಿ ಅಸಮಾಧಾನ, ಅಸಹಕಾರಗಳನ್ನು ಎದುರಿಸಬೇಕಾಯಿತಾದರೂ ಕ್ರಮೇಣ ಎಲ್ಲಾ ಸರಿಯಾಯಿತು.
(ಕಾಲಘಟ್ಟ: 1982)
Comments
ಉ: ಸೇವಾ ಪುರಾಣ -27:ಹೊಳೆನರಸಿಪುರ - ಅನುಭವ ಭರಪೂರ -1
In reply to ಉ: ಸೇವಾ ಪುರಾಣ -27:ಹೊಳೆನರಸಿಪುರ - ಅನುಭವ ಭರಪೂರ -1 by partha1059
ಉ: ಸೇವಾ ಪುರಾಣ -27:ಹೊಳೆನರಸಿಪುರ - ಅನುಭವ ಭರಪೂರ -1
ಉ: ಸೇವಾ ಪುರಾಣ -27:ಹೊಳೆನರಸಿಪುರ - ಅನುಭವ ಭರಪೂರ -1
In reply to ಉ: ಸೇವಾ ಪುರಾಣ -27:ಹೊಳೆನರಸಿಪುರ - ಅನುಭವ ಭರಪೂರ -1 by manju787
ಉ: ಸೇವಾ ಪುರಾಣ -27:ಹೊಳೆನರಸಿಪುರ - ಅನುಭವ ಭರಪೂರ -1