ಕವಿವಿ ‘ಬೊಟಾನಿಕಲ್ ಗಾರ್ಡನ್’ ಗೆ ಈಗ ರೆಕ್ಕೆಯ ಮಿತ್ರರ ಪ್ರಣಯದ ಮೆರಗು!

ಕವಿವಿ ‘ಬೊಟಾನಿಕಲ್ ಗಾರ್ಡನ್’ ಗೆ ಈಗ ರೆಕ್ಕೆಯ ಮಿತ್ರರ ಪ್ರಣಯದ ಮೆರಗು!

ಬೇಂದ್ರೆ ಮಾಸ್ತರ್ ಭೇಟಿ ಮಾಡಿ ಚಂದಾ ಕೇಳಲು ಧಾರ್ವಾಡದ ಸಮಾಜ ಸೇವಕರಲ್ಲಿ ಕೆಲವರು ಸಾಧನಕೇರಿಯ ‘ಶ್ರೀ ಮಾತಾ’ಕ್ಕೆ ಭೇಟಿ ನೀಡಿದ್ದರು. ‘ವರಕವಿಗಳ.. ಬೆಳಗಾವಿ ನಾಕಾದಾಗ ಇರೋ ಹುಚ್ಚರ ಆಸ್ಪತ್ರೆಕ ಕಂಪೌಂಡ್ ಕಟ್ಟಸ್ತಾ ಇದ್ವಿ; ನಿಮ್ಮಿಂದ ೫ ರೂಪಾಯಿ ಧನ ಸಹಾಯ ಆಗಬೇಕು’ ಅಂದ್ರು. ಸಮಾಜ ಸೇವಕರನ್ನ ಮೇಲಿಂದ ಕೆಳಗೆ ನೋಡಿದ ವರಕವಿ ಬೇಂದ್ರೆ ‘ಅಲ್ರೆಪಾ..ನಾನು ನಿಮಗ ೫ ರೂಪಾಯಿ ಯಾಕ..೫೦ ರೂಪಾಯಿ ಕೊಡತೇನಿ; ಇಡೀ ಧಾರವಾಡಕ್ಕ ಕಂಪೌಂಡ್ ಕಟ್ಟಸ್ರೀ..!’ ಅಂದಿದ್ದರು.

 

ಕಾರಣ ನಾವು ಧಾರವಾಡದಾಗ ಇರೋವಂಥ ‘ನಾಡ ಹುಚ್ಚರು’ (ಇದು ಪ್ರಶಂಸೆ ಧಾಟಿಯಲಿ ಅರ್ಥೈಸಬೇಕಾಗಿ ವಿನಂತಿ) ದೇಶದಾಗ ಕಾಣಸಿಗೋದಿಲ್ಲ..ಅಂತ ಬೇಂದ್ರೆ ಮಾಸ್ತರ್ ಅಭಿಪ್ರಾಯವಾಗಿತ್ತು. ಅದು ಸತ್ಯವೂ ಹೌದು!

 

ಪ್ರಶಾಂತ್ ಸತ್ತೂರ, ವೃತ್ತಿಯಿಂದ ಅವರೊಬ್ಬ ಪ್ರತಿಭಾನ್ವಿತ ಇಂಜಿನೀಯರ್. ಛಾಯಾಗ್ರಹಣ ಅವರ ಅತ್ಯಂತ ಇಷ್ಟದ ಹವ್ಯಾಸಗಳಲ್ಲೊಂದು. ನಮ್ಮೂರು ಧಾರವಾಡದಲ್ಲಿ ಹೀಗೆ ಹತ್ತಾರು ಹವ್ಯಾಸಗಳನ್ನು ಮೈಗೂಡಿಸಿಕೊಂಡವರು ನನಗೆ ಕಾಣಸಿಗುವುದು ಈಗ ಬಲು ಅಪರೂಪ. ಏಕೆಂದರೆ ಅವರು ಪ್ರಸಿದ್ಧಿ ಪ್ರಿಯರಲ್ಲ; ಸಿದ್ಧಿ ಪ್ರಿಯರು. ‘ತಾವಾಯಿತು, ತಮ್ಮ ಹವ್ಯಾಸವಾಯಿತು’. ಶಿಕ್ಷಣ (ವ್ಯಾಪಾರಕ್ಕೆ ಇಳಿಸಿದ ಮೇಲೆ)ಕಾಶಿ ಎನಿಸಿದ್ದ ಧಾರವಾಡ ಈಗ ವಾಣಿಜ್ಯದ ಹೊದಿಕೆ ಹೊರಿಸಿಕೊಳ್ಳುತ್ತಿದೆ. ನಿತ್ಯ ಬದುಕಿನ ಧಾವಂತಗಳು ‘ಛೋಟಾ ಮಹಾಬಳೇಶ್ವರ’ ಖ್ಯಾತಿಯ ಧಾರವಾಡವನ್ನು ಈಗ ಸ್ವರ್ಗವಾಗಿ ಉಳಿಸಿಲ್ಲ! ಭರಾಟೆಯ ‘ಛೋಟಾ ಮುಂಬೈ’ನಂತೆ ನನಗೆ ಗೋಚರಿಸುತ್ತಿದೆ.

