ಮೈಸೂರಿನಲ್ಲಿ ಮಳೆ

ಮೈಸೂರಿನಲ್ಲಿ ಮಳೆ

ಮೈಸೂರಿನಲ್ಲಿ ಮೊನ್ನೆ ಎಂಬತ್ತರ ಬೆಂಗಳೂರು ಧುತ್ತನೆ ಎದುರಾಯಿತು.

ಮೈಸೂರಿನ ಹೊರವಲಯದ ಬಡಾವಣೆಯಲ್ಲಿ ಇರುವ "ನಟನ" ಎಂಬ ಪುಟ್ಟ ರಂಗಮಂದಿರ. ಸ್ವಲ್ಪ ಉದ್ದವೇ ಅನಿಸಿದ ಈ ವರ್ಷದ ತಿರುಗಾಟದ ನಾಟಕ - 'ಈ ನರಕ... ಆ ಪುಳಕ...'. ತೆರೆಗಳು, ಟಿ.ಪ್ರಸನ್ನನ ಗೃಹಸ್ಥಾಶ್ರಮ, ನನ್ನ ತಂಗಿಗೊಂದು ಗಂಡು ಕೊಡಿ, ಕ್ರಾಂತಿ ಬಂತು ಕ್ರಾಂತಿ, ಗಿಳಿಯು ಪಂಜರದೊಳ್ಳಿಲ್ಲ, ಸಿದ್ಧತೆ, ಪೋಲೀಸರಿದ್ದಾರೆ ಎಚ್ಚರಿಕೆ - ಈ ಏಳು ಲಂಕೇಶರ ನಾಟಕಗಳನ್ನು ಕೂಡಿಸಿ ರಘುನಂದನ್ ಈ ನಾಟಕವನ್ನು ರೂಪಿಸಿದ್ದಾರೆ. ಲಂಕೇಶರ ಹರಿತವಾದ ಮಾತುಗಳು, ಸಾಮಾನ್ಯ ನುಡಿಗಳಲ್ಲೇ ಕಾವ್ಯವನ್ನು ಮಿಂಚಿಸುತ್ತಾ ಗಾಢವಾಗುವುದು ತುಂಬಾ ಕುಶಿ ಕೊಟ್ಟಿತು. ನೀನಾಸಂರಿಗರ ನುಡಿರೀತಿ ಯಾಕೋ ಈ ಬಾರಿ, ಈ ನಾಟಕಕ್ಕೆ ಅತಿ ಭಾರವಾದಂತೆ ಅನಿಸಿತು. ಸುಲಭ ವಾಚನದಿಂದ ಪ್ರಭಾವ ಬೀರಬಹುದಾದ ಮಾತುಗಳು ಇಲ್ಲಿ ಹೇಳುವ ರೀತಿಯ ಒತ್ತಿನಿಂದ ಕುಂದಿದಂತೆ ಅನಿಸಿತು. ಏನೋ ಕಳಕೊಂಡಂತೆ ಅನಿಸಿತು. ಇದು ಉದ್ದೇಶಪೂರ್ಣವಿರಬಹುದೆ. ಹೌದಾದರೆ ಏತಕ್ಕಾಗಿರಬಹುದು ಎಂದು ಯೋಚಿಸಿದೆ. ಆದರೆ ಎರಡೂ ಮುಕ್ಕಾಲು ಗಂಟೆಗೂ ಮೀರಿದ ಅವಧಿಯ ಬಗ್ಗೆ ನೀನಾಸಂ ಯೋಚಿಸಿದರೆ ಒಳ್ಳೆಯದಿತ್ತು ಅನಿಸಿತು.

ಹತ್ತು ಗಂಟೆಯ ಸುಮಾರಿಗೆ ಮುಗಿದ ನಾಟಕದಿಂದ ಹೊರಬಂದೆವು. ಸಣ್ಣಕೆ ಮಳೆ ಹನಿಯ ತೊಡಗಿತು. ಜನರೆಲ್ಲಾ ಸ್ಕೂಟರ್‍ ಕಾರುಗಳನ್ನು ಹತ್ತಿ ಕತ್ತಲಲ್ಲಿ ಕರಗಿಹೋಗುತ್ತಿದ್ದರು. ಆಟೋ ಹಿಡಿಯಲು ದೂರದಲ್ಲಿದ್ದ ಮುಖ್ಯ ಬೀದಿಗೆ ಬಂದೆವು. ಯಾರೂ ಓಡಾಡದ ದೊಡ್ಡ ಬೀದಿ. ಇರುಳಲ್ಲಿ ಅಲ್ಲಲ್ಲಿ ಉರಿಯುತ್ತಿದ್ದ ದೀಪಗಳು. ಆಗೊಂದು ಈಗೊಂದು ಓಡಾಡುತ್ತಿದ್ದ ವಾಹನಗಳು. ಆದರೆ ಆಟೋಗಳು ಮಾತ್ರ ಒಂದೂ ಇಲ್ಲ. ದಿಕ್ಕು ತಪ್ಪಿದವರಂತೆ ಅತ್ತಿತ್ತ ಓಡಾಡುತ್ತಿದ್ದಾಗ ಇದ್ದಕಿದ್ದ ಹಾಗೆ ಧೋ ಎಂದು ಸುರಿದ ಮಳೆ. ದೂರದಲ್ಲಿ ಕಾಣುತ್ತಿದ್ದ ಮುಚ್ಚಿದ ಅಂಗಡಿಗೆ ಓಟ. ಅದರ ಮುಂದಿನ ಛಾವಣಿಯಡಿ ಸ್ವಲ್ಪ ಸುಧಾರಿಸಿಕೊಂಡೆವು. ಮುಂದೇನು ಎಂದು ಹೊಳೆಯಲಿಲ್ಲ. ರಂಗಮಂದಿರದ ಕಡೆಯಿಂದಲೇ ತೆವಳುತ್ತಾ ಬರುತ್ತಿದ್ದ ಕಾರಿಗೆ ಅಡ್ಡಹಾಕಿದೆ. ಬೆಳಿಗ್ಗೆ ಸಿಕ್ಕಿದ್ದ ಗೆಳೆಯ ಅದರಲ್ಲಿದ್ದರು. ತುಂಬಿಕೊಂಡಿದ್ದ ಕಾರಿನಲ್ಲಿ ನಾವೂ ತೂರಿಕೊಂಡೆವು. ಮನೆಯ ಹತ್ತಿರ ಬಿಟ್ಟರು.

ಹತ್ತು ನಿಮಿಷದ ಹಿಂದೆ ಮಳೆಯಲ್ಲಿ ಸಿಕ್ಕಿಕೊಂಡು ಚಡಪಡಿಸಿ ದಿಕ್ಕು ತಪ್ಪಿದ್ದು. ನಿರ್ಜನ ಬೀದಿ. ಸಿಗದ ಆಟೋ. ಈಗ ಮನೆಯ ಎದುರು ಕಾರಿನಿಂದ ಇಳಿದದ್ದು. ಎಂಬತ್ತರ ಬೆಂಗಳೂರಿನ ನೆನಪು.

Rating
No votes yet

Comments