 

ಆದರೂ ‘ಇರುವ ಭಾಗ್ಯವ ನೆನೆದು, ಬಾರೆನೆಂಬುದನ್ನು ಬಿಡು; ಹರುಷಕ್ಕಿದು ದಾರಿ’ -ಡಿವಿಜಿ ಹೇಳಿದಂತೆ, ನಮ್ಮಲ್ಲಿ ಕೆಲವರು ತಮ್ಮ ಹವ್ಯಾಸಗಳನ್ನು ಈ ವ್ಯವಸ್ಥೆಯ ಜಂಜಾಟಗಳ ಮಧ್ಯೆಯೂ ಜೀವಂತವಾಗಿರಿಸಿಕೊಂಡಿದ್ದಾರೆ. ಅಂಥಹ ಅಪರೂಪದ ಸಹೃದಯರಲ್ಲಿ ಪ್ರಶಾಂತ ಸತ್ತೂರ ಸಹ ಒಬ್ಬರು. ಅವರ ಶ್ರೀಮತಿ ಮಮತಾ ಪ್ರಶಾಂತ್ (ಆಕೆ ನನ್ನಕ್ಕ ಕೂಡ!) ಅವರ ಪ್ರೇರಣೆ, ಸಹಕಾರ ಸಹ ನಾನಿಲ್ಲಿ ನೆನೆಯಬೇಕು. ಈ ಮಾತಿಗೆ ಅನ್ವರ್ಥಕವೆಂಬಂತೆ (ಚಿತ್ರ ನೋಡಿ..) ಬೂದು ಮಂಗಟ್ಟೆ ಹಕ್ಕಿ ( Indian Grey Horn bill ಅಥವಾ Common Grey Horn Bill ) ದಂಪತಿಗಳಿರುವ ಚಿತ್ರವನ್ನೇ ಪ್ರಶಾಂತ ಕ್ಲಿಕ್ಕಿಸಿದ್ದಾರೆ!  

 

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯೋದ್ಯಾನದದಲ್ಲಿ ಈ ಅಪರೂಪದ ಬೂದು ಮಂಗಟ್ಟೆ ಹಕ್ಕಿಗಳು( Indian Grey Horn bill ಅಥವಾ Common Grey Horn Bill ) ಮೋಡಿಯಿಂದ  ಕ್ಯಾಮೆರಾದಲ್ಲಿ ಸೆರೆಯಾಗಿವೆ.  ಶಾಲ್ಮಲಾ  ನದಿ ತಟದ  ಜಲ ವಿಭಜಕ ರೇಖೆಗೆ ಸಮಾನಾಂತರವಾಗಿ ಹಬ್ಬಿರುವ ‘ಬೊಟಾನಿಕಲ್ ಗಾರ್ಡನ್’ ನಲ್ಲಿ ಹದ್ದಿನಷ್ಟು ದೊಡ್ಡದಾದ ಈ ಬೂದು ಬಣ್ಣದ ಹಕ್ಕಿಗಳು ಪ್ರಣಯನಿರತವಾಗಿದ್ದವು. ‘ಗಾರ್ಡನ್’ ನಲ್ಲಿರುವ ದೊಡ್ಡಾಲದ ಮರದ ಬಳಿಯ ಅತ್ತಿ ಹಣ್ಣಿನ ಗಿಡದ ಟೊಂಗೆಯ ಮೇಲೆ ಕುಳಿತು ತಮ್ಮ ಕೊಕ್ಕುಗಳನ್ನು ಪರಸ್ಪರ ‘ಸಾಣೆ’ ಹಿಡಿಯುತ್ತಿದ್ದವು ಈ ದಂಪತಿಗಳು. ದೊಡ್ಡ ಕೊಕ್ಕಿನ ಮೇಲೆ ಪುಟ್ಟದಾದ ಮತ್ತೊಂದು ಕೊಕ್ಕು ಹೊಂದಿದ್ದ ಬೂದು ಮಂಗಟ್ಟೆ ಅವು. ಬಾಲದ ಪುಕ್ಕಗಳು ಉದ್ದವಾಗಿದ್ದು, ತುದಿಯಲ್ಲಿ ಬಿಳಿ ಮಚ್ಚೆಗಳಿದ್ದವು(straps). ಹೆಣ್ಣು ಹಕ್ಕಿಗೆ ಕೊಕ್ಕಿನ ಮೇಲಿರುವ ಕೊಂಬು ಚಿಕ್ಕದಾಗಿತ್ತು; ಪುಕ್ಕದ ತುದಿ ಕೊಂಚ ವಕ್ರವಾಗಿ ಹರಿದಿತ್ತು.

 

ನೀವು ಕ್ಲಿಕ್ಕಿಸುವುದಾದರೆ ನಮ್ಮ ಪೋಸು ಹೀಗೆ..ಅಂದಂತಿದೆ ಬೂದು ಮಂಗಟ್ಟೆಗಳು. ಕ್ಲಿಕ್ಕಿಸಿದವರು: ಪ್ರಶಾಂತ ಸತ್ತೂರ.

 

ಇವು Malabar Horn Bill ಹಾಗು Ceylon Horn Bill ಪ್ರಜಾತಿಗೆ ಸೇರಿದೆ Indian Grey Horn Bill. ಈ Horn Bill ಗಳಲ್ಲಿ ಒಟ್ಟು ೫೭ ಪ್ರಜಾತಿಗಳಿದ್ದು, ೧೪ ಕುಟುಂಬ ವರ್ಗಗಳಲ್ಲಿ ವಿಂಗಡಿಸಬಹುದಾಗಿದೆ. ೧ ಪ್ರಜಾತಿಯ ಮಂಗಟ್ಟೆ ಹಕ್ಕಿ ಮಾತ್ರ ಉಪಜಾತಿಗೆ ಸೇರಿದೆ ಎಂದು ಪಕ್ಷಿ ಶಾಸ್ತ್ರಜ್ಞರು ಗುರುತಿಸುತ್ತಾರೆ. Indian Grey Horn bill ಪಕ್ಷಿ Ocyceros ಪ್ರಜಾತಿಗೆ ಸೇರಿದ್ದು, Binomial Name: ocyceros birostris.

 

ದಕ್ಷಿಣ ಏಷ್ಯಾ, ಹಿಮಾಲಯದ ಉಪ ಶೃಂಗಗಳ ಪ್ರದೇಶ, ಪೂರ್ವ, ಪಶ್ಚಿಮ, ಕೇಂದ್ರ ಹಾಗು ಆಗ್ನೇಯ ಏಷ್ಯಾ ಸೇರಿದಂತೆ ಭಾರತದ ಸಮುದ್ರ ತಟಗಳಲ್ಲಿ ಹೇರಳವಾಗಿ ಈ ಈ ಬೂದು ಮಂಗಟ್ಟೆ ಹಕ್ಕಿ ಕಾಣಸಿಗುತ್ತದೆ. ವಿಶೇಷವಾಗಿ ದಕ್ಷಿಣ ಏಷ್ಯಾ ಭಾಗಗಳಾದ ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ್ ಹಾಗು ಶ್ರೀಲಂಕಾಗಳಲ್ಲಿ ಈ ಆವಾಸಸ್ಥಾನ. ಕೆಲ ಪಕ್ಷಿ ಶಾಸ್ತ್ರಜ್ಞರು ವಿಶ್ಲೇಷಿಸುವ ಪ್ರಕಾರ ಅಫಘಾನಿಸ್ತಾನ, ಮಯನ್ಮಾರ, ಟಿಬೇಟ್ ಹಾಗು ಬ್ರಿಟೀಷ್-ಭಾರತೀಯ ಸಮುದ್ರ ತಟಗಳು ಮತ್ತು ಇರಾನ್ ಗಳಲ್ಲಿ Indian Grey Horn bill ಕಾಣಸಿಗುತ್ತವೆ.

 

ಉತ್ತರಖಂಡದ ಹರಿದ್ವಾರ ಜಿಲ್ಲೆಯ ರೂರ್ಕಿ ಹಾಗು ಪಂಜಾಬ ರಾಜ್ಯ/ ಪಾಕಿಸ್ತಾನ ದೇಶದ ಲಾಹೋರ್ ಪ್ರಾಂತ್ಯದಲ್ಲಿ ಸಹ ಇವು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತವೆ. ಹಾಗಾಗಿ ಆ ಪ್ರದೇಶಗಳನ್ನು Indian Grey Horn Bill ಪಕ್ಷಿಯ ನೈಸರ್ಗಿಕ ಆವಾಸಸ್ಥಾನ ಎಂದು ಗುರುತಿಸಲಾಗುತ್ತದೆ.

 

ಕವಿವಿಯ ಸಸ್ಯೋದ್ಯಾನದಲ್ಲಿ ವಿಹಾರಕ್ಕೆ ಆಗಮಿಸಿದ ಬೂದು ಮಂಗಟ್ಟೆ ದಂಪತಿಗಳು.

 

ಸತತವಾಗಿ ಎತ್ತರದ ಗಿಡಗಳ ಮೇಲೆಯೇ ಕಾಣಸಿಗುವ ಬೂದು ಮಂಗಟ್ಟೆ ಯಾವತ್ತೂ ಜೋಡಿ ಹಕ್ಕಿಯಾಗಿಯೇ ಗೋಚರಿಸುತ್ತವೆ. ದಟ್ಟವಾದ ಕಾಡುಗಳಲ್ಲಿ ವಾಸಿಸಲು ಇದು ಇಷ್ಟಪಡುತ್ತದೆ. ಅಂಜೂರದ ಜಾತಿಗೆ ಸೇರಿದ ಆಲ, ದಸರಿ, ಗೋಣಿ, ಅತ್ತಿ ಮೊದಲಾದ ಮರಗಳು ಹಣ್ಣು ಬಿಟ್ಟಾಗ ಇವುಗಳ ಲಗ್ಗೆ ಹಾಗು ಗಲಾಟೆ ಕರ್ಣಕಠೋರವಾಗಿರುತ್ತದೆ! ೮೫೦ ಕ್ಕೂ ಹೆಚ್ಚಿನ ಗಿಡ, ಪೊದೆಗಳು, ಪಾಚಿ, ನಾಯಿಕೊಡೆ, ಎಲೆ ಬಳ್ಳಿ, ಪರಪುಟ್ಟ ಸಸ್ಯ ಹಾಗು ಅವುಗಳ ಚಿಗುರು, ಫಂಗೈ, ಅಲ್ಗೈ, ಬ್ಯಾಕ್ಟೀರಿಯಾ, ೨,೨೦೦ಕ್ಕೂ ಮಿಕ್ಕಿದ ಪ್ರಜಾತಿಯ Grass Hoppers ಶಿವನ ಕುದುರೆಗಳು, ೨೦,೦೦೦ ಕ್ಕೂ ಮಿಕ್ಕಿದ ವಿವಿಧ ಜಾತಿಯ ಮಿಡತೆಗಳು, ೧,೨೦,೦೦೦ ಸಂಖ್ಯೆಯ ಕೀಟಗಳು, ರೆಕ್ಕೆಯ ಪತಂಗಗಳು, ಕ್ರಿಮಿಗಳು ಹಾಗು ೧,೭೦,೦೦೦ ದಷ್ಟು ಪಾತರಗಿತ್ತಿ ಪ್ರಜಾತಿ ಇವುಗಳ ಇಷ್ಟದ ಆಹಾರ.

 

ಬೂದು ಮಂಗಟ್ಟೆಗಳು ೭ ರಿಂದ ೮ರ ಗುಂಪುಗಳಲ್ಲಿ ಸಾಮಾನ್ಯವಾಗಿ ಕಾಲೋನಿ ನಿರ್ಮಿಸಿಕೊಂಡು ವಾಸಿಸುತ್ತವೆ. ಒಂದು Horn Bill ಗಿಡದಿಂದ ಹಾರುತ್ತಲೇ ಚಿತಾವಣೆ ಪಡೆದಂತೆ ಅದರ ಬಾಲ ಹಿಡಿದು ಇನ್ನುಳಿದವು ಕೂಡ ಹಾರುತ್ತವೆ. ರೆಕ್ಕೆ ಬಡಿಯುವುದನ್ನು ನಿಲ್ಲಿಸಿ ತೇಲುತ್ತ ಹಾರುವುದು ಇವುಗಳಿಗೆ ಕರಗತವಾದ ವಿದ್ಯೆ. ಕ್ಕೆ..ಕ್ಕೆ..ಕ್ಕೆ..ಕ್ಕೆ..ಕ್ಕೀ..ಕ್ಕೀ ಎಂದು ವಿಚಿತ್ರವಾಗಿ ಗಹಗಹಿಸಿ ನಕ್ಕಂತೆ ಕೂಗುತ್ತವೆ. ಕೆಲವು ಬಾರಿ ಮಕ್ಕಳು ಕಿರುಚಿದಂತೆ ಸಹ ಕೂಗುತ್ತವೆ.

 

ವಿಶೇಷವೆಂದರೆ Helmeted Horn Bill ಎಂಬ ಹಕ್ಕಿಯ ಕೊಕ್ಕು ಅತ್ಯಂತ ಬಲಿಷ್ಠ ಹಾಗು ಸುಂದರ. ಚೈನಾ ಹಾಗು ಜಪಾನ್ ದೇಶದಲ್ಲಿ ಅದನ್ನು `Horn Bill Ivory' ಯಾಗಿ ಅತ್ಯಂತ ಸೂಕ್ಷ್ಮವಾದ ಕುಸುರಿ ಕಲೆಗಳಲ್ಲಿ ಬಳಸಲಾಗುತ್ತದೆ. ಹಾಗೆಯೇ ಗಂಡಸರು ತಮ್ಮ ಸಾಂಪ್ರದಾಯಿಕ ಪೋಷಾಕುಗಳಲ್ಲಿ ‘ಚಂಚಿ’ (ನಮ್ಮಲ್ಲಿ ಎಲೆ, ಅಡಿಕೆ, ಸುಣ್ಣ ಹಾಗು ತಂಬಾಕು ಕಾಯ್ದಿಡಲು ಬಳಸುತ್ತೇವೆ ಆದರೆ ಬಟ್ಟೆಯಿಂದ ಅದನ್ನು ತಯಾರಿಸಲಾಗುತ್ತದೆ) ರೀತ್ಯಾ ಅಂಗವಸ್ತ್ರಕ್ಕೆ ಕಟ್ಟಿಕೊಂಡು ಪ್ರತಿಷ್ಠೆಯ ಸಂಕೇತವಾಗಿ ಪ್ರದರ್ಶಿಸುತ್ತಾರೆ.

 

ಪುಟ್ಟ ಬೂದು ಮಂಗಟ್ಟೆ ದಂಪತಿಗಳ ಸಮೀಪ ದರ್ಶನ. ಭಾಗ್ಯ ಕರುಣಿಸಿದವರು: ಪ್ರಶಾಂತ ಸತ್ತೂರ.

 

ಮಾರ್ಚ್ ತಿಂಗಳಿನಿಂದ ಜೂನ್ ತಿಂಗಳಿನಲ್ಲಿ ಸಾಮಾನ್ಯವಾಗಿ ಮರಗಳ ಪೊಟರೆಗಳಲ್ಲಿ ಮಂಗಟ್ಟೆಗಳು ಗೂಡುಕಟ್ಟುತ್ತವೆ. ಈ ಮೊಟ್ಟೆಗಳಿಗೆ ಕಾವು ಕೊಡುವ ಸಂದರ್ಭದಲ್ಲಿ ಹೆಣ್ಣು ಮಂಗಟ್ಟೆ ತನ್ನ ಪುಕ್ಕಗಳನ್ನೆಲ್ಲ ಸಂಪೂರ್ಣ ಉದುರಿಸಿಕೊಂಡು ಬೋಳಾಗಿ, ಆ ಗೂಡಿನಲ್ಲಿ ಬಂಧಿಯಾಗುತ್ತದೆ. ಹಾರಲಾಗದ ಜೊತೆಗೆ ವಿಚಿತ್ರವಾದ ಅವುಗಳ ಪ್ರಜನನಕ್ರಿಯೆಯಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಹೆಣ್ಣು ಮಂಗಟ್ಟೆಗೆ ಉದರಂಭರಣಕ್ಕೆ ಗಂಡು ಆಧಾರ. ಬಾಯಿಯಿಂದ ಸ್ರವಿಸುವ ವಿಶಿಷ್ಠವಾದ ಅಂಟು ರೂಪದ ದ್ರವದಿಂದ ಬಾಗಿಲನ್ನು ಭದ್ರಪಡಿಸಿಕೊಳ್ಳುತ್ತದೆ! ಕೇವಲ ಕೊಕ್ಕು ಮಾತ್ರ ಹೊರಚಾಚಿ ಗಂಡು ಮಂಗಟ್ಟೆಯಿಂದ ಆಹಾರ ಸ್ವೀಕರಿಸುತ್ತದೆ. ಮರಿಗಳ ರೆಕ್ಕೆ ಬಲಿಯುವವರೆಗೆ ಹೀಗೆ ಗೂಡಿನಲ್ಲಿ ಹೆಣ್ಣು ಹಕ್ಕಿ ಬಂಧಿಯಾಗಿರುತ್ತದೆ.

 

ಆಕಸ್ಮಿಕವಾಗಿ ಅಥವಾ ಬೇಟೆಗಾರ ಕೈಗೆ ಸಿಕ್ಕು ಗಂಡು ಮಂಗಟ್ಟೆ ಹನನವಾದರೆ ಹೆಣ್ಣು ಗೂಡು ಬಿಟ್ಟು ಹೊರಬರದೇ ಅಲ್ಲಿಂದಲೇ ಕೂಗಿ ಕೂಗಿ ಪೊಟರೆಯಲ್ಲಿಯೇ ಸಾಯುತ್ತದೆ. ಹೀಗೆ ತಂದೆ ಹಕ್ಕಿಯ ಅವಸಾನದಿಂದ ಒಟ್ಟು ಮೂರು ಅಥವಾ ನಾಲ್ಕು ಮಂಗಟ್ಟೆಗಳು ಪ್ರಾಣಾಹುತಿ ನೀಡುತ್ತವೆ. ಏಕ ಪತ್ನಿವೃತಸ್ಥ ಬೂದು ಮಂಗಟ್ಟೆ ಶೃದ್ಧೆಯಿಂದ ತನ್ನ ಸಂಗಾತಿಯ ನೆನಪಿನಲ್ಲಿ ಸಾವನ್ನಪ್ಪುತ್ತದೆ. ಈ ಮಂಗಟ್ಟೆಗಳ ೫೭ ಪ್ರಜಾತಿಗಳಲ್ಲಿ ೪೦ ಪ್ರಜಾತಿಗಳು ಅಳಿವಿನಂಚಿಗೆ ತಲುಪಿವೆ. ಅವುಗಳಲ್ಲಿ ಬೂದು ಮಂಗಟ್ಟೆಯನ್ನು International Union for Conservation of Nature (IUCN) Least Concerned ಎಂದು ಗುರುತಿಸಿದೆ. ಅಂದ್ರೆ ಸಂರಕ್ಷಣೆಯ ಅವಶ್ಯಕತೆ ಇಲ್ಲ! ಹಾಗಂತ ಸುಮ್ಮನಿರುವ ಹಾಗೆಯೂ ಇಲ್ಲ. ಕಾರಣ ಕಳೆದ ಒಂದು ದಶಕದಲ್ಲಿ ಅವುಗಳ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ.

 

ಕವಿವಿಯ ಸಸ್ಯೋದ್ಯಾನದಲ್ಲಿ ವಿಹಾರ ನಿರತ ಪುಟ್ಟ ಬೂದು ಮಂಗಟ್ಟೆಗಳು.

 

ಅಂತು ಕರ್ನಾಟಕ ವಿಶ್ವವಿದ್ಯಾಲಯದ ‘ಬೊಟಾನಿಕಲ್ ಗಾರ್ಡನ್’ ನಲ್ಲಿ ‘ವಿದ್ಯಾರ್ಥಿಗಳನ್ನು’ ಹೊರತುಪಡಿಸಿ ರೆಕ್ಕೆಯ ಮಿತ್ರರೂ ಪ್ರಣಯ ನಿರತರಾಗಿದ್ದು, ಕಾಕತಾಳೀಯವೋ? ಆಕಸ್ಮಿಕವೋ? ಪರಿಸರ ಪ್ರಭಾವವೋ? ಅಥವಾ ಹೆಚ್ಚಿನ ಮಾಹಿತಿಗಾಗಿ ಪ್ರಶಾಂತ ಸತ್ತೂರ್ ಅವರನ್ನ ಸಂಪರ್ಕಿಸುವುದೊಳಿತು! 

 

ಚಿತ್ರಗಳು: ಇಂ. ಪ್ರಶಾಂತ ಸತ್ತೂರ, ಧಾರವಾಡ.

Comments